ಕಲಬುರಗಿ: ದಿನಸಿ ತಾಂಡಾ ದಂಪತಿ ಕಗ್ಗೊಲೆ, 5 ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು
ದಂಪತಿಯ ಜೋಡಿ ಕೊಲೆ ಪ್ರಕರಣವನ್ನ ಕೇವಲ 24 ಗಂಟೆಯಲ್ಲಿ ಬೇಧಿಸಿದ ಪೊಲೀಸರು| ಕೊಲೆ ಮಾಡಿದ ನಂತರ ಎರಡು ರಾತ್ರಿ ಗುಡ್ಡದಲ್ಲಿ ಅಡಗಿ ಕುಳಿತಿದ್ದ ಆರೋಪಿ| ಕೊಲೆಗೆ ಕುಮ್ಮಕ್ಕು ನೀಡಿದ ನಾಲ್ವರ ಬಂಧನ|
ಕಲಬುರಗಿ(ಅ.07): ಜಿಲ್ಲೆಯ ಕಮಲಾಪುರ ತಾಲೂಕಿನ ದಿನಸಿ (ಕೆ) ತಾಂಡಾವೊಂದರಲ್ಲಿ ಅ. 3ರಂದು ದಂಪತಿಯನ್ನು ಕೊಚ್ಚಿ ಕೊಲೆ ಮಾಡಿದ ಪ್ರಮುಖ ಅರೋಪಿ ಹಾಗೂ ಕುಮ್ಮಕ್ಕು ನೀಡಿದ ನಾಲ್ವರನ್ನು ಪೊಲೀಸ್ ತನಿಖಾ ತಂಡ ಬಂಧಿಸಿದೆ. ದಂಪತಿಯ ಜೋಡಿ ಕೊಲೆ ಪ್ರಕರಣವನ್ನ ಪೊಲೀಸರು ಕೇವಲ 24 ಗಂಟೆಯಲ್ಲಿ ಬೇಧಿಸಿದ್ದಾರೆ. ಕೊಲೆ ಮಾಡಿದ ನಂತರ ಎರಡು ರಾತ್ರಿ ಗುಡ್ಡದಲ್ಲಿ ಅಡಗಿ ಕುಳಿತಿದ್ದ ಆರೋಪಿ ಸೋಮವಾರ ನಸುಕಿನಲ್ಲಿ ಸಿಕ್ಕಿಬಿದ್ದಿದ್ದಾನೆ.
ಪ್ರಮುಖ ಆರೋಪಿ ಮಹೇಶ ಸುಭಾಷ ರಾಠೋಡ (21) ಈತನ ಸಹಚರರಾದ ಟೋಪು ಹೇಮಲಾ ರಾಠೋಡ (49), ಏಸು ಹೇಮಲಾ ರಾಠೋಡ (38), ಸಂತೋಷ ಗೋರಖನಾಥ ಚವ್ಹಾಣ (32), ರವಿ ಗೋರಖನಾಥ ಚವ್ಹಾಣ (25) ಬಂಧಿತರು.
ಪ್ರಕರಣದ ವಿವರ: ಕೊಲೆಗೀಡಾದ ವ್ಯಕ್ತಿಗೆ ಏಳು ಮಕ್ಕಳಿದ್ದಾರೆ. ಇವರಲ್ಲಿ ಮೊದಲ ಪುತ್ರಿಯನ್ನು ಮಹೇಶ ರಾಠೋಡ ಹಾಗೂ ಎರಡನೇ ಪುತ್ರಿಯನ್ನು ಸದಾಶಿವ ಟೋಪು ಪ್ರೀತಿಸುತ್ತಿದ್ದರು. ಎರಡನೇ ಪುತ್ರಿ ಇನ್ನೂ ಚಿಕ್ಕವಳಾಗಿದ್ದರಿಂದ ಸದಾಶಿವ ಟೋಪು ಮೇಲೆ ಪೋಕ್ಸೊ’ ಅಡಿ ಪ್ರಕರಣ ದಾಖಲಿಸಲಾಗಿದ್ದು, ಆತ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದಾನೆ.
