ಎಲೆಕ್ಷನ್ ಬಂದಾಗ ಬೆಳಗಾವಿ ಜಿಲ್ಲಾ ವಿಭಜನೆ ಕೂಗು: ರಾಜಕಾರಣಿಗಳ ವಿರುದ್ಧ ಸಿಡಿದೆದ್ದ ಜನ..!
* 'ತಲಾ ಆರು ಎಂಎಲ್‌ಗಳು ಬೆಳಗಾವಿ ಹಂಚಿಕೊಳ್ಳಲು ಇದು ಪೇಟೆಯಲ್ಲಿನ ಬದನೆಯಕಾಯಿ ಅಲ್ಲ'
* ಗಡಿರಕ್ಷಣೆ ಬಗ್ಗೆ ಮಾತನಾಡದ ಶಾಸಕರು, ಮಂತ್ರಿಗಳಿಗೆ ನಾಚಿಕೆಯಾಗಬೇಕು
* ಬೆಳಗಾವಿ ರಾಜಕಾರಣಿಗಳ ವಿರುದ್ಧ ಸಿಡಿದೆದ್ದ ಕನ್ನಡಪರ ಸಂಘಟನೆಗಳ ಮುಖಂಡರು
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ(ಏ.07): ಚುನಾವಣೆ(Election) ಸಮೀಪಿಸುತ್ತಿದ್ದಂತೆ ಬೆಳಗಾವಿ ಜಿಲ್ಲಾ ವಿಭಜನೆ(Belagavi District Partition) ಕೂಗು ಮುನ್ನಲೆಗೆ ಬಂದಿದೆ. ಆಡಳಿತಾತ್ಮಕ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆಯಾಗಬೇಕು. ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಬಳಿ ಮನವಿ ಮಾಡೋದಾಗಿ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ. ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹಮತ ವ್ಯಕ್ತಪಡಿಸಿದ್ದು ಬೆಂಬಲ ಸಹ ವ್ಯಕ್ತಪಡಿಸಿದ್ದಾರೆ. ಸದ್ಯ ಇದು ಬೆಳಗಾವಿ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿರುವ ಕನ್ನಡಪರ ಹಿರಿಯ ಹೋರಾಟಗಾರ ಅಶೋಕ ಚಂದರಗಿ, 'ಕರ್ನಾಟಕದ(Karnataka) ಗಡಿ ಜಿಲ್ಲೆ ಬೆಳಗಾವಿ ಜಿಲ್ಲೆ ವಿಭಜಿಸಿ ಮೂರು ಜಿಲ್ಲೆ ಮಾಡಬೇಕೆಂದು ಕೆಲವು ರಾಜಕಾರಣಿಗಳು ಕೂಗು ಎಬ್ಬಿಸಿದ್ದಾರೆ. ಈ ಪ್ರಯತ್ನ ಹೊಸದೇನಲ್ಲ. 1997ರ ಆಗಸ್ಟ್ 22ರಂದು ಅಂದಿನ ಜೆ.ಹೆಚ್. ಪಟೇಲ್ ಸರ್ಕಾರ ಬೆಳಗಾವಿ ಜಿಲ್ಲೆಯನ್ನು ಬೆಳಗಾವಿ, ಚಿಕ್ಕೋಡಿ, ಗೋಕಾಕ್ ಅಂತಾ ಮೂರು ಜಿಲ್ಲೆಗಳನ್ನಾಗಿ ವಿಂಗಡಿಸಿತ್ತು. ಗಡಿಸಮಸ್ಯೆ ಹಿನ್ನೆಲೆ ಬೆಳಗಾವಿ ಎಂದೆಂದೂ ಸಣ್ಣ ಜಿಲ್ಲೆ ಆಗಬಾರದು. ಸುಪ್ರಿಂಕೋರ್ಟ್‌ನಲ್ಲಿ ಹದಿನೆಂಟು ವರ್ಷದಿಂದ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ(Border Dispute) ಪ್ರಕರಣ ಬಾಕಿ ಇದೆ. ಗಡಿ ಜಿಲ್ಲೆ ಇರೋದ್ರಿಂದ ಗಡಿ ಸಮಸ್ಯೆ ಇತ್ಯರ್ಥ ಆಗೋವರೆಗೂ ಬೆಳಗಾವಿ ಜಿಲ್ಲೆ ವಿಭಜನೆ ಆಗಬಾರದು ಎಂದು 1997ರ ಆಗಸ್ಟ್ 25 ರಿಂದ ಸೆ.20ರವರೆಗೆ ಬೆಳಗಾವಿ ಜಿಲ್ಲೆಯಲ್ಲಿ ದೊಡ್ಡ ಆಂದೋಲನ ನಡೆಯಿತು.
