ಬೆಂಗಳೂರು [ಆ.23]:  ಅನರ್ಹಗೊಂಡಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ಅವರನ್ನು ಬಿಜೆಪಿ ಸೇರ್ಪಡೆ ಮಾಡಿಕೊಳ್ಳುವ ಪ್ರಯತ್ನಕ್ಕೆ ಆರಂಭದಲ್ಲೇ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.

ಮುನಿರತ್ನ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಸ್ತಾಪವನ್ನು ವಿರೋಧಿಸಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜ್ಞಾನಭಾರತಿ ವಾರ್ಡ್‌ ಅಧ್ಯಕ್ಷ ಎಂ.ಆರ್‌.ಕುಮಾರ್‌ ಅವರು ಪತ್ರ ಬರೆದ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ಪಕ್ಷದ ಸದಸ್ಯತ್ವದಿಂದ ಉಚ್ಚಾಟಿಸಿ ಕ್ಷೇತ್ರದ ಅಧ್ಯಕ್ಷ ಲಕ್ಷ್ಮೇಕಾಂತರೆಡ್ಡಿ ಅವರು ಆದೇಶ ಹೊರಡಿಸಿದ್ದರು. ಅದಕ್ಕೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗುರುವಾರ ಉಚ್ಚಾಟನೆ ಆದೇಶ ವಾಪಸ್‌ ಪಡೆದ ಪ್ರಸಂಗ ನಡೆದಿದೆ.

ಕಾಂಗ್ರೆಸ್ ಶಾಸಕಗೆ ಬಿಜೆಪಿ ಬೆಂಬಲ : ಬಂಪರ್ ಆಫರ್?

ಮುನಿರತ್ನ ಅವರ ಬಿಜೆಪಿ ಸೇರ್ಪಡೆಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಜ್ಞಾನಭಾರತಿ ವಾರ್ಡ್‌ ಅಧ್ಯಕ್ಷ ಕುಮಾರ್‌ ಅವರ ನೇತೃತ್ವದಲ್ಲಿ ಆ.8ರಂದು ಸ್ಥಳೀಯ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಸಭೆ ನಡೆದಿತ್ತು.

ಸಭೆಯಲ್ಲಿ ಕಾರ್ಯಕರ್ತರು ಮುನಿರತ್ನ ಅವರನ್ನು ಬಿಜೆಪಿ ಸೇರ್ಪಡೆ ಮಾಡಿಕೊಳ್ಳುತ್ತಿರುವ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆರು ವರ್ಷದಿಂದ ಅನುಭವಿಸುತ್ತಿರುವ ನೋವನ್ನು ಸಭೆಯಲ್ಲಿ ಹಂಚಿಕೊಂಡಿದ್ದರು. ಮುನಿರತ್ನ ಅವರು ಪಕ್ಷ ಸೇರ್ಪಡೆಗೊಂಡರೆ ರಾಜೀನಾಮೆ ನೀಡುವುದಾಗಿ ಕೆಲ ಪದಾಧಿಕಾರಿಗಳು ಅಸಮಾಧಾನ ಹೊರ ಹಾಕಿದ್ದರು. ಸಭೆಯಲ್ಲಿ ಆದ ಚರ್ಚೆಯ ಬಗ್ಗೆ ಕುಮಾರ್‌ ಅವರು ಕ್ಷೇತ್ರದ ಅಧ್ಯಕ್ಷ ಲಕ್ಷ್ಮೇಕಾಂತರೆಡ್ಡಿ ಅವರಿಗೆ ಕಳೆದ ಭಾನುವಾರ ಪತ್ರ ಬರೆದಿದ್ದರು.

