ಬೆಳಗಾವಿ ಖಾಸಗಿ ಕಂಪನಿಗೆ 4.41 ಕೋಟಿ ವಂಚಿಸಿದ್ದ ಫೈನಾನ್ಸಿಯಲ್ ಕಂಟ್ರೋಲರ್!
- MBA, CA, CS, ISWA ಕೋರ್ಸ್ ಆಗಿದೆ ಅಂತಾ ಕೆಲಸಕ್ಕೆ ಸೇರಿದ, ಕೋಟ್ಯಂತರ ರೂಪಾಯಿ ವಂಚಿಸಿದ
- ದಿಢೀರ್ ಶ್ರೀಮಂತನಾಗಲು ಹೋಗಿ ಹಿಂಡಲಗಾ ಜೈಲು ಸೇರಿದ ಭೂಪ!
- ಬೆಳಗಾವಿ ಸಿಇಎನ್ ಇನ್ಸ್‌ಪೆಕ್ಟರ್ ಬಿ.ಆರ್.ಗಡ್ಡೇಕರ್ ಚಾಣಾಕ್ಷತನ, ಮುಂಬೈ ಏರ್‌ಪೋರ್ಟ್‌ನಲ್ಲಿ ಬಲೆಗೆ ಬಿದ್ದ ಆರೋಪಿ!
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ(ಎ.6): ದಿನೇದಿನೇ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಕಳ್ಳರು ಹಾಗೂ ವಂಚಕರು ಸಹ ಹೈಟೆಕ್ ಆಗುತ್ತಿದ್ದಾರೆ. ಅದರಲ್ಲೂ ದಿಢೀರ್ ಶ್ರೀಮಂತನಾಗಬೇಕು ಅಂತಾ ಹೇಳಿ ಮಾಡಬಾರದ್ದನ್ನು ಮಾಡಿ ಜೈಲು ಸೇರುವ ವಿದ್ಯಾವಂತರ ಸಂಖ್ಯೆಯೇ ಹೆಚ್ಚಾಗಿದೆ. ಇಲ್ಲೊಬ್ಬ ಆಸಾಮಿ ಕೆಲಸಕ್ಕೆಂದು ಸೇರಿದ್ದ ಕಂಪನಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ದುಬೈಗೆ (Dubai) ಹಾರಲು ಸಿದ್ಧತೆ ನಡೆಸಿದ್ದ ವಂಚಕನನ್ನು ಪೊಲೀಸರು ಸೆರೆ ಹಿಡಿದಿದ್ದೇ ರೋಚಕ.
ಬೆಳಗಾವಿ (Belagavi) ತಾಲೂಕಿನ ದೇಸೂರು ಗ್ರಾಮದ ಬಳಿ ಎಂ.ಜಿ.ಆಟೋಮೋಟಿವ್ ಬಸ್ ಆ್ಯಂಡ್ ಕೋಚ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಕಂಪನಿಯೊಂದಿದೆ. ಈ ಕಂಪನಿಗೆ ಫೈನಾನ್ಸಿಯಲ್ ಕಂಟ್ರೋಲರ್ ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕನಾಗಿ ಕೆಲಸಕ್ಕೆ ಸೇರಿದ್ದ ಮಹಾರಾಷ್ಟ್ರದ ಮುಂಬೈ ಮೂಲದ ಭವ್ಯಹರೇನ್ ದೇಸಾಯಿ (Bhavya Haren Desai ) ಎಂಬಾತ ತಾನು ಎಂಬಿಎ ಪದವೀಧರನಾಗಿದ್ದು ಸಿಎ, ಸಿಎಸ್, ಐಸಿಡಬ್ಲ್ಯೂಎ ಕೋರ್ಸ್ ಮುಗಿಸಿದ್ದೇನೆ ಅಂತಾ ಕೆಲಸಕ್ಕೆ ಸೇರಿದ್ದ. ಆರಂಭದಲ್ಲಿ ಕಂಪನಿಯ ಮೇಲಾಧಿಕಾರಿಗಳ ವಿಶ್ವಾಸ ಗಳಿಸಿದ್ದ. ಬಳಿಕ ನಕಲಿ ದಾಖಲೆ ಸೃಷ್ಟಿಸಿ ಕಂಪನಿಗೆ 4 ಕೋಟಿ 41 ಲಕ್ಷ ಹಣ ವಂಚನೆ ಮಾಡಿದ್ದ ಆರೋಪಿಯನ್ನು ಬೆಳಗಾವಿ ಸಿಇಎನ್ ಪೊಲೀಸರು ಹೆಡೆಮುರಿ ಕಟ್ಟಿ ಹಿಂಡಲಗಾ (hindalga jail) ಜೈಲಿಗಟ್ಟಿದ್ದಾರೆ.
Chamarajanagara ಕನಸಲ್ಲಿ ಬಂದ ಗಣೇಶನಿಗೆ ದೇಗುಲ ಕಟ್ಟಿಸಿ ಆರಾಧಿಸುತ್ತಿರುವ ಮುಸ್ಲಿಂ ವ್ಯಕ್ತಿ!