Belagavi: ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ: ರಾಮದುರ್ಗದ ಜಾತ್ರೆಯಲ್ಲಿ ಅವಕಾಶ ನೀಡದಂತೆ ಮನವಿ
ಬೆಳಗಾವಿ ಜಿಲ್ಲಾ ವಿಭಜನೆ ವಿರೋಧ ಹೋರಾಟ ಸಮಿತಿಯಾಗಿ ಅದರಲ್ಲಿ ಮಠಾಧೀಶರು, ರೈತ ಸಂಘದ ನಾಯಕರು, ಕನ್ನಡಪರ ಸಂಘಟನೆ ಮುಖಂಡರು ಎಲ್ಲರೂ ಭಾಗವಹಿಸಿದ್ದರು. ಒಂದು ತಿಂಗಳ ಕಾಲ ಹೋರಾಟಕ್ಕೆ ಜೆ.ಹೆಚ್.ಪಟೇಲ್ ಸರ್ಕಾರ ಮಣಿಯಿತು. ಅಂದು ದಿವಂಗತ ಮಾಜಿ ಸಿಎಂ ಎಸ್.ನಿಜಲಿಂಗಪ್ಪ, ಪಾಟೀಲ್ ಪುಟ್ಟಪ್ಪ ಜೆ.ಹೆಚ್. ಪಟೇಲ್ ಸರ್ಕಾರವನ್ನು ತರಾಟೆಗೆ ತಗೆದುಕೊಂಡರು. ಆಗ ಜಿಲ್ಲಾ ವಿಭಜನೆ ವಿಚಾರ ಕೈ ಬಿಟ್ಟರು. ಅಂದಿನಿಂದ ಈವರೆಗೂ ಅನೇಕ ಸಲ ಜಿಲ್ಲಾ ವಿಭಜನೆ ಕೂಗು ಕೇಳಿ ಬರುತ್ತಿದೆ. ಆಗ ಬೆಳಗಾವಿ ಜಿಲ್ಲೆಯ ಹತ್ತು ತಾಲೂಕುಗಳಿದ್ವು. ಆಗ ಹುಕ್ಕೇರಿ, ಖಾನಾಪುರ, ಬೆಳಗಾವಿ ಸೇರಿ ಸಣ್ಣ ಜಿಲ್ಲೆ ಆಗ್ತಿತ್ತು. ಬೆಳಗಾವಿ ಅಖಂಡ ಜಿಲ್ಲೆ ಇರುವಾಗಲೇ ಮಹಾರಾಷ್ಟ್ರ ಬೆಂಬಲಿತ ಎಂಇಎಸ್(MES), ಶಿವಸೇನೆ(Shiv Sena) ಸತತವಾಗಿ ಗಲಾಟೆ ಮಾಡುತ್ತಾ ಬೆಳಗಾವಿ ಕಬಳಿಸಿಕ್ಕೆ ಪ್ರಯತ್ನ ಮಾಡ್ತಾವೆ. ಬೆಳಗಾವಿಯನ್ನು ಮೂರು ಜಿಲ್ಲೆಯಾಗಿ ವಿಭಜನೆ ಮಾಡಿದ್ರೆ ಅದು ಬಹಳ ಅಪಾಯಕಾರಿ. ಗಡಿ ಸಮಸ್ಯೆ ಇತ್ಯರ್ಥ ಆಗುವವರೆಗೂ ವಿಭಜನೆ ಆಗುವವರೆಗೂ ಒಡೆಯಬಾರದು ಎಂಬುದು ನಮ್ಮ ದೃಢ ನಿಲುವು. ಜೆ.ಹೆಚ್. ಪಟೇಲ್ ಸರ್ಕಾರದಲ್ಲಿ ಜೆ.ಹೆಚ್. ಪಟೇಲ್ ರಾಜಕೀಯ ಕಾರ್ಯದರ್ಶಿ ಆಗಿದ್ದ ಬಸವರಾಜ ಬೊಮ್ಮಾಯಿ ಇಂದು ಮುಖ್ಯಮಂತ್ರಿ ಇದ್ದು ಅವರಿಗೆ ಸಂಪೂರ್ಣ ತಿಳವಳಿಕೆ ಇದೆ.
