Asianet Suvarna News Asianet Suvarna News

Tumakur Bus Accident ಅಪಘಾತ ಬಳಿಕ ಪರಾರಿಯಾಗಿದ್ದ ಚಾಲಕನ ಸೆರೆ

  • ಅತಿವೇಗದಿಂದ ಬಸ್‌ ಓಡಿಸಿದ್ದ ಆರೋಪ
  • ಸಹೋದರಿಯರ ಅಂತ್ಯ ಸಂಸ್ಕಾರ
  •  ಅವಘಡ ಬಳಿಕ 4 ಹೆಚ್ಚುವರಿ ಬಸ್‌ನ ಸೌಲಭ್ಯ
     
Tumakuru Bus accident arrested Driver in police custody for further investigation ckm
Author
Bengaluru, First Published Mar 21, 2022, 4:34 AM IST

ತುಮ​ಕೂ​ರು(ಮಾ.21) ಪಾವ​ಗಡ ಸಮೀ​ಪ ಪಳವಳ್ಳಿ ಕೆರೆ ಏರಿ ಮೇಲೆ 6 ಜನರನ್ನು ಬಲಿ ಪಡೆದ ಬಸ್‌ ದುರಂತಕ್ಕೆ ಸಂಬಂಧಿಸಿ ಬಸ್‌ ಚಾಲಕ ರಘು ಎಂಬಾ​ತ​ನನ್ನು ಭಾನು​ವಾರ ಬಂಧಿ​ಸ​ಲಾ​ಗಿ​ದೆ.

ವಿದ್ಯಾ​ರ್ಥಿ​ಗಳೇ ಹೆಚ್ಚಿನ ಸಂಖ್ಯೆ​ಯಲ್ಲಿ ಪ್ರಯಾ​ಣಿ​ಸು​ತ್ತಿದ್ದ ಖಾಸಗಿ ಬಸ್‌ ಪಳ​ವಳ್ಳಿ ಕೆರೆ ಸಮೀಪ ಶನಿ​ವಾರ ಪಲ್ಟಿ​ಯಾ​ಗಿತ್ತು. ಮಿತಿ​ಮೀರಿ ಪ್ರಯಾ​ಣಿ​ಕ​ರನ್ನು ತುಂಬಿ​ಕೊಂಡಿದ್ದು ಮತ್ತು ಅತಿ ವೇಗದ ಚಾಲ​ನೆಯೇ ಈ ದುರಂತಕ್ಕೆ ಕಾರಣ ಎಂಬ ಆರೋಪ ಕೇಳಿ​ಬಂದಿತ್ತು. ಅಲ್ಲದೆ, ಚಾಲಕ ಮೊಬೈ​ಲ್‌​ನಲ್ಲಿ ಮಾತ​ನಾ​ಡುತ್ತಾ ಬಸ್‌ ಓಡಿ​ಸು​ತ್ತಿದ್ದ ಎಂಬ ಆರೋ​ಪವೂ ಕೇಳಿ​ಬಂದಿತ್ತು. ಘಟ​ನೆ ಬೆನ್ನಲ್ಲೇ ಚಾಲ​ಕ ರಘು ಮತ್ತು ನಿರ್ವಾ​ಹಕ ಇಬ್ಬರೂ ಸ್ಥಳ​ದಿಂದ ಪರಾ​ರಿ​ಯಾ​ಗಿ​ದ್ದ​ರು.

ಸಾರಿಗೆ ಬಸ್‌ ಸಂಚಾರ:
ಪಳ​ವಳ್ಳಿ ಬಳಿ ಸಂಭ​ವಿ​ಸಿದ ದುರಂತ​ದಿಂದ ಎಚ್ಚೆ​ತ್ತು​ಕೊಂಡ ಸಾರಿಗೆ ಇಲಾಖೆ ಈ ಭಾಗ​ದಲ್ಲಿ 4 ಹೆಚ್ಚುವರಿ ಬಸ್‌ನ ಸೌಲಭ್ಯ ಒದ​ಗಿ​ಸಿ​ದೆ. ವೈ.ಎನ್‌.ಹೊಸಕೋಟೆಯಿಂದ ಪಾವಗಡ ಮಾರ್ಗ​ದಲ್ಲಿ ಭಾನು​ವಾರ ಬೆಳ​ಗ್ಗೆ​ಯಿಂದಲೇ ನಾಲ್ಕು ಹೆಚ್ಚುವರಿ ಬಸ್‌ ಓಡಾಟ ಆರಂಭವಾಗಿದೆ.

