ಹುಬ್ಬಳ್ಳಿ(ಅ.29): ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಬೆಳಗಾವಿ, ಧಾರವಾಡ, ಕೊಪ್ಪಳ, ರಾಯಚೂರು ಜಿಲ್ಲೆಗಳ ಮುಖಂಡರೊಂದಿಗೆ ಮಂಗಳವಾರ ರಾತ್ರಿ ಆಂತರಿಕ ಸಭೆ ನಡೆಸಿರುವುದು ವಿಭಿನ್ನ ಚರ್ಚೆಗೆ ಗ್ರಾಸವಾಗಿದೆ. 

ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆ, ಲೋಕಸಭೆ ಕ್ಷೇತ್ರ, ಮಸ್ಕಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಭೆಯಲ್ಲಿ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ಆದರೆ, ಡಿಸಿಸಿ ಬ್ಯಾಂಕ್‌, ಮಸ್ಕಿ ಕ್ಷೇತ್ರದ ಬಗ್ಗೆ ಮಾತ್ರ ಚರ್ಚೆ ನಡೆದಿದೆ. ಬೆಳಗಾವಿ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಸಚಿವರಾದ ಜೋಶಿ, ಶೆಟ್ಟರ್‌ ಸ್ಪಷ್ಟಪಡಿಸಿದ್ದಾರೆ. ಈ ಸಭೆಗೆ ಸಚಿವ ರಮೇಶ್‌ ಜಾರಕಿಹೊಳಿ ಗೈರಾಗಿದ್ದರು. ಸಮ್ಮಿಶ್ರ ಸರ್ಕಾರ ಬೀಳಿಸಲು ಬೆಳಗಾವಿ ಡಿಸಿಸಿ ಬ್ಯಾಂಕಿನ ಚುನಾವಣೆಯೇ ಕಾರಣವಾಗಿತ್ತು. ಇದೀಗ ಮತ್ತೆ ಡಿಸಿಸಿ ಬ್ಯಾಂಕ್‌ ಚುನಾವಣೆ ಎದುರಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ರಾಜ್ಯಾಧ್ಯಕ್ಷರು ಈ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾಯಕತ್ವ ಬದಲಾವಣೆ ಚರ್ಚೆ ನಡೆದಿಲ್ಲ: ಸಚಿವ ಜೋಶಿ

ಬಿಜೆಪಿ ಮುಖಂಡರ ಸಭೆಯಲ್ಲಿ ನಾಯಕತ್ವದ ಬಗ್ಗೆ ಚರ್ಚೆಯಾಗಿಲ್ಲ. ನಮ್ಮ ನಾಯಕರು ಬಿ.ಎಸ್‌.ಯಡಿಯೂರಪ್ಪ ಅವರೇ. ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಈಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆ ಹಾಗೂ ಮಸ್ಕಿ ಉಪ ಚುನಾವಣೆ ವಿಷಯವಾಗಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆದಿದೆ ಅಷ್ಟೇ. ಅಲ್ಲಿ ಈ ಎರಡು ವಿಷಯಗಳ ಕುರಿತು ಮಾತ್ರ ಚರ್ಚೆಯಾಗಿದೆ ಎಂದರು.

'ಬಿಎಸ್‌ವೈ ಸರ್ಕಾರಕ್ಕೆ ಇನ್ನಿಲ್ಲ ಬಹಳ ದಿನ : ಯತ್ನಾಳ್‌ಗೆ ಹಲವು ಬಿಜೆಪಿಗರ ಸಪೋರ್ಟ್'

ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ. ನಾಯಕತ್ವ ಬದಲಾವಣೆ ಒಂದು ಜಿಲ್ಲೆಯ ನಾಯಕರನ್ನು ಕರೆದು ಸಭೆ ನಡೆಸಿ ನಿರ್ಧರಿಸುವುದಲ್ಲ. ಜೊತೆಗೆ ಯಡಿಯೂರಪ್ಪ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಎಲ್ಲರೂ ಅವರಿಗೆ ಸಹಕಾರ ನೀಡುತ್ತೇವೆ. ಅವರೇ ನಮ್ಮ ನಾಯಕರು ಎಂದರು.

ಬೆಳಗಾವಿ ಲೋಕಸಭೆ ಚುನಾವಣೆ ವಿಷಯ ಚರ್ಚೆಯಾಗಿಲ್ಲ

ಸಭೆಯಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್‌ ಹಾಗೂ ಮಸ್ಕಿ ಕ್ಷೇತ್ರದ ಕುರಿತು ಚರ್ಚಿಸಲಾಗಿದೆ. ಆದರೆ, ಬೆಳಗಾವಿ ಲೋಕಸಭಾ ಉಪಚುನಾವಣೆ ಬಗ್ಗೆ ಚರ್ಚೆಯಾಗಿಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಕಡೆಗಳಲ್ಲಿ ಮುಖಂಡರು, ಕಾರ್ಯಕರ್ತರ ನಡುವೆ ಕೆಲವೊಂದು ಸಮಸ್ಯೆಗಳಿದ್ದವು. ಅವುಗಳನ್ನು ರಾಜ್ಯಾಧ್ಯಕ್ಷರು ಸಭೆ ನಡೆಸಿ ಬಗೆಹರಿಸಿದ್ದಾರೆ ಎಂದು ನುಡಿದರು. ಮಸ್ಕಿಯಲ್ಲಿ ಪ್ರತಾಪಗೌಡ ವಿರುದ್ಧ ಕೆಲ ಮುಖಂಡರಿದ್ದರು. ಆ ಬಗ್ಗೆ ಪರಸ್ಪರ ಮಾತನಾಡಿ ಸಮಸ್ಯೆ ಬಗೆಹರಿಸಲಾಗಿದೆ. ಚುನಾವಣೆ ಘೋಷಣೆಯಾದ ಬಳಿಕ ಯಾರಿಗೆ ಟಿಕೆಟ್‌ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದು ಅಲ್ಲಿನ ಮುಖಂಡರು ಹೇಳಿದ್ದಾರೆ. ಟಿಕೆಟ್‌ ಕೊಡಿ ಎಂದು ಈವರೆಗೂ ಯಾರೂ ಬೇಡಿಕೆ ಇಟ್ಟಿಲ್ಲ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಅಂಗಡಿ ಕುಟುಂಬಸ್ಥರಿಗೆ ಟಿಕೆಟ್‌ ಕೊಟ್ಟರೆ ಪ್ರಕಾಶ್‌ ಹುಕ್ಕೇರಿ ಬೆಂಬಲಿಸುತ್ತೇನೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ಟಿಕೆಟ್‌ ಯಾರಿಗೆ ಎಂಬುದು ಇನ್ನೂ ನಿರ್ಧರಿಸಿಲ್ಲ. ಆದರೆ, ಬಿಜೆಪಿಗೆ ಬೆಂಬಲಿಸುವೆ ಎಂದರೆ ಬೆಂಬಲಿಸಲಿ ಎಂದರು. ಪ್ರಕಾಶ್‌ ಹುಕ್ಕೇರಿ ಬಿಜೆಪಿಗೆ ಬರುತ್ತಾರೆಯೇ ಎಂಬ ಪ್ರಶ್ನೆಗೆ ಆ ವಿಷಯವನ್ನು ಅವರೆಲ್ಲಿಯೂ ಬಹಿರಂಗವಾಗಿ ಹೇಳಿಲ್ಲ. ಆ ಬಗ್ಗೆ ಸಭೆಯಲ್ಲಿ ಚರ್ಚೆಯೂ ಆಗಿಲ್ಲ ಎಂದರು.