Belagavi: ಕಲರ್ ಕಲರ್ ಸೀರೆ ನೇಯುವ ನೇಕಾರರ ಬದುಕು ಮಾತ್ರ ಬ್ಲ್ಯಾಕ್ & ವೈಟ್!
* ಲಾಕ್‌ಡೌನ್ ಬಳಿಕ ಚೇತರಿಸಿಕೊಳ್ಳುತ್ತಿದ್ದ ನೇಕಾರರಿಗೆ ಬೆಲೆ ಏರಿಕೆ ಬರೆ.
* ನಿರಂತರ ತೈಲ ಬೆಲೆ ಏರಿಕೆಯಿಂದ ಕಚ್ಚಾವಸ್ತು, ಸಾಗಾಣಿಕೆ ವೆಚ್ಚ ಏರಿಕೆ.
* ಗಾಯದ ಮೇಲೆ ಬರೆ ಎಳೆದಂತಾದ ವಿದ್ಯುತ್ ದರ ಏರಿಕೆ.
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಏ.09): ಹರಿದೋದ ಬದುಕನು ಹುಡುಕಿ ನವಿರಾದ ನೂಲನು ಬಳಸಿ ಹಸನಾಗಿ ಹೆಣೆದು ಕೊಡುವ ನೇಕಾರನ (Weavers) ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಲಾಕ್‌ಡೌನ್ (Lockdown) ಬಳಿಕ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ನೇಕಾರ ಕುಟುಂಬಗಳು ಬೆಲೆ ಏರಿಕೆಯಿಂದ (Price Hike) ಕಂಗಾಲಾಗಿವೆ. ಬೆಳಗಾವಿ (Belagavi) ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಇಪ್ಪತ್ತೈದು ಸಾವಿರ ನೇಕಾರರಿದ್ದು 25 ಸಾವಿರಕ್ಕೂ ಹೆಚ್ಚು ವಿದ್ಯುತ್ ಮಗ್ಗಗಳಿವೆ. ಬೆಳಗಾವಿಯ ಶಹಾಪುರ ಸೀರೆಗಳು ಫುಲ್ ಫೇಮಸ್. ಕಲರ್ ಕಲರ್ ಸೀರೆ ನೇಯುವ ನೇಕಾರನ ಬದುಕು ಮಾತ್ರ ಬ್ಲ್ಯಾಕ್ & ವೈಟ್. ಬೆಳಗಾವಿಯ ವಡಗಾವಿ, ಶಹಾಪುರ, ಮಲಪ್ರಭಾ ನಗರ ಸೇರಿ ವಿವಿಧ ಬಡಾವಣೆಗಳಿಗೆ ಹೋದ್ರೆ ನೇಕಾರರ ಕುಟುಂಬಗಳೇ ಹೆಚ್ಚು ವಾಸವಿರೋದು.
ಪುಟ್ಟ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಸೀರೆ ನೇಯುತ್ತಿರುವ ತಾಯಿ. ವಿದ್ಯುತ್ ಮಗ್ಗದಲ್ಲಿ ನೂಲು ಕಟ್ಟುತ್ತಾ ಮಗ್ನನಾಗಿರುವ ವೃದ್ಧ. ಹಸನಾಗಿ ಹೆಣೆದ ಕಲರ್‌ಫುಲ್ ಸೀರೆ ಎತ್ತಿ ಇಡುತ್ತಿರುವ ವ್ಯಕ್ತಿ. ಈ ರೀತಿಯ ದೃಶ್ಯಗಳು ಇಲ್ಲಿಯ ನೇಕಾರರ ಮನೆಯಲ್ಲಿ ಕಂಡು ಬರುತ್ತೆ. ಇತ್ತೀಚೆಗೆ ಕೋವಿಡ್ (Covid19) ಹಿನ್ನೆಲೆ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ನೇಕಾರರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದರು. ಆದರೀಗ ನಿರಂತರ ತೈಲ ಬೆಲೆ ಏರಿಕೆಯಿಂದ ಕಚ್ಚಾವಸ್ತುಗಳ ಬೆಲೆ ಏರಿಕೆಯಾಗಿದೆ. ಕಚ್ಚಾವಸ್ತು ಸಹಿತ ಎಲ್ಲಾ ಉತ್ಪಾದಿತ ವಸ್ತುಗಳ ಮಾರಾಟಕ್ಕೂ ನೇಕಾರರು ಅವಲಂಬಿಸಿರೋದು ಅನ್ಯ ರಾಜ್ಯಗಳನ್ನ. ನಿರಂತರ ತೈಲ ಬೆಲೆ ಏರಿಕೆಯಿಂದ ಕಚ್ಚಾವಸ್ತು ಬೆಲೆ ಏರಿಕೆಯಾಗಿದ್ದು, ತಾವು ತಯಾರು ಮಾಡಿದ ಸೀರೆಗಳನ್ನು ಬೇರೆಡೆ ಸಾಗಿಸಲು ಸಾಗಾಣಿಕೆ ವೆಚ್ಚವೂ ಹೆಚ್ಚಳವಾಗಿದೆ. ಆದ್ರೆ ತಾವು ಕಷ್ಟಪಟ್ಟು ನೇಯ್ದ ಸೀರೆ ಬೆಲೆ ಮಾತ್ರ ಅಷ್ಟೇ ಇದೆ.
ಎಲೆಕ್ಷನ್ ಬಂದಾಗ ಬೆಳಗಾವಿ ಜಿಲ್ಲಾ ವಿಭಜನೆ ಕೂಗು: ರಾಜಕಾರಣಿಗಳ ವಿರುದ್ಧ ಸಿಡಿದೆದ್ದ ಜನ..!
'ಗೌಂಡಿ ಕೆಲಸಕ್ಕೂ ಹೋಗ್ತಿದ್ನಿರಿ ಸರ್': ಬೆಳಗಾವಿಯ ಮಲಪ್ರಭಾ ನಗರದ ನಿವಾಸಿ ಮಾರುತಿ ಸೋಂಟಕ್ಕಿ ಹಲವು ವರ್ಷಗಳಿಂದ ನೇಕಾರ ವೃತ್ತಿ ಮಾಡಿಯೇ ಜೀವನ ಸಾಗಿಸುತ್ತಿದ್ದಾರೆ. ತಾನಷ್ಟೇ ಅಲ್ಲದೇ ಕಂಕುಳಲ್ಲಿ ಪುಟ್ಟ ಮಗುವನ್ನು ಹಿಡಿದು ವಿದ್ಯುತ್ ಮಗ್ಗದ ಮುಂದೆ ನಿಂತು ಸೀರೆ ನೇಯುತ್ತಾರೆ. ಈ ವೇಳೆ ಮಾತನಾಡಿದ ನೇಕಾರ ಮಾರುತಿ ಸೊಂಟಕ್ಕಿ, 'ಲಾಕ್ ಡೌನ್ ಬಳಿಕ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದೇವು. ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದೇವೆ. ಸೀರೆಗಳಿಗೂ ಉತ್ತಮ ಬೆಲೆ ಸಿಗುತ್ತಿಲ್ಲ ಹೀಗಾಗಿ ತುಂಬಾ ತೊಂದರೆ ಆಗುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ಗೌಂಡಿ ಕೆಲಸಕ್ಕೂ ಸಹ ಹೋಗುತ್ತಿದ್ದೆ ಸರ್. ಒಂದು ಸೀರೆಗೆ ಐದು ನೂರು ರೂಪಾಯಿ ಸಿಗೋದು ಕಷ್ಟ. ಹುಬ್ಬಳ್ಳಿ ಬೆಂಗಳೂರಿಗೆ ಸೀರೆ ಕಳಿಸಲು ಮೊದಲು ನೂರು ರೂಪಾಯಿ ಕೊಡ್ತಿದ್ರ ಈಗ ಎರಡನೂರು ರೂಪಾಯಿ ಕೊಡಾತೇವ್ರಿ. ಕಚ್ಚಾ ಮಾಲಂತೂ ರೇಟ್ ಕೇಳಬ್ಯಾಡ್ರಿ. ಈಗ ಕರೆಂಟ್ ಬಿಲ್ ಜಾಸ್ತಿ ಮಾಡ್ತೀವಿ ಅನ್ನಾತಾರ್ರಿ. ಏನ್ ಮಾಡೋದ್ರಿ ಸರ್ ಅಂತಾ ಅಳಲು ತೋಡಿಕೊಳ್ಳುತ್ತಾರೆ.
