ಮೀಸಲಾತಿ ಸಮರ್ಪಕವಾಗಿ ಜಾರಿಯಾಗಲಿ : ರಾಜ್ಯ ಎಸ್ಸಿ ಮತ್ತು ಎಸ್ಟಿ ಗುತ್ತಿಗೆದಾರರ ಅಧ್ಯಕ್ಷ
ರಾಜ್ಯದಲ್ಲಿನ ಶೋಷಿತ ಸಮುದಾಯದ ಎಸ್ಸಿ ಮತ್ತು ಎಸ್ಟಿ ಗುತ್ತಿಗೆದಾರರಿಗೆ ಮೀಸಲಾತಿ ನೀಡಿರುವ ಸರ್ಕಾರ, 2 ಕೋಟಿ ರು.ಗಳ ವಿಶೇಷ ಕಾಮಗಾರಿ ಮತ್ತು ಶೇ. 30 ರಷ್ಟು ಮುಂಗಡ ಹಣವನ್ನು ನೀಡಬೇಕಾಗಿ ರಾಜ್ಯ ಎಸ್ಸಿ ಮತ್ತು ಎಸ್ಟಿ ಗುತ್ತಿಗೆದಾರರ ಅಧ್ಯಕ್ಷ ಮಹದೇವಸ್ವಾಮಿ ಒತ್ತಾಯಿಸಿದರು.
ಕೊರಟಗೆರೆ : ರಾಜ್ಯದಲ್ಲಿನ ಶೋಷಿತ ಸಮುದಾಯದ ಎಸ್ಸಿ ಮತ್ತು ಎಸ್ಟಿ ಗುತ್ತಿಗೆದಾರರಿಗೆ ಮೀಸಲಾತಿ ನೀಡಿರುವ ಸರ್ಕಾರ, 2 ಕೋಟಿ ರು.ಗಳ ವಿಶೇಷ ಕಾಮಗಾರಿ ಮತ್ತು ಶೇ. 30 ರಷ್ಟು ಮುಂಗಡ ಹಣವನ್ನು ನೀಡಬೇಕಾಗಿ ರಾಜ್ಯ ಎಸ್ಸಿ ಮತ್ತು ಎಸ್ಟಿ ಗುತ್ತಿಗೆದಾರರ ಅಧ್ಯಕ್ಷ ಮಹದೇವಸ್ವಾಮಿ ಒತ್ತಾಯಿಸಿದರು.
ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಠ ಜಾತಿ ಮತ್ತು ಪಂಗಡದ ಗುತ್ತಿಗೆದಾರರು ಆರ್ಥಿಕವಾಗಿ ಸಬಲರಾಗಲು ಸರ್ಕಾರವು ಕಾಮಗಾರಿಗಳಲ್ಲಿ ಅವರಿಗೆ ಮೀಸಲಾತಿ ನೀಡಿದ್ದು, ಆದರೆ ಇದು ಸರಿಯಾಗಿ ಜಾರಿಗೆ ಬಾರದೆ ಇರಲು ಕೆಲವು ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳು ಕಾರಣರಾಗಿದ್ದಾರೆ ಎಂದರು.
