Asianet Suvarna News Asianet Suvarna News

ಕೂಡ್ಲಿಗಿ: ಚಿರತೆ ದಾಳಿ, ಎದ್ನೋ ಬಿದ್ನೋ ಅಂತ ತಪ್ಪಿಸಿಕೊಂಡು ಬಂದ ಬೈಕ್‌ ಸವಾರ..!

* ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹುಲಿಗುಡ್ಡ ಬಳಿ ದಾಳಿ
* ಚಿರತೆಯಿಂದ ತಪ್ಪಿಸಿಕೊಂಡು ಬಂದ ಸವಾರ
* ಬೈಕ್‌ ಬರುವುದನ್ನು ನೋಡಿ ರಸ್ತೆಯ ಪಕ್ಕದಲ್ಲಿ ಕುಳಿತಿದ್ದ ಚಿರತೆ  
 

Leopard Attack on Bike Rider at Kudligi in Vijayanagara grg
Author
Bengaluru, First Published Jul 2, 2021, 2:11 PM IST

ಕೂಡ್ಲಿಗಿ(ಜು.02): ಹುಲಿಗುಡ್ಡ ಬಳಿ ಅರಣ್ಯ ಇಲಾಖೆಯ ನರ್ಸರಿ ಸಮೀಪ ಸೇತುವೆ ಬಳಿ ಬೈಕ್‌ ಸವಾರನ ಮೇಲೆ ಚಿರತೆ ದಾಳಿ ಮಾಡಿದ್ದು, ಸವಾರ ತಪ್ಪಿಸಿಕೊಂಡು ಬಂದಿದ್ದಾನೆ.

2 ವರ್ಷಗಳಿಂದಲೂ ಗಜಾಪುರ ಸಮೀಪದ ಚಿರಿಬಿ ಕಾಯ್ದಿಟ್ಟ ಅರಣ್ಯದಲ್ಲಿ ಕೂಡ್ಲಿಗಿ- ಕೊಟ್ಟೂರು ರಾಜ್ಯ ಹೆದ್ದಾರಿಯಲ್ಲಿ ರಾತ್ರಿಯಿಂದ ನಸುಕಿನ ಜಾವದವರೆಗೆ ನೂರಾರು ಜನತೆಗೆ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಆದರೆ ರಸ್ತೆಯಲ್ಲಿ ಸಂಚರಿಸುವವರ ಮೇಲೆ ದಾಳಿ ಮಾಡಿದ ಉದಾಹರಣೆ ಇದ್ದಿಲ್ಲ. ಆದರೆ ಬುಧವಾರ ಸಂಜೆ 7.45ರ ಸಮಯದಲ್ಲಿ ಕೊಟ್ಟೂರಿನಿಂದ ಕೂಡ್ಲಿಗಿ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ಕೆಇಬಿ ನೌಕರನೊಬ್ಬನ ಮೇಲೆ ಚಿರತೆ ದಾಳಿ ಮಾಡಿದ್ದು, ಆದರೆ ಅದೃಷ್ಟವಶಾತ್‌ ಸವಾರ ತಪ್ಪಿಸಿಕೊಂಡು ಬಂದಿದ್ದಾನೆ.

ಹಾವೇರಿ: ಚಿರ​ತೆ​ ಕೊಂದು ಪ್ರಾಣ ರಕ್ಷಿ​ಸಿ​ಕೊಂಡ ರೈತ​ರು..!