ಸಚಿವರು, ಶಾಸಕರು ಯಾರಿಗಾದರೂ ಭೇಟಿಯಾಗಲಿ ಸಿಎಂ ಬಸವರಾಜ ಬೊಮ್ಮಾಯಿ ಈ ದುಸ್ಸಾಹಸಕ್ಕೆ ಕೈ ಹಾಕಲ್ಲ ಅಂತಾ ನಂಬಿದ್ದೇವೆ. ತಲಾ ಆರು ಎಂಎಲ್‌ಗಳು ಬೆಳಗಾವಿ ಹಂಚಿಕೊಳ್ಳಲು ಇದು ಪೇಟೆಯಲ್ಲಿನ ಬದನೆಯಕಾಯಿ ಅಲ್ಲ. ಶಾಸಕರು ಇರ್ತಾರೆ, ಹೋಗ್ತಾರೆ, ಪಕ್ಷಗಳು ಇರ್ತಾವೆ, ಹೋಗ್ತವೆ ಅದು ನಮಗೆ ಮಹತ್ವದ್ದಲ್ಲ. ಪಕ್ಷಗಳಿಂತ ನಾಡು ನುಡಿ ಗಡಿ ರಕ್ಷಣೆ ಬಹಳ ಮಹತ್ವದ್ದು. ಇಂದು ಮಾತನಾಡುವ ಎಂಇಎಲ್‌ಗಳು ಇಂದು ಶಾಸಕರಾಗಿರಬಹುದು ನಾಳೆ ಇರಲಿಕ್ಕಿಲ್ಲ. ಗಡಿಯಲ್ಲಿ ಗಲಾಟೆ ಆದ್ರೆ ಗಡಿರಕ್ಷಣೆ ಬಗ್ಗೆ ಒಂದು ಶಬ್ದವೂ ಮಾತನಾಡದ ಶಾಸಕರು ಮಂತ್ರಿಗಳು ಜಿಲ್ಲೆ ಒಡೆಯಲು ಬರ್ತಿದ್ದಾರೆ ನಾಚಿಕೆಯಾಗಬೇಕು ಇವರಿಗೆ. ಇಂತಹ ಶಾಸಕರ ಮಾತು ಕೇಳಿ ಸಿಎಂ ಬಸವರಾಜ ಬೊಮ್ಮಾಯಿ ದುಸ್ಸಾಹಸಕ್ಕೆ ಕೈ ಹಾಕಬಾರದು' ಅಂತಾ ಮನವಿ ಮಾಡಿದ್ದಾರೆ.
ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ವಿ'ಭಜನೆ' ದಂಗಲ್..!
ಇನ್ನು ಬೆಳಗಾವಿ ಜಿಲ್ಲಾ ವಿಭಜನೆ ಕೂಗು ಕತ್ತಿ ಮತ್ತು ಜಾರಕಿಹೊಳಿ ಸಹೋದರರ ಮಧ್ಯೆ ಸಂಘರ್ಷಕ್ಕೆ ವೇದಿಕೆಯಾಗುತ್ತಾ ಎಂಬ ಚರ್ಚೆಯೂ ಸದ್ಯ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ನಡೆಯುತ್ತಿದೆ. ಬೆಳಗಾವಿಯನ್ನು ಬೆಳಗಾವಿ, ಚಿಕ್ಕೋಡಿ, ಬೈಲಹೊಂಗಲ ಜಿಲ್ಲೆ ಮಾಡುವಂತೆ ಉಮೇಶ್ ಕತ್ತಿ ಆಗ್ರಹ ಮಾಡುತ್ತಿದ್ದಂತೆ ಗೋಕಾಕ್ ಭಾಗದ ಜನರು ಆಕ್ರೋಶಗೊಂಡಿದ್ದಾರೆ. ಜಾರಕಿಹೊಳಿ ಸಹೋದರರ(Jarkiholi Brothers) ಆಪ್ತ ಮಾಜಿ ಜಿ.ಪಂ.ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, 'ಈಗಾಗಲೇ ಜೆ.ಹೆಚ್. ಪಟೇಲ್ ಸಿಎಂ ಆಗಿದ್ದಾಗ ಗೋಕಾಕ್, ಚಿಕ್ಕೋಡಿ, ಬೆಳಗಾವಿ ಜಿಲ್ಲೆಯಾಗಿ ಗೆಜೆಟ್ ನೋಟಿಫಿಕೇಷನ್ ಆಗಿತ್ತು. ರಾಜಕೀಯ ಕಾರಣಗಳಿಂದ ಅದು ರದ್ದಾಗಿ ಬೆಳಗಾವಿ ಜಿಲ್ಲೆ ವಿಭಜನೆಯಾಗಲಿಲ್ಲ. ಈ ಸಂಬಂಧ ಗೋಕಾಕ ಜನ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಬೆಳಗಾವಿ, ಚಿಕ್ಕೋಡಿ, ಬೈಲಹೊಂಗಲ ಜಿಲ್ಲೆ ಆಗಬೇಕು ಅಂತಾ ಹೇಳಿಕೆ ನೀಡಿದ್ದಾರೆ. ಸಚಿವ ಉಮೇಶ್ ಕತ್ತಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಆಗ್ರಹ ಮಾಡ್ತೀವಿ. ಜಾರಕಿಹೊಳಿ ಸಹೋದರರ ಜೊತೆ ನಾವು ಮಾತನಾಡ್ತೀವಿ. ಗೋಕಾಕ ಜಿಲ್ಲೆ ಮಾಡಬೇಕು ಅಂತಾ ವಿನಂತಿ ಮಾಡಿಕೊಳ್ಳುತ್ತೇವೆ. ಅವಶ್ಯಕತೆ ಬಿದ್ರೆ ಸಿಎಂ, ವಿಪಕ್ಷ ನಾಯಕರ ಬಳಿ ಹೋಗಿ ಮನವಿ ಮಾಡ್ತೇವೆ' ಎಂದ ಡಾ.ರಾಜೇಂದ್ರ ಸಣ್ಣಕ್ಕಿ ತಿಳಿಸಿದ್ದಾರೆ.
