Asianet Suvarna News Asianet Suvarna News

ಮಾ.28ಕ್ಕೆ ಕಾಗಿಣಾ ಏತ ನೀರಾವರಿ ಯೋಜನೆಗೆ ಅಡಿಗಲ್ಲು, ಕಲಬುರಗಿಗೆ 802 ಹೊಸ ಬಸ್ ಖರೀದಿ

ಸೇಡಂ ತಾಲೂಕಿನ 160 ಕೋಟಿ ರೂ. ವೆಚ್ಚದ ಮೊದಲನೇ ಹಂತದ ಕಾಗಿಣಾ ಏತ ನೀರಾವರಿ ಯೋಜನೆ ಸೇರಿ ವಿವಿಧ ಯೋಜನೆಗಳಿಗೆ ಮಾ.28 ರಂದು ಶಂಕುಸ್ಥಾಪನೆ ನೆರೆವೇರಲಿದೆ.

Launches Kagina irrigation project on March 28th in kalaburagi gow
Author
First Published Mar 26, 2023, 5:11 PM IST

ಕಲಬುರಗಿ (ಮಾ.26): ಸೇಡಂ ತಾಲೂಕಿನ 160 ಕೋಟಿ ರೂ. ವೆಚ್ಚದ ಮೊದಲನೇ ಹಂತದ ಕಾಗಿಣಾ ಏತ ನೀರಾವರಿ ಯೋಜನೆ, 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸೇಡಂ ನೂತನ ಬಸ್ ನಿಲ್ದಾಣ, ಹೊಸ ಬಸ್‍ಗಳಿಗೆ ಚಾಲನೆ, ಕೆರೆಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಸುಮಾರು 1,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ವಿವಿಧ ಅಭಿವೃದ್ಧಿಗೆ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಮಾ.28 ರಂದು ಸೇಡಂ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕೆ.ಕೆ.ಆರ್.ಟಿ.ಸಿ. ಅಧ್ಯಕ್ಷ ಮತ್ತು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದ್ದಾರೆ.

ಕಲಬುರಗಿಯ ಕೆ.ಕೆ.ಆರ್.ಟಿ.ಸಿ. ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಗಿಣಾ ಏತ ನೀರಾವರಿ ಯೋಜನೆಯಿಂದ 40 ಹಳ್ಳಿಗಳ 75 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಲಿದೆ. 660 ಕೋಟಿ ರೂ. ಮೊತ್ತದ ಈ ಯೋಜನೆಗೆ ಮೊದಲನೇ ಹಂತವಾಗಿ 160 ಕೋಟಿ ರೂ. ಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದ ಅವರು, ಇದಲ್ಲದೆ ಸನ್ನತ್ತಿ ಬ್ಯಾರೇಜಿನಿಂದ 54 ಕೆರೆಗಳನ್ನು ತುಂಬಿಸುವ 592 ಕೋಟಿ ರೂ. ಮೊತ್ತ ಡಿ.ಪಿ.ಆರ್. ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಇದಲ್ಲದೆ 10 ಕೋಟಿ ರೂ. ವೆಚ್ಚದ ನೂತನ ಕಾರ್ಯಸೌಧ (ಮಿನಿ ವಿಧಾನ ಸೌಧ) ಸಹ ಉದ್ಘಾಟನೆಯಾಗಲಿದೆ. ಜೆ.ಜೆ.ಎಂ. (ಮನೆ ಮನೆಗೆ ಗಂಗೆ) ಯೋಜನೆಯಡಿ 193 ಕೋಟಿ ರೂ. ವೆಚ್ಚದ ಕಾಮಗಾರಿಗಳು ಮುಗಿದಿದ್ದು, ಇದಕ್ಕೆ ಅಂದು ಚಾಲನೆ ನೀಡಲಾಗುವುದು. ಹೊಸದಾಗಿ 120 ಕೋಟಿ ರೂ. ಮೊತ್ತದ 78 ಕಾಮಗಾರಿಗೆ ಶಂಕುಸ್ಥಾಪನೆ ಸಹ ನೆರವೇರಿಸಲಾಗುವುದು. 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ರಾಜ್ಯ ಹೆದಾರಿ ರಸ್ತೆ ಲೋಕಾರ್ಪಣೆ ಮತ್ತು 41 ಕೋಟಿ ರೂ. ವೆಚ್ಚದ ಹೊಸ ರಸ್ತೆಗೆ ಅಡಿಗಲ್ಲು ಹಾಕಲಾಗುವುದು. 81 ಕೋಟಿ ರೂ. ವೆಚ್ಚದಲ್ಲಿ ನಿರ್ಮಾನಗೊಂಡ ಬ್ಯಾರೇಜ್, 100 ಕೋಟಿ ರೂ. ವೆಚ್ಚದ 200 ಶಾಲಾ ಕೊಠಡಿ, 30 ಕೋಟಿ ರೂ. ವೆಚ್ಚದ ವಸತಿ ಶಾಲೆ ಲೋಕಾರ್ಪಣೆಯಾಗಲಿದೆ. ಒಟ್ಟಾರೆ ಸೇಡಂ ತಾಲೂಕಿನಲಿಲ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದರು.

