ಬೆಂಗಳೂರು(ಅ.30): 2012ರ ನವೆಂಬರ್‌ನಲ್ಲಿ ನಗರದಲ್ಲಿ ನಡೆದಿದ್ದ ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದಲ್ಲಿ ಬಿಬಿಎಂಪಿ ಅಜಾದ್‌ ನಗರ ವಾರ್ಡ್‌ ಮಾಜಿ ಸದಸ್ಯರಾದ ಸಿ.ಗೋವಿಂದರಾಜು ಮತ್ತು ಗೌರಮ್ಮ ಸೇರಿ 12 ಮಂದಿಗೆ ಜೀವಾವಧಿ ಶಿಕ್ಷೆ ನೀಡಿ ನಗರದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಗುರುವಾರ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ್ದ 59ನೇ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರು, ಆರೋಪಿಗಳಾದ ಸಿ.ಗೋವಿಂದರಾಜು, ಗೌರಮ್ಮ, ರಂಗಸ್ವಾಮಿ, ಆರ್‌.ಶಂಕರ್‌, ರಾಘವೇಂದ್ರ, ಚಂದ್ರ, ಶಂಕರ್‌, ಉಮಾಶಂಕರ್‌, ವೇಲು, ಲೋಕನಾಥ್‌, ಜಹೀರ್‌ ಮತ್ತು ಸುರೇಶ್‌ಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ದಂಡ ವಿಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಆರ್‌ಟಿಐ ಕಾರ್ಯಕರ್ತ ಹಾಗೂ ಹವ್ಯಾಸಿ ಪತ್ರಕರ್ತರಾಗಿದ್ದ ಲಿಂಗರಾಜು ಮಾಹಿತಿ ಹಕ್ಕು ಕಾಯಿದೆಯಡಿ ದಾಖಲೆಗಳನ್ನು ಸಂಗ್ರಹಿಸಿ ತನಿಖಾ ಸಂಸ್ಥೆಗಳಿಗೆ ದೂರು ನೀಡುತ್ತಿದ್ದರು. ಪಾಲಿಕೆ ಸದಸ್ಯರಾಗಿದ್ದ ಗೋವಿಂದರಾಜು ಅವರೊಂದಿಗೆ ಲಿಂಗರಾಜು ಆಪ್ತವಾಗಿದ್ದರು. ಆದರೂ ಗೋವಿಂದರಾಜು ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂದು 2010ರಲ್ಲಿ ಲೋಕಾಯುಕ್ತಕ್ಕೆ ಲಿಂಗರಾಜು ದೂರು ನೀಡಿದ್ದರು. ಈ ಬಗ್ಗೆ ರಾಜಿಗೆ ಗೋವಿಂದರಾಜು ಯತ್ನಿಸಿ ವಿಫಲರಾಗಿದ್ದರು. ಬಳಿಕ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಕುರಿತು ಲಿಂಗರಾಜು ವಕೀಲರೊಬ್ಬರಿಂದ ಪ್ರಮಾಣ ಪತ್ರ ಮಾಡಿಸಿಟ್ಟಿದ್ದರು. ಲಿಂಗರಾಜು ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ಮಹತ್ವದ ದಾಖಲೆಗಳನ್ನು ಕಲೆಹಾಕಿದ್ದರು.

ಮಿಷನ್ ಶಕ್ತಿ: ಯೋಗಿ ನಾಡಲ್ಲಿ 2 ದಿನದಲ್ಲಿ 14 ಮಂದಿಗೆ ಗಲ್ಲು, 20 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ!