ಕಲಬುರಗಿ ದಿನಸಿ ತಾಂಡಾದಲ್ಲಿ ಡಬ್ಬಲ್ ಮರ್ಡರ್: ಮನೆಗೆ ನುಗ್ಗಿ ದಂಪತಿಯ ಬರ್ಬರ ಕೊಲೆ
ಮೊದಲ ಪುತ್ರಿ 16 ವರ್ಷ ತುಂಬಿದ್ದು ಆಕೆಯನ್ನು ಪ್ರೀತಿಸುತ್ತಿದ್ದ ಮಹೇಶ ರಾಠೋಡ ಮದುವೆಗೂ ಒಪ್ಪಿಕೊಂಡಿದ್ದ. ಆರೋಪಿಯ ತಂದೆ ಸರ್ಕಾರಿ ಶಾಲೆ ಶಿಕ್ಷಕರಾಗಿದ್ದು, ಮನೆತನದಿಂದಲೂ ಚೆನ್ನಾಗಿದ್ದಾರೆ. ಹಾಗಾಗಿ, ಊರಿನ ಪ್ರಮುಖರ ಸಮ್ಮುಖದಲ್ಲಿ ಮದುವೆ ಮಾಡುವ ನಿರ್ಧಾರಕ್ಕೆ ಬರಲಾಗಿತ್ತು. 4 ತೊಲಿ ಚಿನ್ನ, 50 ಸಾವಿರ ನಗದು ಹಾಗೂ ಬೈಕ್ ವರದಕ್ಷಿಣೆ ಕೊಡುವ ಮಾತೂ ಆಗಿತ್ತು. ಅಷ್ಟರಲ್ಲಿ ಎರಡನೇ ಪುತ್ರಿಯ ಪ್ರೇಮ ಪ್ರಕರಣ ಬಯಲಿಗೆ ಬಂದಿದ್ದರಿಂದ ಠಾಣೆಗೆ ದೂರು ದಾಖಲಿಸಲಾಗಿತ್ತು.
ತನ್ನನ್ನು ಪ್ರೀತಿಸಿದ ಹುಡುಗಿಯೇ ತನ್ನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ ಎಂದು ಕೋಪಗೊಂಡ ಮಹೇಶ ಪ್ರೀತಿಸುತ್ತಿದ್ದ ಹುಡುಗಿಯನ್ನು ಕೊಲೆ ಮಾಡಲು ನಿರ್ಧರಿಸಿ ಬಂದಿದ್ದ. ಕೊಲೆ ಮಾಡಲು ಬಂದಾಗ ಸದ್ದು ಕೇಳಿ ದಂಪತಿ ಎಚ್ಚರಗೊಂಡರು. ಮುಖಕ್ಕೆ ಕೇಸರಿ ಬಣ್ಣದ ಸ್ಕಾಪ್‌ರ್ ಸುತ್ತಿಕೊಂಡಿದ್ದ ಮಹೇಶನನ್ನು ದಂಪತಿ ಗುರುತಿಸಲಿಲ್ಲ. ಕಳ್ಳ ಎಂದು ಭಾವಿಸಿ ಕೂಗಾಡಿದರು. ಬಾಲಕಿಯ ತಂದೆ (43) ಆರೋಪಿಯನ್ನು ಹಿಡಿದುಕೊಳ್ಳಲು ಹೋದಾಗ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ. ಇದನ್ನು ಕಂಡು ಗರ್ಭಿಣಿಯಾಗಿದ್ದ ಪತ್ನಿ (35) ಕೂಡ ಆರೋಪಿಯನ್ನು ಹಿಡಿಯಲು ಮುಂದಾದರು. ಆಗ ಆಕೆಯ ಕುತ್ತಿಗೆಯನ್ನೂ ಕೊಯ್ದಿದ್ದಾನೆ.