ಬಸ್ ಸಿಗದೆ ಲಗೇಜ್ ಆಟೋದಲ್ಲಿ ಕುರಿಗಳ ರೀತಿ ಪಾವಗಡ ಜನರ ಪ್ರಯಾಣ!
ಮತ್ತೊಂದು ಅಪಘಾತಕ್ಕೆ ಅಣಿಯಾದ ಪಾವಗಡ, ಬಸ್ ಸಿಗದೆ ಲಗೇಜ್ ಆಟೋದಲ್ಲಿ ಜನರ ಪ್ರಯಾಣ. ವಿಡಿಯೋ ವೈರಲ್ .
ವರದಿ : ಮಹಂತೇಶ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್
ತುಮಕೂರು (ಮಾ.24) : ಖಾಸಗಿ ಬಸ್ ಪಲ್ಟಿಯಾಗಿ 6 ಜನ ಬಲಿಯಾದ ಘಟನೆ ಮರೆಯುವನ್ನೇ ಮತ್ತೊಂದು ಅಪಘಾತಕ್ಕೆ ಪಾವಗಡದ (Pavagada) ಜನರು ಅಣಿಯಾಗಿದ್ದಾರೆ. ತುಮಕೂರು (Tumakuru) ಜಿಲ್ಲೆಯ ಪಾವಗಡ ತಾಲ್ಲೂಕಿನ ಗುಂಡಾರ್ಲಹಳ್ಳಿ ಗ್ರಾಮದಲ್ಲಿ ಬಸ್ ಸಿಗದೆ ಜನರು ಲಗೇಜ್ ಆಟೋದಲ್ಲಿ ಕುರಿಗಳ ರೀತಿಯಲ್ಲಿ ಪ್ರಯಣಿಸಿದ್ದಾರೆ. ಜನರು ಲಗೇಜ್ ಆಟೋ ಏರಿ ಹೋಗುತ್ತಿರುವ ವಿಡಿಯೋವನ್ನು ಜನರು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.
ಪಳ್ಳವಳ್ಳಿ ಕಟ್ಟೆ ಮೇಲೆ ಬಸ್ ಅಪಘಾತ ಘಟನೆ ಇಡೀ ಪಾವಗಡ ತಾಲ್ಲೂಕಿನ ಜನರಲ್ಲಿ ಭಯ ಹುಟ್ಟಿಸಿತ್ತು. ಅಪಘಾತ ನಡೆದ ದಿನ ಖುದ್ದು ಸಾರಿಗೆ ಸಚಿವ ಶ್ರೀರಾಮುಲು ಪಾವಗಡ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವಾನ ಹೇಳಿದ್ದರು, ಇದೇ ವೇಳೆ ಪಾವಗಡ ತಾಲ್ಲೂಕಿನಾದ್ಯಂತ ತಕ್ಷಣವೇ ಸರ್ಕಾರಿ ಬಸ್ ಬಿಡುವ ಭರವಸೆ ನೀಡಿದ್ದರು, ಆದರೆ ಘಟನೆ ನಡೆದು 5 ದಿನ ಕಳೆಯುತ್ತಾ ಬಂದರೂ ಗುಂಡಾರ್ಲಹಳ್ಳಿಯ ಜನರು ಬಸ್ ಸಿಗದೆ ಲಗೇಜ್ ಆಟೋದಲ್ಲಿ ಪ್ರಯಣಿಸುತ್ತಿದ್ದಾರೆ.
Tumakur Bus Accident ಅಪಘಾತ ಬಳಿಕ ಪರಾರಿಯಾಗಿದ್ದ ಚಾಲಕನ ಸೆರೆ
ಗುಂಡಾರ್ಲಹಳ್ಳಿಯಿಂದ ಪಾವಗಡ ಪಟ್ಟಣಕ್ಕೆ ಪ್ರತಿನಿತ್ಯ ಹತ್ತಾರು ವಿದ್ಯಾರ್ಥಿಗಳು ಶಾಲೆ ಹಾಗೂ ಕಾಲೇಜಿಗೆ ಸಂಚಾರ ಮಾಡುತ್ತಾರೆ . ಇವರೆಲ್ಲಾ ಕೂಡ ಲಗೇಜ್ ಆಟೋದಲ್ಲಿ ಪ್ರಾಣವನ್ನು ಕೈಯಲ್ಲಿ ಹಿಡಿದು ಪ್ರಯಣಿಸುತ್ತಾರೆ. ಸಚಿವ ಭರವಸೆ ಹುಸಿಯಾಗಿದೆ, ನಮ್ಮ ಗೋಳಿಗೆ ಕೊನೆಯೇ ಇಲ್ಲದಂತಾಗಿದೆ ಎಂದು ಜನರು ಅಳಲು ತೊಡಿಕೊಂಡಿದ್ದಾರೆ.