Asianet Suvarna News Asianet Suvarna News

Davanagere News: ಮಿಟ್ಲಕಟ್ಟೆಯಲ್ಲಿ ತಡರಾತ್ರಿ ಮೋಜು-ಮಸ್ತಿ ಪಾರ್ಟಿ!

ತಡರಾತ್ರಿವರೆಗೂ ಅಕ್ರಮವಾಗಿ ಪಾರ್ಟಿ ಮಾಡಿ, ಕುಡಿದು ತೂರಾಡುತ್ತಿದ್ದ ಹೋಟೆಲ್‌ ಮೇಲೆ ಪೊಲೀಸರು ದಾಳಿ ನಡೆಸಿ, ಬಂದ್‌ ಮಾಡಿಸಿದ ಘಟನೆ ಹರಿಹರ ತಾಲೂಕು ಮಿಟ್ಲಕಟ್ಟೆಗ್ರಾಮದ ಬಳಿಯ ದಿ ಸ್ಟೇಜ್‌ ಹೋಟೆಲ್‌ನಲ್ಲಿ ಶನಿವಾರ ತಡರಾತ್ರಿ ನಡೆದಿದೆ.

Late Night Fun Masti Party in Mitlakatte at davanagere rav
Author
Bengaluru, First Published Aug 8, 2022, 10:07 AM IST

ದಾವಣಗೆರೆ (ಆ.8) : ತಡರಾತ್ರಿವರೆಗೂ ಅಕ್ರಮವಾಗಿ ಪಾರ್ಟಿ ಮಾಡಿ, ಕುಡಿದು ತೂರಾಡುತ್ತಿದ್ದ ಹೋಟೆಲ್‌ ಮೇಲೆ ಪೊಲೀಸರು ದಾಳಿ ನಡೆಸಿ, ಬಂದ್‌ ಮಾಡಿಸಿದ ಘಟನೆ ಹರಿಹರ ತಾಲೂಕು ಮಿಟ್ಲಕಟ್ಟೆಗ್ರಾಮದ ಬಳಿಯ ದಿ ಸ್ಟೇಜ್‌ ಹೋಟೆಲ್‌(The Stage Hotel)ನಲ್ಲಿ ಶನಿವಾರ ತಡರಾತ್ರಿ ವರದಿಯಾಗಿದೆ. ಹರಿಹರ(Harihar) ತಾ. ಮಿಟ್ಲಕಟ್ಟೆ(Mitlakatte)ಗ್ರಾಮದ ಬಳಿ ಹೋಟೆಲ್‌ನಲ್ಲಿ ಶನಿವಾರ ತಡರಾತ್ರಿ 2 ಗಂಟೆವರೆಗೂ ಕುಡಿತ, ಡ್ಯಾನ್ಸ್‌ನ ಪಾರ್ಟಿ(Drinks, Dance, Party) ಮುಂದುವರಿದಿತ್ತು. ಜಿಲ್ಲಾ ಕೇಂದ್ರದ ಪ್ರತಿಷ್ಠಿತ ಕಾಲೇಜು, ಸಂಸ್ಥೆಗಳಲ್ಲಿ ಓದುತ್ತಿರುವ ಅನ್ಯ ರಾಜ್ಯಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದು, ತಡರಾತ್ರಿವರೆಗೂ ಪಾರ್ಟಿ ಮುಂದುವರಿದಿತ್ತು. ಹೋಟೆಲ್‌ನಲ್ಲಿ ಯುವಕ-ಯುವತಿಯರು ಪಾರ್ಟಿ ಮಾಡಿ, ತೂರಾಡುತ್ತಿದ್ದ ವಿಚಾರ ಗೊತ್ತಾಗುತ್ತಿದ್ದಂತೆಯೇ ಕೆಎಸ್‌ಆರ್‌ ಪಕ್ಷದ ಕಾರ್ಯಕರ್ತರು ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ, ಹೋಟೆಲ್‌ ಬಂದ್‌ ಮಾಡಿಸಿದ್ದಾರೆ.

Davanagere; ಅಧಿಕಾರಿಗಳ ದಾಳಿ, ಕಾಳಸಂತೆಗೆ ಮಾರಾಲು ಇಟ್ಟಿದ್ದ ಅಕ್ರಮ ಪಡಿತರ ಪತ್ತೆ!

ಹೋಟೆಲ್‌ನವರಿಗೂ ಎಚ್ಚರಿಕೆ: ಊರು ಶಾಂತವಾಗಿ ಮಲಗಲು ಬಿಡದಂತೆ ಹೋಟೆಲ್‌ನಲ್ಲಿ ಡಿಜೆ ಸಿಸ್ಟಂನಲ್ಲಿ ಹಾಡುಗಳನ್ನು ಹಾಕಿ, ಕೇಕೆ ಹೊಡೆಯುತ್ತಿದ್ದ ಪಾನಮತ್ತ ಯುವಕ-ಯುವತಿಯರ ವರ್ತನೆ ಕಂಡು ಕೆಆರ್‌ಎಸ್‌ ಪಕ್ಷದವರೂ ಒಂದು ಕ್ಷಣ ಅವಕ್ಕಾದರು. ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಒಳಗೆ ಮದ್ಯಪಾನ ಮಾಡಿ, ಕುಣಿದು ಕುಪ್ಪಳಿಸುತ್ತಿದ್ದ ಯುವಕ-ಯುವತಿಯರಿಗೆ ಬುದ್ಧಿ ಹೇಳಿ ಹೊರಗೆ ಕಳಿಸಿದರು. ನಂತರ ಹೋಟೆಲ್‌ನವರಿಗೂ ಎಚ್ಚರಿಸಿದರು. ಇತ್ತ ಪೊಲೀಸರು ದಾಳಿ ಮಾಡುತ್ತಿದ್ದಂತೆಯೇ ಹೋಟೆಲ್‌ನಲ್ಲಿ ಕುಣಿದು, ಕುಪ್ಪಳಿಸುತ್ತಿದ್ದ ಯುವಕ-ಯುವತಿಯರು ತಾವು ತಂದಿದ್ದ ದ್ವಿಚಕ್ರ ವಾಹನದಲ್ಲಿ 3-4 ಜನ ಕುಳಿತು ಹೊರಟರೆ, ಮತ್ತೆ ಕೆಲವು ಯುವತಿಯರು ತಮ್ಮ ಕಾರುಗಳನ್ನೇರಿ ಹಾಸ್ಟೆಲ್‌, ರೂಂಗಳ ಕಡೆಗೆ ಸಾಗಿದರು. ಈ ಎಲ್ಲಾ ದೃಶ್ಯಗಳೂ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿವೆ.

