ಕೊಡಗು ಜಿಲ್ಲೆಯಲ್ಲಿ ತಗ್ಗಿದ ಮಳೆ ಅಬ್ಬರ ನಿಲ್ಲದ ಅವಾಂತರ: ಭೂಕುಸಿತದ ಆತಂಕ, ಗಾಜಿನ ಸೇತುವೆ ಬಂದ್
ಕೊಡಗು ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಕಾವೇರಿ ನದಿ ಭೋರ್ಗರೆದು ಹರಿಯುತ್ತಿದೆ. ಶುಕ್ರವಾರ ಜಿಲ್ಲೆಯಲ್ಲಿ ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದರೂ ಕಾವೇರಿ ನದಿ ಮಾತ್ರ ಎಲ್ಲೆ ಮೀರಿ ಹರಿಯುತ್ತಿದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜೂ.28): ಕೊಡಗು ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಕಾವೇರಿ ನದಿ ಭೋರ್ಗರೆದು ಹರಿಯುತ್ತಿದೆ. ಶುಕ್ರವಾರ ಜಿಲ್ಲೆಯಲ್ಲಿ ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದರೂ ಕಾವೇರಿ ನದಿ ಮಾತ್ರ ಎಲ್ಲೆ ಮೀರಿ ಹರಿಯುತ್ತಿದೆ. ಪರಿಣಾಮವಾಗಿ ಮಡಿಕೇರಿ ತಾಲ್ಲೂಕಿನ ಮೂರ್ನಾಡು ಸಮೀಪದಲ್ಲಿ ಬಲಮುರಿಯಲ್ಲಿ ಕಾವೇರಿ ನದಿ ಎಲ್ಲೆ ಮೀರಿ ಹರಿಯುತ್ತಿದ್ದು ಇಲ್ಲಿನ ಪಾರಾಣೆ, ಕಡಂಗ ಹಾಗೂ ಚೆಯ್ಯಂಡಾಣೆಗಳಿಗೆ ಸಂಪರ್ಕ ಕಲ್ಪಿಸುವ ಕೆಳಸೇತುವೆ ಮುಳುಗಡೆಯಾಗಿದೆ. ಕೆಳಸೇತುವೆ ಮೇಲ್ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ನದಿ ನೀರು ನುಗ್ಗುತ್ತಿದ್ದು ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
ಈ ಸೇತುವೆ ಮೇಲಿನಿಂದ ಸಂಚರಿಸಿದರೆ ಮೂರ್ನಾಡಿನಿಂದ ಕಣ್ವಬಲಮುರಿ ಹಾಗೂ ಕಡಂಗ, ಪಾರಾಣೆಗಳಿಗೆ ಕೇವಲ ಎರಡು ಕಿಲೋ ಮೀಟರ್ ನಲ್ಲಿಯೇ ಗ್ರಾಮಗಳ ಸೇರಬಹುದು. ಆದರೆ ಪಕ್ಕದಲ್ಲಿಯೇ ಇರುವ ಮೇಲ್ಸೇತುವೆ ಮೂಲಕ ಸಂಚರಿಸಿದರೆ ಬರೋಬ್ಬರಿ 8 ಕಿಲೋ ಮೀಟರ್ ಸುತ್ತಿ ಬರಬೇಕು. ಹೀಗಾಗಿ ಎಲ್ಲಾ ವಾಹನಗಳ ಸವಾರರು ಮೇಲ್ಸೇತುವೆ ಬಳಸಿ ಓಡಾಡುತ್ತಿದ್ದಾರೆ. ಅಕ್ಕಪಕ್ಕದಲ್ಲಿಯೇ ಇರುವ ಕೆಲವು ಮನೆಗಳು, ಬಲಮುರಿಯಲ್ಲಿ ಇರುವ ದೇವಾಲಯವೂ ಕಾವೇರಿ ನೀರಿನಿಂದ ಆವೃತವಾಗುವ ಸ್ಥಿತಿ ಎದುರಾಗಿದೆ. ಸದ್ಯ ಮಳೆ ಕಡಿಮೆ ಆಗಿರುವುದರಿಂದ ಕಾವೇರಿ ನೀರಿನ ಅರಿವು ಕಡಿಮೆ ಆಗುವ ನಿರೀಕ್ಷೆ ಇದೆ.
