ಬೆಳಗಾವಿ: ಅಥಣಿ ಅಭಿವೃದ್ಧಿಗೆ ಸವದಿ ಎದುರಿವೆ ಹಲವು ಸವಾಲು

ಅಥಣಿ ಪಟ್ಟಣದ ಮಹಾತ್ಮ ಗಾಂಧಿ ಮಾರುಕಟ್ಟೆಯನ್ನು ವಿಜಯಪುರದ ಶಾಸ್ತ್ರೀಯ ಮಾರ್ಕೆಟ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು.

Laxman Savadi Faced Many Challenges for the Development of Athani grg

ಅಣ್ಣಾಸಾಬ ತೆಲಸಂಗ

ಅಥಣಿ(ಮೇ.23): ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಶಾಸಕರಾಗಿ ಮರು ಆಯ್ಕೆಯಾಗುತ್ತಲೇ ಅಥಣಿ ಕ್ಷೇತ್ರದ ಮತದಾರರ ನಿರೀಕ್ಷೆಗಳು ಗರಿಗೆದರಿವೆ. ಪಶು ವೈದ್ಯಕೀಯ ಕಾಲೇಜು, ಆರ್‌ಟಿಒ ಕಚೇರಿ, ಸಾರ್ವಜನಿಕ ಆಸ್ಪತ್ರೆ ಸುಧಾರಣೆ, ಕೃಷಿ ಕಾಲೇಜುಗಳ ಕೊಡುಗೆ ನೀಡಿದ್ದ ಶಾಸಕರು, ಈಗ ನಾಲ್ಕನೇ ಬಾರಿ ಆಯ್ಕೆಯಾಗಿದ್ದು, ಅವರ ಮುಂದೆ ಮತ್ತೂ ಅನೇಕ ಅಭಿವೃದ್ಧಿ ಕೆಲಸ ಕಾರ್ಯಗಳ ಸವಾಲು ಎದುರಾಗಿದೆ.

ಆರಂಭವಾಗಲಿ ಪಶು ವೈದ್ಯಕೀಯ ಕಾಲೇಜು:

ಅಥಣಿ ಕ್ಷೇತ್ರದ ರೈತಾಪಿ ಜನರ ಅನುಕೂಲಕ್ಕಾಗಿ ಕೊಕಟನೂರು ಗ್ರಾಮದಲ್ಲಿ ಪಶು ವೈದ್ಯಕೀಯ ಕಾಲೇಜು ಸ್ಥಾಪನೆಗೊಂಡಿದೆ. ಆದರೆ, 200 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಈ ಪಶು ವೈದ್ಯಕೀಯ ಕಾಲೇಜು ಬೋಧಕರ ವಸತಿ ಗೃಹ, ವಿದ್ಯಾರ್ಥಿಗಳ ವಸತಿ ನಿಲಯ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ತ್ವರಿತವಾಗಿ ಮುಗಿಸಿ ಶೈಕ್ಷಣಿಕ ವರ್ಷದಿಂದಲೇ ತರಗತಿ ಆರಂಭಿಸುವ ನಿಟ್ಟಿನಲ್ಲಿ ಲೋಕಾರ್ಪಣೆಗೊಳಿಸುವ ಜವಾಬ್ದಾರಿ ಶಾಸಕ ಸವದಿ ಹೆಗಲೇರಿದೆ.

‘ನಮ್ಮ ಕುಟುಂಬದಲ್ಲಿ ಮತ್ತೆ ಮಂತ್ರಿ’ ವಿಡಿಯೋ ವೈರಲ್‌: ಜಾರಕಿಹೊಳಿ ಕುಟುಂಬಕ್ಕೆ 2 ವರ್ಷದ ಬಳಿಕ ಮಂತ್ರಿಗಿರಿ

ನೆರೆ ಸಂತ್ರಸ್ತರಿಗೆ ಪುನರ್ವಸತಿ:

ಹಿಪ್ಪರಗಿ ಅಣೆಕಟ್ಟು ಹಿನ್ನೀರಿನಿಂದ ಮುಳುಗಡೆಯಾಗಿರುವ ಮತ್ತು 2005, 2018ರಲ್ಲಿ ಬಂದ ಕೃಷ್ಣಾ ನದಿ ಪ್ರವಾಹದಿಂದ 22 ಗ್ರಾಮಗಳ ಸಾವಿರಾರು ಕುಟುಂಬಗಳು ಸಂತ್ರಸ್ತರಾಗಿದ್ದು, ಸೂಕ್ತ ಪರಿಹಾರ ಹಾಗೂ ಪುನರ್ವಸತಿಗಾಗಿ ಇಂದಿಗೂ ಹೋರಾಟ ನಡೆಸುತ್ತಿದ್ದಾರೆ. ಕೆಲವು ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸಿದ್ದರೂ ಹಕ್ಕು ಪತ್ರ ನೀಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಕೆಲ ಫಲಾನುಭವಿಗಳಿಗೆ ಪರಿಹಾರವೇ ದೊರಕಿಲ್ಲ. ನೆರೆ ಸಂತ್ರಸ್ತರ ಬದುಕನ್ನು ಅರಿತು ಲಕ್ಷ್ಮಣ ಸವದಿ ಸ್ಪಂದಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ ಈ ನೆರೆ ಸಂತ್ರಸ್ತರು.

