ಉಡುಪಿ (ಅ.07):  ಕಾಪು ತಾಲೂಕಿನ ಸಾಂತೂರು ಗ್ರಾಮದ ಸಿಲೆಸ್ತಿನ್‌ ಅಂದ್ರಾದೆ ಎಂಬವರು ಕೂಲಿ ಮಾಡಿ ಸಂಪಾದಿಸಿದ ಹಣದಿಂದ ಖರೀದಿಸಿದ್ದ 2 ಎಕರೆ ಭೂಮಿ, ಅದರಲ್ಲಿ ಬೆಳಸಿದ್ದ ತೋಟ, ಕಟ್ಟಿದ್ದ ಮನೆಯನ್ನು, ಸ್ವತಃ ಅವರ ಮೊಮ್ಮಗಳು ಅಕ್ರಮವಾಗಿ ತನ್ನ ಹೆಸರಿಗೆ ಮಾಡಿಕೊಂಡಿದ್ದು, ಇದನ್ನು ತಿಳಿದು ಅಘಾತಗೊಂಡ ಸಿಲೆಸ್ತಿನ್‌ ಪಾಶ್ರ್ವವಾಯುಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ.

ಇದೀಗ ಪ್ರಕರಣ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೆಟ್ಟಿಲೇರಿದೆ. ಗಂಡ ಗ್ರೆಗರಿ ಡಿಸೋಜ ಕೆಲವರ್ಷಗಳ ಹಿಂದೆ ನಿಧನರಾದಾಗ ಸಿಲೆಸ್ತೀನ್‌ ಅವರು ಭೂಮಿ, ತೋಟ, ಮನೆಯನ್ನು 4 ಮಕ್ಕಳಿಗೆ ಸಮಪಾಲು ಮಾಡಿ ವೀಲುನಾಮೆ ಬರೆದು, ನೋಂದಾಯಿಸಿದ್ದರು. ಇತ್ತೀಚೆಗೆ ಅಧಿಕಾರಿಗಳು ಕೃಷಿ ಸಮೀಕ್ಷೆಗೆ ಬಂದಾಗ ತನ್ನ ಮನೆ ಹಾಗೂ ಜಮೀನು ಹಿರಿಯ ಮಗ ರೋನಾಲ್ಡರ ಮಗಳು ರೋಶನಿಯ ಹೆಸರಿನಲ್ಲಿರುವುದು ಪತ್ತೆಯಾಯಿತು. ಇದರಿಂದ ತೀವ್ರ ಅಘಾತಗೊಂಡ ಸಿಲೆಸ್ತಿನ್‌ ಪಾಶ್ರ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ಅವರ ಪರವಾಗಿ ಮಾಜಿ ಸೈನಿಕ ಲಾರೆಸ್ಸ್‌ ಡಿಸೋಜ ಅವರು ಪ್ರಕರಣವನ್ನು ಪ್ರತಿಷ್ಠಾನಕ್ಕೆ ಸಲ್ಲಿಸಿದ್ದಾರೆ.

ಕಲಬುರಗಿ: ದಿನಸಿ ತಾಂಡಾ ದಂಪತಿ ಕಗ್ಗೊಲೆ, 5 ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ಅಧಿಕಾರಿಗಳ ಲೋಪ?: 50 ವರ್ಷ ಸೆಲೆಸ್ತಿನ್‌ ಹೆಸರಿಲ್ಲಿದ್ದ ಭೂಮಿ ಹಕ್ಕುಪತ್ರ ರೋಶನಿಯ ಹೆಸರಿಗೆ ಹೇಗಾಯಿತು, ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಅದು ಯಾವಾಗ ನೋಂದಣಿ ಆಯಿತು, ಕಾನೂನು ಪ್ರಾಧಿಕಾರದ ಅಧಿಕಾರಿಗಳು ಅದಕ್ಕೆ ಸಿಲೆಸ್ತಿನ್‌ ಅವರ ಒಪ್ಪಿಗೆ ಯಾಕೆ ಪಡೆದಿಲ್ಲ, ಸಂಬಂಧಪಟ್ಟವರಿಗೆ ನೋಟಿಸ್‌ ಯಾಕೆ ನೀಡಿಲ್ಲ ಎಂಬುದನ್ನು ಸಬ್‌ ರಿಜಿಸ್ಟ್ರಾರ್‌ ಅಧಿಕಾರಿಗಳು ಉತ್ತರಿಸಬೇಕು. ಇದರಲ್ಲಿ ಅಧಿಕಾರಿಗಳ ಪಾತ್ರದ ಬಗ್ಗೆ ಜಿಲ್ಲಾಧಿಕಾರಿ ತನಿಖೆ ನಡೆಸಬೇಕು ಮತ್ತು ಸಿಲೆಸ್ತಿನ್‌ ಅವರಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್‌ ಶ್ಯಾನುಭಾಗ್‌ ಸುದ್ದಿಗೋಷ್ಠಿಯ ಮೂಲಕ ಒತ್ತಾಯಿಸಿದ್ದಾರೆ.

ಅಜ್ಜಿಗೆ ಮಾತ್ರವಲ್ಲ ತಂದೆಗೂ ಮೋಸ!

ರೋಶನಿಯ ಈ ಕಾರುಬಾರು ಸ್ವತಃ ಅವರ ತಂದೆ ರೋನಾಲ್ಡ ಅವರಿಗೂ ಗೊತ್ತಿಲ್ಲ. 2019ರಲ್ಲಿ ರೋಶನಿ ತನ್ನ ತಂದೆ ಮತ್ತು ಅಜ್ಜಿಯನ್ನು ಮೂಲ್ಕಿಯ ಯಾವುದೋ ಕಚೇರಿಗೆ ಕರೆದೊಯ್ದು ಕೆಲವು ಕಾಗದ ಪತ್ರಗಳಿಗೆ ಇಬ್ಬರ ಹೆಬ್ಬೆಟ್ಟು ಹಾಕಿಸಿದ್ದಳು. ಇಬ್ಬರೂ ಅವಿದ್ಯಾವಂತರಾದ್ದರಿಂದ ಅವೆಲ್ಲ ಏನೆಂದು ತಿಳಿಯಲಿಲ್ಲ. 3 ತಿಂಗಳಲ್ಲಿ ತಂದೆಯನ್ನು ಪುನಃ ಅದೇ ಕಚೇರಿಗೆ ಕರೆದೊಯ್ದು ಪುನಃ ಹೆಬ್ಬೆಟ್ಟು ಹಾಕಿಸಿದ್ದಳು. ಅಂದರೆ ರೋಶನಿ ಮೊದಲು ಅಜ್ಜಿಯಿಂದ ಆಸ್ತಿಯನ್ನು ತಂದೆ ಹೆಸರಿಗೂ, ನಂತರ ತಂದೆಯ ಹೆಸರಿನಿಂದ ತನ್ನ ಹೆಸರಿಗೆ ಮಾಡಿಕೊಂಡಿದ್ದಾಳೆ ಎನ್ನುತ್ತಾರೆ ಡಾ. ರವೀಂದ್ರನಾಥ ಶ್ಯಾನುಭಾಗ್‌.