ಬೆಳಗಾವಿ ಖಾಸಗಿ ಕಂಪನಿಗೆ 4.41 ಕೋಟಿ ವಂಚಿಸಿದ್ದ ಫೈನಾನ್ಸಿಯಲ್ ಕಂಟ್ರೋಲರ್!
ಆಂಧ್ರ, ತೆಲಂಗಾಣ, ತಮಿಳುನಾಡು ಮಾದರಿಯಲ್ಲಿ ವಿದ್ಯುತ್ ಪೂರೈಕೆಗೆ ಆಗ್ರಹ: ಇನ್ನು ಬೆಲೆ ಏರಿಕೆ ಸಮಸ್ಯೆ ಒಂದೆಡೆಯಾದ್ರೆ ವಿದ್ಯುತ್ ದರ ಏರಿಕೆಯಾಗಿದ್ದು ಬಡ ನೇಕಾರರ ನಿದ್ದೆಗೆಡಿಸಿದೆ. ಕಚ್ಚಾವಸ್ತುಗಳ ಬೆಲೆ ಏರಿಕೆಯ ಗಾಯದ ಮೇಲೆ ವಿದ್ಯುತ್ ದರ ಏರಿಕೆ ಒಂದು ರೀತಿ ಬರೆ ಎಳೆದಂತಾಗಿದೆ. ನೇಕಾರರು ಬಳಸುವ ವಿದ್ಯುತ್‌ಗೆ ಸಬ್ಸಿಡಿ ನೀಡಿ ಒಂದು ಯೂನಿಟ್‌ಗೆ ಮೊದಲು 1 ರೂಪಾಯಿ 25 ಪೈಸೆ ವಿಧಿಸಲಾಗುತ್ತಿತ್ತಂತೆ. ಆದ್ರೆ ಈಗ ಕಳೆದ ಕೆಲ ವರ್ಷಗಳಿಂದ ಸಬ್ಸಿಡಿ ದರಕ್ಕೆ ಪ್ರತಿ ಬಾರಿ ವಿದ್ಯುತ್ ದರ ಹೆಚ್ಚಳ ಮಾಡಿದ ದರ ಸೇರ್ಪಡೆ ಮಾಡಿದ್ದು ಸದ್ಯ ನೇಕಾರರು ಬಳಸುವ ವಿದ್ಯುತ್‌ಗೆ 2 ರೂಪಾಯಿ 65 ಪೈಸೆ ಪಡೀತಿದಾರೆ. ಈಗ ಮತ್ತೆ ವಿದ್ಯುತ್ ದರ ಏರಿಕೆ ಮಾಡಿದ್ದನ್ನು ಸಹ ಸೇರಿಸಲಾಗುತ್ತೆ ಅಂತಾ ನೇಕಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆಂಧ್ರ, ತಮಿಳುನಾಡು, ತೆಲಂಗಾಣ ಮಾದರಿಯಲ್ಲಿ ವಿದ್ಯುತ್ ದರ ನಿಗದಿ ಮಾಡಬೇಕು ಎಂದು ನೇಕಾರ ಮುಖಂಡ ಪರಶುರಾಮ ಢಗೆ ಆಗ್ರಹಿಸಿದ್ದಾರೆ.ಲಾಕ್‌ಡೌನ್ ಸಂಕಷ್ಟ ಬಳಿಕ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ನೇಕಾರರ ಬದುಕು ದುಸ್ತರವಾಗಿದ್ದು, ಸಂಕಷ್ಟದಲ್ಲಿರುವ ನೇಕಾರರ ನೆರವಿಗೆ ಸರ್ಕಾರ ಧಾವಿಸಲಿ ಎಂಬುದು ಸಾರ್ವಜನಿಕರ ಆಗ್ರಹ.