ಸವಳು-ಜವಳು ಸಮಸ್ಯೆಗೆ ಪರಿಹಾರ:

ಕೃಷ್ಣಾ ನದಿ ತೀರದ ರೈತರು, ಕಬ್ಬು ಬೆಳೆಗಾರರು ಸವಳು-ಜವಳು ಭೂಮಿ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಸರ್ಕಾರ ಮಟ್ಟದಲ್ಲಿ ಕೃಷಿ ತಜ್ಞ ವೈದ್ಯರ ಸಲಹೆ ಪಡೆದು ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ತರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಾಸಕರೂ ಒಬ್ಬ ಕಬ್ಬು ಬೆಳೆಗಾರರಾಗಿ ಯಾವ ರೀತಿ ಪರಿಹಾರ ರೂಪಿಸುತ್ತಾರೆ? ಎಂಬ ನಿರೀಕ್ಷೆಯಲ್ಲಿದ್ದಾರೆ ರೈತರು.

ನೀರಾವರಿ ಯೋಜನೆ ಅನುಷ್ಠಾನ:

ಅಥಣಿ ಕ್ಷೇತ್ರದಲ್ಲಿ ಕರಿ ಮಸೂತಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿದ್ದು, 22 ಕೆರೆಗಳಿಗೆ ನೀರು ತುಂಬಿಸುವುದು, ಅಲ್ಲಲ್ಲಿ ಹಳ್ಳಗಳಿಗೆ ಬ್ರಿಜ… ಕಮ… ಬಾಂಧಾರ ನಿರ್ಮಾಣ, ತಾಲೂಕಿನ 25 ಸಾವಿರ ಹೆಕ್ಟೇರ್‌ ಕೃಷಿ ಭೂಮಿಗೆ ನೀರುಣಿಸುವ .1485 ಕೋಟಿ ವೆಚ್ಚದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಟೆಂಡರ್‌ ಪ್ರಕ್ರಿಯ ತಾಂತ್ರಿಕ ದೋಷ ಸರಿಪಡಿಸಿ ಬರಪೀಡಿತ ಪ್ರದೇಶಗಳಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಬೇಕಿದೆ.

ಕೃಷಿ ಕಾಲೇಜು ಆರಂಭವಾಗಲಿ:

ಪಶು ವೈದ್ಯಕೀಯ ಮಹಾವಿದ್ಯಾಲಯದ ಜತೆ ಮಂಜೂರಾದ ಕೃಷಿ ಮಹಾವಿದ್ಯಾಲಯ ಕಾಮಗಾರಿಗೂ ಶೀಘ್ರ ಶಂಕುಸ್ಥಾಪನೆ ನೆರವೇರಿಸಿ ಕಟ್ಟಡ ಕಾಮಗಾರಿ ಆರಂಭವಾಗಲಿ. ಗಡಿ ಭಾಗದ ಅನೇಕ ಕನ್ನಡ ಶಾಲೆಗಳ ಸ್ಥಿತಿಗತಿ ಸುಧಾರಿಸಿ ಅಗತ್ಯ ಶಿಕ್ಷಕರ ಕೊರತೆ ನೀಗಿಸಬೇಕಾಗಿದೆ. ಇದರ ಜತೆಗೆ ಗ್ರಾಮೀಣ ಪ್ರದೇಶದ ಅನೇಕ ರಸ್ತೆಗಳನ್ನು ಸುಧಾರಣೆಗೊಳಿಸಲಿ ಎಂಬುದು ಕ್ಷೇತ್ರದ ಜನರ ಒತ್ತಾಸೆ.

ಕೃಷ್ಣಾದಿಂದ 4 ಟಿಎಂಸಿ ನೀರು ತರುವರೇ?

ಅಥಣಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿ ಇಲ್ಲದ್ದರಿಂದ ಜನತೆಗೆ ಶುದ್ಧ ಕುಡಿಯುವ ನೀರೇ ದೊರಕುತ್ತಿಲ್ಲ. ಕೇಂದ್ರದ ಮನೆ ಮನೆಗೆ ನಲ್ಲಿ ನೀರು ಯೋಜನೆಯೂ ಸಾಕಾರಗೊಂಡಿಲ್ಲ. ಪ್ರತಿ ವರ್ಷ ಬೇಸಿಗೆಯಲ್ಲಿ ಎದುರಾಗುವ ನೀರಿನ ಸಮಸ್ಯೆ ನೀಗಿಸಲು ನೆರೆಯ ಮಹಾರಾಷ್ಟ್ರ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಕೃಷ್ಣಾ ನದಿಗೆ 4 ಟಿಎಂಸಿ ನೀರು ಪಡೆದುಕೊಳ್ಳುವ ನಿರ್ಣಯವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ ರೂಪಿಸುವಲ್ಲಿ ಶಾಸಕರು ಮಹತ್ವದ ಪಾತ್ರ ವಹಿಸುವರೇ? ಕಾದು ನೋಡಬೇಕಿದೆ.

