ರಟ್ಟೀಹಳ್ಳಿ(ಮಾ.24):  ರೈತ​ರಿ​ಬ್ಬರು ಚಿರ​ತೆ​ಯೊಂದಿಗೆ 20 ನಿಮಿಷ ಸೆಣ​ಸಾಡಿ ಅದನ್ನು ಕಟ್ಟಿ​ಗೆ​ಯಿಂದ ಬಡಿದು ಕೊಂದು ತಮ್ಮ ಪ್ರಾಣ ರಕ್ಷಿ​ಸಿ​ಕೊಂಡ ಘಟನೆ ತಾಲೂಕಿನ ಬುಳ್ಳಾ​ಪು​ರ​ದಲ್ಲಿ ಸೋಮ​ವಾರ ರಾತ್ರಿ ನಡೆ​ದಿ​ದೆ.

ಗ್ರಾಮದ ರೈತರಾದ ಗದಿ​ಗೆಪ್ಪ ಹಾಲಪ್ಪ ಎಳೆ​ಹೊಳೆ ಹಾಗೂ ಕೃಷ್ಣಪ್ಪ ಮೂಡ​ಬಾ​ಗಿಲ ಜಮೀ​ನಿಗೆ ನೀರು ಹಾಯಿ​ಸಲು ಹೋದ ವೇಳೆ ಚಿರತೆ ದಾಳಿ ನಡೆಸಿ ತೀವ್ರ ಗಾಯ​ಗೊ​ಳಿ​ಸಿ​ದ್ದು ಚಿತ್ರ​ದು​ರ್ಗದ ಸರ್ಕಾರಿ ಆಸ್ಪ​ತ್ರೆ​ಯಲ್ಲಿ ಚಿಕಿತ್ಸೆ ಪಡೆ​ಯು​ತ್ತಿ​ದ್ದಾರೆ.

ಆಗಿ​ದ್ದೇ​ನು?

ಹಳ್ಳಿ​ಯಲ್ಲಿ ರಾತ್ರಿ ವೇಳೆ ತ್ರಿಫೇಸ್‌ ವಿದ್ಯುತ್‌ ನೀಡುವ ಕಾರಣ ಈ ರೈತರು ಜಮೀ​ನಿಗೆ ನೀರು ಹಾಯಿ​ಸಲು ರಾತ್ರಿ 9.30ರ ವೇಳೆ ತೆರ​ಳಿ​ದ್ದಾರೆ. ಸ್ವಲ್ಪ ಭಾಗಕ್ಕೆ ನೀರು ಹಾಯಿ​ಸಿದ ಬಳಿಕ ನೀರು ಕುಡಿ​ಯಲು ಗದಿ​ಗೆಪ್ಪ ಹೋಗಿ​ದ್ದಾರೆ. ಈ ವೇಳೆ ಚಿರತೆ ಇವರ ಮೇಲೆ ದಾಳಿ ನಡೆ​ಸಿದಾಗ ಚೀರಿ​ಕೊಂಡಿ​ದ್ದಾರೆ. ಅಲ್ಲಿಯೇ ಇದ್ದ ಕೃಷ್ಣಪ್ಪ ಇವರ ರಕ್ಷ​ಣೆಗೆ ಧಾವಿ​ಸಿ​ದ್ದಾರೆ. ಆಗ ಇಬ್ಬರ ಮೇಲೆಯೂ ಚಿರತೆ ದಾಳಿ ನಡೆ​ಸಿದೆ. ಇದ​ರಿಂದ ಧೃತಿ​ಗೆ​ಡದ ಇಬ್ಬರು ಸುಮಾರು ಹೊತ್ತು ಚಿರ​ತೆ​ಯೊಂದಿಗೆ ಸೆಣ​ಸಾ​ಡಿ​ದ್ದಾ​ರೆ. ಆಗ ಗದಿ​ಗೆ​ಪ್ಪನ ಗುತ್ತಿಗೆ ಭಾಗಕ್ಕೆ ಚಿರತೆ ಕಚ್ಚಿ ತೀವ್ರ ಗಾಯ​ಗೊ​ಳಿ​ಸಿದೆ. ಅಂತಹ ನೋವಿ​ನಲ್ಲೂ ಇಬ್ಬರೂ ಅಲ್ಲಿಯೇ ಅಕ್ಕ​ಪ​ಕ್ಕದಲ್ಲಿದ್ದ ಕಟ್ಟಿಗೆ ಹಾಗೂ ಕಲ್ಲು ತೆಗೆ​ದು​ಕೊಂಡು ಚಿರತೆ ಮೇಲೆ ಪ್ರತಿ ದಾಳಿ ನಡೆ​ಸಿ​ದ್ದಾರೆ. ಇದ​ರಿಂದ ಚಿರತೆ ನಿತ್ರಾ​ಣ​ಗೊಂಡಿದೆ. ತೀವ್ರ ಗಾಯ​ಗೊಂಡಿದ್ದ ಇವರು ತಕ್ಷಣ ಅಲ್ಲಿಂದ ಸುಮಾರು ಎರಡು ಕಿಲೋ ಮೀಟರ್‌ ತೆವ​ಳಿ​ಕೊಂಡು ಮನೆ ತಲು​ಪಿ​ದ್ದಾರೆ. ರಕ್ತ​ಸಿಕ್ತ ಇವ​ರನ್ನು ನೋಡಿದ ಮನೆ​ಯ​ವರು ತಕ್ಷಣ ಅವ​ರನ್ನು ರಾಣಿ​ಬೆ​ನ್ನೂರು ಆಸ್ಪ​ತ್ರೆಗೆ ದಾಖ​ಲ​ಸಿ ಪ್ರಾಥ​ಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ದಾವ​ಣ​ಗೆ​ರೆಗೆ ದಾಖ​ಲಿ​ಸಿ​ದ್ದಾರೆ. ಇವರ ಸ್ಥಿತಿ ಗಂಭೀ​ರ​ವಾ​ಗಿ​ದ್ದ​ರಿಂದ ಮತ್ತೆ ದಾವ​ಣ​ಗೆ​ರೆ​ಯಿಂದ ಚಿತ್ರ​ದು​ರ್ಗದ ಆಸ್ಪ​ತ್ರೆಗೆ ದಾಖ​ಲಿ​ಸ​ಲಾ​ಗಿದೆ ಎಂದು ಗಾಯಾ​ಳು​ಗಳ ಕುಟುಂಬ​ಸ್ಥರು ತಿಳಿ​ಸಿ​ದ್ದಾರೆ.

