ಬೆಂಗಳೂರು :  ನಗರದ ಪ್ರಮುಖ ಆಕರ್ಷಣೀಯ ಪ್ರವಾಸಿ ಕೇಂದ್ರವಾದ ಲಾಲ್‌ಬಾಗ್‌ಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬಿಸಿ ತಟ್ಟಿದ್ದು, ಬರುವ ನವೆಂಬರ್‌ ತಿಂಗಳಿಂದ ಪ್ರವೇಶ ಶುಲ್ಕ, ವಾಹನಗಳ ನಿಲುಗಡೆ ಮತ್ತು ಕ್ಯಾಮೆರಾ ಬಳಕೆಯ ಶುಲ್ಕ ದುಬಾರಿಯಾಗಲಿದೆ.

ಪ್ರತಿದಿನ ಲಾಲ್‌ಬಾಗ್‌ಗೆ ಸಾವಿರಾರು ಜನ ಭೇಟಿ ನೀಡುತ್ತಿದ್ದು, ಪ್ರವೇಶ ಶುಲ್ಕದಿಂದ ಲಕ್ಷಾಂತರ ರುಪಾಯಿ ಸಂಗ್ರಹವಾಗುತ್ತದೆ. ಆದರೆ, ಈ ಶುಲ್ಕಕ್ಕೆ ಜಿಎಸ್‌ಟಿ ಪಾವತಿಸಲಾಗುತ್ತಿದೆ. ಇದರಿಂದ ಭದ್ರತಾ ಸಿಬ್ಬಂದಿಯ ವೇತನ, ವಿದ್ಯುತ್‌ ಬಿಲ್‌ ಹಾಗೂ ಸ್ವಚ್ಛತಾ ಕಾರ್ಯ ಮಾಡುವವರಿಗೆ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಪ್ರವೇಶ ಶುಲ್ಕ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ.

ಸುಮಾರು 240 ಎಕರೆ ಉದ್ಯಾನದಲ್ಲಿನ 1,200ಕ್ಕೂ ಹೆಚ್ಚು ವಿದ್ಯುತ್‌ ದೀಪಗಳಿದ್ದು, ವಾರ್ಷಿಕವಾಗಿ .1.2 ಕೋಟಿ ವಿದ್ಯುತ್‌ ಬಿಲ್‌ ಪಾವತಿ ಮಾಡಲಾಗುತ್ತಿದೆ. ಜೊತೆಗೆ ಭದ್ರತಾ ಸಿಬ್ಬಂದಿ ಮತ್ತು ಸ್ವಚ್ಛತೆಗಾಗಿ ವಾರ್ಷಿಕ ಸುಮಾರು .1.5 ಕೋಟಿಗಳಷ್ಟುವೆಚ್ಚ ಮಾಡಲಾಗುತ್ತಿದೆ. ಆದರೆ, ಪ್ರವಾಸಿಗರಿಂದ ಸಂಗ್ರಹವಾಗುತ್ತಿರುವ ಮೊತ್ತಕ್ಕಿಂತ ವೆಚ್ಚದ ಪ್ರಮಾಣ ಹೆಚ್ಚಾಗಿದೆ. ಪರಿಣಾಮ ಶುಲ್ಕ ಹೆಚ್ಚಳ ಅನಿವಾರ್ಯವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಲಾಲ್‌ಬಾಗ್‌ ಸಾರ್ವಜನಿಕ ಸ್ಥಳವಾಗಿದೆ. ಈ ಹಿನ್ನೆಲೆಯಲ್ಲಿ ಜಿಎಸ್‌ಟಿ ರದ್ದು ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ, ತೆರಿಗೆ ಕಡಿತ ಮಾಡುವುದು ಜಿಎಸ್‌ಟಿ ಕೌನ್ಸಿಲ್‌ಗೆ ಸಂಬಂಧಪಟ್ಟವಿಚಾರವಾಗಿದ್ದು, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ. ಹಾಗಾಗಿ ಶುಲ್ಕ ಹೆಚ್ಚಳಕ್ಕೆ ತೀರ್ಮಾನಿಸಲಾಗಿದೆ.

ಸುವರ್ಣ ಕರ್ನಾಟಕ ಉದ್ಯಾನವನಗಳ ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ತೋಟಗಾರಿಕೆ ಸಚಿವರು ಪ್ರವೇಶ ಶುಲ್ಕ ಹೆಚ್ಚಳ ಮಾಡಲು ಹಸಿರು ನಿಶಾನೆ ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಶುಲ್ಕ ಸಂಗ್ರಹಕ್ಕೆ ನೀಡಿರುವ ಟೆಂಡರ್‌ ಅವಧಿ ಅಕ್ಟೋಬರ್‌ ಅಂತ್ಯಕ್ಕೆ ಮುಗಿಯಲಿದೆ. ನವೆಂಬರ್‌ನಿಂದ ಶುಲ್ಕ ಹೆಚ್ಚಳ ಜಾರಿಯಾಗಲಿದೆ.

ಲಾಲ್‌ಬಾಗ್‌ಗೆ ವಾರದ ದಿನಗಳಲ್ಲಿ ಪ್ರತಿದಿನ 8ರಿಂದ 10 ಸಾವಿರ, ಶನಿವಾರ ಮತ್ತು ಭಾನುವಾರ ಸುಮಾರು 20 ಸಾವಿರ, ಸರ್ಕಾರಿ ರಜೆ ದಿನಗಳಲ್ಲಿ 25 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡುತ್ತಾರೆ. ಪ್ರಸ್ತುತ ಲಾಲ್‌ಬಾಗ್‌ ಪ್ರವೇಶಕ್ಕೆ ತಲಾ .20ಗಳಿದ್ದು, ತೆರಿಗೆ ವಿಧಿಸಿದಲ್ಲಿ .25ಗಳಿಗೆ ಹೆಚ್ಚಳವಾಗಲಿದೆ. ಜೊತೆಗೆ ಕ್ಯಾಮೆರಾ ಹಾಗೂ ವಾಹನಗಳ ನಿಲುಗಡೆ ಶುಲ್ಕ ಕೂಡಾ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

            ಪ್ರಸ್ತುತ ದರ     ನೂತನ ದರ

ಪ್ರತಿ ವ್ಯಕ್ತಿಗೆ     20    25

ಕ್ಯಾಮೆರಾ     50    60

ದ್ವಿಚಕ್ರವಾಹನ    
               20    25

ನಾಲ್ಕು ಚಕ್ರ ವಾಹನ    
              25     30

ವ್ಯಾನ್‌    50    60

ಬಸ್‌    100    120

ರಮೇಶ್‌ ಬನ್ನಿಕುಪ್ಪೆ