ಐತಿಹಾಸಿಕ ಲಕ್ಕುಂಡಿಯಲ್ಲಿ ಚಾಲುಕ್ಯರ ಕಾಲದ ವೈಭವವನ್ನು ಶೋಧಿಸಲು ಪುರಾತತ್ವ ಇಲಾಖೆ ಉತ್ಖನನ ಆರಂಭಿಸಿದೆ. ಆದರೆ, ಐದು ದಿನ ಕಳೆದರೂ ಸರ್ಕಾರವು ಅವಶೇಷಗಳನ್ನು ಹೊರತೆಗೆಯಲು ಬೇಕಾದ ಸೂಕ್ಷ್ಮ ಉಪಕರಣಗಳ ಕಿಟ್ ಪೂರೈಸಿಲ್ಲ. ಇದರಿಂದಾಗಿ ಸಿಬ್ಬಂದಿಗಳು ಕೈಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ.
ಗದಗ (ಜ.20): ಐತಿಹಾಸಿಕ ಲಕ್ಕುಂಡಿಯ ಮಣ್ಣಿನಡಿಯಲ್ಲಿ ಅಡಗಿರುವ ಚಾಲುಕ್ಯರ ಕಾಲದ ವೈಭವವನ್ನು ಹೊರತೆಗೆಯಲು ಪುರಾತತ್ವ ಇಲಾಖೆ ಉತ್ಖನನವನ್ನೇನೋ ಆರಂಭಿಸಿದೆ. ಆದರೆ, ರಾಜ್ಯ ಸರ್ಕಾರಕ್ಕೆ ಕನಿಷ್ಠ 'ಕಾಮನ್‌ಸೆನ್ಸ್' ಕೂಡ ಇಲ್ವಾ ಎನ್ನುವ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಶೋಧ ಕಾರ್ಯ ಆರಂಭವಾಗಿ ಐದು ದಿನಗಳು ಉರುಳಿದರೂ, ಅವಶೇಷಗಳನ್ನು ಹೊರತೆಗೆಯಲು ಬೇಕಾದ ಮೂಲಭೂತ ಸಾಮಗ್ರಿಗಳನ್ನೇ ಸರ್ಕಾರ ಪೂರೈಸಿಲ್ಲ.
ಸಾಮಗ್ರಿ ಕೊರತೆಯಲ್ಲೇ ಸಾಗುತ್ತಿದೆ ಶೋಧ
ಉತ್ಖನನ ಎನ್ನುವುದು ಅತ್ಯಂತ ಸೂಕ್ಷ್ಮವಾದ ಪ್ರಕ್ರಿಯೆ. ಭೂಮಿಯ ಆಳದಲ್ಲಿ ಸಿಗುವ ಪುರಾತನ ಅವಶೇಷಗಳನ್ನು ಹಾನಿಯಾಗದಂತೆ ಸ್ವಚ್ಛಗೊಳಿಸಲು ವಿಶೇಷವಾದ ಟೂಲ್ ಕಿಟ್ ಅಗತ್ಯವಿರುತ್ತದೆ. ಅತೀ ಚಿಕ್ಕ ಸಲಕರಣೆಗಳು, ಸಣ್ಣ ಗಾರೆ ಮತ್ತು ಧೂಳನ್ನು ತೆಗೆಯಲು ಅತ್ಯಂತ ಸೂಕ್ಷ್ಮವಾದ ಬ್ರೆಶ್‌ಗಳು ಈ ಕಿಟ್‌ನಲ್ಲಿ ಇರಬೇಕು. ಆದರೆ, ಇಂತಹ ಯಾವುದೇ ಸಾಮಗ್ರಿಗಳಿಲ್ಲದೆ ಸಿಬ್ಬಂದಿಗಳು, ಹಾರೆ, ಗುದ್ದಲಿ, ಸಲಿಕೆ ಹಾಗೂ ಬುಟ್ಟಿಗಳಿಂದ ಕೈಗಳಿಂದಲೇ ಮಣ್ಣು ಸರಿಸುವಂತಾಗಿದೆ.
ಮೇಲ್ವಿಚಾರಕರ ಮನವಿಗೂ ಬೆಲೆಯಿಲ್ಲ
ಉತ್ಖನನ ತಂಡದ ಮೇಲ್ವಿಚಾರಕರು ಕಳೆದ ಮೂರು ದಿನಗಳಿಂದ ಸಾಮಗ್ರಿಗಳನ್ನು ಪೂರೈಸುವಂತೆ ಪದೇ ಪದೇ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಮಾತ್ರ ಜಾಣ ಕಿವುಡು ಪ್ರದರ್ಶಿಸುತ್ತಿದೆ. ಐದನೇ ದಿನದ ಉತ್ಖನನ ಕಾರ್ಯ ಆರಂಭವಾದರೂ ಕಿಟ್ ಬಾರದಿರುವುದು ಸಿಬ್ಬಂದಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇತಿಹಾಸದ ಮೇಲೆ ಆಟವಾಡುತ್ತಿದೆಯೇ ಸರ್ಕಾರ?
ಲಕ್ಕುಂಡಿಯಂತಹ ಜಾಗತಿಕ ಮಟ್ಟದ ಐತಿಹಾಸಿಕ ತಾಣದಲ್ಲಿ ಉತ್ಖನನ ನಡೆಸುವಾಗ ಮುನ್ನೆಚ್ಚರಿಕೆ ಮತ್ತು ಸಿದ್ಧತೆ ಅತ್ಯಗತ್ಯ. ಆದರೆ ಸಾಮಗ್ರಿಗಳ ಕೊರತೆಯ ನಡುವೆಯೇ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವುದು ಅವಶೇಷಗಳಿಗೆ ಹಾನಿಯುಂಟುಮಾಡುವ ಸಾಧ್ಯತೆಯೂ ಇದೆ. 'ಇತಿಹಾಸವನ್ನು ಉಳಿಸುತ್ತೇವೆ ಎಂದು ಹೇಳುವ ಸರ್ಕಾರಕ್ಕೆ, ಒಂದು ಕಿಟ್ ಪೂರೈಸುವ ಯೋಗ್ಯತೆ ಇಲ್ವಾ?' ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.