ಇದಾದ ಕೆಲವೇ ದಿನಗಳಲ್ಲಿ (2012 ನವೆಂಬರ್‌ 20 ರಂದು) ದೂರುದಾರ ಲಿಂಗರಾಜು ಅವರನ್ನು ವಿಠ್ಠಲ್‌ ನಗರದ ಅವರ ನಿವಾಸದ ಎದುರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣ ಬೆನ್ನುಹತ್ತಿದ ಪೊಲೀಸರು ಪ್ರಮುಖ ಸಾಕ್ಷ್ಯಾಧಾರಗಳೊಂದಿಗೆ ಆರೋಪಿಗಳನ್ನು ಬಂಧಿಸಿದ್ದರು. ಪ್ರಕರಣದಲ್ಲಿ ತನಿಖಾಧಿಕಾರಿಗಳ ಪರವಾಗಿ ವಿಶೇಷ ಸರ್ಕಾರಿ ವಕೀಲ ಆಶೋಕ್‌ನಾಯಕ್‌ ವಾದ ಮಂಡಿಸಿದ್ದರು.

8 ಕೋಟಿ, 2 ಫ್ಲ್ಯಾಟ್‌ ಅಮಿಷ!

ಕೊಲೆ ಆರೋಪ ಎದುರಿಸುತ್ತಿದ ಗೋವಿಂದರಾಜು ಮತ್ತವರ ಸಹಚರರು ಪರಪ್ಪನ ಅಗ್ರಹಾರದಲ್ಲಿದ್ದುಕೊಂಡು ಅಮಿಷ ನೀಡಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ಮಾಡಿದ್ದರು. ಈ ನಡುವೆ ಚಿಕಿತ್ಸೆಗೆಂದು ಜೈಲಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಗೋವಿಂದರಾಜು, ಮೃತ ಲಿಂಗರಾಜು ಪತ್ನಿ ಉಮಾದೇವಿಯವರ ಸಹೋದರಿ ಮತ್ತು ಮಗ ಕಾರ್ತಿಕ್‌ನೊಂದಿಗೆ ಮಾತನಾಡಿ ರಾಜಿ ಸಂಧಾನಕ್ಕೆ ಯತ್ನಿಸಿದ್ದ. ಅಲ್ಲದೆ, .8 ಕೋಟಿ ನಗದು, ಎರಡು ಫ್ಲಾಟ್‌ಗಳನ್ನು ನೀಡುವುದಾಗಿ ಭರವಸೆ ನೀಡಿದ್ದ.

ಇದಕ್ಕೆ ಸಮ್ಮತಿಸಿದ್ದ ಲಿಂಗರಾಜು ಪತ್ನಿ ಮತ್ತು ಪುತ್ರ, ಘಟನೆ ಕಣ್ಣಾರೆ ಕಂಡಿರುವುದಾಗಿ ಹೇಳಿ ದೂರು ನೀಡಿದ್ದರೂ ನ್ಯಾಯಾಲಯದಲ್ಲಿ ಪಾಟಿಸವಾಲು ನಡೆಯುವ ವೇಳೆ, ಘಟನೆ ನೋಡಿಯೇ ಇಲ್ಲ ಎಂದು ತಿಳಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಕುರಿತು ಖಾಸಗಿ ಚಾನೆಲ್‌ವೊಂದು ಸ್ಟಿಂಗ್‌ ಆಪರೇಷನ್‌ ಮಾಡಿತ್ತು. ಈ ಅಂಶವನ್ನು ವಿಶೇಷ ತನಿಖಾ ತಂಡ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿತ್ತು.

ಸ್ವಯಂಪ್ರೇರಿತ ಪಿಐಎಲ್‌:

ಪ್ರಕರಣ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದ್ದ ಹೈಕೋರ್ಟ್‌ ತನಿಖೆಗೆ ಸೂಚಿಸಿತ್ತು. ಆರೋಪಿಗಳ ಪತ್ತೆಗೆ ನಗರ ಜಂಟಿ ಪೊಲೀಸ್‌ ಆಯುಕ್ತರಾಗಿದ್ದ ಪ್ರಣವ್‌ ಮೊಹಾಂತಿ ಹಾಗೂ ಸಿಐಡಿ ಎಸ್‌.ಪಿ. ಆಗಿದ್ದ ಅಬ್ದುಲ್‌ ಅಹದ್‌ ಅವರನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿದ್ದರು. ವಿಶೇಷ ತನಿಖಾ ತಂಡ ತನಿಖೆ ನಡೆಸಿದಾಗ ಅಜಾದ್‌ ನಗರ ಪಾಲಿಕೆ ಸದಸ್ಯೆ ಗೌರಮ್ಮ, ಪತಿ ಗೋವಿಂದರಾಜು ಅವರು ಲಿಂಗರಾಜು ಹತ್ಯೆಗೆ ಸುಪಾರಿ ನೀಡಿರುವುದು ಸ್ಪಷ್ಟವಾಗಿತ್ತು.

