ಕೂಡಲ ಸಂಗಮದ ಸ್ವಾಮೀಜಿ ಭಕ್ತರಿಂದ ಜೀವ ಬೆದರಿಕೆ: ಪುಟ್ಟಸಿದ್ದಶೆಟ್ಟಿ

ಬಸವಜಯ ಮೃತ್ಯುಂಜಯ ಸ್ವಾಮೀಜಿ ಭಕ್ತರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ನಮ್ಮನ್ನು ಹೆದರಿಸುವ ತಂತ್ರ ಮಾಡುತ್ತಿದ್ದಾರೆ. ವಾಮಮಾರ್ಗದಿಂದ ಮೀಸಲಾತಿ ಪಡೆಯಲು ಸಾಧ್ಯವಿಲ್ಲ: ಪುಟ್ಟಸಿದ್ದಶೆಟ್ಟಿ 

Life Threaten from Jayamrutunjaya Swamiji's Devotee Says Puttasiddashetty grg

ಹುಬ್ಬಳ್ಳಿ(ಅ.14):  ಅತಿ ಹಿಂದುಳಿದ ವರ್ಗಗಳ ಜನರ ಧ್ವನಿಯಾಗಿ, ಅವರ ಮೀಸಲಾತಿ ಸಂರಕ್ಷಣೆಗಾಗಿ ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದಿಂದ ಹೋರಾಟ ಮಾಡಲಾಗುತ್ತಿದೆ. ಇದು ಯಾವುದೇ ಸಮಾಜದ ವಿರುದ್ಧವಲ್ಲ. ಆದರೆ ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಭಕ್ತರು ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಸಿ. ಪುಟ್ಟಸಿದ್ದಶೆಟ್ಟಿ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸುದ್ದಿಗೋಷ್ಠಿ ಆಯೋಜಿಸಿ ಕಾಯಕ ಸಮಾಜಕ್ಕಿರುವ ಶೇ. 15ರಷ್ಟು ಮೀಸಲಾತಿಯ ಉಳಿವಿನ ಬಗ್ಗೆ ಮಾತನಾಡಿ, ಕಾನೂನುಬಾಹಿರವಾಗಿ ಪಂಚಮಸಾಲಿ ಸಮುದಾಯ 2ಎ ಮೀಸಲಾತಿ ಕೇಳುತ್ತಿರುವುದನ್ನು ವಿರೋಧಿಸಿದ್ದೇನೆ. ಇದರಿಂದ ಪಂಚಮಸಾಲಿ ಜನಾಂಗದ ಭಾವನೆಗೆ ಧಕ್ಕೆಯಾಗಿದೆ ಎಂದು ಆ ಸಮಾಜದ ಧುರೀಣರು, ಸ್ವಾಮೀಜಿಯ ಭಕ್ತರು ನನಗೆ ಮತ್ತು ನನ್ನ ಸ್ನೇಹಿತರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ನಮ್ಮ ಮೇಲೆ ತೋಳ್ಬಲ ಪ್ರದರ್ಶಿಸುತ್ತಿದ್ದಾರೆ ಎಂದರು.

ಸೋನಿಯಾ, ರಾಹುಲ್‌ ಇಟಲಿಗೆ ಮರಳುವ ಕಾಲ ಸನ್ನಿಹಿತ: ಕಟೀಲ್‌

ಕಾಯಕ ಸಮಾಜದವರು ಮೇಲ್ವರ್ಗದ ಜನರ ಸೇವೆ ಮಾಡಿ ಜೀವನ ನಡೆಸುತ್ತಿದ್ದೇವೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ. ಬಸವಜಯ ಮೃತ್ಯುಂಜಯ ಸ್ವಾಮೀಜಿ ಭಕ್ತರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ನಮ್ಮನ್ನು ಹೆದರಿಸುವ ತಂತ್ರ ಮಾಡುತ್ತಿದ್ದಾರೆ. ವಾಮಮಾರ್ಗದಿಂದ ಮೀಸಲಾತಿ ಪಡೆಯಲು ಸಾಧ್ಯವಿಲ್ಲ. ನನ್ನ ಮಾತಿನಿಂದ ಪಂಚಮಸಾಲಿ ಜನಾಂಗ, ಮೃತ್ಯುಂಜಯ ಸ್ವಾಮೀಜಿ ಹಾಗೂ ಅವರ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾನು ಬಹಿರಂಗ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದರು.

ಹೊಟ್ಟೆ ಮೇಲೆ ಹೊಡೆಯುವುದು ಸರಿಯಲ್ಲ:

ಪಂಚಮಸಾಲಿ ಜನಾಂಗ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದರೆ ಮೀಸಲಾತಿ ಪಡೆಯಲಿ. ಆದರೆ ನಮ್ಮ ಅನ್ನವನ್ನು ಕಸಿದುಕೊಂಡು ನಮ್ಮ ಹೊಟ್ಟೆಹೊಡೆಯುವುದು ಸರಿಯಲ್ಲ. ಅದರ ವಿರುದ್ಧ ನಿರಂತರವಾಗಿ ಹೋರಾಟ ಮಾಡಲಾಗುವುದು. ಮೀಸಲಾತಿ ಸಂರಕ್ಷಣೆಗಾಗಿ ರಾಜ್ಯವ್ಯಾಪಿ ಹಳ್ಳಿ ಹಳ್ಳಿಯಲ್ಲೂ ಜನಾಂದೋಲನ ರೂಪಿಸಲಾಗುವುದು ಎಂದರು.

ಅ. 15ರಂದು ಹುಬ್ಬಳ್ಳಿಯ ಜೆಸಿ ನಗರದ ಅಕ್ಕನ ಬಳಗದಲ್ಲಿ ಆಯೋಜಿಸಿರುವ ಚಿಂತನ ಮಂಥನ ಸಭೆಯಲ್ಲಿ ಮೀಸಲಾತಿ ಕಬಳಿಸುವ ಹುನ್ನಾರ ಮತ್ತು ಮುಂದಿನ ಹೋರಾಟದ ಕುರಿತು ನಿರ್ಣಯ ಕೈಗೊಳ್ಳಲಾಗುವುದು. ಸಂವಿಧಾನ ತಜ್ಞರು ಈ ಕುರಿತು ವಿಸ್ತೃತವಾಗಿ ಚರ್ಚೆ ಮಾಡಲಿದ್ದಾರೆ. ಹೀಗಾಗಿ ಸಭೆ ವಂಚಿತ ಸಮುದಾಯ ಸಾಮಾಜಿಕ ನ್ಯಾಯ ಪಡೆಯಲು ನಡೆಸುತ್ತಿರುವ ಚಳವಳಿಯ ಒಂದು ಭಾಗವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಶಿವಪುತ್ರಪ್ಪ ಇಟಗಿ, ಮುಖಂಡರಾದ ನಾರಾಯಣ ಚಿಕ್ಕೋಡಿ, ಎಂ.ಪಿ. ಕುಂಬಾರ ಇತರರಿದ್ದರು.
 

Latest Videos
Follow Us:
Download App:
  • android
  • ios