ಗ್ರಾಮಸ್ಥರು ನೆಮ್ಮದಿಯಿಲ್ಲ: ಪ್ರತಿ ಸಲವೂ ಮಿಟ್ಲಕಟ್ಟೆಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇಂತಹದ್ದೇ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದಲೂ ಕೃಷಿ ನಂಬಿಕೊಂಡು ಬಾಳುತ್ತಿದ್ದ ಆ ಭಾಗದ ರೈತರು, ಗ್ರಾಮಸ್ಥರು ಒಂದೊಂದಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ತಲೆ ಎತ್ತಿದ್ದರಿಂದ ತಮ್ಮ ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ಸರ್ಕಾರಿ ರಜೆ, ವಾರಾಂತ್ಯದ ದಿನಗಳಲ್ಲಿ, ಭಾನುವಾರ ಇಂತಹ ಪಾರ್ಟಿ, ಡಿಜೆ ಸಿಸ್ಟಂನ ಅಬ್ಬರದಿಂದ ಗ್ರಾಮಸ್ಥರು ನೆಮ್ಮದಿ ಕಳೆದುಕೊಂಡಿದ್ದಾರೆ.

ಪೊಲೀಸರು ಹೋಟೆಲ್‌ ಮೇಲೆ ದಾಳಿ ಮಾಡುತ್ತಿದ್ದಂತೆಯೇ ಯುವಕ-ಯುವತಿಯರು ಗುಂಪು ಗುಂಪಾಗಿ ತಲೆ ತಗ್ಗಿಸಿಕೊಂಡು, ಮುಖ ಮುಚ್ಚಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪ್ರತಿ ಶನಿವಾರದಂದು ಅಕ್ರಮವಾಗಿ ಪಾರ್ಟಿ ಆಯೋಜಿಸುತ್ತಿರುವ ಹೊಟೆಲ್‌ನವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆಗೆ ಬಂದ ಉಡುಪಿಯ ಹುಲಿಯಾ

ವೀಕೆಂಡ್‌ ಪಾರ್ಟಿ ಸಂಸ್ಕೃತಿಗೆ ಕಡಿವಾಣಬೇಕಿದೆ : ದಾವಣಗೆರೆ: ವಾರಾಂತ್ಯದ ಪಾರ್ಟಿ ಹೆಸರಿನಲ್ಲಿ ದಾವಣಗೆರೆ-ಮಿಟ್ಲಕಟ್ಟೆಗ್ರಾಮಕ್ಕೆ ಹಾದು ಹೋಗುವ ರಸ್ತೆಗಳಲ್ಲಿ ಇರುವ ಹೋಟೆಲ್‌ಗಳಲ್ಲಿ ಕುಡಿತ, ನೃತ್ಯದ ಆಯೋಜನೆ ಹೆಚ್ಚುತ್ತಿದ್ದು, ರಾಜಧಾನಿಯ ಕೆಟ್ಟಸಂಸ್ಕೃತಿಯು ಜಿಲ್ಲಾ ಕೇಂದ್ರಕ್ಕೂ ವ್ಯಾಪಿಸಿದೆಯೇ ಎಂಬ ಆತಂಕವು ಸಹಜವಾಗಿಯೇ ಜನರಲ್ಲಿ ಮನೆ ಮಾಡಿದೆ. ರಾಜ್ಯದ ವಿವಿಧೆ, ವಿವಿಧ ರಾಜ್ಯಗಳಿಂದ ವೈದ್ಯಕೀಯ, ಇಂಜಿನಿಯರ್‌ ಹೀಗೆ ಶಿಕ್ಷಣ ಪಡೆಯಲು ಬಂದಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೀಗೆ ವಾರಾಂತ್ಯದ ಪಾರ್ಟಿ ಹೆಸರಿನಲ್ಲಿ ಊರಿಗೆ ಕಪ್ಪು ಚುಕ್ಕೆ ತರುವ ಕೆಲಸಕ್ಕೆ ಕಾರಣವಾಗುತ್ತಿದ್ದಾರೆ. ಇಂತಹ ವೀಕೆಂಡ್‌ ಪಾರ್ಟಿಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆ ಕಡಿವಾಣ ಹಾಕಬೇಕಿದೆ. ಈ ಬಗ್ಗೆ ಯಾವುದೇ ಕಾರಣಕ್ಕೂ ಉದಾಸೀನ ಬೇಡ ಎಂಬುದಾಗಿ ಸ್ಥಳೀಯ ಪಾಲಕರೂ ಇಲಾಖೆಗಳಿಗೆ ಒತ್ತಾಯಿಸುತ್ತಿದ್ದಾರೆ.

Follow Us:
Download App:
  • android
  • ios