ಯೋಧರ ತರಬೇತಿಗೆ ಬಳಸುವ ಲಾಂಚರ್ ಬೊಮ್ಮಸಂದ್ರ ಅರಣ್ಯದಲ್ಲಿ ಪತ್ತೆ
ರಾಮನಗರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಕಾವೇರಿ ವನ್ಯಜೀವಿ ಧಾಮದ ಸಂಗಮ ವಲಯ ಅರಣ್ಯ ವ್ಯಾಪ್ತಿಯ ಬೊಮ್ಮಸಂದ್ರದಲ್ಲಿ ಆರು ಲಾಂಚರ್‌ಗಳು ಪತ್ತೆಯಾಗಿವೆ. ಇವುಗಳಲ್ಲಿ ಆರು ಸ್ಫೋಟಗೊಂಡಿದ್ದು, ಒಂದು ಸಜೀವವಾಗಿದೆ.
ಕನಕಪುರ (ರಾಮನಗರ)(ಮೇ 12): ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಕಾವೇರಿ ವನ್ಯಜೀವಿ ಧಾಮದ ಸಂಗಮ ವಲಯ ಅರಣ್ಯ ವ್ಯಾಪ್ತಿಯ ಬೊಮ್ಮಸಂದ್ರದಲ್ಲಿ ಆರು ಲಾಂಚರ್‌ಗಳು ಪತ್ತೆಯಾಗಿವೆ. ಇವುಗಳಲ್ಲಿ ಆರು ಸ್ಫೋಟಗೊಂಡಿದ್ದು, ಒಂದು ಸಜೀವವಾಗಿದೆ.
ಮಲ್ಟಿಪರ್ಪಸ್ ರಾಕೆಟ್ ಲಾಂಚರ್ ಇದಾಗಿದ್ದು, ಪ್ರತಿಯೊಂದು ಲಾಂಚರ್ ಮೂರು ಅಡಿ ಎತ್ತರ , ಎರಡು ಇಂಚು ಸುತ್ತಳತೆ ಉಳ್ಳ ಕಾಪರ್ ನಿಂದ ತಯಾರಿಸಿರುವ ಕೊಳವೆ ಆಕಾರದಲ್ಲಿವೆ. ಒಂದೊಂದು ಲಾಂಚರ್ ನ ಒಳಭಾಗದಲ್ಲಿ ಒಂದೂವರೆ ಅಡಿ ಎತ್ತರದ ಸಣ್ಣ ಸಣ್ಣ ಏಳು ರಾಕೆಟ್ ಗಳು ಇವೆ.
ಪ್ರಯೋಗಾಲಯಕ್ಕೆ ರವಾನೆ
ಪೊಲೀಸ್ ಅಧಿಕಾರಿಗಳು ಸ್ಫೋಟಕ ಪತ್ತೆ ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸ್ಫೋಟಗೊಂಡಿರುವ ಲಾಂಚರ್ ಗಳ ಅವಶೇಷಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದರು. ಆನಂತರ ಲಾಂಚರ್ ನ ಅವಶೇಷ ಹಾಗೂ ಸಜೀವ ಲಾಂಚರ್ ಅನ್ನು ಪರೀಕ್ಷೆಗಾಗಿ ಎಫ್ ಎಸ್ ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ಗೆ ಕಳುಹಿಸಿಕೊಟ್ಟಿದ್ದಾರೆ.
ಬೆಳಕಿಗೆ ಬಂದಿದ್ದು ಹೇಗೆ ?
ಬೊಮ್ಮಸಂದ್ರದ ಇಬ್ಬರು ಯುವ ಬೇಟೆಗಾರರು ಆರು ಲಾಂಚರ್‌ಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ. ಅವುಗಳನ್ನು ಖರೀದಿಸಲು ಮುಂದಾದ ವ್ಯಕ್ತಿ ಲಾಂಚರ್‌ನಲ್ಲಿ ಕಾಪರ್ , ಅಲ್ಯುಮಿನಿಯಂ ಅನ್ನು ಮಾತ್ರ ಕೊಳ್ಳುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
"
ಹಣದಾಸೆಗೆ ಇಬ್ಬರು ಬೇಟೆಗಾರರು ಕಳೆದ ಮೇ 7ರಂದು ಬೊಮ್ಮಸಂದ್ರದ ಅರಣ್ಯದಲ್ಲಿ ಲಾಂಚರ್ ನಲ್ಲಿರುವ ಕಾಪರ್ ಮತ್ತು ಅಲ್ಯುಮಿನಿಯಂ ಅನ್ನು ತೆಗೆಯಲು ಪ್ರಯತ್ನಿಸಿದರು ಪ್ರಯೋಜನವಾಗಲಿಲ್ಲ. ಆಗ ಐದು ಲಾಂಚರ್ ಗಳ ಮೇಲೆ ಸೌದೆ ಇಟ್ಟು ಬೆಂಕಿ ಹಚ್ಚಿದ್ದಾರೆ.
