ಹುಣಸೂರು ಜಿಲ್ಲಾ ಕೇಂದ್ರವಾಗಲು ಶ್ರಮಿಸೋಣ : ಎಚ್. ವಿಶ್ವನಾಥ್

ಸರ್ಕಾರ ಮತ್ತು ಹುಣಸೂರು ಉಪವಿಭಾಗ ವ್ಯಾಪ್ತಿಯ ಎಲ್ಲ ತಾಲೂಕುಗಳ ಜನಪ್ರತಿನಿಧಿಗಳ ವಿಶ್ವಾಸದೊಂದಿಗೆ ಹುಣಸೂರು ಜಿಲ್ಲಾ ಕೇಂದ್ರವಾಗಲು ಶ್ರಮಿಸೋಣ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕರೆ ನೀಡಿದರು.

Lets work hard to make Hunsur district center  snr

  ಹುಣಸೂರು :  ಸರ್ಕಾರ ಮತ್ತು ಹುಣಸೂರು ಉಪವಿಭಾಗ ವ್ಯಾಪ್ತಿಯ ಎಲ್ಲ ತಾಲೂಕುಗಳ ಜನಪ್ರತಿನಿಧಿಗಳ ವಿಶ್ವಾಸದೊಂದಿಗೆ ಹುಣಸೂರು ಜಿಲ್ಲಾ ಕೇಂದ್ರವಾಗಲು ಶ್ರಮಿಸೋಣ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕರೆ ನೀಡಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಮುಖಂಡರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹುಣಸೂರು ಜಿಲ್ಲಾ ಕೇಂದ್ರವಾಗಲು ಎಲ್ಲ ಅರ್ಹತೆಗಳನ್ನು ಹೊಂದಿದೆ. ರಾಜ್ಯದಲ್ಲಿ 21 ಲಕ್ಷ ಬಡವರಿಗೆ ಉಳುವವನೇ ಭೂಮಿಯ ಒಡೆಯ ಎಂಬ ಕ್ರಾಂತಿಕಾರಿ ಜಾರಿಗೊಳಿಸಿದ ಈ ನೆಲದ ಪುತ್ರ ಡಿ. ದೇವರಾಜ ಅರಸು ಹುಟ್ಟಿದ ನಾಡು ಇದಾಗಿದೆ. ವಿಶ್ವದಲ್ಲೇ ಅತ್ಯುತ್ತಮ ದರ್ಜೆಯ ತಂಬಾಕು ಬೆಳೆಯುವ ಪ್ರದೇಶ ಹುಣಸೂರು ಆಗಿದೆ. ತೇಗದ ನಾಡು ಎಂಬ ಕೀರ್ತಿಗೂ ಪಾತ್ರವಾಗಿದೆ. ಪವಿತ್ರ ಲಕ್ಷ್ಮಣತೀರ್ಥ ನದಿ ಹರಿಯುವ ಸ್ಥಳ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಪರಿಸರ, ಪ್ರಕೃತಿ ಸಂಪತ್ತು ಹೊಂದಿದ ನಾಡು. ಹುಣಸೂರು ಉಪವಿಭಾಗ ವ್ಯಾಪ್ತಿಯ ಕೆ.ಆರ್. ನಗರ, ಎಚ್.ಡಿ. ಕೋಟೆ, ಪಿರಿಯಾಪಟ್ಟಣ, ಸರಗೂರು, ಸಾಲಿಗ್ರಾಮ ಗಳನ್ನು ಒಳಗೊಂಡ ಎಲ್ಲ ತಾಲೂಕುಗಳು ಇಂತಹುದೇ ಪ್ರಭಾವವನ್ನು ಹೊಂದಿದೆ. ಅತ್ಯಂತ ವೈಶಿಷ್ಟ್ಯಪೂರ್ಣ ವೈವಿಧ್ಯತೆಯನ್ನು ಹೊಂದಿರುವ ಹುಣಸೂರು ಜಿಲ್ಲಾ ಕೇಂದ್ರವಾದಲ್ಲಿ ಉಪವಿಭಾಗದ ಎಲ್ಲ ತಾಲೂಕುಗಳಿಗೂ ಅನುಕೂಲವಾಗಲಿದೆ ಎಂದರು.

