ಕೊಪ್ಪಳ: ಉದ್ಯೋಗ ಖಾತ್ರಿ ಕೂಲಿಯ ಜತೆ ಹಂತಿ ಪದದ ರಸಗವಳ!
ತಾಲೂಕಿನ ಹೇರೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುವ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ವೇಳೆ ಬರೀ ಬಿಸಿಲು, ಮಣ್ಣು, ಕಲ್ಲು, ಬೆವರಿನÜ ಜತೆಗೆ ಕೂಲಿಕಾರ ಯಲ್ಲಪ್ಪ ಹೂಗಾರ ಅವರ ಹಂತಿ ಪದಗಳ ರಸಗವಳ, ಯೋಗಾಸನ ಪ್ರದರ್ಶನವೂ ಇರುತ್ತದೆ!
ರಾಮಮೂರ್ತಿ ನವಲಿ
ಗಂಗಾವತಿ (ಜೂ.4) : ತಾಲೂಕಿನ ಹೇರೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುವ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ವೇಳೆ ಬರೀ ಬಿಸಿಲು, ಮಣ್ಣು, ಕಲ್ಲು, ಬೆವರಿನÜ ಜತೆಗೆ ಕೂಲಿಕಾರ ಯಲ್ಲಪ್ಪ ಹೂಗಾರ ಅವರ ಹಂತಿ ಪದಗಳ ರಸಗವಳ, ಯೋಗಾಸನ ಪ್ರದರ್ಶನವೂ ಇರುತ್ತದೆ!
68ರ ಹರೆಯದ ಯಲ್ಲಪ್ಪ ಇಳಿ ವಯಸಲ್ಲೂ ಯುವಕರಂತೆ ಕೆಲಸ ಮಾಡುತ್ತಾರೆ. ನರೇಗಾ ಕೆಲಸ ಮಾಡುತ್ತ ಯಾವುದೇ ಕೆಲಸಕ್ಕಾದರೂ ಸೈ. ಆಯಾಸ, ವಿಶ್ರಾಂತಿ ಎಂಬುವುದೇ ಇಲ್ಲ ಎನ್ನುವಷ್ಟುಕ್ರೀಯಾಶೀಲರು. ಹೀಗೆ ಕೆಲಸ ಮಾಡುತ್ತಲೇ ಮಧ್ಯದಲ್ಲಿ ಕಾರ್ಮಿಕರ ಮನರಂಜನೆಗಾಗಿ ಹಂತಿ ಪದ, ಸವಾಲಿನ ಪದಗಳನ್ನು ಹಾಡಿ ರಂಜಿಸುತ್ತ ಉಳಿದ ಕಾರ್ಮಿಕರ ದಣಿವು ಆರಿಸುತ್ತಾರೆ.
ರೋಹಿಣಿ ಮಳೆಯೂ ಮಾಯ, ಆತಂಕದಲ್ಲಿ ಕೊಪ್ಪಳ ರೈತರು!
ಗುದ್ದಲಿ, ಸಲಿಕೆ ಹಿಡಿದು ಕೆಲಸ ಆರಂಭಿಸಿದರೆ ಯಾವುದೇ ಯುವಕರಿಗೂ ಕಡಿಮೆ ಇಲ್ಲದಂತೆ ಕಾರ್ಯ ನಿರ್ವಹಿಸುವ ಶ್ರಮಿಕ ಯಲ್ಲಪ್ಪ 7 ಮಕ್ಕಳ ತಂದೆ. ಆದರೂ ಕಟ್ಟುಮಸ್ತಾದ ಮೈಕಟ್ಟು ಉಳಿಸಿಕೊಂಡಿದ್ದಾರೆ. ಉರಿ ಬಿಸಿಲಲ್ಲೇ ಶಿರ್ಷಾಸನ ಹಾಕಿ ಸುಮಾರು ಹೊತ್ತು ನಿಲ್ಲುುತ್ತಾರೆ. ಇವರ ಕ್ರಿಯಾಶೀಲತೆಗೆ ಯುವಕರು ಬೆರಗಾಗಿದ್ದಾರೆ. ಆ ಕೂಲಿ ಕೆಲಸದಲ್ಲಿ ಯಲ್ಲಪ್ಪ ಇದ್ದರೆ ಹೊತ್ತು ಹೋದದ್ದೇ ಗೊತ್ತಾಗುವುದಿಲ್ಲ. ದಣಿವೂ ಆರಿ ಹೋಗುತ್ತದೆ.
