ಏಳೆಂಟು ವರ್ಷದಿಂದ ಕುಂಟುತ್ತ ಸಾಗಿರುವ ರಾಜ್ಯದ ಕರಾವಳಿಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ
ವರದಿ: ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ(ಅ.07): ರಾಜ್ಯದ ಕರಾವಳಿಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ ಏಳೆಂಟು ವರ್ಷದಿಂದ ಕುಂಟುತ್ತಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಖಡಕ್ ಸೂಚನೆ ಬೆನ್ನಲ್ಲೇ ಐಆರ್ ಬಿ ಕಂಪೆನಿ ಹೆದ್ದಾರಿ ಕಾಮಗಾರಿಗೆ ವೇಗ ನೀಡಲು ಮುಂದಾಗಿದೆ. ಆದರೆ, ಹೆದ್ದಾರಿ ಪ್ರಾಧಿಕಾರ ಹಾಗೂ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಹಿಂದೊಮ್ಮೆ ಸರ್ವೇ ನಡೆಸಿದ್ದರೂ, ಇದೀಗ ಮತ್ತೆ ಐಆರ್‌ಬಿ ಕಂಪನಿಯವರು ಹೆದ್ದಾರಿಯ ಸೆಂಟರ್ ಲೈನ್ ಬದಲಿಸಿ ಮತ್ತೊಮ್ಮೆ ಹೆಚ್ಚುವರಿ ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾಗಿರುವ ಆರೋಪ ಕೇಳಿಬಂದಿದೆ. ಇದು ಹೆದ್ದಾರಿಯಂಚಿನ ಜನರ ಆಕ್ರೋಶಕ್ಕೂ ಕಾರಣವಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ...
ಹೌದು, ಮಹಾರಾಷ್ಟ್ರದ ಪನ್ವೇಲ್‌ನಿಂದ ಕನ್ಯಾಕುಮಾರಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯು ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯದ ಪಶ್ಚಿಮ ಘಟ್ಟಗಳ ಅಂಚಿನಲ್ಲಿ ಹಾದು ಹೋಗುತ್ತದೆ. ಎಲ್ಲಾ ಕಡೆ ಬಹುತೇಕ ಕಾಮಗಾರಿ ಮುಕ್ತಾಯವಾಗಿದೆಯಾದ್ರೂ ಕರ್ನಾಟಕದಲ್ಲಿ ಮಾತ್ರ ಕುಂಟುತ್ತಾ ಸಾಗುತ್ತಿದೆ. ಅದರಲ್ಲಿಯೂ ಉತ್ತರ ಕನ್ನಡದ ಕರಾವಳಿಯುದ್ದಕ್ಕೂ ಅರೆಬರೆ ಕಾಮಗಾರಿಯಿಂದ ಅಪಘಾತಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಇತ್ತೀಚೆಗೆ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್ಬಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು.
ದಾಂಡೇಲಿಯಲ್ಲಿ ಜಿ+2 ಮಾದರಿ ಮನೆ ನನೆಗುದಿಗೆ
ಇದೀಗ ಕಾಮಗಾರಿಗೆ ವೇಗ ನೀಡಲು ಮುಂದಾಗಿರುವ ಐಆರ್‌ಬಿ ಕಂಪೆನಿ ಕೆಲವೆಡೆ ಸೆಂಟರ್ ಲೈನ್ ಬದಲಿಸಿ ಕಾಮಗಾರಿಗೆ ಮುಂದಾಗಿದೆ. ಇದರಿಂದ ಈ ಹಿಂದೆ ಸರ್ವೆ ಮಾಡಿದ ಪ್ರದೇಶಗಳಿಗಿಂತ ಹೆಚ್ಚಿನ ಪ್ರಮಾಣದ ಭೂಮಿ ಹೋಗುತ್ತಿದೆ. ಆದರೆ, ಸಂತ್ರಸ್ಥರಿಗೆ ಈ ಹಿಂದೆ ನಿಗದಿ ಮಾಡಿದಷ್ಟು ಜಮೀನಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಸೆಂಟರ್ ಲೈನ್ ಬದಲಿಸುವ ಅಧಿಕಾರ ಇಲ್ಲದಿದ್ದರೂ ಈ ರೀತಿ ಮಾಡಲಾಗುತ್ತಿದ್ದು, ಸರ್ವೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಮಾಜಾಳಿ ನಿವಾಸಿ ಬಿ.ಜಿ. ಸಾವಂತ ಆಗ್ರಹಿಸಿದ್ದಾರೆ.
ಇನ್ನು ಕಾರವಾರದ ಮಾಜಾಳಿಯ ಭಾಗದಲ್ಲಿ ಹೆದ್ದಾರಿಗಾಗಿ ಕೆಲವರ ಮನೆಗಳು ಹಾಗೂ ಜಮೀನುಗಳು ಶೇ. 90 ರಷ್ಟು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ, ಸ್ವಾಧೀನ ಭೂಮಿಯ ಶೇ.15 ರಷ್ಟು ಮಾತ್ರ ಪರಿಹಾರ ನೀಡಿದ್ದಾರೆ. ಪರಿಹಾರ ನೀಡುವ ಕುರಿತು ಜಮೀನು ಮಾಲೀಕರನ್ನು ಕೇಳದೆ ನೇರವಾಗಿ ನ್ಯಾಯಾಲಯಕ್ಕೆ ಠೇವಣಿ ಮಾಡಿದ್ದಾರೆ. ಈ ಬಗ್ಗೆ ಜಮೀನು ಮಾಲೀಕರಿಗೆ ತಿಳಿದು ಕಂಗಲಾಗಿದ್ದಾರೆ.
ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸದಂತೆ ಬೃಹತ್ ಪ್ರತಿಭಟನೆ
ಅಧಿಕಾರಿಗಳನ್ನು ಕೇಳಿದರೆ ಅವರ ಲೆಕ್ಕಕ್ಕೂ, ಜಮೀನಿನ ಸ್ವಾಧೀನದ ಲೆಕ್ಕಕ್ಕೂ ತಾಳೆಯಾಗುವುದಿಲ್ಲ. ಅಲ್ಲದೇ, ಜಮೀನಿನ ಸ್ವಾಧೀನದ ಅಂಕಿಅಂಶಗಳನ್ನು ಲಿಖಿತವಾಗಿಯೂ ನೀಡುತ್ತಿಲ್ಲ. ಕಳೆದುಕೊಂಡ ಜಮೀನಿಗೆ ತಕ್ಕಂತೆ ಪರಿಹಾರ ಸಿಗದೇ ಮುಂದೇನು ಎನ್ನುವ ಪ್ರಶ್ನೆ ಕಾಡುತ್ತಿದೆ. ಮೇಲಿಂದ ಅ.10ರಂದು ಜೆಸಿಬಿಯೊಂದಿಗೆ ಭೂ ಸ್ವಾಧೀನಕ್ಕೆ ಬರುವುದಾಗಿ ತಿಳಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ, ಜಿಲ್ಲೆಯ ಕರಾವಳಿಯಲ್ಲಿ ಹಾದುಹೋಗಿರುವ ಹೆದ್ದಾರಿಗಾಗಿ 4 ಸಾವಿರಕ್ಕೂ ಹೆಚ್ಚು ಸರ್ವೆ ನಂಬರ‌್‌ಗಳಲ್ಲಿನ ಜಮೀನು ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ, ಬಳಿಕ ಆಯಾ ಸರ್ವೆ ನಂಬರ್ ನಲ್ಲಿ ಉಳಿದ ಜಮಿನುಗಳ ಸರ್ವೇ ಮಾಡಿ ಕೆಡಿಪಿ ಮಾಡಬೇಕಾಗಿತ್ತಾದರೂ ಈವರೆಗೂ ಅದನ್ನು ಮಾಡಿಲ್ಲ. ಒಂದೊಮ್ಮೆ ಸರ್ವೇ ಮಾಡಿ ಗಡಿ ಗುರುತು ಮಾಡದೆ ಇದ್ದಲ್ಲಿ ಮುಂದೆ ಜಮೀನು ವಾರಸುದಾರರಿಗೆ ಸಮಸ್ಯೆಯಾಗಲಿದೆ. ಅಲ್ಲದೇ, ಜಮೀನು ಕೊಟ್ಟ ತಪ್ಪಿಗೆ ಸ್ವಂತ ಖರ್ಚಿನಲ್ಲಿ ಇದೆಲ್ಲವನ್ನೂ ಮಾಡಿಸಬೇಕಾಗಿದೆ. ಕೂಡಲೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯರಾದ ಪ್ರವೀಣ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭೂ ಸ್ವಾಧೀನ ಪ್ರಕ್ರಿಯೆಯಿಂದಾಗಿ ಹೆದ್ದಾರಿಯಂಚಿನ ಜನರು ಮತ್ತಷ್ಟು ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಇನ್ನೊಂದೆಡೆ ಹೆದ್ದಾರಿಗಾಗಿ ಜಮೀನು ಕೊಟ್ಟವರ ಜಮೀನಿನ ಸರ್ವೆ ನಡೆಸಿ ಗಡಿ ಗುರುತಿಸಬೇಕಿದ್ದ ಅಧಿಕಾರಿಗಳು ತೆಪ್ಪಗೆ ಕುಳಿತಿರುವುದು ಜನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಕಾರಣದಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ಸಂತ್ರಸ್ತರ ಸಮಸ್ಯೆ ಬಗೆಹರಿಸಬೇಕಿದೆ.