ಲಿಂಗರಾಜು ಹತ್ಯೆ ಪ್ರಕರಣ ಸಂಬಂಧ ಸುಳ್ಳು ಸಾಕ್ಷಿ ನುಡಿದಿದ್ದ ಪತ್ನಿ ಉಮಾದೇವಿ ಮತ್ತು ಕಾರ್ತಿಕ್‌ಗೆ ನೀಡಿದ್ದ ಭರವಸೆಯನ್ನು ಆರೋಪಿಗಳು ಈಡೇರಿಸಿರಲಿಲ್ಲ. ಇದರಿಂದ ಬೇಸತ್ತಿದ್ದ ಉಮಾದೇವಿ ಸಂಬಂಧಿಕರು ಶಿಕ್ಷೆ ಪ್ರಕಟವಾಗುತ್ತದೆ ಎಂದು ತಿಳಿದು ಮಂಗಳವಾರ(ಆ.27) ರಾತ್ರಿ ಆರೋಪಿಗಳ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಳ್ಳು ಸಾಕ್ಷಿ ನುಡಿದಿದ್ದ ಪತ್ನಿ, ಪುತ್ರ ಮೇಲೆ ಕ್ರಿಮಿನಲ್‌ ಕೇಸ್‌

ಕೊಲೆಯಾದ ಲಿಂಗರಾಜು ಪತ್ನಿಗೆ ಪ್ರಕರಣದ ಅಪರಾಧಿಗಳು 8 ಕೋಟಿ ಹಣ, 2 ಫ್ಲಾಟ್‌ ನೀಡುವುದಾಗಿ ತಿಳಿಸಿ ಸುಳ್ಳು ಸಾಕ್ಷಿ ನುಡಿಯಲು ಹೇಳಿದ್ದರು. ಇದಕ್ಕೆ ಒಪ್ಪಿದ್ದ ಲಿಂಗರಾಜು ಪತ್ನಿ ಉಮಾದೇವಿ ಮತ್ತು ಪುತ್ರ ಕಾರ್ತಿಕ್‌, ದೂರು ನೀಡುವ ಸಂದರ್ಭದಲ್ಲಿ ಘಟನೆಯನ್ನು ನೋಡಿರುವುದಾಗಿ ಹೇಳಿದ್ದರು, ಆದರೆ ನ್ಯಾಯಾಲಯದಲ್ಲಿ ಘಟನೆ ನಡೆದಿರುವುದು ಗೊತ್ತೇ ಇಲ್ಲ ಸಾಕ್ಷಿ ನುಡಿದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ ಲಿಂಗರಾಜು ಪತ್ನಿ ಉಮಾದೇವಿ ಮತ್ತು ಪುತ್ರ ಕಾರ್ತಿಕ್‌ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.

ಎಸ್‌ಪಿಪಿ ವಿರುದ್ಧವೇ ಆರೋಪಿಗಳ ಪಿತೂರಿ!

ಪ್ರಕರಣದಲ್ಲಿ ತನಿಖಾಧಿಕಾರಿಗಳ ಪರ ವಾದ ಮಂಡಿಸಲು ವಕೀಲ ಸದಾಶಿವಮೂರ್ತಿ ಅವರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಕ ಮಾಡಲಾಗಿತ್ತು. ಬಲವಾಗಿ ವಾದ ಮಂಡಿಸುತ್ತಿದ್ದ ಎಂದು ತಿಳಿದ ಆರೋಪಿಗಳು, ವಕೀಲರ ವಿರುದ್ಧ ಪಿತೂರಿ ಮಾಡಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು.