ಮಸ್ಕಿ(ಅ.29): ಮಸ್ಕಿ ಕ್ಷೇತ್ರದಲ್ಲಿ ಕಳೆದ ಹಲವು ದಿನಗಳಿಂದ ಮೂಲ, ವಲಸೆ ಬಿಜೆಪಿ ಕಾರ್ಯಕರ್ತರ ನಡುವೆ ಬಿನ್ನಾಭಿಪ್ರಾಯಗಳು ಏರ್ಪಟ್ಟಿದ್ದರಿಂದ ಇದೀಗ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಹುಬ್ಬಳ್ಳಿಯಲ್ಲಿ ಎರಡೂ ಬಣಗಳು ಮುಖಂಡರ ಮಹತ್ವದ ಸಂಧಾನ ಸಭೆ ನಡೆಸಿದ್ದಾರೆ.

ಮಸ್ಕಿ ಪಟ್ಟಣದಲ್ಲಿ ಇತ್ತಿಚಿಗೆ ಬಿಜೆಪಿ ಕಾರ್ಯಕರ್ತರ ಸಭೆಗೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ ಅವರ ಬಳಿ ಕೆಲ ಮೂಲ ಬಿಜೆಪಿ ಕಾರ್ಯಕರ್ತರು ಪಕ್ಷದಲ್ಲಿ ತಮಗಾಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಮನವಿ ಮಾಡಿದ್ದರು. ಆದ್ದರಿಂದ ಹುಬ್ಬಳ್ಳಿಯ ಖಾಸಗಿ ಹೋಟೆಲವೊಂದರಲ್ಲಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್‌, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಎರಡು ಬಣಗಳ ಮುಖಂಡರ ಸಭೆಯನ್ನು ನಡೆಸಿ ರಾಜ್ಯದಲ್ಲಿ ಸರ್ಕಾರ ರಚನೆಯಾಗಲು ಪ್ರತಾಪಗೌಡ ಪಾಟೀಲ್‌ ಅವರು ಸಹ ಕಾರಣ ಆದ್ದರಿಂದ ಮುಂಬರುವ ಉಪಚುನಾವಣೆಯನ್ನು ಒಟ್ಟಾಗಿ ಎದುರಿಸುವಂತೆ ಸೂಚಿದ್ದಾರೆ ಎನ್ನಲಾಗಿದೆ.

ರಾತ್ರೋರಾತ್ರಿ ಬಿಜೆಪಿ ನಾಯಕರ ದಿಢೀರ್‌ ಸಭೆ: ಸಿಎಂ ಬದಲಾವಣೆ ಫಿಕ್ಸಾ..?

ಆರ್‌.ಬಸನಗೌಡ ಹಾಗೂ ಅವರ ಬಣದ ಕಾರ್ಯಕರ್ತರು ಕ್ಷೇತ್ರದಲ್ಲಿ ಮೂಲ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿ ಯಾವುದೇ ಸ್ಥಾನ ಮಾನ ನೀಡುತ್ತಿಲ. ಅಲ್ಲದೇ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ವಾದ ಮಂಡಿಸಿದ್ದಾರೆ.
ಎರಡು ಬಣದ ಮುಖಂಡರು ರಾಜ್ಯ ಮುಖಂಡರ ಬಳಿ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡು ಮಾತಿನ ಚಕಮಕಿ ನಡೆಸಿದ್ದಾರೆ. ಮೂಲ ಬಿಜೆಪಿ ಬಸನಗೌಡ ತುರ್ವಿಹಾಳ ಬಣವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತೆ ಪ್ರತಾಪಗೌಡ ಪಾಟೀಲರಿಗೆ ಸೂಚಿಸಿದ್ದು ಮತ್ತೆ ನ.7ರಂದು ಬೆಂಗಳೂರಿನಲ್ಲಿ ಮತ್ತೋಂದು ಸುತ್ತಿನ ಸಭೆ ನಡೆಸಿ ಎಲ್ಲಾ ರೀತಿಯ ಭಿನ್ನಾಭಿಪ್ರಾಯಗಳನ್ನು ಸರಿಪಡಿಸೋಣವೆಂದು ಇಬ್ಬರು ನಾಯಕರಿಗೆ ತಿಳಿಸಿದ್ದಾರೆ.

ಸಭೆಯಲ್ಲಿ ಸಚಿವರಾದ ಜಗದೀಶ್‌ ಶೆಟ್ಟರ್‌, ಸಂಸದ ಸಂಗಣ್ಣ ಕರಡಿ, ಉಮೇಶ ಕತ್ತಿ, ಬಾಲಚಂದ್ರ ಜಾರಕಿ ಹೊಳಿ ಸೇರಿದಂತೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಹಾಗೂ ತುಂಗಭದ್ರಾ ಕಾಡಾ ಅಧ್ಯಕ್ಷ ಆರ್‌.ಬಸನಗೌಡ ಹಾಗೂ ಅವರ ಪ್ರಮುಖ ಬೆಂಬಲಿಗರು ಸಭೆಯಲ್ಲಿ ಭಾಗವಹಿಸಿದ್ದರು.