ಕಾರ್ಯಕ್ರಮಕ್ಕೆ ಸಾರಿಗೆ ಸಚಿವ ಬಿ. ಶ್ರೀರಾಮುಲು, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಣ್ಣ ನೀರಾವರಿ ಮತ್ತು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಆಗಮಿಸಲಿದ್ದು, ಮುಖ್ಯಮಂತ್ರಿಗಳು ಸಹ ಬರುವ ಸಾಧ್ಯತೆ ಇದೆ ಎಂದರು.

ಬೆಳ್ಳಿ ಹಬ್ಬಕ್ಕೆ ಕೆ.ಕೆ.ಆರ್.ಟಿ.ಸಿ. ನಷ್ಟ ಮುಕ್ತ:
2025ರ ಹೊತ್ತಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳ್ಳಿ ಮಹೋತ್ಸವಕ್ಕೆ ಸಜ್ಜಾಗುತ್ತಿದ್ದು, ಆ ಹೊತ್ತಿಗೆ ಸಂಸ್ಥೆಯನ್ನು ನಷ್ಟ ಮುಕ್ತ ಸಂಸ್ಥೆಯನ್ನಾಗಿಸುವ ಗುರಿ ಹೊಂದಲಾಗಿದೆ. ಜಾಯಿಂಟ್ ವೆಂಚ್ಯೂರ್ ಮೂಲಕ ಸಂಸ್ಥೆಯ ಜಾಗದಲ್ಲಿ ಆರ್ಥಿಕ ಲಾಭ ಹೇಗೆ ಪಡೆಯಬೇಕು ಎಂಬುದಕ್ಕೆ ಗ್ಲೋಬಲ್ ಟೆಂಡರ್ ಕರೆಯಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದರು.

ಉತ್ತಮ ಕೆ.ಎಂ.ಪಿ.ಎಲ್. ಸಾಧನೆಗೆ ಸಂಸ್ಥೆಗೆ ಸತತ ಪ್ರಶಸ್ತಿ ಬಂದಿವೆ. ನೌಕರರ ನಿಧನದ ಸಂದರ್ಭದಲ್ಲಿ ಆಂತರಿಕ ಗುಂಪು ವಿಮೆ ತಯೋಜನೆಯಡಿ ನೀಡಲಾಗುತ್ತಿದ್ದ 3 ಲಕ್ಷ ರೂ. ಗಳಿಂದ 10 ಲಕ್ಷ ರೂ. ಗಳಿಗೆ ಪರಿಹಾರ ಹೆಚ್ಚಿಸಿದೆ. ಅಪಘಾತವಾದಲ್ಲಿ ಮರಣ ಹೊಂದಿದಲ್ಲಿ ನೌಕರರ ಅವಲಂಭಿತರಿಗೆ 50 ಲಕ್ಷ ರೂ. ವಿಮೆ ಪರಿಹಾರ ದೊರಕಿಸುವ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ನೌಕರರಲ್ಲಿ ಸಂಸ್ಥೆಯ ಬಗ್ಗೆ ಅಭಿಮಾನ ಮೂಡಿದ್ದು, ಮುಮದಿನ ದಿನದಲ್ಲಿ ಸಂಸ್ಥೆ ಇನ್ನು ಎತ್ತರಕ್ಕೆ ಬೆಳೆಯಲಿದೆ ಎಂದರು.