ಇತ್ತೀಚೆಗೆ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಬಂಧ ಪಟ್ಟ ಸಚಿವರೊಂದಿಗೆ ಸಭೆ ನಡೆಸಿ ಗುತ್ತಿಗೆದಾರರಿಗೆ 2 ಕೋಟಿ ರು.ಗಳ ಕಾಮಗಾರಿ ಮತ್ತು ಶೇ. 30 ರಷ್ಟು ಮುಂಗಡ ಹಣ ನೀಡಲು ಒಪ್ಪಿರುತ್ತಾರೆ, ಇದಕ್ಕಾಗಿ ಅಕ್ಟೊಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಗುತ್ತಿಗೆದಾರರ ರಾಜ್ಯ ಮಟ್ಟದ ಸಮಾವೇಶ ನಡೆಸಿ ಮುಖ್ಯಮಂತ್ರಿಗಳು ಮತ್ತು ಸಂಬಂದಿಸಿದ ಸಚಿವರುಗಳನ್ನು ಕರೆಸಿ ನಮ್ಮ ಬೇಡಿಕೆಗಳನ್ನು ಅವರ ಮುಂದೆ ಮಂಡಿಸಲಾಗುವುದು. ಈ ಸಮಾವೇಶಕ್ಕೆ ರಾಜ್ಯದ ಎಲ್ಲಾ ಎಸ್ಸಿ-ಎಸ್ಟಿ ಗುತ್ತಿಗೆದಾರರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ಎಸ್ಟಿ ಎಸ್ಟಿ ಗುತ್ತಿಗೆದಾರರ ಸಂಘದ ಸಹ ಕಾರ್ಯದರ್ಶಿ ಚಂದ್ರಪ್ಪ ಮಾತನಾಡಿ, ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಸ್ಥಳೀಯ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ. ಅಧಿಕಾರಿಗಳು ಬೇನಾಮಿ ಗುತ್ತಿಗೆದಾರರನ್ನು ಸೃಷ್ಟಿಸಿ ತಮ್ಮ ಕಚೇರಿಯಲ್ಲಿಯೇ ಇಟ್ಟುಕೊಂಡು ಅವರ ಕೈಯಿಂದ ಕಾಮಗಾರಿಗಳನ್ನು ಮಾಡಿಸಿ ಅದಕ್ಕೆ ಬಂಡವಾಳ ಅವರೇ ಹಾಕಿ ಅಧಿಕಾರಿಗಳು ಹಿಂಬಂದಿ ಕಾಮಗಾರಿ ಮಾಡಿಸಿ ಲಾಭ ಪಡೆದು ಕರ್ತವ್ಯ ಲೋಪಮಾಡುತ್ತಿದ್ದಾರೆ, ಇದನ್ನು ಪ್ರಶ್ನಿಸಲು ಗುತ್ತಿಗೆದಾರರು ಹೋದರೆ ಅಧಿಕಾರಿಗಳು ಕಾಮಗಾರಿಗಳ ಬಿಲ್ ತಡೆಯುವ ಬೆದರಿಕೆ ಹಾಕುತ್ತಾರೆ, ಈ ಘಟನೆಗಳು ಆರ್.ಡಿ.ಪಿ.ಆರ್ ಇಲಾಖೆಯಲ್ಲಿ ಹೆಚ್ಚು ನಡೆಯುತ್ತಿದ್ದು ಕೊರಟಗೆರೆ ತಾಲೂಕು ಸೇರಿದಂತೆ ಹಲವು ತಾಲೂಕುಗಳಲ್ಲಿ ಈ ದೌರ್ಜನ್ಯ ನಡೆಯುತ್ತಿದೆ, ತುಮಕೂರು ಜಿಲ್ಲೆಯಲ್ಲಿ ಪ್ರಭಾವಿ ಇಬ್ಬರು ಎಸ್ಸಿ ಮತ್ತು ಎಸ್ಟಿ ಸಚಿವರುಗಳಿದ್ದು ಅವರು ಗುತ್ತಿಗೆದಾರರಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.
ಪತ್ರಿಕಾ ಗೊಷ್ಟಿಯಲ್ಲಿ 5 ತಾಲೂಕುಗಳ ಎಸ್ಸಿ ಎಸ್ಟಿ ಗುತ್ತಿಗೆದಾರರು ಹಾಜರಿದ್ದು ಈ ಸಂದರ್ಭಧಲ್ಲಿ ರಾಜ್ಯ ಸಂಘದ ಖಜಾಂಚಿ ಹೆಮಂತಕುಮಾರ್, ದಿನೇಶ್, ನಿರ್ದೇಶ ಕರುಗಳಾದ ದೀಪಕ್ ಅಪ್ಪಾಜಿ, ನಟರಾಜು, ತಾಲೂಕು ಘಟಕದ ಲಕ್ಷ್ಮಿನರಸಯ್ಯ, ಕೆ.ಎನ್.ಲಕ್ಷ್ಮಿನಾರಾಯಣ್, ಗೋವಿಂದರಾಜು, ಶ್ರೀನಿವಾಸ, ಕುಮಾರ್, ಮಂಜುನಾಥ್, ದೇವರಾಜು ಸೇರಿಂದಂತೆ ಇನ್ನಿತರರು ಹಾಜರಿದ್ದರು.