ಅರಸೀಕೆರೆ[ನ.28]:  ನಗರದಲ್ಲಿ ಸಕ್ರಿಯವಾಗಿರುವ ಭೂ ಮಾಫಿಯಾ ಹಾಗೂ ನಗರಸಭೆ ಅಧಿಕಾರಿಗಳ ಕೈವಾಡದಿಂದಾಗಿ ಕಾಳನಕೊಪ್ಪಲು ರೈಲ್ವೆ ಮೇಲ್ಸೇತುವೆಗೆ ಹೊಂದಿಕೊಂಡಂತೆ ಬಿ.ಎಚ್‌.ರಸ್ತೆವರೆಗಿನ ರಾಜಕಾಲುವೆ (ಪುರಾತನ ಹಳ್ಳ) ಒತ್ತುವರಿಯಾಗಿದೆ ಎನ್ನುವ ಗಂಭೀರ ಆರೋಪ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ನಾಗರಿಕರಿಂದ ವ್ಯಕ್ತವಾಗಿದೆ.

ಇದಕ್ಕೆ ಪೂರಕ ಎನ್ನುವಂತೆ ತಾಲೂಕು ಆಡಳಿತ ಹಾಗೂ ನಗರಸಭೆ ಅಧಿಕಾರಿಗಳು ರಾಜಕಾಲುವೆಯ ಜಂಟಿ ಸರ್ವೆ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಇದರಿಂದಾಗಿ ನಿಯಮ ಪಾಲಿಸದೆ ಹೊಸ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದವರು ಹಾಗೂ ಮನೆ ಕಟ್ಟಿಕೊಂಡಿರುವ ಮಾಲಿಕರಲ್ಲಿ ಆತಂಕ ಮನೆ ಮಾಡಿಕೊಂಡಿದ್ದು ಒತ್ತುವರಿ ತೆರವು ಭೀತಿಗೆ ಸಿಲುಕಿದ್ದಾರೆ.

ಬಿಸಿ ತುಪ್ಪ: ಇತ್ತೀಚೆಗೆ ಸುರಿದ ಭಾರೀ ಮಳೆಗೆ ಕಾಳನಕೊಪ್ಪಲು ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ನೀರು ರೈಲ್ವೆ ಮೇಲ್ಸೇತುವೆ ಬಳಿಯಿರುವ ಹಲವು ನಿವೇಶನ ಹಾಗೂ ಮನೆಗಳಿಗೆ ನುಗ್ಗಿ ಆವಂತರ ಸೃಷ್ಟಿಸಿತ್ತು. ಇದರಿಂದ ಅಸಮಾಧಾನಗೊಂಡ ಕನ್ನಡಪರ ಸಂಘಟನೆಗಳ ಮುಖಂಡರು ಅವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೇ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾಗಿರುವ ಕಂದಾಯ ಹಾಗೂ ನಗರಸಭಾ ಅಧಿಕಾರಿಗಳು ರಾಜಕಾಲುವೆಯ ಗಡಿ ಗುರುತಿಸಲು ಮುಂದಾಗಿರುವುದು ರಾಜ ಕಾಲುವೆ (ಹಳ್ಳ) ಒತ್ತುವರಿ ಮಾಡಿರುವ ಕೆಲ ಉದ್ಯಮಿಗಳು, ರಾಜಕಾರಣಿಗಳು ಹಾಗೂ ರಿಯಲ್‌ ಎಸ್ಟೇಟ್‌ ಕುಳಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಅಡಕತ್ತರಿ-ಲಭ್ಯವಿರುವ ಮಾಹಿತಿ ಅನುಸಾರ ಸುಮಾರು 16ರಿಂದ 20 ಅಡಿಗಳಷ್ಟುಅಗಲ ಹಾಗೂ 2 ಕಿ.ಮೀ ಉದ್ದದ ರಾಜಕಾಲುವೆ ಭೂ ಮಾಫಿಯಾ, ನಗರಸಭೆ ಅಧಿಕಾರಿಗಳು ಹಾಗೂ ಕೆಲ ಕಾಣದ ಕೈಗಳ ಕೈವಾಡದಿಂದಾಗಿ ಕೇವಲ ಮೂರ್ನಾಲ್ಕು ಅಡಿಗೆ ಸೀಮಿತಗೊಂಡಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದರಿಂದಾಗಿ ಕಾಳನಕೊಪ್ಪಲು ಕೆರೆ ಕೋಡಿ ಬಿದ್ದರೆ ನೀರು ಸರಾಗವಾಗಿ ಹರಿದು ಬಿ.ಎಚ್‌.ರಸ್ತೆ ಬದಿಗೆ ಹೊಂದಿಕೊಂಡಂತಿರುವ ಮೋರಿಯ ಕೆಳಭಾಗದ ಮೂಲಕ ತಿಮ್ಮಪ್ಪನಾಯ್ಕನ ಕೆರೆ ಸೇರಲು ಸಾಧ್ಯವಾಗದೇ ಇನ್ನಿಲ್ಲದ ಆವಾಂತರ ಸೃಷ್ಟಿಯಾಗುತ್ತಿದೆ. ವಾಸ್ತವ ಅರಿಯದ ಕೆಲವರು ಸಿಕ್ಕಿದ್ದೇ ಸೀರುಂಡೆ ಎನ್ನುವಂತೆ ಪೂರ್ವಾಪರ ಯೋಚಿಸದೇ ಲಕ್ಷಾಂತರ ಹಣ ಸುರಿದು ನಿವೇಶನಕೊಂಡಿದ್ದಾರೆ. ಅಲ್ಲದೇ ಐಷಾರಾಮಿ ಮನೆಗಳನ್ನು ನಿರ್ಮಿಸಿಕೊಂಡಿದ್ದು ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

