ಮಲೆನಾಡಿನಲ್ಲಿ ಮಳೆ: ಗುಡ್ಡ ಜರಿದು ವ್ಯಾಪಕ ಹಾನಿ
ಮಲೆನಾಡಿನಲ್ಲಿ ಮಳೆ ಮುಂದುವರಿದಿದ್ದು, ಗುಡ್ಡ ಜರಿದು 2 ಎಕರೆ ಕಾಫಿ ತೋಟ ಹಾನಿಯಾಗಿದೆ. ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದ ತತ್ತರಿಸಿ ಮೂಡಿಗೆರೆ ತಾಲೂಕಿನಲ್ಲಿ ಮತ್ತೆ ಮಳೆ ಮುಂದುವರಿದು ಅಲ್ಲಲ್ಲಿ ಗುಡ್ಡ ಜರಿಯುವುದು, ಭೂ ಕುಸಿತ ಉಂಟಾಗುತ್ತಿರುವುದು ಆತಂಕ ಮೂಡಿಸಿದೆ.
ಚಿಕ್ಕಮಗಳೂರು(ಸೆ.09): ಜಿಲ್ಲೆಯ ಮಲೆನಾಡಿನಲ್ಲಿ ಭಾನುವಾರವೂ ಮಳೆ ಮುಂದುವರಿದಿದ್ದು, ಮೂಡಿಗೆರೆ ತಾಲೂಕಿನ ಹನುಮನಹಳ್ಳಿ ಬಳಿ ಗುಡ್ಡ ಜರಿದು ಸುಮಾರು 2 ಎಕರೆ ಕಾಫಿ ತೋಟಕ್ಕೆ ಹಾನಿ ಸಂಭವಿಸಿದೆ.
ಕಾಫಿ ತೋಟಕ್ಕೆ ಕುಸಿದ ಗುಡ್ಡ:
ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದ ತತ್ತರಿಸಿ ಮೂಡಿಗೆರೆ ತಾಲೂಕಿನಲ್ಲಿ ಮತ್ತೆ ಮಳೆ ಮುಂದುವರಿದು ಅಲ್ಲಲ್ಲಿ ಗುಡ್ಡ ಜರಿಯುವುದು, ಭೂ ಕುಸಿತ ಉಂಟಾಗುತ್ತಿರುವುದು ಆತಂಕ ಮೂಡಿಸಿದೆ. ಶನಿವಾರ ಸಂಜೆ ಹನುಮನಹಳ್ಳಿ ಬಳಿ ತಾರಾನಾಥ್ ಎಂಬುವವರಿಗೆ ಸೇರಿದ ಕಾಫಿ ತೋಟದ ಮೇಲೆ ಗುಡ್ಡದ ಮಣ್ಣು ಜರಿದುಕೊಂಡಿದೆ.
ಮಳೆ ಕಡಿಮೆಯಾದ್ರೂ, ಪ್ರವಾಹ ಹೆಚ್ಚಳ:
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಾಳೂರು, ಗೋಣಿಬೀಡು, ಚಾರ್ಮಾಡಿ ಘಾಟ್ ಭಾಗದಲ್ಲಿ ಮಳೆಯ ಪ್ರಮಾಣ ಇಳಿಮುಖವಾಗಿದ್ದು, ಹಿರೇಬೈಲು, ಕುದುರೆಮುಖ, ಕಳಸ ಸುತ್ತಮುತ್ತ ಮಳೆ ಹೆಚ್ಚಾಗಿತ್ತು. ಭದ್ರಾ ನದಿ ತುಂಬಿ ಹರಿಯುತ್ತಿದ್ದು, ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳ್ ಸೇತುವೆಯ ಮೇಲ್ಮಟ್ಟದವರೆಗೆ ನೀರು ಬಂದಿತ್ತು. ನದಿ ಪಾತ್ರದಲ್ಲಿ ಮಳೆ ಮುಂದುವರಿದಿದ್ದರಿಂದ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ.
ಶೃಂಗೇರಿಯಲ್ಲಿ ಗಾಳಿ ಮಳೆ:
ಶೃಂಗೇರಿ ತಾಲೂಕಿನಾದ್ಯಂತ ಗಾಳಿ ಬಲವಾಗಿ ಬೀಸುತ್ತಿದ್ದು, ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಜನ ಜೀವನಕ್ಕೆ ತುಂಬಾ ತೊಂದರೆಯಾಗಿದೆ. ಈ ಭಾಗದಲ್ಲಿ ಹರಿಯುತ್ತಿರುವ ತುಂಗಾ ನದಿಯ ನೀರಿನ ಮಟ್ಟಸಹಜ ಸ್ಥಿತಿಯಲ್ಲಿದೆ. ಕೊಪ್ಪ ತಾಲೂಕಿನಲ್ಲಿ ಭಾನುವಾರ ಮಳೆ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿತ್ತು. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣದ ಜತೆಗೆ ಆಗಾಗ ತುಂತುರು ಮಳೆ ಬಂದು ಹೋಗುತ್ತಿತ್ತು.
ಮಲೆನಾಡಿನಲ್ಲಿ ಮಳೆ: ಜನಜೀವನ ಅಸ್ತವ್ಯಸ್ತ
ಎನ್.ಆರ್.ಪುರ ಹಾಗೂ ಚಿಕ್ಕಮಗಳೂರು ತಾಲೂಕುಗಳಲ್ಲಿ ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದರೆ ಮಳೆ ಇಳಿಮುಖವಾಗಿತ್ತು. ಹೆಚ್ಚಿನ ಸಮಯ ಬಿಸಿಲಿನ ವಾತಾವರಣ ಇತ್ತು. ಕಡೂರು ಹಾಗೂ ತರೀಕೆರೆ ತಾಲೂಕುಗಳಲ್ಲಿ ಬೆಳಿಗ್ಗೆಯಿಂದ ತುಂತುರು ಮಳೆ ಆಗಾಗ ಬಿಸಿಲಿನ ವಾತಾವರಣ ಇತ್ತು.
ಇಡೀ ದೇಶದ ಭಾವನೆ ಹಿಡಿದಿಟ್ಟ ಕನ್ನಡಿಗ ಬರೆದ ಕಾರ್ಟೂನ್ ಎಲ್ಲೆಡೆ ವೈರಲ್!