ಮೃತರ ಕುಟುಂಬಕ್ಕೆ 50 ಸಾವಿರ ರೂ, ಗಾಯಾಳುಗಳಿಗೆ 10 ಸಾವಿರ ರೂ ಎಚ್‌ಡಿಕೆ ನೆರವು

ಸಹೋದರಿಯರ ಅಂತ್ಯ ಸಂಸ್ಕಾರ
ಬಸ್‌ ದುರಂತದಲ್ಲಿ ಮೃತ​ಪಟ್ಟಆರು ಮಂದಿ​ಯಲ್ಲಿ ಅಮೂಲ್ಯ ಹಾಗೂ ಹರ್ಷಿತಾ ಸಹೋ​ದ​ರಿ​ಯ​ರಾ​ಗಿದ್ದು, ಅವರ ಅಂತ್ಯ​ಕ್ರಿಯೆ ಪಾವಗಡ ತಾಲೂಕು ಪೋತಗಾನಹಳ್ಳಿ ಗ್ರಾಮದಲ್ಲಿ ಭಾನು​ವಾ​ರ ನೆರವೇರಿತು. ಹನುಮಂತರಾಯ ಮತ್ತು ಲಕ್ಷ್ಮೇನರಸಮ್ಮ ದಂಪತಿಯ ಈ ಇಬ್ಬರು ಪುತ್ರಿಯರ ಪೈಕಿ ಅಮೂಲ್ಯ ಸ್ಥಳದಲ್ಲೇ ಸಾವಿ​ಗೀ​ಡಾ​ದರೆ, ಹರ್ಷಿತಾ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆ​ಯು​ಸಿ​ರೆ​ಳೆ​ದಿ​ದ್ದರು. ಸದಾ ಜತೆ​ಯಾ​ಗಿಯೇ ಇರು​ತ್ತಿದ್ದ ಇಬ್ಬರು ಮಕ್ಕಳ ಸಾವಿನಿಂದಾಗಿ ಕುಟುಂಬ​ಸ್ಥ​ರ ಆಕ್ರಂದನ ಮುಗಿಲು ಮುಟ್ಟಿ​ತ್ತು.

5 ವಿದ್ಯಾರ್ಥಿಗಳು ಸೇರಿ 6 ಜನ ಬಲಿ
ಮಿತಿ​ಗಿಂತ ಹೆಚ್ಚಿನ ಜನ​ರನ್ನು ಹೇರಿ​ಕೊಂಡು ವೇಗ​ವಾಗಿ ಸಾಗು​ತ್ತಿದ್ದ ಖಾಸಗಿ ಬಸ್ಸೊಂದು ಪಲ್ಟಿ​ಯಾದ ಪರಿಣಾಮ ಐವರು ವಿದ್ಯಾರ್ಥಿಗಳು ಸೇರಿ ಆರು ಮಂದಿ ಮೃತಪಟ್ಟಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಬಳಿ ಶನಿ​ವಾರ ಬೆಳಗ್ಗೆ ನಡೆದಿದೆ. ಈ ಭೀಕರ ಅಪ​ಘಾ​ತ​ದಲ್ಲಿ 25ಕ್ಕೂ ಹೆಚ್ಚು ಮಂದಿ ಗಂಭೀರ ಗಾಯ​ಗೊಂಡಿ​ದ್ದಾ​ರೆ.