ಒತ್ತಾಯ: ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಗೇರಿದ ಬಳಿಕ ನಗರದಲ್ಲಿ ನಿವೇಶನಗಳಿಗೆ ಭಾರೀ ಬೇಡಿಕೆಯಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಭೂ ಮಾಫಿಯಾಗಳು ವಸತಿ ಯೋಗ್ಯವಲ್ಲದ ಜೌಗು, ಗ್ರೀನ್‌ ಲ್ಯಾಂಡ್‌ ಪ್ರದೇಶಗಳನ್ನು ಭೂ ಪರಿವರ್ತನೆ ಮಾಡುವ ಮೂಲಕ ಬಡಾವಣೆಗಳಾಗಿ ಪರಿವರ್ತಿಸಲು ಹೊರಟಿದ್ದಾರೆ. ನಗರಸಭೆ ಹಾಗೂ ನಗರ ಯೋಜನಾ ಪ್ರಾಧಿಕಾರದ ಕೆಲ ಅಧಿಕಾರಿಗಳ ಬೆಂಬಲವೂ ಇದೇ ಎನ್ನಲಾಗಿದೆ. ದೊಡ್ಡ ಪ್ರಮಾಣದ ಹಣ ವರ್ಗಾವಣೆಯಾಗಿದೆ ಎನ್ನುವ ಗುಸು ಗುಸು ಹರಿದಾಡತೊಡಗಿದೆ. ನಗರ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಎಲ್ಲ ಹೊಸ ಲೇಔಟ್‌ಗಳ ಕುರಿತು ಪೌರಾಡಳಿತ ಇಲಾಖೆ ಸಮಗ್ರ ತನಿಖೆ ನಡೆಸಿದಲ್ಲಿ ಸತ್ಯಾಂಶ ಹೊರಬೀಳಲಿದೆ ಎನ್ನುವ ಒತ್ತಾಯ ಕೇಳಿಬಂದಿದೆ.

ಹತ್ತಾರು ಎಕರೆ ವಿಸ್ತೀರ್ಣ ಹೊಂದಿದ್ದ ಭೂ ಪ್ರದೇಶವನ್ನು ಈಗಾಗಲೇ ಮನಬಂದಂತೆ ಲೇ ಔಟ್‌ಗಳಾಗಿ ಬದಲಿಸಲಾಗಿದ್ದು ಮೂಲ ನಕಾಶೆಯಲ್ಲಿರುವ ಕಾಲು ದಾರಿಯೂ ನಾಪತ್ತೆಯಾಗಿದೆ. ಭೂ ಮಾಫಿಯಾ ಜತೆಗೆ ಕಾಣದ ಕೈಗಳು ಬೆಂಬಲ ನೀಡುತ್ತಿರುವುದು ಇಂತಹ ಬೆಳವಣಿಗೆಗಳಿಗೆ ಕಾರಣವಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಉಪವಿಭಾಗಾಧಿಕಾರಿಗಳು ನಗರಕ್ಕೆ ಭೇಟಿ ನೀಡಿದ್ದರೂ ಸ್ಥಳಪರಿಶೀಲನೆ ನಡೆಸಿ ಒತ್ತುವರಿ ತೆರವಿಗೆ ಆದೇಶಿಸಿಲ್ಲ. ವಾಸ್ತವ ಮನಗಂಡು ರಾಜಕಾಲುವೆ ತೆರವಿನ ಜತೆಗೆ ಇಂತಹ ಅನಧಿಕೃತ ಲೇ ಔಟ್‌ಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ.

 ಕಿರಣ್‌ ಕುಮಾರ್‌ ಕರವೇ ನಗರಾಧ್ಯಕ್ಷ

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ನಗರಸಭೆ ಸಹಾರದೊಂದಿಗೆ ರಾಜಕಾಲುವೆ(ಪುರಾತನ ಹಳ್ಳದ) ಭೂ ಪ್ರದೇಶ ಗುರುತಿಸಲು ಸೂಚಿಸಲಾಗಿದೆ. ನಗರಸಭಾ ಆಡಳಿತ ನಿಯಮಾನುಸಾರ ತೆರವು ಕಾರ್ಯ ಆರಂಭಿಸಿದರೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು.-ಎಂ.ಜಿ.ಸಂತೋಷ್‌ ಕುಮಾರ್‌ ತಹಸೀಲ್ದಾರ್‌