802 ಬಸ್ ಖರೀದಿ:
330 ಕೋಟಿ ರು. ವೆಚ್ಚದಲ್ಲಿ 802 ಬಸ್ ಖರೀದಿಸಲಾಗುತ್ತಿದೆ. ಸಾಂಕೇತಿಕವಾಗಿ ಮಾ.28ಕ್ಕೆ 20 ಬಸ್‍ಗಳಿಗೆ ಚಾಲನೆ ನೀಡಲಾಗುತ್ತಿದೆ. ಪ್ರಸ್ತುತ ಸಂಸ್ಥೆಯಲ್ಲಿ 4500 ಬಸ್‍ಗಳಿದ್ದು, 40 ಎ.ಸಿ. ಬಸ್ ಮತ್ತು 762 ಗ್ರಾಮೀಣ ಸಾರಿಗೆ ಸೇರಿದಂತೆ 802 ಬಸ್ ಹೊಸದಾಗಿ ಸೇರ್ಪಡೆಯಾಗಲಿವೆ. ಬಸ್ ಖರೀದಿಗೆ ಕೆ.ಕೆ.ಆರ್.ಡಿ.ಬಿ. 40 ಕೋಟಿ ರೂ. ನೀಡಲು ಒಪ್ಪಿಗೆ ಸೂಚಿಸಿದೆ. ಸಂಸ್ಥೆಯ ಪ್ರಗತಿಗೆ ರಾಜ್ಯ ಸರ್ಕಾರ 205 ಕೋಟಿ ರೂ. ವಿಶೇಷ ಅನುದಾನ ನೀಡಿದೆ. ಕೋವಿಡ್ ನಡುವೆಯೂ ನೌಕರರ ವೇತನ ಪಾವತಿಸಿದ್ದೇವೆ.

ಕಲಬುರಗಿ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ನಗರದ 4 ರಿಂಗ್ ರಸ್ತೆಯಲ್ಲಿ ಹೈಟೆಕ್ ಬಸ್ ನಿಲ್ಧಾಣ ನಿರ್ಮಿಸುವ ಚಿಂತನೆ ನಡೆದಿದ್ದು, ಈಗಾಗಲೆ ಸ್ಥಳ ಗುರುತಿಸಲಾಗಿದೆ. ಮುಂದಿನ 3 ವರ್ಷದಲ್ಲಿ ಹಳೆ ಬಸ್‍ಗಳನ್ನು ಗುಜರಿಗೆ ಹಾಕಿ 6,000 ಬಸ್ ಹೊಸದಾಗಿ ಖರೀದಿಸಿ ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ನೀಡುವ ಗುರಿ ಹೊಂದಿದ್ದೇವೆ. 1,850 ಸಿಬ್ಬಂದಿಗಳ ನೇಮಕಾತಿ ಪಾರದರ್ಶಕ ಮತ್ತು ಅಧುನಿಕ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದ್ದು, ಜೂನ್ ಅಂತ್ಯದ ವರೆಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಎಂ.ಡಿ. ಎಂ.ರಾಚಪ್ಪ ಇದ್ದರು.

Follow Us:
Download App:
  • android
  • ios