ಕಸಾಪ ಸರ್ವಜನಾಂಗದ ಸಂಸ್ಥೆ ಆಗಲಿ: ಪರ್ಯಾಯ ಸಮ್ಮೇಳನದ ನಿರ್ಣಯ -ಬೆಂಗಳೂರಲ್ಲಿ ‘ಜನ ಸಾಹಿತ್ಯ ಸಮ್ಮೇಳನ’ದಲ್ಲಿ 8 ನಿರ್ಣಯ ಅಂಗೀಕಾರ ಹಾವೇರಿ ಸಮ್ಮೇಳನಕ್ಕೆ ಪರಾರ‍ಯಯವಾಗಿ ನಡೆದ ಸಮ್ಮೇಳನ ಮೂಡ್ನಾಕೂಡು ಚಿನ್ನಸ್ವಾಮಿ, ಬಾನುಮುಷ್ತಾಕ್‌, ಪ್ರಕಾಶ್‌ ರಾಜ್‌, ಅಗ್ನಿ ಶ್ರೀಧರ್‌, ಪುರುಷೋತ್ತಮ ಬಿಳಿಮಲೆ ಭಾಗಿ 

ಬೆಂಗಳೂರು (ಜ.9) :ಸಾಹಿತ್ಯ ಸಮ್ಮೇಳನಗಳನ್ನು ಒಳಗೊಂಡಂತೆ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಎಲ್ಲ ಕಾರ್ಯಕ್ರಮಗಳಲ್ಲಿ ಎಲ್ಲ ಸಮುದಾಯಗಳನ್ನು ಒಳಗೊಳ್ಳಬೇಕು. ಮಹಿಳೆಯರು, ದಲಿತರು, ಆದಿವಾಸಿಗಳು, ದಮನಿತರು ಅದರಲ್ಲೂ ಅಲ್ಪಸಂಖ್ಯಾತ ಸಮುದಾಯದ ಸಾಹಿತಿ, ಕಲಾವಿದರನ್ನು ಒಳಗೊಳ್ಳಬೇಕು ಎಂಬುದು ಸೇರಿದಂತೆ ಎಂಟು ನಿರ್ಣಯಗಳನ್ನು ನಗರದಲ್ಲಿ ಭಾನುವಾರ ನಡೆದ ‘ಜನ ಸಾಹಿತ್ಯ ಸಮ್ಮೇಳನ’ ಕೈಗೊಂಡಿದೆ.

ಹಾವೇರಿ(haveri)ಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ(kannada sahitya sammelana)ದಲ್ಲಿ ಮುಸ್ಲಿಮರು ಸೇರಿದಂತೆ ಪ್ರಗತಿಪರರು, ಸಶಕ್ತ ಬರಹಗಾರರನ್ನು ಹೊರಗಿಟ್ಟಿರುವುದಕ್ಕೆ ಪ್ರತಿರೋಧವಾಗಿ ನಗರದ ಕೆ.ಆರ್‌.ವೃತ್ತ(KR circle)ದ ಅಲುಮ್ನಿ ಅಸೋಷಿಯೇಷನ್‌(Alumni Association) ಆವರಣದ ‘ಸಂತ ಶಿಶುನಾಳ ಶರೀಫ ಹಾಗೂ ಗುರುಗೋವಿಂದ ಭಟ್ಟ’ ಸಭಾಂಗಣದಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

Kannada Sahitya Sammelana: ಹಾವೇರಿ ಪುಣ್ಯಭೂಮಿ, ತಫೋಭೂಮಿ: ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ

ಹುಚ್ಚು ಕುದುರೆ ಕಟ್ಟಬೇಕು:

ಸಮ್ಮೇಳನ ಉದ್ಘಾಟಿಸಿದ ಸಾಹಿತಿ ಮುಡ್ನಾಕೂಡು ಚಿನ್ನಸ್ವಾಮಿ(Mudnakodu chinnaswamy), ಪ್ರಸ್ತುತ ಸುಳ್ಳು ಮತ್ತು ದ್ವೇಷಗಳಿಂದ ಹಿಂಸೆಯನ್ನು ಪ್ರಚೋದಿಸುತ್ತಾ ಸಾಂಸ್ಕೃತಿಕ ರಾಷ್ಟ್ರೀಯತೆ ಎಂಬ ಹೊಸ ಸಂಕಥನವನ್ನು ಕಟ್ಟಲು ಹೊರಟಿರುವ ಹುಚ್ಚು ಯಜ್ಞ ಕುದುರೆಯನ್ನು ಪ್ರಜ್ಞಾವಂತ ಪ್ರಜೆಗಳು ಹಿಡಿದು ಕಟ್ಟಬೇಕಾಗಿದೆ ಎಂದರು.

ಒಂದು ಭಾಷೆ, ಒಂದು ಧರ್ಮ, ಒಂದು ರಾಷ್ಟ್ರ ಪರಿಕಲ್ಪನೆಯನ್ನು ತೇಲಿ ಬಿಡಲಾಗಿದೆ. ಇದು ಭಾರತದಂತಹ ವೈವಿಧ್ಯತೆ ಇರುವ ದೇಶಕ್ಕೆ ಮಾರಕವಾದ ನಿಲುವು. ಇದನ್ನು ಹಲ್ಲು ಮತ್ತು ಉಗುರುಗಳಿಂದ ವಿರೋಧಿಸಬೇಕಾಗಿದೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಕವಾಗಿ ಮುನ್ನಡೆ ಸಾಧಿಸಿರುವ ದಕ್ಷಿಣದ ದ್ರಾವಿಡ ಜನಾಂಗ, ದ್ರಾವಿಡ ಸಂಸ್ಕೃತಿ ಮತ್ತು ದ್ರಾವಿಡ ಭಾಷೆಗಳ ಮೇಲೆ ಹಿಂದಿ ಹೇರಿಕೆ ಮಾರಣಾಂತಿಕ ಹೊಡೆತ ಎಂಬ ಸತ್ಯವನ್ನು ನಾವು ಮನಗಾಣಬೇಕಾಗಿದೆ ಎಂದು ಹೇಳಿದರು.

ಹೊರಗಟ್ಟಲಾಗಿದೆ:

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಲೇಖಕಿ ಬಾನು ಮುಷ್ತಾಕ್‌ ಮಾತನಾಡಿ, ಕನ್ನಡ ಭಾಷೆಯನ್ನು ಭುವನೇಶ್ವರಿಯಾಗಿ ಮಾಡಿ, ಆಕೆಗೆ ಅರಿಶಿನ, ಕುಂಕುಮ ಲೇಪನ ಮಾಡಿ ದೇವಸ್ಥಾನದಲ್ಲಿ ಕೂರಿಸಲಾಗಿದೆ. ಕನ್ನಡ ಭಾಷೆಯ ಹೆಸರಿನಲ್ಲಿ ದೌರ್ಜನ್ಯ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾನು, (ಮುಸ್ಲಿಮರು) ನಮ್ಮ ಕುಟುಂಬದವರು ಎಲ್ಲಿ ನಿಲ್ಲಬೇಕು. ಹೇಗೆ ಪಾಲ್ಗೊಳ್ಳಬೇಕು ಎಂದು ಪ್ರಶ್ನಿಸಿದರು.

ನಿರಂತರವಾದ ಸುಳ್ಳು, ದ್ವೇಷಗಳ ವಿಷಪ್ರಾಶನವಾಗುತ್ತಿದೆ. ವಿಲೀನದ ಹೆಸರಿನಲ್ಲಿ ನಮ್ಮ ಅನ್ನ, ಸಾಹಿತ್ಯ, ಸಂಸ್ಕೃತಿ, ಕಲೆಗಳ ಬಿಕರಿಯಾಗುತ್ತಿದೆ. ಟಿಪ್ಪು ಸುಲ್ತಾನ್‌ ಮುಸ್ಲಿಂ, ಡಾ. ಬಿ.ಆರ್‌. ಅಂಬೇಡ್ಕರ್‌ ದಲಿತ ಎಂದು ಸೀಮಿತಗೊಳಿಸುವ ದೃಷ್ಟಿಯನ್ನು ಸರಿಪಡಿಸಬೇಕಾಗಿದೆ. ಭಾಷೆ, ಸಾಹಿತ್ಯಕ್ಕೆ ಆದ್ಯತೆ ಕೊಡುವ ಜೊತೆಗೆ ಇಂದಿನ ಯುವ ಜನರ ಬೇಕು, ಬೇಡ, ಅವರ ಅಭಿವೃದ್ಧಿ, ಆರ್ಥಿಕತೆಗೂ ಒತ್ತು ನೀಡಬೇಕಾಗಿದೆ ಎಂದರು. ಬಹುಭಾಷಾ ಕಲಾವಿದ ಪ್ರಕಾಶ್‌ರಾಜ್‌, ಸಾಹಿತಿ ಪುರುಷೋತ್ತಮ ಬಿಳಿಮಲೆ, ಅಗ್ನಿ ಶ್ರೀಧರ್‌ ಮಾತನಾಡಿದರು.

ಹಲವು ಗೋಷ್ಠಿ:

ಲೇಖಕ ಡಾ. ಮಹಮದ್‌ ಮುಸ್ತಫಾ ಅವರು ‘ಸಾಹಿತ್ಯ, ಪ್ರಭುತ್ವ ಮತ್ತು ಬಹುತ್ವ’ ಕುರಿತು ಮಾತನಾಡಿದರೆ, ಟಿ ಗುರುರಾಜ ಅವರು ಕನ್ನಡ ನಾಡು ನುಡಿಗೆ ಟಿಪ್ಪು ಕೊಡುಗೆಗಳು ಕುರಿತು ಹಲವು ಉದಾಹರಣೆಗಳೊಂದಿಗೆ ತಿಳಿಸಿದರು. ಲೇಖಕ ರಂಗನಾಥ್‌ ಕಂಟನಕುಂಟೆ ಅವರು ‘ಆಹಾರದ ಮೇಲಿನ ರಾಜಕಾರಣ ಮತ್ತು ದೌರ್ಜನ್ಯ’ ಕುರಿತು ಮಾತನಾಡಿ, ಸಸ್ಯಹಾರ ಹಾಗೂ ಮಾಂಸಹಾರದ ಹೆಸರಿನಲ್ಲಿ ಧರ್ಮಗಳ ನಡುವೆ, ಜಾತಿಗಳ ನಡುವೆ ಎತ್ತಿ ಕಟ್ಟಲಾಗುತ್ತಿದೆ. ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದರು. ಪಲ್ಲವಿ ಇಡೂರು ಇದಕ್ಕೆ ಪ್ರತಿಕ್ರಿಯಿಸಿದರು. ಲೇಖಕ ಡಾ. ಬಂಜಗೆರೆ ಜಯಪ್ರಕಾಶ್‌ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆದ ಕವಿಗೋಷ್ಠಿಯಲ್ಲಿ ಕೋಮುವಾದ, ದ್ವೇಷದ ರಾಜಕಾರಣ, ಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕವನ ವಾಚನ ನಡೆಯಿತು.

‘ಸೌಹಾರ್ದತೆ ಮತ್ತು ಕನ್ನಡತನ’ ಕುರಿತ ಗೋಷ್ಠಿಯಲ್ಲಿ ‘ಕರ್ನಾಟಕದ ಸೌಹಾರ್ದ ಪರಂಪರೆ’ ಬಗ್ಗೆ ಡಾ.ರಾಜೇಂದ್ರ ಚೆನ್ನಿ, ‘ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ದಾಳಿ-ಸಾಹಿತ್ಯ ಲೋಕದ ಜವಾಬ್ದಾರಿಗಳು’ ಕುರಿತು ಮಾವಳ್ಳಿ ಶಂಕರ್‌ ಮತ್ತು ಮುನೀರ್‌ ಕಾಟಿಪಳ್ಳ ಮಾತನಾಡಿದರು. ಕನ್ನಡವನ್ನು ಬೆಳಗಿಸಿದ ಕ್ರೈಸ್ತ ಮಿಷನರಿಗಳು ಕುರಿತು ಡಾ. ಕುಮಾರಸ್ವಾಮಿ ಮಾತನಾಡಿದರು.

ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಒಬ್ಬ ಅಯೋಗ್ಯ: ಎಚ್. ವಿಶ್ವನಾಥ್ ಟೀಕೆ

ಸಮಾರೋಪ: ಸಂಜೆ ನಡೆದ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿ. ರಾಮಕೃಷ್ಣ ವಹಿಸಿದ್ದರು. ಕೆ. ಮರುಳಸಿದ್ದಪ್ಪ ಸಮಾರೋಪ ಭಾಷಣ ಮಾಡಿದರು.

‘ಜನಸಾಹಿತ್ಯ’ ನಿರ್ಣಯಗಳು

  •  ಸರ್ಕಾರವು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಸಂಸ್ಥೆಗಳಿಗೆ ಸಂಬಂಧಿಸಿದ ಸ್ವಾಯತ್ತೆ ಕಾಪಾಡಬೇಕು.
  • *ಈ ಸಂಸ್ಥೆಗಳಿಗೆ ನೇಮಕ ಮಾಡುವಾಗ ಅರ್ಹರನ್ನು ನೇಮಿಸಬೇಕು.
  •  ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರು, ರಂಗಾಯಣ ನಿರ್ದೇಶಕರ ನೇಮಕಾತಿಯಲ್ಲಿ ಸರ್ಕಾರದ ನಿಲುವು ಖಂಡನೀಯ
  •  ರಾಜ್ಯವು ಸರ್ವಜನಾಂಗದ ಶಾಂತಿ ತೋಟವಾಗಿಯೇ ಇರಬೇಕು
  •  ರಾಜ್ಯದಲ್ಲಿರುವ ಎಲ್ಲ ಭಾಷೆಗಳನ್ನು ರಕ್ಷಿಸಲು ಸರ್ಕಾರ ಸಮಗ್ರ ಭಾಷಾ ನೀತಿ ರೂಪಿಸಬೇಕು.
  •  ಕನ್ನಡ ನೆಲದ ಮೇಲೆ ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ
  •  ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು
  •  ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಸಂಬಂಧಿಸಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು.
  •  ಗಡಿನಾಡ ಕನ್ನಡಿಗರ ರಕ್ಷಣೆ ಮಾಡಬೇಕು.
  •  ಬ್ಯಾಂಕ್‌ಗಳು, ಕೆಎಂಎಫ್‌ ಸೇರಿ ಕರ್ನಾಟಕದ ಸಂಸ್ಥೆಗಳನ್ನು ಉತ್ತರ ಭಾರತದ ಸಂಸ್ಥೆಗಳೊಂದಿಗೆ ವಿಲೀನ ಮಡುವ ಪ್ರಕ್ರಿಯೆಗೆ ವಿರೋಧ

ಸಮ್ಮೇಳನದಲ್ಲಿ ಮಾತನಾಡಿದ ಎಲ್ಲರೂ ದೇಶದಲ್ಲಿ ಹೆಚ್ಚುತ್ತಿರುವ ಮೂಲಭೂತವಾದ, ದೇಶದ ಬಹುತ್ವಕ್ಕೆ ಆಗುತ್ತಿರುವ ಧಕ್ಕೆ, ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಬೆದರಿಕೆ, ಸುಳ್ಳು ಮತ್ತು ದ್ವೇಷಗಳ ಮೂಲಕ ಹಿಂಸೆ ಪ್ರಚೋದಿಸುವ ಘಟನೆಗಳು ಹೆಚ್ಚಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ನಾಡು ಸರ್ವ ಜನಾಂಗದ ತೋಟವಾಗಲು, ಕನ್ನಡದ ಅಸ್ಮಿತೆ ಉಳಿಯಲು ಇಂತಹ ಸಮ್ಮೇಳನ, ಜಾಗೃತಿ ಮೂಡಿಸುವ ಕೆಲಸ ಎಲ್ಲ ಕಡೆ ನಡೆಯಬೇಕು ಎಂದು ಹೇಳಿದರು.