ಅಪಘಾತದಲ್ಲೇ ಮಗಳು, ಅತ್ತೆಯನ್ನ ಕಳೆದುಕೊಂಡಿದ್ದೇನೆ, ಗಾಯಾಳುಗಳಿಗೆ ಸಮಧಾನ ಹೇಳಿದ ಸಚಿವ

ಜಿಲ್ಲೆಯ ಸೂಲನಾಯಕನಹಳ್ಳಿಯ ಅಮೂಲ್ಯ(16), ಅಜಿತ್‌ (18), ಬೆಸ್ತರಹಳ್ಳಿಯ ಶಹನವಾಜ್‌ (18), ವೈ.ಎನ್‌.ಹೊಸಕೋಟೆಯ ಕಲ್ಯಾಣ್‌(18), ದಾದು​ವ​ಲ್ಲಿ​(26), ಹೃಷಿ​ಕಾ​(21) ಮೃತರು. ಘಟನೆಗೆ ಸಂಬಂಧಿಸಿ ಪಾವಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಘಟನೆ ನಡೆದಿದ್ದು ಹೇಗೆ?:
ವೈ.ಎನ್‌.ಹೊಸಕೋಟೆಯಿಂದ ಪಾವಗಡಕ್ಕೆ ತೆರ​ಳು​ತ್ತಿದ್ದ ಖಾಸಗಿ ಬಸ್‌ ಪಳವಳ್ಳಿ ಕಟ್ಟೆ(ಪಾ​ವ​ಗ​ಡ​ದಿಂದ 5 ಕಿ.ಮೀ. ದೂರ​) ಬಳಿ ಸಾಗು​ತ್ತಿ​ದ್ದಾಗ ಕೆರೆ ಏರಿ ಮೇಲಿನ ಇಕ್ಕಟ್ಟಾದ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಈ ವೇಳೆ ಬಸ್‌ ಓವ​ರ್‌​ಲೋಡ್‌ ಆಗಿ​ತ್ತು. ಬಸ್ಸಿ​ನ ಒಳಗೆ ಸುಮಾರು 90ಕ್ಕೂ ಹೆಚ್ಚು ವಿದ್ಯಾ​ರ್ಥಿ​ಗ​ಳಿದ್ದು, ಬಸ್‌ನ ಟಾಪ್‌ ಮೇಲೆ 20ಕ್ಕೂ ಹೆಚ್ಚು ಮಂದಿ ಪ್ರಯಾ​ಣಿ​ಸು​ತ್ತಿ​ದ್ದರು. ಹೆಚ್ಚಿ​ನ​ವರು ವಿದ್ಯಾ​ರ್ಥಿ​ಗ​ಳಾ​ಗಿ​ದ್ದ​ರು. ಸಾಮರ್ಥ್ಯಕ್ಕಿಂತ ಅಧಿಕ ಮಂದಿ​ಯಿದ್ದ ಬಸ್‌ ಅನ್ನು ಚಾಲಕ ಅತೀ ವೇಗ​ವಾಗಿ ಚಲಾ​ಯಿ​ಸು​ತ್ತಿ​ದ್ದುದೇ ಅಪ​ಘಾ​ತಕ್ಕೆ ಕಾರಣ ಎಂಬ ಆರೋಪ ಕೇಳಿ​ಬಂದಿ​ದೆ.

ಹೇಳಿ​ದರೂ ಕೇಳ​ಲಿ​ಲ್ಲ:
ಅಪ​ಘಾತಕ್ಕೂ ಮೊದಲು ನಿಲ್ದಾ​ಣ​ವೊಂದ​ರಲ್ಲಿ ಕೆಲ​ವರು ಚಾಲ​ಕ​ನಿಗೆ ಮಿತಿ​ಮೀ​ರಿದ ವೇಗ​ದಲ್ಲಿ ಬಸ್‌ ಓಡಿ​ಸ​ದಂತೆ ಮನ​ವಿ​ಯನ್ನೂ ಮಾಡಿ​ಕೊಂಡಿ​ದ್ದರು ಎನ್ನ​ಲಾ​ಗಿದೆ. ಆದರೂ ಇದನ್ನು ಕಿವಿಗೆ ಹಾಕಿ​ಕೊ​ಳ್ಳದ ಚಾಲಕ ತಿರು​ವಿ​ನಲ್ಲೂ ವೇಗ​ವಾಗಿ ಬಸ್‌ ಓಡಿ​ಸಿ​ದ್ದ​ರಿಂದ ಈ ದುರಂತ ಸಂಭ​ವಿ​ಸಿದೆ ಎಂದು ಬಸ್‌​ನ​ಲ್ಲಿದ್ದ ಪ್ರಯಾ​ಣಿ​ಕರೇ ಆರೋ​ಪಿ​ಸಿ​ದ್ದಾ​ರೆ.

ಪಾವಗಡ ಹಾಗೂ ವೈ.ಎನ್‌.ಹೊಸಕೋಟೆ ಮಾರ್ಗವಾಗಿ ಸರ್ಕಾರಿ ಬಸ್‌ಗಳ ಕೊರತೆಯಿಂದಾಗಿ ಖಾಸಗಿ ಬಸ್‌ಗಳ ಓಡಾಟ ಹೆಚ್ಚಿದ್ದು, ಪರೀಕ್ಷಾ ಸಮಯದ ಕಾರಣ ವಿದ್ಯಾರ್ಥಿಗಳು ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಘಟ​ನೆ​ಯಲ್ಲಿ ಗಾಯ​ಗೊಂಡ​ವ​ರಲ್ಲಿ ಹೆಚ್ಚಿ​ನ​ವರು ವಿದ್ಯಾ​ರ್ಥಿ​ಗಳೇ ಇದ್ದಾ​ರೆ.

Follow Us:
Download App:
  • android
  • ios