ಮುನಿರತ್ನ ಅವರ ಬಿಜೆಪಿ ಸೇರ್ಪಡೆಗೆ ಸ್ಥಳೀಯ ಮಟ್ಟದಲ್ಲಿ ಸಾಕಷ್ಟುವಿರೋಧ ವ್ಯಕ್ತವಾಗುತ್ತಿದೆ. ಮುನಿರತ್ನ ಅವರಿಂದ ಸ್ಥಳೀಯವಾಗಿ ಬಿಜೆಪಿ ಕಾರ್ಯಕರ್ತರು ಸಾಕಷ್ಟುತೊಂದರೆ ಅನುಭವಿಸಿದ್ದಾರೆ. ಮುನಿರತ್ನ ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತವಾಗಿರುವುದನ್ನು ರಾಜ್ಯ ನಾಯಕರ ಗಮನಕ್ಕೆ ತಂದು ಕಾರ್ಯಕರ್ತರಿಗೆ ನ್ಯಾಯ ಕೊಡಿಸಬೇಕೆಂದು ಎಂ.ಆರ್‌.ಕುಮಾರ್‌ ಪತ್ರದಲ್ಲಿ ಮನವಿ ಮಾಡಿದ್ದರು.

ಉಚ್ಚಾಟಿಸಿ ಆದೇಶ:  ಕಾರ್ಯಕರ್ತರ ಅಹವಾಲು ಅಲಿಸದ ಕ್ಷೇತ್ರದ ಅಧ್ಯಕ್ಷ ಲಕ್ಷ್ಮೇಕಾಂತರೆಡ್ಡಿ ಅವರು, ಪಕ್ಷದ ವಿರೋಧಿ ಚಟುವಟಿಕೆ ಆರೋಪದ ಮೇಲೆ ಜ್ಞಾನಭಾರತಿ ವಾರ್ಡ್‌ನ ಅಧ್ಯಕ್ಷ ಎಂ.ಆರ್‌.ಕುಮಾರ್‌ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿ ಆದೇಶ ಹೊರಡಿಸಿದ್ದರು.

ಜ್ಞಾನಭಾರತಿ ವಾರ್ಡ್‌ನಲ್ಲಿ ಸಭೆ ನಡೆಸಿ ಮುನಿರತ್ನ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ರಾಜೀನಾಮೆ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವುದು ರಾಜ್ಯ ನಾಯಕರ ಗಮನಕ್ಕೆ ಬಂದಿದೆ. ಮುನಿರತ್ನ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ನಿರ್ಧಾರವನ್ನು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ. ನೀವು ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಹಾಗೂ ಪಕ್ಷದ ಕಾರ್ಯಕರ್ತರ ಸಹಿ ಸಂಗ್ರಹಣೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂಬ ಕಾರಣ ನೀಡಿ ಆರು ವರ್ಷ ಪಕ್ಷದಿಂದ ಕುಮಾರ್‌ ಅವರನ್ನು ಬುಧವಾರವಷ್ಟೇ ಉಚ್ಛಾಟಿಸಲಾಗಿತ್ತು.

ವಿವಾದ ಸೃಷ್ಟಿ :  ಸಭೆಯಲ್ಲಿನ ಅಭಿಪ್ರಾಯ ಹೇಳಿದ್ದಕ್ಕೆ ಕುಮಾರ್‌ ಅವರನ್ನು ಉಚ್ಚಾಟನೆ ಮಾಡಿದ್ದ ಬಗ್ಗೆ ಬಿಜೆಪಿ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಕಳೆದ ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದ ತುಳಸಿ ಮುನಿರಾಜುಗೌಡ ಸೇರಿದಂತೆ ಕೆಲವು ಮುಖಂಡರು ಪಕ್ಷದ ತೀರ್ಮಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದರು. ಕುಮಾರ್‌ ಉಚ್ಚಾಟನೆ ವಿಚಾರ ಸ್ಥಳೀಯವಾಗಿ ಸಾಕಷ್ಟುವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಗುರುವಾರ ಲಕ್ಷ್ಮೇಕಾಂತ್‌ ರೆಡ್ಡಿ ಅವರು ತಮ್ಮ ಉಚ್ಚಾಟನೆ ಆದೇಶ ವಾಪಸ್‌ ಪಡೆದರು.