ಮತ್ತೆ ಕೇಳಿ ಬಂತು ಬೆಳಗಾವಿ ವಿಭಜನೆ ಕೂಗು..!
ಚುನಾವಣಾ ದಾಳವಾಗಿರುವ ಬೆಳಗಾವಿ ಜಿಲ್ಲಾ ವಿಭಜನೆ ಕೂಗು
ಇನ್ನು ಬೆಳಗಾವಿ ಜಿಲ್ಲಾ ವಿಭಜನೆ ವಿಚಾರ ಹಲವು ವರ್ಷಗಳಿಂದ ರಾಜಕೀಯ ಪಕ್ಷಗಳಿಗೆ(Political Parties) ಚುನಾವಣಾ ದಾಳವಾಗಿದೆ. ಪ್ರತಿ ಬಾರಿ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಮುನ್ನಲೆಗೆ ಬರುತ್ತೆ. ರಾಜ್ಯದಲ್ಲಿಯೇ ಅತಿದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆ ವಿಭಜನೆಗೆ ಮತ್ತೆ ಪ್ರಯತ್ನ ಮಾಡಲಾಗುತ್ತಿದೆ.
50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ 18 ಶಾಸಕರು, ಮೂವರು ಸಂಸದರು, 90 ಜಿಲ್ಲಾ ಪಂಚಾಯತ್ ಕ್ಷೇತ್ರಗಳು, 245 ತಾಲೂಕು ಪಂಚಾಯತ್ ಕ್ಷೇತ್ರಗಳಿವೆ. 600 ಗ್ರಾಮ ಪಂಚಾಯತ, 33 ನಗರ ಸ್ಥಳೀಯ ಸಂಸ್ಥೆ ಹೊಂದಿರುವ ದೊಡ್ಡ ಜಿಲ್ಲೆ ಬೆಳಗಾವಿಯಾಗಿದ್ದು, ಅಥಣಿ ತಾಲೂಕಿನ ಕೊನೆಯ ಗ್ರಾಮದಿಂದ ಜಿಲ್ಲಾ ಕೇಂದ್ರ ತಲುಪಲು 220 ಕಿಲೋಮೀಟರ್ ದೂರವಾಗುತ್ತೆ. ಬೆಳಗಾವಿ ಜಿಲ್ಲೆ ವಿಭಜನೆಗೆ ದಶಕಗಳಿಂದ ಹೋರಾಟ ನಡೆದರೂ ಸಹ ಯಾವುದೇ ಪ್ರಯೋಜನೆ ಆಗಿಲ್ಲ. ಸದ್ಯ ಬೆಳಗಾವಿ ಜಿಲ್ಲಾ ವಿಭಜನೆ ಕೂಗು ಮತ್ತೆ ಮುನ್ನಲೆಗೆ ಬಂದಿದ್ದು ಇದಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಮುಂಬರುವ ದಿನಗಳಲ್ಲಿ ಇದು ಯಾವ ಹಂತಕ್ಕೆ ತಲುಪುತ್ತೆ, ರಾಜಕೀಯ ನಾಯಕರ ಮಧ್ಯದ ಸಂಘರ್ಷಕ್ಕೆ ವೇದಿಕೆಯಾಗುತ್ತಾ ಎಂಬುದನ್ನು ಕಾದು ನೋಡಬೇಕು.