ಬೆಂಗಳೂರು(ಜ.30): ಬೆಂಗಳೂರು ಉಪನಗರ ರೈಲು ಯೋಜನೆಗೆ ಅಗತ್ಯವಿರುವ ಭೂ-ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಇದೀಗ ಯೋಜನೆಯ ನಾಲ್ಕು ಕಾರಿಡಾರ್‌ಗಳ ಪೈಕಿ ಎರಡನೇ ಕಾರಿಡಾರ್‌ ‘ಬೈಯಪ್ಪನಹಳ್ಳಿ-ಚಿಕ್ಕ ಬಾಣಾವಾರ’ ಮಾರ್ಗದಲ್ಲಿ ಭೂ-ಸ್ವಾಧೀನಕ್ಕೆ ರಾಜ್ಯ ಸರ್ಕಾರ ಆಧಿಸೂಚನೆ ಹೊರಡಿಸಿದೆ.

ಪ್ರಥಮ ಹಂತದಲ್ಲಿ ಸದರಿ ಕಾರಿಡಾರ್‌ನ ಭಾಗ-1ರ ಚಿಕ್ಕಬಾಣಾವಾರದಿಂದ ಜಾಲಹಳ್ಳಿ ವರೆಗೆ ಒಟ್ಟು 4,891 ಚದರ ಮೀಟರ್‌ ವಿಸ್ತೀರ್ಣ ಭೂಸ್ವಾಧೀನ ಮಾಡಲಾಗುತ್ತದೆ. ಬೆಂಗಳೂರು ಉತ್ತರ ಮತ್ತು ಯಲಹಂಕ ತಾಲೂಕು ವ್ಯಾಪ್ತಿಯ ಏಳು ಗ್ರಾಮಗಳ ವ್ಯಾಪ್ತಿಯಲ್ಲಿ ಈ ಭೂಸ್ವಾಧೀನ ಮಾಡಲಾಗುತ್ತದೆ. ಅಧಿಸೂಚನೆ ಅನ್ವಯ ಈ ಏಳು ಗ್ರಾಮಗಳ ಪೈಕಿ ಚಿಕ್ಕಬಾಣಾವಾರ 332.14 ಚ.ಮೀ., ಚಿಕ್ಕಸಂದ್ರ 28.68 ಚ.ಮೀ., ಶೆಟ್ಟಿಹಳ್ಳಿ 91.97 ಚ.ಮೀ., ಮ್ಯಾಕಲ ಚನ್ನಹಳ್ಳಿ 219.35 ಚ.ಮೀ., ಪೀಣ್ಯ ಪ್ಲಾಂಟೇಷನ್‌ 573.35 ಚ.ಮೀ ಹಾಗೂ ಜಾರಕಬಂಡೆ ಕಾವಲ್‌ 1,866.18 ಚ.ಮೀ. ವಿಸ್ತೀರ್ಣದ ಭೂಮಿ ಸ್ವಾಧೀನಕ್ಕೆ ಪಡೆಯಲಾಗುತ್ತದೆ.

ಕ್ರಯ, ಭೋಗ್ಯ, ಒಪ್ಪಂದಕ್ಕೆ ಅವಕಾಶವಿಲ್ಲ:

ರಾಜ್ಯ ಸರ್ಕಾರದ ಪರವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಈ ಅಧಿಸೂಚನೆ ಹೊರಡಿಸಿದೆ. ಅದರಂತೆ ಅಧಿಸೂಚನೆ ಪ್ರಕಟಿಸಲಾಗಿರುವ ಭೂಮಿಯನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಉಪನಗರ ರೈಲು ಯೋಜನೆ ವಿಭಾಗದ ವಿಶೇಷ ಭೂಸ್ವಾಧೀನಾಧಿಕಾರಿ ಅನುಮತಿ ಇಲ್ಲದೆ ವಿಲೇವಾರಿ, ಒಪ್ಪಂದ, ಕ್ರಯ, ಭೋಗ್ಯ ಸೇರಿ ಇನ್ನಿತರ ಯಾವುದೇ ರೀತಿಯ ಚಟುವಟಿಕೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.

ಬೆಂಗ್ಳೂರು ಸಬರ್ಬನ್‌ ರೈಲು ಯೋಜನೆ: ಮಾರ್ಗ ನಿರ್ಮಾಣ ಅಂತಿಮ

ಅಂತೆಯೇ ಈ ಭೂಮಿಯಲ್ಲಿ ಕಟ್ಟಡಗಳ ನಿರ್ಮಾಣ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡುವಂತಿಲ್ಲ. ಒಂದು ವೇಳೆ ಅಂತಹ ಚಟುವಟಿಕೆ ಮಾಡಿದರೂ ಈ ಭೂಮಿಗೆ ಪರಿಹಾರ ನಿಗದಿ ಮಾಡುವಾಗ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅಂತಿಮವಾಗಿ ಸ್ವತ್ತುಗಳನ್ನು ಸ್ವಾಧೀನಕ್ಕೆ ಪಡೆಯಲಾಗುತ್ತದೆ ಎಂದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ರಾಜಧಾನಿ ಮಂದಿಯ ದಶಕಗಳ ಬೇಡಿಕೆಯಾಗಿರುವ ಬೆಂಗಳೂರು ಉಪ-ನಗರ ರೈಲು ಯೋಜನೆ ಅನುಷ್ಠಾನ ಪ್ರಕ್ರಿಯೆಗಳು ಗರಿಗೆದರಿವೆ. ಸದರಿ ಯೋಜನೆಯ .15,767 ಕೋಟಿ ಅಂದಾಜು ವೆಚ್ಚದಲ್ಲಿ 148.17 ಕಿ.ಮೀ. ರೈಲು ಮಾರ್ಗ ನಿರ್ಮಾಣ ಮಾಡಲಾಗುತ್ತದೆ. ನಾಲ್ಕು ಕಾರಿಡಾರ್‌ಗಳಲ್ಲಿ ಈ ಯೋಜನೆ ಅನುಷ್ಠಾನವಾಗಲಿದೆ. ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆ-ರೈಡ್‌) ಈ ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿದೆ. ಇದೀಗ ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಪೂರಕವಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ.

ಉಪನಗರ ರೈಲು ಯೋಜನೆಯ 4 ಕಾರಿಡಾರ್‌

ಎಲ್ಲಿಂದ ಎಲ್ಲಿಗೆ ಒಟ್ಟು ದೂರ

1.ಕೆಎಸ್‌ಆರ್‌ ಬೆಂಗಳೂರು ನಗರ ನಿಲ್ದಾಣ ದೇವನಹಳ್ಳಿ 41.40 ಕಿ.ಮೀ.
2.ಬೈಯಪನಹಳ್ಳಿ ಟರ್ಮಿನಲ್‌ ಚಿಕ್ಕಬಾಣಾವಾರ 25 ಕಿ.ಮೀ.
3.ಕೆಂಗೇರಿ ವೈಟ್‌ಫೀಲ್ಡ್‌ 35.52 ಕಿ.ಮೀ.
4.ಹೀಲಳಿಗೆ ನಿಲ್ದಾಣ ರಾಜನಕುಂಟೆ 46.24 ಕಿ.ಮೀ.