ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ, ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು ಅಧ್ಯಾಯ ಹಾಗೂ ಕ್ಯಾಡ್ಬರಿ ಬೆಂಗಳೂರು ಇವರ ಸಹಯೋಗದೊಂದಿಗೆ ವಿಶ್ವ ತೆಂಗು ದಿನಾಚರಣೆ ಹಾಗೂ ತೆಂಗಿನ ಬೆಳೆಯಲ್ಲಿ ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
ಸುತ್ತೂರು : ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ, ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು ಅಧ್ಯಾಯ ಹಾಗೂ ಕ್ಯಾಡ್ಬರಿ ಬೆಂಗಳೂರು ಇವರ ಸಹಯೋಗದೊಂದಿಗೆ ವಿಶ್ವ ತೆಂಗು ದಿನಾಚರಣೆ ಹಾಗೂ ತೆಂಗಿನ ಬೆಳೆಯಲ್ಲಿ ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
ಮುಖ್ಯಅತಿಥಿಯಾದ ಡಾ.ಜಿ.ಎಚ್. ಯೋಗೀಶ್ ಮಾತನಾಡಿ, ತೆಂಗು ಒಂದು ಕಲ್ಪವೃಕ್ಷ ಇದರ ಪ್ರತಿ ಭಾಗವು ಉಪಯುಕ್ತ ವಾಗಿದೆ, ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಳೆಯುವ ರೈತರ ಸಂಖ್ಯೆ ಹೆಚ್ಚುತಾ, ತೆಂಗಿನ ಬೆಳೆಯನ್ನು ಬೆಳೆಯುವ ರೈತರ ಸಂಖ್ಯೆ ಕಮ್ಮಿ ಆಗುತ್ತಿದೆ, ಇದನ್ನು ತಪ್ಪಿಸುವ ಕೆಲಸ ನಾವು ಮಾಡಬೇಕಿದೆ. ಈ ವರ್ಷ ಮಳೆ ಕಡಿಮೆ ಇರುವುದರಿಂದ ತೆಂಗಿನ ತೋಟದಲ್ಲಿ ನೀರಿನ ನಿರ್ವಹಣೆ ಬಗ್ಗೆ ವಿವರವಾಗಿ ತಿಳಿಸಿದರು.
ಅಲ್ಲದೆ ತೆಂಗಿನ ತೋಟದಲ್ಲಿ ಸಿಗುವ ಕೃಷಿ ತ್ಯಾಜ್ಯವನ್ನು ಉಪಯೋಗಿಸಿಕೊಂಡು ಹೇಗೆ ನಾವು ತೋಟವನ್ನು ಸಮಗ್ರವಾಗಿ ನಿರ್ವಹಿಸಬಹುದು, ತೆಂಗಿನ ಬೆಳೆಯಲ್ಲಿ ಅಡಿಕೆ ಬದಲಾಗಿ ಕೋಕೋ ಅಥವಾ ಬೆಣ್ಣೆಹಣ್ಣು ಹಣ್ಣುಗಳನ್ನು ಬೆಳೆದರೆ ಮಣ್ಣಿನ ಫಲವತ್ತತೆ ಹೆಚ್ಚಿಸುವುದಲ್ಲದೆ ಹೆಚ್ಚು ಆದಾಯ ಪಡೆಯಬಹುದು ಎಂದು ಅವರು ಹೇಳಿದರು.
ಕ್ಯಾಡ್ಬರಿ ಸಹಾಯಕ ವ್ಯವಸ್ಥಾಪಕ ಮೋಹನ್ ಮಾತನಾಡಿ, ಕೋಕೋ ಬೆಳೆಯನ್ನು ಹೆಚ್ಚಿನ ತೊಂದರೆ ಇಲ್ಲದೆ ತೆಂಗಿನ ಬೆಳೆಯಲ್ಲಿ ಅಂತರ ಬೆಳೆಯಾಗಿ ಬೆಳೆಯಬಹುದು, ಕ್ಯಾಡ್ಬರಿ ಸಂಸ್ಥೆಯು ಕೋಕೋ ಬೆಳೆಯುವ ಆಸಕ್ತರಿಗೆ ಉತ್ತಮ ಗುಣಮಟ್ಟದ ಸಸಿಗಳನ್ನು ಕೊಡುವುದಲ್ಲದೆ, ಅದರ ಸಂಪೂರ್ಣ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ಕೊಟ್ಟು, ಬೆಳೆದ ಬೆಳೆಯನ್ನು ಉತ್ತಮ ಬೆಲೆಯಲ್ಲಿ ಕೊಂಡುಕೊಳ್ಳುತ್ತದೆ ಎಂದು ತಿಳಿಸಿದರು.