ಆರ್‌ಟಿಜಿಎಸ್ (RTGS) ಮೂಲಕ 4 ಕೋಟಿ 41 ಲಕ್ಷ ಹಣ ವರ್ಗಾವಣೆ: ಬೆಳಗಾವಿಯ ಎಂ.ಜಿ. ಆಟೋಮೋಟಿವ್ ಬಸ್ & ಕೋಚ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಗ್ರೂಪ್ ಫೈನಾನ್ಸಿಯಲ್ ಕಂಟ್ರೋಲರ್ ಹಾಗೂ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅಂತಾ ಕಾರ್ಯನಿರ್ವಹಿಸುತ್ತಿದ್ದ ಭವ್ಯ ಹರೇನ್ ಕಂಪನಿಯ ಎಲ್ಲಾ ವ್ಯವಹಾರ ನೋಡಿಕೊಳ್ಳುತ್ತಿದ್ದ. ಈ ವೇಳೆ ದಿಢೀರ್ ಶ್ರೀಮಂತನಾಗಬೇಕು ಎಂಬ ಆಸೆಯಿಂದ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಸುಳ್ಳು ದಾಖಲೆ, ನಕಲಿ ಇಮೇಲ್ ಸೃಷ್ಟಿಸಿ ಬೆಳಗಾವಿಯ ಕಂಪನಿಗಳಿಗೆ ಹಾಗೂ ತಮಗೆ ಮೆಟೀರಿಯಲ್ ಸಪ್ಲೈ ಮಾಡಿದ ಕಂಪನಿಗಳಿಗೆ ಹಣ ಕೊಡುವುದಿದೆ. ಆ ಬಾಕಿ ಉಳಿದಿದ್ದ ಹಣ ಕೊಡದಿದ್ರೆ ಕಂಪನಿ ವಿರುದ್ಧ ದೂರು ನೀಡಿ ಕಂಪನಿಯ ಹೆಸರು ಡ್ಯಾಮೇಜ್ ಮಾಡ್ತಾರೆ ಅಂತಾ ಹೇಳಿ ನಕಲಿ ದಾಖಲೆ ಸೃಷ್ಟಿಸಿ ಬರೋಬ್ಬರಿ 4 ಕೋಟಿ 41 ಲಕ್ಷದ 95 ಸಾವಿರದ 41 ರೂಪಾಯಿ ಹಣವನ್ನು ಆರ್ ಟಿಜಿಎಸ್ ಮೂಲಕ ತನ್ನ ಹಾಗೂ ತನ್ನ ಪತ್ನಿಯ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿ ಪರಾರಿಯಾಗಿದ್ದ.
ಹಲವು ಕಂಪನಿಗಳೊಂದಿಗಿನ ವ್ಯವಹಾರವನ್ನೇ ದಾಳವಾಗಿಸಿಕೊಂಡಿದ್ದ. ಯಾವಾಗ ತಮಗೆ ಪೇಮೆಂಟ್ ಆಗಿಲ್ಲ ಎಂದು ಆಯಾ ಕಂಪನಿಯಿಂದ ಹಣಕಾಸು ವಿಭಾಗದ ಡಿಜಿಎಂ ಪ್ರಕಾಶ್ ಸರ್ವಿ ಗಮನಕ್ಕೆ ಬರುತ್ತೋ ತಕ್ಷಣ ಪ್ರಕಾಶ್ ಸರ್ವಿ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ. ಆನಲೈನ್ ವಂಚನೆ ಹಿನ್ನೆಲೆ ಬೆಳಗಾವಿ ಸಿಇಎನ್ ಠಾಣೆಗೆ ಪ್ರಕರಣ ವರ್ಗಾವಣೆಯಾಗಿರುತ್ತೆ. ಬಳಿಕ ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಸಿಇಎನ್ ಪೊಲೀಸರು ತನಿಖೆಗಿಳಿದಿದ್ದರು
ಮುಂಬೈ ಏರ್‌ಪೋರ್ಟ್‌ನಲ್ಲಿ ಬಲೆಗೆ ಬಿದ್ದ ವಂಚಕ!: ಬೆಳಗಾವಿಯ ಎಂ.ಜಿ. ಆಟೋಮೋಟಿವ್ ಬಸ್ & ಕೋಚ್ ಪ್ರೈವೆಟ್ ಲಿಮಿಟೆಡ್ ನ ಫೈನಾನ್ಸ್ ವಿಭಾಗದ ಪ್ರಕಾಶ್ ಸುರ್ವಿ ಎಂಬುವರು ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 465, 466 467, 468, 471, 406, 420 IPC ಅಡಿ ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಸಿಇಎನ್ ಪೊಲೀಸರು ಪ್ರತ್ಯೇಕ ತಂಡ ರಚಿಸಿ ತನಿಖೆಗಿಳಿಯುತ್ತಾರೆ. ನಕಲಿ ದಾಖಲೆ ಸೃಷ್ಟಿಸಿ ಹಣ ವರ್ಗಾವಣೆ ಮಾಡಿದಂತಹ ಭವ್ಯಹರೇನ್ ದೇಸಾಯಿ, ಆತನ ಪತ್ನಿ ಉರ್ಜಾ ಶೈಲೇಶ್ ಶಹಾ, ಸಂಬಂಧಿ ಹರೇನ್ ವಿನೋದರಾಯ್ ದೇಸಾಯಿ ಹಾಗೂ ನಾಲ್ಕು ಕಂಪನಿಗಳ ವಿರುದ್ಧ ಎಫ್ಐಆರ್ ದಾಖಲಿಸುತ್ತಾರೆ. ಬಳಿಕ ಈ ಭವ್ಯಹರೇನ್ ಹಣ ವರ್ಗಾವಣೆ ಮಾಡಿದ ಖಾತೆಗಳನ್ನೆಲ್ಲಾ ಫ್ರೀಜ್ ಮಾಡಿ ಆತನ ಬಂಧನಕ್ಕೆ ಬಲೆ ಬೀಸುತ್ತಾರೆ.