ಸರ್ವರ ವಿಶ್ವಾಸ, ಬೆಂಬಲ ಗಳಿಸೋಣ:

ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲ ಪಕ್ಷಗಳ ಮುಖಂಡರು, ಸಾರ್ವಜನಿಕರು ಒಂದಾಗಿ ಶ್ರಮಿಸೋಣ. ಸರ್ಕಾರ ಮತ್ತು ಜನಪ್ರತಿನಿಧಿಗಳ ವಿಶ್ವಾಸ ಗಳಿಸೋಣ. ವಿಶ್ವಾಸವೇ ನಮ್ಮ ದಾರಿಯಾಗಲಿ. ಎಲ್ಲರ ಮನವೊಲಿಸಿ ಕಾರ್ಯ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ತಾಲೂಕಿಗೂ ಭೇಟಿ ನೀಡಿ ಅಲ್ಲಿನ ಜನಪ್ರತಿನಿಧಿಗಳು ಮತ್ತು ಜನರೊಂದಿಗೆ ಚರ್ಚಿಸಿ ಅವರ ವಿಶ್ವಾಸ ಗಳಿಸಿ ಮುನ್ನಡೆಯೋಣ. ವಿಶ್ವಾಸದ ದಾರಿಯೊಂದಿಗೆ ಡಿ. ದೇವರಾಜ ಅರಸು ಜಿಲ್ಲಾ ಕೇಂದ್ರವಾಗುವುದೇ ನಮ್ಮೆಲ್ಲರ ಗುರಿಯಾಗಲಿ ಎಂದರು.

ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ಅಧಿಕಾರ ವಿಕೇಂದ್ರೀಕರಣದಿಂದ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸರ್ಕಾರದ ಸೌಲಭ್ಯಗಳನ್ನು ಹೊಂದಲು ಸಾಧ್ಯ ಎನ್ನುವುದು ನನ್ನ ನಂಬಿಕೆ. ಈ ದಿಶೆಯಲ್ಲಿ ಹುಣಸೂರು ಜಿಲ್ಲಾ ಕೇಂದ್ರವಾಗುವ ಮೂಲಕ ಉಪವಿಭಾಗ ವ್ಯಾಪ್ತಿಯ ಎಲ್ಲ ತಾಲೂಕುಗಳೂ ಹೆಚ್ಚು ಅನುಕೂಲ ಪಡೆಯಲು ಸಾಧ್ಯ. ಆಡಳಿತ ಜನರ ಬಳಿ ತಲುಪಲು ಇಂತಹ ವಿಕೇಂದ್ರೀಕರಣ ಹೆಜ್ಜೆಗಳು ಅಗತ್ಯ. ಮೊದಲ ಹೆಜ್ಜೆಯಾಗಿ ಪೂರ್ವಭಾವಿ ಸಭೆಯಲ್ಲಿ ವಿಶ್ವಾಸದ ಮೂಲಕ ಕಾರ್ಯ ಸಾಧಿಸಲು ನಿರ್ಧರಿಸಿರುವುದು ಸ್ವಾಗತಾರ್ಹ ವಿಷಯವಾಗಿದೆ. ಹುಣಸೂರು ಜಿಲ್ಲೆಯನ್ನಾಗಿಸಲು ನನ್ನ ಎಲ್ಲ ಬೆಂಬಲವನ್ನೂ ನೀಡುತ್ತೇ ನೆಂದು ತಿಳಿಸಿದರು.

