ಚಿಮುಲ್ ರದ್ದತಿ ವಿರುದ್ಧ ಕಾನೂನು ಹೋರಾಟ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಖಂಡ ಕೊಲಾರ- ಚಿಕ್ಕಬಳ್ಳಾಪುರದ ಹಾಲು ಒಕ್ಕೂಟವನ್ನು(ಕೋಚಿಮುಲ್) ವಿಭಾಗಿಸಿ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘವಾಗಿ ( ಚಿಮುಲ್ ) ಮಾರ್ಪಡಿಸುವಲ್ಲಿ ಶ್ರಮ ವಹಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಮುಖ್ಯ ಮಂತ್ರಿ ಸಿದ್ದರಾಮಯ್ಯ ದ್ವೇಶದ ರಾಜಕಾರಣದಿಂದ ಚೀಮುಲ್ ವಜಾಗೊಳಿಸಿದ್ದಾರೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಆರೋಪಿಸಿದರು.
ಚಿಕ್ಕಬಳ್ಳಾಪುರ : ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಖಂಡ ಕೊಲಾರ- ಚಿಕ್ಕಬಳ್ಳಾಪುರದ ಹಾಲು ಒಕ್ಕೂಟವನ್ನು(ಕೋಚಿಮುಲ್) ವಿಭಾಗಿಸಿ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘವಾಗಿ ( ಚಿಮುಲ್ ) ಮಾರ್ಪಡಿಸುವಲ್ಲಿ ಶ್ರಮ ವಹಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಮುಖ್ಯ ಮಂತ್ರಿ ಸಿದ್ದರಾಮಯ್ಯ ದ್ವೇಶದ ರಾಜಕಾರಣದಿಂದ ಚೀಮುಲ್ ವಜಾಗೊಳಿಸಿದ್ದಾರೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಆರೋಪಿಸಿದರು.
ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ಕೋಲಾರದಿಂದ ಬೇರ್ಪಟ್ಟರೂ ಹಾಲು ಒಕ್ಕೂಟ ಬೇರೆಯಾಗಿರಲಿಲ್ಲ. ಅದನ್ನು ಜಿಲ್ಲೆಯ ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಒಕ್ಕೂಟವನ್ನು ಕಳೆದ ವರ್ಷ ವಿಭಜನೆ ಮಾಡಲಾಗಿತ್ತು. ಇದರ ವಿರುದ್ಧ ಕೋಚಿಮುಲ್‌ನ ಕೆಲವು ನಿರ್ದೇಶಕರು ಹೈ ಕೋರ್ಚ್ ಮೆಟ್ಟಿಲೇರಿದ್ದರು. ಕೋರ್ಟಿನಲ್ಲಿ ಕೇಸಿದ್ದರೂ ಸೇಡಿನ ರಾಜಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಂದ ಒಂದುವರೆ ತಿಂಗಳಲ್ಲಿ ವಿಭಜನೆ ವಾಪಸ್ ಪಡೆದಿದ್ದಾರೆ. ಇದರಿಂದ ಜಿಲ್ಲೆಯ ಹೈನುಗಾರರಿಗೆ ಅನ್ಯಾಯವಾಗಿದೆ. ಇದರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದರು.
ಡೈಲಾಗ್ ಹೊಡೆದರೆ ರಾಜಕಾರಣ ನಡೆಯಲ್ಲ
ಕ್ಷೇತ್ರದಲ್ಲಿ ವಸತಿ ಯೋಜನೆ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಸುಳ್ಳು ಅಭಿಯಾನ ಆರಂಭ ಮಾಡಿದ್ದಾರೆ. ಸುಳ್ಳು ಪ್ರಚಾರದಿಂದ ಗೆದ್ದ ಮೇಲೆ ಅಭಿವೃದ್ಧಿ ಮೇಲೆ ಲಕ್ಷ್ಯ ಕೊಡ್ತಾರೆ ಎಂದು ಭಾವಿಸಿದ್ದೆ. ಆದರೆ ಶಾಸಕ ಪ್ರದೀಪ್ ಈಶ್ವರ್‌ಗೆ ಸುಳ್ಳೇ ಮನೆ ದೇವರಾಗಿದೆ. ಕ್ಷೇತ್ರದಲ್ಲಿ ನಿವೇಶನಗಳು ಆಗೇ ಇಲ್ಲ ಎನ್ನುವ ಹಾಗೆ ಬಡವರ ಆಸೆಗೆ ತಣ್ಣೀರು ಎರಚುವ ಕೆಲಸ ಮಾಡುತ್ತಿದ್ದಾರೆ. ಆದರೆ ನಾನು ಸುಳ್ಳಿನ ಯೋಜನೆ ತಂದಿಲ್ಲ. 20,000ಕ್ಕೂ ಹೆಚ್ಚು ನಿವೇಶನ ತಂದ ಏಕೈಕ ವ್ಯಕ್ತಿ ನಾನು ಎಂದರು.
ನಿವೇಶನಕ್ಕಾಗಿ ನಾನು 555 ಎಕರೆ ಮಂಜೂರು ಮಾಡಿಸಿರೋದು ಸತ್ಯ ಅಂತ ಶ್ರೀ ಭೋಗನಂದಿಶ್ವರ ದೇವಾಲಯಕ್ಕೆ ಹೋಗಿ ದೀಪ ಹಚ್ಚುತ್ತೇನೆ. ತಾಕತ್ತಿದ್ದರೆ ಅದು ಸುಳ್ಳು ಅಂತ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಬಂದು ದೀಪ ಹಚ್ಚಲಿ ಎಂದು ಸವಾಲು ಹಾಕಿದರು. ಅದು ಸುಳ್ಳು ಎಂದು ದೀಪ ಹಚ್ಚಿದ್ರೂ ಹಚ್ಚಬಹುದು ಗಿರಾಕಿ! ಎಂದು ವ್ಯಂಗ್ಯವಾಡಿ,ನಾನು ಜನರಿಗೆ ಸುಳ್ಳು ಹೇಳಿ ಮೋಸ ಮಾಡುವ ದುಸ್ಥಿತಿಗೆ ತಲುಪಿಲ್ಲ. ದೇವರು ಅನುಗ್ರಹ ಮಾಡಿದ್ದಾರೆ ಒಳ್ಳೆ ಕೆಲಸ ಮಾಡಿ ಎಂದು ತಿಳಿವಳಿಕೆ ಕೊಡುತ್ತೇನೆ ಎಂದರು.
ವೈದ್ಯಕೀಯ ಕಾಲೇಜು ಕಾಮಗಾರಿ ಪೂರ್ಣಗೊಳಿಸಿ
ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಗಳ ಬಗ್ಗೆ ನಾನು ಈಗಲೇ ನಾನು ಟೀಕೆ ಮಾಡಲು ಹೋಗಲ್ಲ. ಈ ಬಗ್ಗೆ ಆರು ತಿಂಗಳ ನಂತರ ಮಾತನಾಡುತ್ತೇನೆ. ಜಿಲ್ಲೆಯ ಸಚಿವರು ಸೇರಿ ಎಲ್ಲಾ ಐದು ಶಾಸಕರು ದ್ವೇಶ ರಾಜಕಾರಣ ಬಿಟ್ಟು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿ. ಮೆಡಿಕಲ್ ಕಾಲೇಜಿನ ಬಾಕಿ ಮೊತ್ತ 250 ಕೋಟಿ ಬಿಡುಗಡೆ ಮಾಡಿ ಕಟ್ಟಡವನ್ನು ಉದ್ಘಾಟನೆ ಮಾಡಿಸಿ ಬೋರ್ಡ್‌ಗಳಲ್ಲಿ ನಿಮ್ಮ ಹೆಸರುಗಳನ್ನು ಹಾಕಿಸಿಕೊಳ್ಳಿ ಎಂದು ಶಾಸಕ ಪ್ರದೀಪ್ ಈಶ್ವರ್ ಹಾಗು ಉಸ್ತುವಾರಿ ಸಚಿವರಿಗೆ ಪರೋಕ್ಷವಾಗಿ ಚಾಟಿ ಬೀಸಿದರು.
ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಒಂದಾಗಿ ನನ್ನನ್ನು ಸೋಲಿಸದರು. ಜನತೆ ಪ್ರದೀಪ್ ಈಶ್ವರ್ ಸಾಧನೆ ನೋಡಿ ಮತ ನೀಡಿಲ್ಲ. ಅವರ ಮುಖಾ ನೋಡಿದ್ದೇ ಚುನಾವಣೆಯಲ್ಲಿ. ಕೆಲ ಹಿತಾಸಕ್ತ ಶಕ್ತಿಗಳು ಒಂದಾಗಿದ್ವು, ಜೆಡಿಎಸ್‌ನವರಿಗೂ ಮಿಸ್ ಗೈಡ್ ಮಾಡಿ ಕೊನೆ ಹಂತದಲ್ಲಿ ತೆಗೆದುಕೊಂಡ ನಿರ್ಧಾರದಿಂದ ತಾವು ಸೋಲಬೇಕಾಯಿತು ಎಂದರು
ಮೆಡಿಕಲ್ ಕಾಲೇಜು ಮತ್ತೊಮ್ಮೆ ಉದ್ಘಾಟನೆ?
ಸಿಎಂ ಸಿದ್ದರಾಮಯ್ಯರಿಂದ ಮೊತ್ತೊಮ್ಮ ಮೆಡಿಕಲ್ ಉದ್ಘಾಟನೆ ಮಾಡಿಸುತ್ತಾರಂತೆ, ಮೊದಲು ಕಾಮಗಾರಿ ಪೂರ್ಣಗೊಳಿಸಲಿ. ಯಾವ ಚಪಲಕ್ಕೆ ಉದ್ಘಾಟನೆ ಮಾಡ್ತಾರೋ ಮಾಡಲಿ. ನಾವು ಸೋತಿದ್ದೇವೆ ಸತ್ತಿಲ್ಲ ಎಂದು ಡಾ.ಸುಧಾಕರ್, ಪ್ರತಿಪಕ್ಷ ನಾಯಕ ಯಾರಾಗಬಹುದೆಂಬಹುದೆಂದು ನಿಮ್ಮಷ್ಟೇ ಕತೂಹಲದಿಂದ ನಾವೂ ಎದುರು ನೋಡುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಚಿವ ಸುಧಾಕರ್‌ರ ತಂದೆ ಹಾಗೂ ಜಿಪಂ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಖಾಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಮಾಜಿ ಶಾಸಕಿ ಅನುಸೂಯಮ್ಮ, ನಗರಸಭಾ ಮಾಜಿ ಅಧ್ಯಕ್ಷ ಆನಂದ್‌ಬಾಬು, ಮುನಿಕೃಷ್ಣಪ್ಪ, ಲೀಲಾವತಿ ಶ್ರೀನಿವಾಸ್, ತಾಪಂ ಮಾಜಿ ಅಧ್ಯಕ್ಷ ಪಿ.ಎ.ಮೋಹನ್, ಮತ್ತಿತರರು ಇದ್ದರು.