ನಂತರ ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು ಅಧ್ಯಾಯದ ಸದಸ್ಯರಾದ ಶಿವಮೂರ್ತಿ ಅವರು ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ತಿಳಿಸಿದರು.
ಪ್ರಗತಿಪರ ರೈತರಾದ ಆಯರಹಳ್ಳಿಯ ಬಸವಣ್ಣರವರು ಮಾತನಾಡಿ, ತಮ್ಮ ತೆಂಗಿನ ತೋಟದಲ್ಲಿ ಅವರು ಅಳವಡಿಸಿ ಕೊಂಡಿರುವ ನೀರಿನ ತಂತ್ರಜ್ಞಾನ ಹಾಗೂ ಇತರ ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡುತ್ತಾ ಪ್ರತಿಯೊಬ್ಬ ರೈತರು ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ರೈತರಿಗೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ (ಪ್ರಭಾರ) ಎಚ್.ವಿ. ದಿವ್ಯ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದ ಕಾರ್ಯವೈಖರಿಯ ಬಗ್ಗೆ ತಿಳಿಸಿದರು, ತೆಂಗಿನ ಬೆಳೆಯು ನಮ್ಮ ಜಿಲ್ಲೆಯಲ್ಲಿ ಮುಖ್ಯ ವಾಣಿಜ್ಯ ತೋಟಗಾರಿಕೆ ಬೆಳೆ ಅದರ ವೈಜ್ಞಾನಿಕ ನಿರ್ವಹಣೆ ತುಂಬಾ ಮುಖ್ಯ, ಅತಿ ಹೆಚ್ಚು ರಾಸಾಯನಿಕಗಳನ್ನು ಬಳಸುವ ಬದಲು ಕಡಿಮೆ ಬಳಸಿ ಹೆಚ್ಚು ಆದಾಯ ಪಡೆಯುವ ನಿಟ್ಟಿನಲ್ಲಿ ರೈತರು ಗಮನ ಹರಿಸಲು ತಿಳಿಸಿದರು.
ಸುತ್ತೂರಿನ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿಗಳಾದ ಡಾ.ಜಿ.ಎಂ. ವಿನಯ್ ಅವರು ತೆಂಗಿನ ತಳಿಗಳ, ಸಸ್ಯೋತ್ಪಾದನೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ನೀರಿನ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ.ವೈ.ಪಿ. ಪ್ರಸಾದ್, ಕ್ಯಾಡ್ಬರಿ ಸಂಸ್ಥೆಯ ತಾಂತ್ರಿಕ ಕಾರ್ಯನಿರ್ವಾಹಕ ನಿರಂಜನ್ ಮಾಹಿತಿ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಶಾಮರಾಜ್, ಗಂಗಪ್ಪ ಹಿಪ್ಪರಗಿ, ಜೆ.ಜಿ. ರಾಜಣ್ಣ , ಇತರೆ ಸಿಬ್ಬಂದಿ ವರ್ಗದವರು, ಕೃಷಿ ತಂತ್ರಜ್ಞರ ಸಂಸ್ಥೆಯ ಸದಸ್ಯರು, ಕ್ಯಾಡ್ಬರಿ ಸಂಸ್ಥೆಯ ಸಿಬ್ಬಂದಿ, ರೈತ ಸಂಘದ ಕಾರ್ಯಕರ್ತರು ಹಾಗೂ ಔಟ್‌ರೀಚ್ ಸಂಸ್ಥೆಯ ಸದಸ್ಯರು ಹಾಗೂ ಸುಮಾರು 150 ಕ್ಕೂ ಹೆಚ್ಚು ರೈತ ಹಾಗೂ ರೈತ ಮಹಿಳೆಯರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.
