ಮೈಸೂರು(ಫೆ.01): ಸಂಚಾರ ನಿಯಮ ಉಲ್ಲಂಘನೆಗಳ ಸಂಬಂಧ ಅಂಚೆ ಮೂಲಕ ನೀಡುವ ನೋಟಿಸ್‌ಗಳಿಗೆ ದಂಡ ಪಾವತಿಸದೇ ಇರುವವರ ವಿರುದ್ಧ ಮೈಸೂರು ನಗರ ಸಂಚಾರ ಪೊಲೀಸರು ಬುಧ​ವಾರ ವಿಶೇಷ ತಪಾಸಣೆ ನಡೆಸಿ, 1002 ಪ್ರಕರಣ ಪತ್ತೆ ಹಚ್ಚಿ,1,64,800 ದಂಡ ಸಂಗ್ರಹಿಸಿ​ದ್ದಾ​ರೆ.

ನಗರದ ನರಸಿಂಹರಾಜ ಸಂಚಾರ ಠಾಣೆ ವ್ಯಾಪ್ತಿಯಲ್ಲಿನ ಮಂಡಿ ಮೊಹಲ್ಲಾದ ಸುನ್ನಿಚೌಕ, ಸವಾಯಿಚೌಕ, ಮಿಷನ್‌ ಆಸ್ಪತ್ರೆ ವೃತ್ತ, ಮೀನಾ ಬಜಾರ್‌ ಜಂಕ್ಷನ್‌, ಕಬೀರ್‌ ರಸ್ತೆ, ಪುಲಕೇಶಿ ರಸ್ತೆ ಕಡೆಗಳಲ್ಲಿ 20 ಸಂಚಾರ ವಿಭಾಗದ ಅಧಿಕಾರಿಗಳನ್ನೊಳಗೊಂಡ ತಂಡದೊಂದಿಗೆ ವಿಶೇಷ ತಪಾಸಣೆ ನಡೆಸಿ, ಪ್ರಸ್ತುತ ಪ್ರಕರಣಗಳು ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗಳನ್ನು ಮಾಡಿ ಪೊಲೀಸ್‌ ಇಲಾಖೆ ವತಿಯಿಂದ ಅಂಚೆ ಮೂಲಕ ನೋಟಿಸ್‌ಗಳನ್ನು ಕಳುಹಿಸಿದ್ದರೂ ದಂಡ ಪಾವತಿಸದಿರುವವರನ್ನು ಪತ್ತೆ ಹಚ್ಚಿ ದಂಡ ಸಂಗ್ರಹಿಸಿದ್ದಾರೆ.

ಮೃತ ಕೋತಿಗೆ ಪೊಲೀಸ್ ಠಾಣೆ ಬಳಿಯೇ ಸ್ಮಾರಕ ನಿರ್ಮಾಣ

ಈ ವಿಶೇಷ ತಪಾಸಣೆ ಸಮಯದಲ್ಲಿ ದ್ವಿಚಕ್ರ ವಾಹನದ ಸವಾರರು ಮತ್ತು ಹಿಂಬದಿ ಸವಾರರು ಹೆಲ್ಮೆಟ್‌ ರಹಿತ ಚಾಲನೆ, ವಾಹನ ಚಾಲನೆಯಲ್ಲಿ ಮೊಬೈಲ್‌ ಬಳಕೆ, ಸಿಗ್ನಲ್‌ ಜಂಪ್‌ ಮಾಡುವುದು, ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸವಾರಿ ಮಾಡುವುದು, ಏಕಮುಖ ಸಂಚಾರಕ್ಕೆ ವಿರುದ್ಧ ಚಾಲನೆ, ವಿಮೆ ಇಲ್ಲದೆ ವಾಹನ ಚಾಲನೆ, ಸೀಟ್‌ ಬೆಲ್ಟ್‌ ಧರಿಸದೇ ವಾಹನ ಚಾಲನೆ ಹಾಗೂ ಇತರೆ ಸಂಚಾರ ನಿಯಮ ಉಲ್ಲಂಘನೆಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಡಿಸಿಪಿ ಬಿ.ಟಿ. ಕವಿತಾ, ಸಂಚಾರ ಉಪ ವಿಭಾಗದ ​ಎ​ಸಿಪಿ ಎಸ್‌.ಎನ್‌. ಸಂದೇಶ್‌ಕುಮಾರ್‌ ಅವರ ಮಾ​ರ್ಗ​ದ​ರ್ಶ​ನ​ದಲ್ಲಿ ಎನ್‌.ಆರ್‌. ಸಂಚಾರ ಠಾಣೆಯ ಇನ್ಸ್‌​ಪೆ​ಕ್ಟರ್‌ ದಿವಾಕರ್‌ ಮತ್ತು ಸಿಬ್ಬಂದಿ ಈ ವಿಶೇಷ ತಪಾಸಣೆ ನಡೆ​ಸಿ​ದ್ದಾರೆ.

ಸಚಿವ ಸಂಪುಟ ಸರ್ಕಸ್; ಹೈಕಮಾಂಡ್ ಮಟ್ಟದಲ್ಲಿ ರಾಮ್‌ದಾಸ್ ಲಾಬಿ!...

ನಗರದ ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘಿಸದೆ ರಸ್ತೆಯಲ್ಲಿ ಸುರಕ್ಷತೆಗೆ ಒತ್ತು ಕೊಟ್ಟು ವಾಹನಗಳನ್ನು ಸುರಕ್ಷಿತವಾಗಿ ಚಾಲನೆ ಮಾಡಬೇಕು. ಹಾಗೂ ನಿಯ​ಮ ಉಲ್ಲಂಘನೆಯಾಗಿ ಪೊಲೀಸ್‌ ಇಲಾಖೆಯಿಂದ ನೋಟಿಸ್‌ ತಲುಪಿದ ಕೂಡಲೇ ದಂಡ ಪಾವತಿಸಬೇಕು ಎಂದು ನಗರ ಪೊಲೀಸ್‌ ಆಯುಕ್ತ ಕೆ.ಟಿ. ಬಾಲಕೃಷ್ಣ ತಿಳಿ​ಸಿ​ದ್ದಾರೆ.

46 ಡಿಡಿ ಪ್ರಕ​ರಣ ದಾಖಲು

ನಗರ ಸಂಚಾರ ಉಪವಿಭಾಗದ ಪೊಲೀಸರು ​ಬು​ಧ​ವಾರ ರಾತ್ರಿ ಹೊರ ವರ್ತುಲ ರಸ್ತೆಯಲ್ಲಿ ರಸ್ತೆ ಅಪಘಾತಕ್ಕೆ ಮುಖ್ಯವಾಗಿ ಕಾರಣವಾಗುವ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವರ ವಿರುದ್ಧ ವಿಶೇಷ ತಪಾಸಣೆ ನಡೆಸಿ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ 46 ವಾಹನ ಚಾಲಕರನ್ನು ಪತ್ತೆ ಮಾಡಿ, ಅವರ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿ, ಅವರ ಡಿಎಲ್‌ ಪತ್ರಗಳನ್ನು ಅಮಾನತುಗೊ​ಳಿ​ಸಲು ಕ್ರಮ ಕೈಗೊಳ್ಳಲಾಗಿದೆ. ಇವರಿಗೆ ಮನಪರಿವರ್ತನ ಶಿಬಿರವನ್ನು ನಡೆಸಿ ಅರಿವು ಮೂಡಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಕೆ.ಟಿ. ಬಾಲ​ಕೃಷ್ಣ ತಿಳಿ​ಸಿ​ದ್ದಾ​ರೆ.