ಬೆಂಗಳೂರು (ಫೆ.02):  ಕಳೆದ ಒಂಬತ್ತು ದಿನಗಳಿಂದ ನಗರದ ಬೇಗೂರು ರಸ್ತೆ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ನ ಸಿಸಿಟಿವಿಯಲ್ಲಿ ಕಾಣಿಸಿಕೊಂಡು ಈ ಭಾಗದ ಜನರಲ್ಲಿ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಸೋಮವಾರ ಬೆಳಗ್ಗೆ ಸೆರೆ ಸಿಕ್ಕಿದ್ದು, ಜನತೆ ನಿರಾಳರಾಗಿದ್ದಾರೆ.

ಜನವರಿ 23ರ ಶನಿವಾರ ರಾತ್ರಿ 8.45ಕ್ಕೆ ಸಿಸಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಪ್ರೆಸ್ಟೀಜ್‌ ಆಪಾರ್ಟ್‌ಮೆಂಟ್‌ ಹಿಂಬದಿಯಲ್ಲಿರುವ ಬಂಡೆಗಳ ಕ್ವಾರಿಯಲ್ಲಿ ಕಣ್ಮರೆಯಾಗಿತ್ತು. ಈ ನಡುವೆ ಅರಣ್ಯ ಇಲಾಖೆ ಸಿಬ್ಬಂದಿ ತೀವ್ರಶೋಧ ನಡೆಸಿದ್ದರು. ಇದೀಗ ಪ್ರೆಸ್ಟೀಜ್‌ ಆಪಾರ್ಟ್‌ಮೆಂಟ್‌ ಹಿಂಭಾಗದಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಬಿದ್ದಿದೆ. ಸೆರೆಸಿಕ್ಕ ಚಿರತೆಯನ್ನು ಬನ್ನೇರುಘಟ್ಟದ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ.

ಅಪಾರ್ಟ್‌ಮೆಂಟಲ್ಲಿ ಕಾಣಿಸಿಕೊಂಡ ಚಿರತೆ: ಇನ್ನೂ ಮುಗಿಯದ ಶೋಧ ಕಾರ್ಯ

ಸುಮಾರು 15 ವರ್ಷದ ಚಿರತೆ ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನವನದಿಂದ ಆಹಾರ ಹುಡುಕುತ್ತಾ ಈ ಭಾಗಕ್ಕೆ ಬಂದಿದೆ. ಬಳಿಕ ವಾಪಸ್‌ ಹೋಗಿಲ್ಲ ಎಂದು ಕೆ.ಆರ್‌.ಪುರ ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಜನವರಿ 24ರಂದು ಪ್ರಸ್ಟೀಜ್‌ ಅಪಾರ್ಟ್‌ಮೆಂಟ್‌ ಹಿಂಬದಿಯ ಕ್ವಾರಿಯಲ್ಲಿ ಬೋನ್‌ ಇಡಲಾಗಿತ್ತು. ಜೊತೆಗೆ, ಸುಮಾರು 8ಕ್ಕೂ ಹೆಚ್ಚು ಟ್ರಾಪಿಂಗ್‌ ಕ್ಯಾಮೆರಾಗಳು, ಒಂದು ಡ್ರೋಣ್‌ ಕ್ಯಾಮೆರಾದಿಂದ ತೀವ್ರ ಹುಡುಕಾಟ ನಡೆಸಲಾಗಿತ್ತು. ಸುಮಾರು 15ಕ್ಕೂ ಹೆಚ್ಚು ಸಿಬ್ಬಂದಿ ರಾತ್ರಿ ಹಗಲು ನಡೆದ ಶೋಧಕಾರ್ಯದಲ್ಲಿ ತೊಡಗಿದ್ದರು. ಆದರೆ, ಯಾರ ಕಣ್ಣಿಗೂ ಕಾಣದ ಚಿರತೆ ಸೋಮವಾರ ಬೆಳಗ್ಗೆ ಬೋನಿನಲ್ಲಿ ಬಿಟ್ಟಿದ್ದ ಕುರಿ ತಿನ್ನಲು ಬಂದು ಸೆರೆ ಸಿಕ್ಕಿದೆ ಎಂದು ಕೆ.ಆರ್‌.ಪುರ ವಲಯ ಅರಣ್ಯಾಧಿಕಾರಿ ಶಿವರಾತ್ರೇಶ್ವರ ಅವರು  ಮಾಹಿತಿ ನೀಡಿದ್ದಾರೆ.