ಮುಖಂಡರಾದ ಹರಿಹರ ಅನಂದಸ್ವಾಮಿ, ಸತ್ಯಪ್ಪ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಪಕ್ಷಗಳ ನಾಯಕರು ಹುಣಸೂರು ಜಿಲ್ಲಾ ಕೇಂದ್ರವಾಗಬೇಕೆಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಮುಖಂಡರಾದ ನಾಗರಾಜ ಮಲ್ಲಾಡಿ, ಎಂ.ಶಿವಕುಮಾರ್, ಫಜಲ್ ಅಹಮದ್, ಗೀತಾ ನಿಂಗರಾಜು, ಪುಟ್ಟರಾಜು, ರಾಜು ಬಿಳಿಕೆರೆ, ಡಿ.ಕೆ. ಕುನ್ನೇಗೌಡ, ಹಂದನಹಳ್ಳಿ ಸೋಮಶೇಖರ್, ಗಣೇಶ್ ಕುಮಾರಸ್ವಾಮಿ, ಎ.ಪಿ. ಸ್ವಾಮಿ, ಸತೀಶ್ ಕುಮಾರ್, ಹರೀಶ್ ಇದ್ದರು.

ಬೆಂಗಳೂರಿನಲ್ಲಿ ಸದನ ಸಮಿತಿ ಸಭೆ ಆಯೋಜನೆಗೊಂಡಿದ್ದ ಕಾರಣ ತಾವು ಸಭೆಗೆ ಹಾಜರಾಗಲು ಸಾಧ್ಯವಿಲ್ಲ. ಸಭೆ ನಿರ್ಣಯಕ್ಕೆ ತಾವು ಬದ್ಧರಿರುವುದಾಗಿ ಶಾಸಕ ಜಿ.ಡಿ. ಹರೀಶ್ ಗೌಡ ಕಳುಹಿಸಿದ್ದ ಸಂದೇಶ ಪತ್ರವನ್ನು ಅವರ ಆಪ್ತ ಕಾರ್ಯದರ್ಶಿ ಸಭೆಯಲ್ಲಿ ಓದಿದರು.

ಕಿತಾಪತಿ ಮಾತಿಗೆ ಬೆಲೆಯಿಲ್ಲ

ಜಿಲ್ಲಾ ಕೇಂದ್ರ ಆಗಬೇಕೆಂಬುದ ಕುರಿತು 2018 ರಿಂದಲೇ ಆರಂಭಿಸಿದ್ದೇನೆ. ಇದೀಗ ಮತ್ತೆ ಚರ್ಚೆ ಮುನ್ನಲೆಗೆ ಬಂದಿರುವುದನ್ನು ಕೆಲವರು ಲೋಕಸಭೆ ಚುನಾವಣೆಗಾಗಿ ವಿಶ್ವನಾಥ್ ಪ್ರಯತ್ನಿಸುತ್ತಿದ್ದಾರೆಂದು ಕಿತಾಪತಿ ಮಾತುಗಳನ್ನು ಆಡುತ್ತಿದ್ದಾರೆ. ಆಡಿಕೊಳ್ಳಲಿ ಬಿಡಿ. ಬರೀ ಹುಣಸೂರು ಕ್ಷೇತ್ರದಿಂದ ಲೋಕಸಭೆ ಗೆಲ್ಲಲು ಸಾಧ್ಯವೇ? ಮಿಕ್ಕ 5 ಕ್ಷೇತ್ರಗಳೂ ಬೇಕಲ್ಲವೇ? ಇದೆಲ್ಲ ಸುಳ್ಳು. ನಮ್ಮ ಗುರಿ ಜಿಲ್ಲಾ ಕೇಂದ್ರವಾಗಬೇಕೆನ್ನುವ ಒಂದೇ ಗುರಿಯೊಂದಿಗೆ ಶ್ರಮಿಸೋಣ. ಬೇರಾವುದೇ ಅರ್ಥ ಕಲ್ಪಿಸಬೇಕಿಲ್ಲ ಎಂದು ಎಚ್.ವಿಶ್ವನಾಥ್ ಟೀಕಾಕಾರರಿಗೆ ಎದಿರೇಟು ನೀಡಿದರು.

Latest Videos
Follow Us:
Download App:
  • android
  • ios