ಸಿಡಿದ ಲಾಂಚರ್‌ಗಳು
ಬೆಂಕಿಯ ಶಾಖಕ್ಕೆ ಐದು ಲಾಂಚರ್ ಗಳು ಸ್ಫೋಟಗೊಂಡು ಒಂದೂವರೆ ಅಡಿಯ ಏಳು ರಾಕೆಟ್‌ಗಳು ಆಗಸದತ್ತ ಚಿಮ್ಮಿ ಸುತ್ತಲ ಮನೆಗಳ ಮೇಲೆ ಬಿದ್ದಿವೆ. ಸ್ಫೋಟದಿಂದ ತೀವ್ರವಾದ ಶಬ್ದ್ಭ ಕೇಳಿಸಿತಲ್ಲದೆ, ಭೂಮಿ ಕಂಪಿಸಿ ಮನೆಗಳು ಅಲುಗಾಡಿವೆ. ಮನೆಯಲ್ಲಿದ್ದ ಜನರು ಆತಂಕದಿಂದ ಹೊರ ಓಡಿ ಬಂದಿದ್ದಾರೆ.
ಲಾಂಚರ್‌ಗಳು ಸ್ಫೋಟಗೊಂಡ ಮರು ದಿನವೇ ಗ್ರಾಮಕ್ಕೆ ಭೇಟಿ ನೀಡಿದ್ದ ಅರಣ್ಯ ಇಲಾಖೆಯ ಗಾರ್ಡ್ ಗೆ ಯುವಕರು ಒಂದು ಸಜೀವ ಲಾಂಚರ್ ಅನ್ನು ನೀಡಿದ್ದಾರೆ. ಆದರೆ, ಗಾರ್ಡ್ ಲಾಂಚರ್ ಗಳ ಸ್ಫೋಟ ಹಾಗೂ ಸಜೀವ ಲಾಂಚರ್ ದೊರೆತಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗಿದೆ.
ತಡವಾಗಿ ಬೆಳಕಿಗೆ ಬಂದ ಘಟನೆ
ಆನಂತರ ಸ್ಫೋಟಕ ವಿಚಾರವನ್ನು ಗ್ರಾಮಸ್ಥರು ಯಾರಿಗೂ ಹೇಳಿಲ್ಲ. ಈ ವಿಚಾರ ತಿಳಿದ ವನ್ಯಜೀವಿ ಪ್ರೇಮಿಯೊಬ್ಬರು ಮೇ 9ರಂದು ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ಮಾಡಿದಾಗ ಲಾಂಚರ್ ಗಳು ಸ್ಫೋಟವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಆನಂತರ ವನ್ಯಜೀವಿ ಪ್ರೇಮಿ ಗಮನ ಸೆಳೆದಾಗ ಮುಗ್ಗೂರು ವಲಯ ಆರ್‌ಎಫ್‌ಒ ವಿಜಯ ಮೂಡಬಾಗಿಲ, ಹಲಗೂರು ವಲಯ ಆರ್ ಎಫ್ ಒ ಕಿರಣ್ ಕುಮಾರ್ ಅವರು ಡಿಎಫ್ ಒ ಡಾ.ರಮೇಶ್ ಅವರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಲಾಂಚರ್ ಗಳು ಸ್ಫೋಟಗೊಂಡಿರುವುದು ಖಾತ್ರಿಯಾಗಿದೆ.
ಸ್ಥಳಕ್ಕೆ ತಜ್ಞರ ಭೇಟಿ:
ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ.ಶೆಟ್ಟಿಅವರ ಗಮನಕ್ಕೆ ತಂದಿದ್ದಾರೆ. ಆನಂತರ ಪೊಲೀಸರು ಸ್ಫೋಟಕ ಪತ್ತೆ ತಜ್ಞರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಫೋಟಗೊಂಡಿದ್ದ ಲಾಂಚರ್ ಗಳ ಅವಶೇಷಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದರು.
