ಮಂಗಳೂರು (ಏ.06):   ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಮಾಜಿ ಸಚಿವ ಯು ಟಿ ಖಾದರ್ ಅಸಮಾಧಾನ ಹೊರಹಾಕಿದ್ದಾರೆ. 

ಮಂಗಳೂರಿನಲ್ಲಿಂದು ಮಾತನಾಡಿದ ಯು.ಟಿ ಖಾದರ್  ರಾತ್ರಿ ಮನೆಯಲ್ಲಿ ಮಲಗಲು ಹೆದರಿಕೆಯಾಗುತ್ತದೆ. ಜಿಲ್ಲೆಯಲ್ಲಿ ಅಲ್ಲಲ್ಲಿ ದರೋಡೆ ಪ್ರಕರಣಗಳು ಜಾಸ್ತಿಯಾಗುತ್ತಿದೆ. 
ನೈತಿಕ ಪೋಲಿಸ್ ಗಿರಿಗೆ ಅವಕಾಶ ಮಾಡಿಕೊಡಲಾಗಿದೆ.  ಪೊಲೀಸ್ ಕ್ರಮ ಕೈಗೊಂಡರೇ ಪೊಲೀಸರ ವಿರುದ್ಧವೇ ದೂರು ಕೊಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಲವ್ ಜಿಹಾದ್ ಬಗ್ಗೆ ಸರ್ಕಾರ ಕಾನೂನು ಮಾಡಲಿ. ಸರ್ಕಾರದ ಗೊಂದಲದ ನಿರ್ಧಾರಕ್ಕೆ ಕಾರ್ಯಕರ್ತರು ಹೊಡೆದಾಡಿಕೊಳ್ಳುತ್ತಾರೆ. ಕಾರ್ಯಕಾರಿಣಿ ಸಭೆಯಲ್ಲಿ ಲವ್ ಜಿಹಾದ್ ಕಾನೂನು ತರುತ್ತೇವೆ ಎಂದು ಹೇಳಿದರು.  ಆದರೆ ಗ್ರಾಮ ಪಂಚಾಯತ್ ಚುನಾವಣೆ ಮುಗಿದ ತಕ್ಷಣ ಆ ಬಗ್ಗೆ ಚಕಾರ ಎತ್ತುತ್ತಿಲ್ಲ.  ಸುದ್ದಿಗೋಷ್ಠಿ ನಡೆಸಿ ಬಹಿರಂಗ ಎಚ್ಚರಿಕೆ ನೀಡುವ ಬಗ್ಗೆ ಪೊಲೀಸರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ.  ಸರ್ಕಾರ ಮೊದಲು ಕಾನೂನು ತರಲಿ,ಕಾನೂನು ತರದಿದ್ದರೆ ಸರ್ಕಾರದ ವಿರುದ್ಧವೇ ಪ್ರತಿಭಟನೆ ಮಾಡಲಿ. ಧೈರ್ಯವಿದ್ದರೆ ಸರ್ಕಾರದ ವಿರುದ್ಧವೇ ಪ್ರತಿಭಟನೆ ಮಾಡಲಿ ಎಂದು ಸವಾಲು ಹಾಕಿದರು. 

ನಿಮಗೆ ಬಡವರ ಯೋಜನೆಗಳು ಮಾತ್ರ ಕಾಣೋದೇನ್ರಿ..? ಸರ್ಕಾರದ ನಡೆಗೆ ಖಾದರ್ ಆಕ್ರೋಶ ..

 ಪಬ್ ಜಿ ವಿಚಾರ :  ಮಂಗಳೂರಿನಲ್ಲಿ ಪಬ್ ಜೀ ಗೇಮ್ ನಿಂದ ಬಾಲಕನ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಖಾದರ್  ಕೇಂದ್ರ ಸರ್ಕಾರ ಪಬ್ ಜೀ ಸಂಪೂರ್ಣ ನಿಷೇಧಕ್ಕೆ ಕಾನೂನು ಮಾಡಬೇಕು.  ದೇಶದ ಮಾನವ ಸಂಪನ್ಮೂಲ ಶಿಥಿಲಗೊಳಿಸಲು ಪರೋಕ್ಷ ಯುದ್ಧ ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕಠಿಣ ಕಾನೂನು ಮಾಡಲೇಬೇಕು ಎಂದರು.

ವಿದ್ಯಾರ್ಥಿ ಸಮುದಾಯ ವಿಡಿಯೋ ಗೇಮ್ ನಿಂದ ಕ್ರೂರ ಮನಸ್ಥಿತಿ ಹೊಂದುತ್ತಿದ್ದಾರೆ. ನಾಲ್ಕು ಗೋಡೆ ನಡುವೆ ಮೊಬೈಲ್‌ನಲ್ಲೇ ತಲ್ಲೀನರಾಗುತ್ತಿದ್ದಾರೆ. ಕೆ ಸಿ ರೋಡ್ ನ ಘಟನೆಯಿಂದ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.  ಸರ್ಕಾರದ ಜೊತೆ ಶಾಲಾ-ಕಾಲೇಜು ಆಡಳಿತ ಮಂಡಳಿ,ಸಂಘ ಸಂಸ್ಥೆಗಳು ಜೊತೆಯಾಗಬೇಕು.  ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೌನ್ಸಿಲಿಂಗ್ ಮಾಡುವ ವ್ಯವಸ್ಥೆ ಮಾಡಲೇಬೇಕು ಎಂದು ಖಾದರ್ ಹೇಳಿದರು. 