ಕೊಟ್ಟೂರಿನಲ್ಲಿ ಕೆಇಬಿ ಲೈನ್‌ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದ ಕೂಡ್ಲಿಗಿ ಪಟ್ಟಣದ ಯುವಕ ಜಗದೀಶ್‌ ಬೈಕ್‌ನಲ್ಲಿ ಸಂಚರಿಸುವಾಗ ಕಂದಗಲ್ಲು ಕ್ರಾಸ್‌ ಬಳಿ ಇರುವ ನರ್ಸರಿ ಸಮೀಪ ಚಿರತೆ ದಾಳಿಯಿಂದ ತಪ್ಪಿಸಿಕೊಂಡು ಬಂದ ವ್ಯಕ್ತಿಯಾಗಿದ್ದು ಬೈಕ್‌ ಬರುವುದನ್ನು ನೋಡಿ ಚಿರತೆ ರಸ್ತೆಯ ಪಕ್ಕದಲ್ಲಿ ಕುಳಿತು ಹೊಂಚು ಹಾಕಿ ಬೈಕ್‌ ಮೇಲೆ ಎರಗಿದೆ. ಹತ್ತಿರದಲ್ಲಿ ಗಮನಿಸಿದ ಜಗದೀಶ್‌ ಆ ಸಮಯದಲ್ಲಿ ಹೇಗೋ ತಪ್ಪಿಸಿಕೊಂಡು ಬಂದಿದ್ದಾನೆ. ಈ ರಸ್ತೆಯಲ್ಲಿ ಸಂಚರಿಸುವವರಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗದಂತೆ ಅರಣ್ಯ ಇಲಾಖೆಯವರು ಜನರ ಮೇಲೆ ಎರಗುವ ಚಿರತೆಯನ್ನು ಸೆರೆ ಹಿಡಿದು ಜನತೆಯ ಜೀವಗಳನ್ನು ರಕ್ಷಿಸಲು ಮುಂದಾಗಬೇಕಿದೆ.

ತಪ್ಪಿಸಿಕೊಂಡು ಬಂದೆ:

ನಾನು ಕೊಟ್ಟೂರಿನಿಂದ ಡ್ಯೂಟಿ ಮುಗಿಸಿಕೊಂಡು ಬುಧವಾರ ಸಂಜೆ 7.45ರ ಸಮಯದಲ್ಲಿ ಹುಲಿಗುಡ್ಡ ದಾಟಿದ ನಂತರ ಅರಣ್ಯ ಇಲಾಖೆಯ ನರ್ಸರಿ ಸಮೀಪ ಸೇತುವೆ ಬಳಿ ಬಂದಾಗ ರಸ್ತೆಯ ಪಕ್ಕದಲ್ಲಿಯೇ ಹೊಂಚು ಹಾಕಿ ಚಿರತೆ ಕುಳಿತುಕೊಂಡಿತ್ತು. ನನಗೆ ಅದು ನನ್ನ ಮೇಲೆ ಎರಗುತ್ತದೆ ಎಂದು ತಕ್ಷಣವೇ ಗಮನಕ್ಕೆ ಬಂತು. ಬೈಕ್‌ ಸ್ವಲ್ಪ ಸ್ಪೀಡ್‌ ಮಾಡಿ ಕಾಲುಗಳನ್ನು ಮೇಲೆತ್ತಿಕೊಂಡೆ ನನ್ನ ನಿರೀಕ್ಷೆಯಂತೆ ಚಿರತೆ ನನ್ನ ಬೈಕ್‌ ಮೇಲೆ ಎರಗಿತು. ಪೆಟ್ರೋಲ್‌ ಟ್ಯಾಂಕ್‌ ಮೇಲೆ ಚಿರತೆ ಪರಚಿದೆ. ಅಷ್ಟೊತ್ತಿಗೆ ನಾನು ಆಗೋ ಹೇಗೋ ತಪ್ಪಿಸಿಕೊಂಡು ಬಂದೆ. ಹಿಂದಕ್ಕೆ ಸಹ ನೋಡಲು ಆಗಲಿಲ್ಲ. ಈಗಲೂ ಆ ಘಟನೆ ನೆನಪಿಸಿಕೊಂಡರೆ ಮೈ ಜುಮ್‌ ಎನ್ನುತ್ತೆ ಎನ್ನುತ್ತಾರೆ ಚಿರತೆ ದಾಳಿಯಿಂದ ತಪ್ಪಿಸಿಕೊಂಡು ಬಂದ ಕೂಡ್ಲಿಗಿಯ ಕೆಇಬಿ ನೌಕರ ಜಗದೀಶ್‌.
 

Follow Us:
Download App:
  • android
  • ios