ಯಲ್ಲಪ್ಪ ಹೂಗಾರ ಅವರ ಕೆಲಸ ಮತ್ತು ಕ್ರೀಯಾಶೀಲತೆಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ರವಿಶಾಸ್ತ್ರಿ ಸೇರಿದಂತೆ ಮೇಲಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ನನಗೆ 68 ವಯಸ್ಸು, ನಿತ್ಯ ದುಡಿಯುವೆ. ಊರಲ್ಲಿ ಕೆಲಸ ಇಲ್ಲದಿದ್ದಾಗ ನರೇಗಾ ಕೆಲಸ ಮಾಡುತ್ತಾ ಸ್ವಾವಲಂಬಿ ಬದುಕು ನಡೆಸುತ್ತಿರುವೆ. ಆರೋಗ್ಯವೇ ಮಹಾಭಾಗ್ಯ ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಬೇಕು. ನಾನು ಈ ವಯಸಲ್ಲೂ ಅರ್ಧ ಗಂಟೆಯಲ್ಲಿ ಹತ್ತುಕ್ಕೂ ಹೆಚ್ಚು ತೆಂಗಿನ ಮರ ಏರಿ ಇಳಿಯಬಲ್ಲೆ, ನಿಮಿಷಕ್ಕೂ ಹೆಚ್ಚು ಕಾಲ ತಲೆ ಕೆಳಗೆ, ಕಾಲು ಮೇಲೆ ಮಾಡಿ ನಿಲ್ಲುವೆ.
ಯಲ್ಲಪ್ಪ ಹೂಗಾರ, ನರೇಗಾ ಕೂಲಿಕಾರರು,ಹೇರೂರು ಗ್ರಾಮ
ಕೂಲಿಕಾರ ಯಲ್ಲಪ್ಪ ಹೂಗಾರ ಸಾಹಸ ಹಾಗೂ ಸ್ವಾವಲಂಬಿ ಜೀವನ ಯುವ ಸಮುದಾಯಕ್ಕೆ ಮಾದರಿಯಾಗಿದೆ. 68 ವಯಸ್ಸಿನಲ್ಲಿ ಅವರ ಉತ್ಸಾಹ ನೋಡಿದರೆ ಖುಷಿ ಆಗುತ್ತದೆ. ಎಲ್ಲರೂ ಆರೋಗ್ಯಕ್ಕೆ ಹೆಚ್ಚು ಒತ್ತುಕೊಟ್ಟರೆ ಆರೋಗ್ಯಯುತ ಜೀವನ ನಡೆಸಲು ಸಹಕಾರಿ ಆಗುತ್ತದೆ.
ಮಹಾಂತಗೌಡ ಪಾಟೀಲ್,ಕಾರ್ಯನಿರ್ವಾಹಕ ಅಧಿಕಾರಿಗಳು, ತಾಪಂ ಗಂಗಾವತಿ
ಕೊಪ್ಪಳ: ಕರಡಿ ದಾಳಿಗೆ ವ್ಯಕ್ತಿಗೆ ಗಾಯ,ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ
ಗ್ರಾಪಂದಿಂದ ಉದ್ಯೋಗ ಖಾತ್ರಿ ಕೆಲಸ ನೀಡಿದಾಗಲೊಮ್ಮೆ ಯಲ್ಲಪ್ಪ ಖುಷಿಯಿಂದ ಕೆಲಸಕ್ಕೆ ಬರುತ್ತಾರೆ. ಕಾಮಗಾರಿ ಸ್ಥಳದಲ್ಲಿ ಕೆಲಸದ ಜತೆಗೆ ಹಾಡು ಹಾಡುತ್ತಾ ಕೂಲಿಕಾರರನ್ನು ರಂಜಿಸುತ್ತಾರೆ. ಜನಪದ ಸಾಹಿತ್ಯ ಯುವ ಸಮುದಾಯಕ್ಕೆ ತಿಳಿಸುತ್ತಿದ್ದಾರೆ.
ರವಿಶಾಸ್ತ್ರೀ ಚಿಕ್ಕಮಠ, ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂ ಹೇರೂರು