ಸೈಬರ್ ಪ್ರಕರಣ ಸಂಬಂಧಿಸಿದಂತೆ ಜನಜಾಗೃತಿ ಮೂಡಿಸಬೇಕು. ಮಹಿಳಾ ಕಾಂಗ್ರೆಸ್ ಮುಖಾಂತರ ಪೇರೆಂಟಲ್ ಕೋಡ್ ಆಕ್ಷನ್ (Parental Code Action) ತರಬೇತಿ ಶಿಬಿರವನ್ನು ನಡೆಸಲಾಗುವುದು.  ಒಂದು ತಿಂಗಳ ಒಳಗೆ ತರಬೇತಿ ಶಿಬಿರ ಮಾಡುತ್ತೇವೆ. ಗ್ರಾಮ ಮಟ್ಟದಲ್ಲಿ ತರಬೇತಿ ಶಿಬಿರಗಳನ್ನು ಮಾಡುತ್ತೇವೆ. ತರಬೇತಿ ತಂತ್ರಜ್ಞರನ್ನು ಈಗಾಗಲೇ ಸಂಪರ್ಕಿಸಲಾಗಿದೆ ಎಂದು ಖಾದರ್ ಮಾಹಿತಿ ನೀಡಿದರು.

ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಚಿವ ಯು.ಟಿ.ಖಾದರ್ ಅಸಮಾಧಾನ :  'ಸಾರಿಗೆ ನೌಕರರ ಮೇಲೆ ದಬ್ಬಾಳಿಕೆ ನಡೆಸಿ ವೈರಿಗಳಂತೆ ನೋಡಬಾರದು' ಎಂದು ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಚಿವ ಯು.ಟಿ.ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.

 ಸರ್ಕಾರದ ಬಗ್ಗೆ ಸಾರಿಗೆ ನೌಕರರಿಗೆ ವಿಶ್ವಾಸ ಇಲ್ಲದಿರೋದೇ ಮುಷ್ಕರಕ್ಕೆ ಕಾರಣವಾಗಿದೆ. ನೌಕರರ ಜೊತೆ ಚರ್ಚಿಸಿ ಮುಷ್ಕರ ತಡೆಯೋದು ಸರ್ಕಾರದ ಜವಾಬ್ದಾರಿ. ಇಂಥ ಎಚ್ಚರಿಕೆ ಮತ್ತು ಕ್ರಮಗಳು ಹಿಟ್ಲರ್ ಕಾಲದಲ್ಲಿ ನಡೀತಿತ್ತು, ಪ್ರಜಾಪ್ರಭುತ್ವದಲ್ಲಿ ನಡೆಯಲ್ಲ.  ಆವತ್ತು ಪ್ರತಿಭಟನೆ ವೇಳೆ ಮಾತು ಕೊಟ್ಟಿದ್ರು, ಈಗ ಈಡೇರದ್ದಕ್ಕೆ ಪ್ರತಿಭಟಿಸ್ತಿದಾರೆ. ಈ ವಿಚಾರದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಾತನಾಡೋದಲ್ಲ, ಸಿಎಂ ಮಾತನಾಡಬೇಕು.  ಎಲ್ಲವೂ ಅಧಿಕಾರಿಗಳೇ ಮಾಡೋದಾದ್ರೆ ಸಿಎಂ ಮತ್ತು ಸರ್ಕಾರದ ವಿಚಾರ ಏನಿದೆ ಎಂದರು.

ಸಿಎಂ ಮತ್ತು ಸಾರಿಗೆ ಸಚಿವರು ಈ ಬಗ್ಗೆ ಉತ್ತರಿಸಲಿ. ಕೋಡಿಹಳ್ಳಿ ಚಂದ್ರಶೇಖರ್ ಸಮಾಜಕ್ಕೆ ಮಾರಕವಾಗುವಂಥ ಕೆಲಸ ಮಾಡಿಲ್ಲ. ನೌಕರರ ನೋವಿನ ಪರ ನಿಂತು ಹೋರಾಟಕ್ಕೆ ಇಳಿದಿದ್ದಾರೆ.  ಕೆಸ್ಸಾರ್ಟಿಸಿ ಮಾತ್ರವಲ್ಲ, ಎಲ್ಲಾ ವರ್ಗದ ಸರ್ಕಾರಿ ನೌಕರರು ಸಮಾಧಾನದಲ್ಲಿ ಇಲ್ಲ. ಸರ್ಕಾರ ನೀತಿ ಸಂಹಿತೆ ವಿಚಾರದ ಬದಲು ನೌಕರರ ಮನವೊಲಿಸಲಿ. 
ವೈರಿಗಳಂತೆ ನೋಡದೇ ಅವರ ಸಮಸ್ಯೆ ಬಗೆ ಹರಿಸಲಿ ಎಂದರು.