ಬೊಮ್ಮಸಂದ್ರ ಅರಣ್ಯದಲ್ಲಿ ಲಾಂಚರ್ ಗಳು ಸ್ಫೋಟಗೊಂಡಿರುವುದು ಸ್ಥಳೀಯರಲ್ಲಿ ಅಚ್ಛರಿ ಜತೆಗೆ ಆತಂಕವನ್ನೂ ತಂದೊಡ್ಡಿದೆ. ಪೊಲೀಸರು ಎಲ್ಲಾ ಕೊನಗಳಿಂದಲೂ ತನಿಖೆ ಆರಂಭಿಸಿದ್ದು, ಅನುಮಾನಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅನುಮಾನಕ್ಕೆ ಕಾರಣಗಳೇನು ?
ಭಾರತೀಯ ಭೂಸೇನೆಯ ಸೈನಿಕರಿಗೆ ತರಬೇತಿಯಲ್ಲಿ ಬಳಸುವ ಲಾಂಚರ್ ಮಾದರಿಯ ಸ್ಫೋಟಕಗಳು ಇದಾಗಿದ್ದು, ಸುಮಾರು 18 ವರ್ಷಗಳ ಹಿಂದಿನವು ಎನ್ನಲಾಗಿದೆ. ಕಾವೇರಿ ನದಿ ದಡದಲ್ಲಿರುವ ಮೇಕೆದಾಟು ಹಾಗೂ ಬೊಮ್ಮಸಂದ್ರ ಬಳಿಯ ಅರಣ್ಯ ಪ್ರದೇಶಗಳಲ್ಲಿ ಭೂಸೇನೆಯ ಸೈನಿಕರಿಗೆ ವರ್ಷದಲ್ಲಿ ಎರಡು ಬಾರಿ ತರಬೇತಿ ನೀಡಲಾಗುತ್ತಿತ್ತು. ಆ ಸಮಯದಲ್ಲಿ ಬಳಸುತ್ತಿದ್ದ ಲಾಂಚರ್ ಗಳು ಇದಾಗಿವೆ ಎಂಬುದು ಸ್ಥಳೀಯರ ಅಭಿಪ್ರಾಯ.
ಆದರೆ, 18 ವರ್ಷಗಳ ನಂತರ ಇಷ್ಟೊಂದು ಲಾಂಚರ್‌ಗಳು ಎಲ್ಲಿ, ಹೇಗೆ ಪತ್ತೆಯಾದವು. ಭೂಸೇನೆ ಸೈನಿಕರ ತರಬೇತಿಯಲ್ಲಿ ಲಾಂಚರ್ ಗಳನ್ನು ಬಳಸಿ ತರಬೇತಿ ನೀಡಿದ್ದೆಯಾದಲ್ಲಿ ಎಷ್ಟು ಲಾಂಚರ್ ಗಳನ್ನು ಸಿಡಿಸಲಾಯಿತು. ಎಷ್ಟುಉಳಿದವು ಎಂಬುದನ್ನು ಸಂಪೂರ್ಣ ಮಾಹಿತಿ ನೀಡಬೇಕು.
ದಕ್ಷಿಣ ಆಫ್ರಿಕಾದಿಂದ ಚೆನ್ನೈಗೆ ರೋಗಿ ಏರ್‌ಲಿಫ್ಟ್!
ಇನ್ನು ಕಾವೇರಿ ನದಿ ಪ್ರವಾಹದಲ್ಲಿ ಬೇರೆಡೆಯಿಂದ ತೇಲಿಕೊಂಡು ಬಂದಿದ್ದರೆ ಒಂದೇ ಕಡೆಯಲ್ಲಿ ಅಷ್ಟೊಂದು ಲಾಂಚರ್‌ಗಳು ದೊರೆಯಲು ಹೇಗೆ ಸಾಧ್ಯ. ಹಾಗೊಂದು ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಬಂದಿದ್ದರೆ ಅವುಗಳು ಇಷ್ಟೊತ್ತಿಗೆ ನಿರ್ಜಿವಗೊಳ್ಳುತ್ತಿದ್ದವು. ಇಷ್ಟುವರ್ಷಗಳ ಕಾಲ ಸಿಡಿಯದ ಅವುಗಳು ಈಗ ಹೇಗೆ ಸ್ಫೋಟಗೊಂಡವು ಎಂದು ಪ್ರಶ್ನೆ ಕಾಡುತ್ತಿದೆ.