ಕೊಪ್ಪಳ(ಸೆ.26) ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ(ನರೇಗಾ) ಯೋಜನೆ ಸಮಪರ್ಕವಾಗಿ ಜಾರಿಗೊಂಡಿಲ್ಲ, ಯೋಜನೆಯಡಿ ಜಿಲ್ಲೆಯಾದ್ಯಂತ ಸುಮಾರು 18 ಕೋಟಿ ಅವ್ಯವಹಾರವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಕೂಲಿ ಕಾರ್ಮಿಕರು ಬೃಹತ್‌ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಂಘದ ಪ್ರತಿನಿಧಿ ಆರ್‌.ಕೆ. ದೇಸಾಯಿ, ಕೊಪ್ಪಳ ಜಿಲ್ಲೆ ಸೇರಿದಂತೆ ಕುಷ್ಟಗಿ ತಾಲೂಕು ತೀವ್ರ ಬರಗಾಲದಿಂದ ತತ್ತರಿಸಿದ್ದು, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಪಿಡಿಒಗಳು ಜನರ ಬೇಡಿಕೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಜಿಲ್ಲಾ ಪಂಚಾಯಿತಿ ಆಡಳಿತ ವರ್ಗ ಕೂಡ ನಮ್ಮ ಮನವಿಗೆ ಕ್ಯಾರೆ ಎನ್ನುತ್ತಿಲ್ಲ. ಅಧಿಕಾರಿಗಳೆ ಹೀಗೆ ಮಾಡಿದರೆ ನಾವು ಯಾರ ಹತ್ತಿರ ನ್ಯಾಯ ಕೇಳಬೇಕು ಎಂದು ತಮ್ಮ ಅಳಲು ತೊಡಿಕೊಂಡರು.

ಉದ್ಯೋಗ ಖಾತ್ರಿ ಕಾಯ್ದೆ ಉಲ್ಲಂಘನೆ ದಿನನಿತ್ಯ ನಡೆಯುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಲೈನ ಡಿಪಾರ್ಟಮೆಂಟ್‌ಗಳಿಂದ ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷರುಗಳ ಶಾಮಿಲಿನೊಂದಿಗೆ ಬೇಕಾಬಿಟ್ಟಿಯಾಗಿ ಎನ್‌ಎಂಆರ್‌ ತೆಗೆದು ಫಲಾನುಭವಿಗಳ ಮೇಲೆ ದಬ್ಬಾಳಿಕೆ ನಡೆಸಿ ಕೂಲಿಕಾರರ ಹಣ ನುಂಗಿ ಹಾಕುತ್ತಿದ್ದಾರೆ. ಭ್ರಷ್ಟರಾಜಕಾರಣಿಗಳು, ಅವರ ಹಿಂಬಾಲಕರ ದಬ್ಬಾಳಿಕೆಯಿಂದ ಕೂಲಿ ಕಾರ್ಮಿಕರು ರೋಸಿ ಹೋಗಿದ್ದಾರೆ. ಅಧಿಕಾರಿಗಳ ಭ್ರಷ್ಟಚಾರ ಇಡೀ ಸಮಾಜಕ್ಕೆ ತಿಳಿದರೂ ಜಿಲ್ಲಾಡಳಿತಕ್ಕೆ ಯಾಕೆ ತಿಳಿಯುತ್ತಿಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರು ಹಾಗೂ ರೈತರ ನಿರಂತರ ಚಳುವಳಿಯ ಮಾಡಿದ್ದರಿಂದ ಇಂದು ಉದ್ಯೋಗ ಖಾತ್ರಿ ಯೋಜನೆಯಡಿ ಸ್ವಲ್ಪ ಪ್ರಮಾಣದ ಭ್ರಷ್ಟಾಚರ ಇಳಿಮುಖವಾಗಿದೆ. ದುಡಿಮೆಗಾರರಿಗೆ ಸರಿಯಾದ ವೇತನ, ಸೌಲಭ್ಯಗಳು, ನಿಗದಿತ ಸಮಯದಲ್ಲಿ ವೇತನ, ಬೇಡಿಕೆ ಬಂದಲ್ಲಿ ಕೂಡಲೆ ಕೆಲಸ ನೀಡಿದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಖಾತ್ರಿ ಕಾಯ್ದೆ ಯಶಸ್ವಿಯಾಗಲಿದೆ ಎಂದು ಹೇಳಿದರು. 

ಕೂಡಲೇ ಕೂಲಿ ಕಾರ್ಮಿಕರ ಬಾಕಿ ವೇತನ, ಕೂಪಳ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು, 100 ದಿನ ಹೆಚ್ಚಿನ ಕೆಲಸವನ್ನು ನೀಡಬೇಕು. ವರ್ಷದಲ್ಲಿ 200 ದಿನ ಕೆಲಸ ಮತ್ತು ದಿನಗೂಲಿಯನ್ನು . 600 ಕ್ಕೆ ಹೆಚ್ಚಳ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಬಳಿಕ ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ಪ್ರಾಂತ ರೈತ ಸಂಘ ಉಪಾಧ್ಯಕ್ಷ ಸಂಗಪ್ಪ ಅಂದಪ್ಪ ಕಮತರ, ಶ್ರೀಶೈಲಪ್ಪ, ಹನುಮಂತಪ್ಪ, ಮಲ್ಲಮ್ಮ, ಯಮನವ್ವ, ಸುಂಕಪ್ಪ ಗದಗ ಸೇರಿದಂತೆ ಕುಷ್ಟಗಿ ತಾಲೂಕಿನ ನೂರಾರು ಕೂಲಿ ಕಾರ್ಮಿಕರು ಪ್ರತಿಭಟನೆ ಪಾಲ್ಗೊಂಡಿದ್ದರು.

18 ಕೋಟಿ ಅವ್ಯವಹಾರ:

ಕೊಪ್ಪಳ ಜಿಲ್ಲೆಯಾದ್ಯಂತ ಉದ್ಯೋಗ ಖಾತ್ರಿ ಯೋಜನೆಯಡಿ 2018-19 ನೇ ಸಾಲಿನಲ್ಲಿ 18 ಕೋಟಿ ಅವ್ಯವಹಾರವಾಗಿದೆ. ಅಧಿಕಾರಿಗಳೆ ಇದರಲ್ಲಿ ನೇರವಾಗಿ ಭಾಗಿದಾರರಾಗಿದ್ದು, ಅವರ ಮೇಲೆ ಸೂಕ್ತ ಕ್ರಮ ಜರುಗಿಸುವುದು ಅಲ್ಲದೇ ಸೆರೆಮನೆಗೆ ತಳ್ಳಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅವರಿಗೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.