ಕಾವೇರಿ ನದಿ ನೀರು ತಗ್ಗು ಪ್ರದೇಶಗಳಿಗೂ ನುಗ್ಗುತ್ತಿದ್ದು ಆ ನೀರಿನ ಕೆಲವು ವಾಹನಗಳ ಮಾಲೀಕರು ತಮ್ಮ ವಾಹನಗಳ ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಕಾವೇರಿ ನದಿ ಎಲ್ಲೆಮೀರಿ ಹರಿಯುತ್ತಿರುವುದರಿಂದ ಜನರು ಅದನ್ನು ನೋಡುವುದಕ್ಕೂ ನದಿ ತಟಕ್ಕೆ ಬರುತ್ತಿರುವ ದೃಶ್ಯಗಳು ಕಾಣುತ್ತಿವೆ. ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರನ್ನು ಸೆಳೆಯುತ್ತಿದ್ದ ಕರ್ನಾಟಕದ ಮೊದಲ ಅತೀ ದೊಡ್ಡ ಗಾಜಿನ ಸೇತುವೆ ಕುಸಿದು ಬೀಳುವ ಆತಂಕ ಎದುರಾಗಿದೆ.
ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕೆ. ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಅತೀ ಉದ್ದ ಮತ್ತು ಎತ್ತರದ ಗಾಜಿನ ಸೇತುವೆ ಪಿಲ್ಲರ್ ಬಳಿಗಳಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತವಾಗಿದೆ. ತುಂಬಾ ಕಡಿದಾದ ಇಳಿಜಾರು ಪ್ರದೇಶದಲ್ಲಿ ಗಾಜಿನ ಸೇತುವೆ ಮಾಡಿರುವುದರಿಂದ ಭೂಕುಸಿತವಾಗುವುದಕ್ಕೆ ಕಾರಣವಾಗಿರಬಹುದು. ಗಾಜಿನ ಸೇತುವೆ ಕುಸಿಯುವ ಆತಂಕ ಎದುರಾಗಿರುವುದಿರಂದ ಸದ್ಯ ಪ್ರವಾಸಿಗರ ವೀಕ್ಷಷಣೆಗೆ ಅವಕಾಶ ಇಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಮಡಿಕೇರಿ ತಹಶೀಲ್ದಾರ್ ಮೂಲಕ ಗಾಜಿನ ಸೇತುವೆಗೆ ಬೀಗ ಹಾಕಿಸಿ ಬಂದ್ ಮಾಡಿಸಿದೆ.
ಸಿಎಂ ಸಿದ್ದರಾಮಯ್ಯ ಕೈಕಟ್ಟಿ ಹಾಕುವ ಕೆಲಸ ನಡೆಯುತ್ತಿದೆ: ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದೇನು?
ಆದರೆ ಗಾಜಿನ ಸೇತುವೆ ಮಾಲೀಕರಲ್ಲಿ ಒಬ್ಬರಾದ ದೇವಯ್ಯ ಅವರು ಸುವರ್ಣ ನ್ಯೂಸ್ಗೆ ಪ್ರತಿಕ್ರಿಯಿಸಿದ್ದ ಇಲ್ಲಿ ಯಾವುದೇ ಭೂಕುಸಿತವಾಗಿಲ್ಲ. ಕಾಮಗಾರಿ ಮಾಡುವ ವೇಳೆ ತೆಗೆದಿದ್ದ ಮಣ್ಣು ಜಾರಿದೆ. ಕಳೆದ ಎರಡು ದಿನಗಳ ಹಿಂದೆ ಒಂದೇ ದಿನದಲ್ಲಿ 6 ಇಂಚು ಮಳೆ ಸುರಿದಿದೆ. ಅದರ ಪರಿಣಾಮವಾಗಿ ಮಣ್ಣು ಜಾರಿ ಹೋಗಿದೆ ಅಷ್ಟೇ. ಇದರಿಂದ ಗಾಜಿನ ಸೇತುವೆಗೆ ಯಾವುದೇ ತೊಂದರೆ ಆಗಿಲ್ಲ. ಪ್ರವಾಸಿಗರ ಹಿತದೃಷಿಯಿಂದ ಜಿಲ್ಲಾಡಳಿತ ಸದ್ಯ ಗಾಜಿನ ಸೇತುವೆಯನ್ನು ಬಂದ್ ಮಾಡಲು ಸೂಚಿಸಿತ್ತು. ಹೀಗಾಗಿ ಬಂದ್ ಮಾಡಲಾಗಿದೆ ಎಂದಿದ್ದಾರೆ.