ಹಾನಗಲ್ಲ: ಅಮಾನವೀಯ ಕೃತ್ಯಕ್ಕೆ ಬಲಿಯಾದ ಬಾಲಕ

ನಿರಂತ​ರ​ವಾಗಿ ಕಾಣಿ​ಸಿ​ಕೊ​ಳ್ಳು​ತ್ತಿ​ರುವ ಚಿರ​ತೆ​ಗ​ಳು:

ತುಂಗಾ ಮೇಲ್ಡಂಡೆ ಕಾಲುವೆ ನಿರ್ಮಿ​ಸಿದ ಬಳಿಕ ತಾಲೂ​ಕಿ​ನಲ್ಲಿ ಹೆಚ್ಚಿನ ಸಂಖ್ಯೆ​ಯಲ್ಲಿ ಚಿರತೆ ಕಾಣಿ​ಸಿ​ಕೊ​ಳ್ಳು​ತ್ತಿದ್ದು ರೈತರು ರಾತ್ರಿ ಜಮೀ​ನಿಗೆ ತೆರ​ಳಲು ಭಯ​ಪ​ಡು​ತ್ತಿ​ದ್ದಾರೆ. ಕಡೂರು, ಬುಳ್ಳಾಪುರ ಹಾಡೆ, ಕಣವಿಶಿದ್ಗೇರಿ ಭಾಗದ ಯುಟಿಪಿ ಕಾಲುವೆಯ ಬಂಡೆಗಳಲ್ಲಿ ಚಿರತೆ ಪ್ರತ್ಯ​ಕ್ಷ​ವಾ​ಗು​ತ್ತಿದ್ದು ಇವು​ಗಳ ಸೆರೆಗೆ ಬೋನ್‌ ಅಳ​ವ​ಡಿ​ಸ​ಬೇ​ಕೆಂದು ರೈತರು ಅರಣ್ಯ ಅಧಿ​ಕಾ​ರಿ​ಗ​ಳನ್ನು ಒತ್ತಾ​ಯಿ​ಸಿ​ದ್ದಾ​ರೆ.

ಈ ಭಾಗ​ದಲ್ಲಿ ಚಿರ​ತೆ​ಗಳ ಸಂಖ್ಯೆ ಹೆಚ್ಚಿ​ರು​ವು​ದ​ರಿಂದ ಇವು​ಗಳ ಸೆರೆಗೆ ಬೋನ್‌ ಇಡ​ಲಾ​ಗಿದೆ. ಗ್ರಾಮದ ಸುತ್ತ​ಮುತ್ತ ಗುಡ್ಡ ಹಾಗೂ ಯುಪಿಟಿ ಕಾಲುವೆ ಪಕ್ಕ​ದಲ್ಲಿ ಬಂಡೆ​ಗಳು ಇರು​ವು​ದ​ರಿಂದ ಚಿರ​ತೆ​ಗಳು ತಮ್ಮ ಆವಾಸ ತಾಣ​ವಾಗಿ ಮಾಡಿ​ಕೊಂಡಿವೆ. ಸೋಮ​ವಾರ ರಾತ್ರಿ ಚಿರತೆ ನಡೆ​ಸಿದ ದಾಳಿ​ಯಲ್ಲಿ ಓರ್ವ ರೈತ​ರಿಗೆ ಗಂಭೀ​ರ​ವಾಗಿ ಗಾಯ​ವಾ​ಗಿ​ರುವ ಮಾಹಿತಿ ಇದೆ. ಚಿರ​ತೆ​ಗಳ ಸೆರೆ​ಗೆ ಮತ್ತಷ್ಟುಬೋನ್‌ ಅಳ​ವ​ಡಿ​ಸ​ಲಾ​ಗು​ವು​ದು ಎಂದು ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ ತಿಳಿಸಿದ್ದಾರೆ.

ಒಂದು ವಾರ ಹಗಲು, ಒಂದು ವಾರ ರಾತ್ರಿ ವೇಳೆ ತ್ರಿಫೇಸ್‌ ವಿದ್ಯುತ್‌ ನೀಡ​ಲಾ​ಗು​ತ್ತಿದೆ. ರೈತರು ರಾತ್ರಿ ವೇಳೆ ನೀಡುವ ಸಮ​ಯ​ವನ್ನು ಬದ​ಲಾ​ಯಿ​ಸುವ ಕುರಿತು ಅರ್ಜಿ ಸಲ್ಲಿ​ಸಿ​ದರೆ ಮೇಲಾ​ಧಿ​ಕಾ​ರಿ​ಗ​ಳೊಂದಿಗೆ ಚರ್ಚಿ​ಸ​ಲಾ​ಗು​ವುದು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜು ಮರಿಗೌಡ್ರ ಹೇಳಿದ್ದಾರೆ.