ಹಲಾಲ್ ಕಟ್ ಮಾಡಿದ್ದೆ ನಾವು ತಿನ್ನೋದು, ಮಾಂಸ ತಿನ್ನದವರಿಂದ ವಿವಾದ ಸೃಷ್ಟಿ
ಇನ್ನು ಆರೋಪಿ ಭವ್ಯಹರೇನ್ ದೇಸಾಯಿ ದೇಶ ಬಿಟ್ಟು ಹೋಗದಂತೆ ಲುಕ್ ಔಟ್ ನೋಟಿಸ್ ಸಹ ಜಾರಿ ಮಾಡ್ತಾರೆ. ಇದೇ ವೇಳೆ ಆರೋಪಿ ಭವ್ಯಹರೇನ್ ದೇಸಾಯಿ ಮುಂಬೈ ಏರ್‌ಪೋರ್ಟ್‌ನಿಂದ ದುಬೈನ ಶಾಹರ್ಜಾಗೆ ಹಾರಲು ಪ್ಲ್ಯಾನ್ ಮಾಡಿರ್ತಾನೆ. ಯಾವಾಗ ಬೆಳಗಾವಿ ಸಿಇಎನ್ ಠಾಣೆ ಪೊಲೀಸರಿಗೆ ಈ ಕುರಿತು ಮಾಹಿತಿ ಬರುತ್ತೋ ಮುಂಬೈ ಏರ್‌ಪೋರ್ಟ್‌ಗೆ ತೆರಳಿ ಆರೋಪಿಯ ನ್ನು ಬಂಧಿಸಿ ಬೆಳಗಾವಿಗೆ ಕರೆ ತಂದಿದ್ದಾರೆ. 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದ ಸಿಇಎನ್ ಟೀಮ್ ಸದ್ಯ ಆರೋಪಿ ಬಳಿ 2 ಕೋಟಿ 50 ಲಕ್ಷ ರೂಪಾಯಿಯಷ್ಟು ಹಣ ರಿಕವರಿ ಮಾಡಿದ್ದಾರೆ. ಬಳಿಕ ಬೆಳಗಾವಿ ಜೆಎಂಎಫಸಿ ನ್ಯಾಯಾಲಯಕ್ಕೆ ಆರೋಪಿ ಹಾಜರು ಪಡಿಸಿ ಹಿಂಡಲಗಾ ಜೈಲಿಗಟ್ಟಿದ್ದಾರೆ. ಇನ್ನು ವಂಚನೆ ಮಾಡಿ ಪಡೆದ ಹಣವನ್ನು ಆರೋಪಿ ಭವ್ಯಹರೇನ್ ಶೇರ್ ಮಾರ್ಕೆಟ್‌ನಲ್ಲಿ ಇನ್ವೆಸ್ಟ್ ಮಾಡಿದ್ದೂ ಸಹ ಗೊತ್ತಾಗಿದೆ.
ಒಟ್ಟಿನಲ್ಲಿ ಕೆಲಸಕ್ಕೆಂದು ಸೇರಿದ ಕಂಪನಿಗೆ ಕೋಟ್ಯಂತರ ರೂಪಾಯಿ ಮೋಸ ಮಾಡಿದ ಚಾಲಾಕಿ ಇಂದು ಹಿಂಡಲಗಾ ಜೈಲು ಸೇರಿದ್ದಾನೆ. ಬೆಳಗಾವಿ ಸಿಇಎನ್ ಇನ್ಸ್‌ಪೆಕ್ಟರ್ ಬಿ.ಆರ್.ಗಡ್ಡೇಕರ್ & ಟೀಮ್ ಸಮಯಪ್ರಜ್ಞೆಯಿಂದ ಪ್ರಕರಣ ಬೇಧಿಸಲಾಗಿದೆ. ಸೈಬರ್ ಕ್ರೈಮ್ ಬಗ್ಗೆ ಪೊಲೀಸರು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಸಹ ದೊಡ್ಡ ದೊಡ್ಡ ಕಂಪನಿಗಳೇ ಮೋಸ ಹೋಗುತ್ತಿರೋದು ವಿಪರ್ಯಾಸವೇ ಸರಿ.