ಸವದತ್ತಿಯಲ್ಲೇಕೆ ಗೆಲ್ಲಲಿಲ್ಲ ಅನುಕಂಪದ ಅಲೆ?: ಕುಟುಂಬ ರಾಜಕಾರಣವೇ ಬಿಜೆಪಿಗೆ ಮುಳುವಾಯಿತೇ?

ಅಥಣಿ ಜನರ ನಿರೀಕ್ಷೆಗಳೇನು?

*ರಾಜ್ಯದಲ್ಲೇ ಮೊದಲ ಪುರಸಭೆ ಆಗಿರುವ ಅಥಣಿ ಪುರಸಭೆಯನ್ನು ಮೇಲ್ದರ್ಜೆಗೆ ಏರಿಸಿ ನಗರಸಭೆಯನ್ನಾಗಿ ಮಾಡಬೇಕು.
*ಅಥಣಿ ಪಟ್ಟಣದಲ್ಲಿ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶೀಘ್ರವೇ ಸರ್ಕಾರಿ ಪ್ರೌಢಶಾಲೆ ಸ್ಥಾಪನೆಯಾಗಬೇಕು.
*ಕೆರೆ ಅಭಿವೃದ್ಧಿ ಪ್ರಾಧಿಕಾರದ ನಿಯಮದಂತೆ ಐತಿಹಾಸಿಕ ಕೆರೆಗಳನ್ನು ಅಭಿವೃದ್ಧಿಪಡಿಸಿ ಅಥಣಿ ಸೌಂದರ್ಯವನ್ನು ಹೆಚ್ಚಿಸಬೇಕು.
*ಪಟ್ಟಣಕ್ಕೆ ನಿತ್ಯ ಕೂಲಿ ಕೆಲಸಕ್ಕೆ ಬರುವ ನೂರಾರು ಕಾರ್ಮಿಕರಿಗೆ ಉಪಹಾರ ಕಲ್ಪಿಸಲು ಇಂದಿರಾ ಕ್ಯಾಂಟೀನ್‌ ಸ್ಥಾಪಿಸಬೇಕು.
*ಟ್ರಾಫಿಕ್‌ ಕಿರಿಕಿರಿ ತಪ್ಪಿಸಲು ಪಾರ್ಕಿಂಗ್‌ ವ್ಯವಸ್ಥೆ, ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾ ಮತ್ತು ಗ್ನಲ್‌ಗಳನ್ನು ಅಳವಡಿಸಬೇಕು.
*ಸ್ಥಳೀಯ ಪೊಲೀಸ್‌ ಠಾಣೆಗೆ ಹೆಚ್ಚಿನ ಸಿಬ್ಬಂದಿ ಕಲ್ಪಿಸಬೇಕು ಮತ್ತು 5 ಸಕ್ಕರೆ ಕಾರ್ಖಾನೆ ಇರುವುದರಿಂದ ಗ್ರಾಮೀಣ ಠಾಣೆ ಸ್ಥಾಪಿಸಬೇಕು.
*ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಮೂಲ ಸೌಕರ್ಯ, ಮಹಿಳೆಯರು-ಮಕ್ಕಳ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್‌ಗಳನ್ನು ತೆರೆಯಬೇಕು.
*ಅಥಣಿ ಪಟ್ಟಣದ ಮಹಾತ್ಮ ಗಾಂಧಿ ಮಾರುಕಟ್ಟೆಯನ್ನು ವಿಜಯಪುರದ ಶಾಸ್ತ್ರೀಯ ಮಾರ್ಕೆಟ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು.

ಅಥಣಿ ಮತಕ್ಷೇತ್ರದ ಜನರು ನನ್ನ ಮೇಲೆ ಅನೇಕ ಭರವಸೆಗಳನ್ನು ಇಟ್ಟುಕೊಂಡಿದ್ದಾರೆ. ಮತಗಳ ರೂಪದಲ್ಲಿ ಅದನ್ನು ನಿರೂಪಿಸಿದ್ದಾರೆ. ಅಥಣಿ ಮತಕ್ಷೇತ್ರದಲ್ಲಿ ಒಂದೆಡೆ ನೆರೆ, ಮತ್ತೊಂದೆಡೆ ಬರ ಎದುರಿಸುವ ಜನರಿದ್ದಾರೆ. ಎಲ್ಲಾ ಜನರ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ನನೆಗುದಿಗೆ ಬಿದ್ದಿರುವ ಅನೇಕ ಕಾಮಗಾರಿಗಳನ್ನು ಪೂರ್ಣಗೊಳಿಸುವ ಯೋಗ ಈಗ ಒದಗಿ ಬಂದಿದೆ. ಕ್ಷೇತ್ರದ ಜನರ ಮತ್ತು ರೈತರ ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಅಂತ ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios