Belagavi: ಬ್ಯಾಂಡ್ ಬಾರಿಸಿದ್ರು, ಸಿಡಿಮದ್ದು ಹಾರಿಸಿದ್ರು, ಏರ್‌ಗನ್ ಫೈರ್ ಮಾಡಿದ್ರು ಚಿರತೆ ಸುಳಿವಿಲ್ಲ!
• ಬೆಳಗಾವಿಯಲ್ಲಿ ಚಿರತೆ ಸೆರೆಗೆ ಬೃಹತ್ ಶೋಧ ಕಾರ್ಯಾಚರಣೆ
• ಅರಣ್ಯ, ಪೊಲೀಸ್ ಇಲಾಖೆಯ ತಲಾ ನೂರು ಸಿಬ್ಬಂದಿ ಕೋಂಬಿಂಗ್
• ಜನರಲ್ಲಿ ಭಯ ಹೋಗಲಾಡಿಸಲು ಕಾರ್ಯಾಚರಣೆ ಅಂದ್ರು ಅಧಿಕಾರಿಗಳು
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಆ.19): ಕಳೆದ 15 ದಿನಗಳ ಹಿಂದೆ ಬೆಳಗಾವಿ ಜಾಧವ ನಗರದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಎರಡೂ ದಿನಗಳ ಬಳಿಕ ವಿಶಾಲವಾದ ಗಾಲ್ಫ್ ಮೈದಾನದ ಪ್ರದೇಶದಲ್ಲಿ ಮರೆಯಾಗಿತ್ತು. ಅರಣ್ಯ ಇಲಾಖೆ ಇರಿಸಿದ ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆಯಾಗಿದ್ದ ಚಿರತೆ ಶೋಧಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿ ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದ್ರೆ ಇತ್ತೀಚೆಗೆ ಆಗೊಮ್ಮೆ, ಈಗೊಮ್ಮೆ ಚಿರತೆ ಪ್ರತ್ಯಕ್ಷ ಆಗಿತ್ತು ಅಂತಾ ಕೆಲವರು ಹೇಳುತ್ತಿರೋದು ಒಂದೆಡೆಯಾದ್ರೆ, ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ಕಡೆಯ ಚಿರತೆ ಫೋಟೋ ಹರಿದಾಡೋದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.
ಬೆಳಗಾವಿಯ ಜಾಧವ ನಗರದಲ್ಲಿ ಆಗಸ್ಟ್ 5ರಂದು ಕಟ್ಟಡ ಕಾರ್ಮಿಕನ ಮೇಲೆ ದಾಳಿ ಮಾಡಿದ್ದ ಚಿರತೆ ಎರಡು ದಿನಗಳ ಬಳಿಕ ಗಾಲ್ಫ್ ಮೈದಾನದಲ್ಲಿ ಪ್ರತ್ಯಕ್ಷ ಆಗಿತ್ತು. ಆಗಸ್ಟ್ 7 ಮತ್ತು 8ರಂದು ಅರಣ್ಯ ಇಲಾಖೆ ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆಯಾಗಿದ್ದ ಚಿರತೆಯ ಚಲನವಲನ ಮತ್ತೆಲ್ಲೂ ಪತ್ತೆಯಾಗಿಲ್ಲ. ಆದ್ರೆ ಇತ್ತೀಚೆಗೆ ಹಿಂಡಲಗಾ ರಸ್ತೆಯ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಚಿರತೆ ಕಾಣಿಸಿಕೊಂಡ ಬಗ್ಗೆ ಊಹಾಪೋಹ ಸೃಷ್ಟಿಯಾಗಿತ್ತು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಡೆ ಕಾಣಿಸಿಕೊಂಡ ಚಿರತೆಯ ಫೋಟೋ ವಿಡಿಯೋ ಹರಿದಾಡುತ್ತಿದ್ದವು.
ಚಿರತೆ ಭೀತಿಯಿಂದ 12 ಶಾಲೆಗಳಿಗೆ ರಜೆ: ಗ್ರಾಮಸ್ಥರಲ್ಲಿ ಭಯ
ಇನ್ನು ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳ ಫೇಕ್ ವಿಡಿಯೋ, ಫೋಟೋ ಪೋಸ್ಟ್ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನಗರದ ಜನರ ಭಯ ಹೋಗಲಾಡಿಸಲು ಇಂದು ನಗರ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ಕೋಂಬಿಂಗ್ ಕಾರ್ಯಾಚರಣೆ ನಡೆಸಿದರು. ಬೆಳಗಾವಿ ಕ್ಲಬ್‌ನಲ್ಲಿ ನಗರ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಇಂದು ಮಧ್ಯಾಹ್ನ ಸೇರಿದ್ರು. ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯ ತಲಾ ನೂರು ಸಿಬ್ಬಂದಿ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ನಾರಾಯಣ ಭರಮಣಿ, ಎಸಿಎಫ್ ಮಲ್ಲಿನಾಥ ಕುಸನಾಳ ನೇತೃತ್ವದಲ್ಲಿ ಕೋಂಬಿಂಗ್ ಕಾರ್ಯಾಚರಣೆ ನಡೆಸಿದರು.
ಕೈಯಲ್ಲಿ ಕಟ್ಟಿಗೆ, ಕೋಯ್ತಾ, ಏರ್ ಗನ್, ಅರಿವಳಿಕೆ ಗನ್, ಸಿಡಿಮದ್ದುಗಳ ಸಮೇತ ಅಖಾಡಕ್ಕಿಳಿದಿದ್ರು. ಪೊಲೀಸ್ ಬ್ಯಾಂಡ್ ಬಾರಿಸುತ್ತಾ, ಏರ್ ಗನ್ ಫೈರ್ ಮಾಡುತ್ತಾ, ಸಿಡಿಮದ್ದು ಸಿಡಿಸುತ್ತಾ ಗಾಲ್ಫ್ ಮೈದಾನದ 200 ಎಕರೆ ರಕ್ಷಣಾ ಇಲಾಖೆಯ ಜಾಗದಲ್ಲಿ ಸುತ್ತಾಡಿದರೂ ಚಿರತೆ ಮಾತ್ರ ಸಿಗಲಿಲ್ಲ. ಗಾಲ್ಫ್ ಮೈದಾನದ ಬಳಿಯ ರಕ್ಷಣಾ ಇಲಾಖೆಗೆ ಸೇರಿದ ಜಾಗದಲ್ಲಿ ಕೆಲವೆಡೆ ಚಿರತೆ ಮಾದರಿಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇದು ಚಿರತೆಯದ್ದೇ ಎಂಬ ಬಗ್ಗೆ ಖಚಿತತೆ ಇಲ್ಲ. ಬೆಳಗಾವಿ ನಗರ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗೆ ಗಾಲ್ಫ್ ಮೈದಾನದ ಕೆಲವೆಡೆ ಚಿರತೆ ಮಾದರಿಯ ಹೆಜ್ಜೆಯ ಗುರುತುಗಳು ಪತ್ತೆಯಾದವು ಹೊರತು ಚಿರತೆ ಮಾತ್ರ ಕಣ್ಣಿಗೆ ಬಿದ್ದಿಲ್ಲ.
ಇನ್ನು ಚಿರತೆ ಸೆರೆಗೆ ಅರಣ್ಯ ಇಲಾಖೆಯ ನುರಿತ ಸಿಬ್ಬಂದಿ, ಇಬ್ಬರು ಅರವಳಿಕೆ ತಜ್ಞರು ಭಾಗಿಯಾಗಿದ್ದರು. ಕೈಯಲ್ಲಿ ಕೊಯಿತಾ, ಬಡಿಗೆ, ಹೆಲ್ಮೆಟ್ ಸೇರಿ ರಕ್ಷಣಾ ವಸ್ತುಗಳ ಸಮೇತ ಕಾರ್ಯಾಚರಣೆ ನಡೆಸಿದರೂ ಚಿರತೆ ಮಾತ್ರ ಕಣ್ಣಿಗೆ ಬಿಳಲಿಲ್ಲ. ಆಗಸ್ಟ್ 5 ರ ಮಧ್ಯಾಹ್ನ 12.35ರ ಸುಮಾರಿಗೆ ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಗಾಲ್ಫ್ ಮೈದಾನದಲ್ಲಿ ಮರೆಯಾಗಿದ್ದ ಚಿರತೆ ಅರಣ್ಯ ಇಲಾಖೆ ಗಾಲ್ಫ್ ಮೈದಾನದಲ್ಲಿ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಬಳಿಕ ಅರಣ್ಯ ಇಲಾಖೆಯ ಜತೆಗೆ ಕಣ್ಣಾ ಮುಚ್ಚಾಲೆ ಆಟ ಆಡುತ್ತಿದ್ದ ಚಿರತೆ ಕಳೆದ ಎರಡು ದಿನಗಳ ಹಿಂದೆಯಷ್ಟೆ ಸ್ಥಳೀಯರಲ್ಲಿ ಕಾಣಿಸಿಕೊಂಡು ಮತ್ತೆ ಆತಂಕ ಸೃಷ್ಟಿ ಮಾಡಿತ್ತು. ಚಿರತೆಯ ಕಾರಣಕ್ಕೆ ಜಿಲ್ಲಾಡಳಿತ ಶಾಲೆಗಳಿಗೆ ನೀಡಿದ್ದ ರಜೆಯನ್ನು ಹಿಂಪಡೆದ ಮರುದಿನವೇ ಚಿರತೆ ಪ್ರತ್ಯಕ್ಷವಾಗಿತ್ತು ಎಂದು ಹಿಂಡಲಗಾ ಗ್ರಾಮದ ನಿವಾಸಿಯೊಬ್ಬರು ಹೇಳಿದ್ದರಿಂದ ಜನತೆಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಈ ಎಲ್ಲ ಊಹಾಪೋಹಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ನಗರ ಪೊಲೀಸರು ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಕೋಂಬಿಂಗ್ ಕಾರ್ಯಾಚರಣೆ ನಡೆಸಿದರು.
ಜನರಿಗೆ ಧೈರ್ಯ ಬರಲಿ ಎಂದು ಶೋಧ ಕಾರ್ಯಾಚರಣೆ: ಚಿರತೆ ಶೋಧ ಕಾರ್ಯಾಚರಣೆ ವೇಳೆ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಡಿಸಿಪಿ ರವೀಂದ್ರ ಗಡಾದಿ, 'ಚಿರತೆ ಅಲ್ಲಿ ಕಂಡಿದೆ, ಇಲ್ಲಿ ಕಂಡಿದೆ ಅಂತಾ ಜನ ಹೇಳುತ್ತಿದ್ದರು. ಹೀಗಾಗಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಒಂದು ಗಂಟೆಯಿಂದ ಶೋಧ ಕಾರ್ಯಾಚರಣೆ ಮಾಡುತ್ತಿದ್ದೇವೆ. ಅರಣ್ಯ ಇಲಾಖೆಯ ನುರಿತ ಸಿಬ್ಬಂದಿ ಇದ್ದಾರೆ. ಅರವಳಿಕೆ ಗನ್, ಶಬ್ದ ಮಾಡಲು ಏರ್ ಗನ್, ಪೊಲೀಸ್ ಬ್ಯಾಂಡ್ ಬಾರಿಸಿ ಕಾರ್ಯಾಚರಣೆ ಮಾಡುತ್ತಿದ್ದೆವೆ. ಗಾಲ್ಫ್ ಮೈದಾನದಲ್ಲಿ ಚಿರತೆ ಇದೆಯೋ ಇಲ್ವೋ ಅದು ಸ್ಪಷ್ಟತೆ ಬರುತ್ತೆ. ಜನರಿಗೆ ಒಂದು ಧೈರ್ಯ ಬರಲಿ ಅಂತಾ ಶೋಧ ಕಾರ್ಯಾಚರಣೆ ಮಾಡುತ್ತಿದ್ದೇವೆ' ಎಂದರು.
'ಗಾಲ್ಫ್ ಮೈದಾನದಲ್ಲಿ ಚಿರತೆ ಶೋಧ ಕಾರ್ಯಾಚರಣೆ ಮುಂದುವರಿಕೆ': ಇನ್ನು ಶೋಧ ಕಾರ್ಯಾಚರಣೆ ಬಳಿಕ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಎಸಿಎಫ್ ಮಲ್ಲಿನಾಥ ಕುಸನಾಳ, 'ಆಗಸ್ಟ್ 8ರಂದು ಟ್ರ್ಯಾಪ್ ಕ್ಯಾಮರಾದಲ್ಲಿ ಚಿರತೆ ಸೆರೆಯಾದ ಆಧಾರದ ಮೇಲೆ ಕೋಂಬಿಂಗ್ ಕಾರ್ಯಾಚರಣೆ ಮಾಡಿದ್ದೇವೆ. ಜನ ಪ್ಯಾನಿಕ್ ಆಗಿ ಸೋಷಿಯಲ್ ಮಿಡಿಯಾದಲ್ಲಿ ಊಹಾಪೋಹ ಹಬ್ಬಿಸುತ್ತಿದ್ದಾರೆ. ಜನ ಚಿರತೆ ಪ್ರತ್ಯಕ್ಷ ಬಗ್ಗೆ ಹೇಳಿದಾಗಲೂ ನಾವು ಅಲ್ಲಿ ಹೋಗಿ ಪರಿಶೀಲಿಸಿದ್ದೇವೆ. ಜನರಿಗೆ ಸ್ವಲ್ಪ ಧೈರ್ಯ ತುಂಬಲು ಅರಣ್ಯ, ಪೊಲೀಸ್ ಇಲಾಖೆ ಸಿಬ್ಬಂದಿ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೆವೆ.
ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಸಿಸಿಟಿವಿಯಲ್ಲಿ ಸೆರೆ!
ಆಗಸ್ಟ್ 8ರ ಬಳಿಕ ಚಿರತೆ ಮತ್ತೆ ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ಜನರು ರಾತ್ರಿ ಒಂದು ಗಂಟೆ ಎರಡು ಗಂಟೆಗೆ ಚಿರತೆ ನೋಡಿದ್ವಿ ಅಂತಾ ಹೇಳುತ್ತಾರೆ. ಅವರು ಚಿರತೆ ನೋಡಿದ್ದರೋ ಇಲ್ವೋ ಗೊತ್ತಿಲ್ಲ. ಆದರೂ ಅವರ ವಿಚಾರಣೆ ನಡೆಸಿ, ಪರಿಶೀಲನೆ ನಡೆಸಿದ್ದೇವೆ. ಆದರೆ ಚಿರತೆಯ ಹೆಜ್ಜೆ ಗುರುತುಗಳು ಏನೂ ಪತ್ತೆಯಾಗಿಲ್ಲ. ಬೆಳಗಾವಿಯಿಂದ ಖಾನಾಪುರದ ಅರಣ್ಯಕ್ಕೆ ಹೋಗಿರಬಹುದು ಬೇರೆಡೆಯೂ ಹೋಗಿರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪೋಸ್ಟ್ ಬಂದ್ರೆ ನಾವು ಅರಣ್ಯ ಇಲಾಖೆಯಿಂದ ಅದು ಫೇಕ್ ಪೋಸ್ಟ್ ಅಂತಾ ಸಾರ್ವಜನಿಕರಿಗೆ ಮಾಹಿತಿ ನೀಡುತ್ತೇವೆ.
ನಮ್ಮ ಶೋಧ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಸುತ್ತೇವೆ. ಕಾಡಿಗೆ ಹೋದ ಚಿರತೆ ಮರಳಿ ಬರಲ್ಲ ಅಂತಾ ಏನಿಲ್ಲ. ಚಿರತೆ ಸೆರೆ ಸಿಗುವವರೆಗೂ ಶೋಧ ಕಾರ್ಯಾಚರಣೆ ಮುಂದುವರಿಸುತ್ತೇವೆ. ಬೋನು, ಟ್ರ್ಯಾಪ್ ಕ್ಯಾಮರಾ ಇರಿಸಿ ಶೋಧಕಾರ್ಯ ಮುಂದುವರಿಸುತ್ತೇವೆ' ಎಂದು ತಿಳಿಸಿದ್ದಾರೆ. ಒಟ್ಟಾರೆ ಬೆಳಗಾವಿ ನಗರದಲ್ಲಿ ಪ್ರತ್ಯಕ್ಷವಾದ ಚಿರತೆ ಸೆರೆಯಾಗದೇ ಇರೋದು ಅರಣ್ಯ ಇಲಾಖೆಗೆ ತಲೆನೋವಾಗಿದೆ. ಮತ್ತೊಂದೆಡೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಎಡಿಟೆಡ್ ಇಮೇಜ್ ಪೋಸ್ಟ್ ಮಾಡುತ್ತಿದ್ದು ಜನರು ಭಯಪಡದೇ ಎಚ್ಚರದಿಂದ ಇರಲು ಸಾರ್ವಜನಿಕರಲ್ಲಿ ಅರಣ್ಯ, ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.