Asianet Suvarna News Asianet Suvarna News

ಬೆಂಗಳೂರು: ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್‌ಗೆ ಕೆಯುಡಬ್ಲ್ಯೂಜೆ ಗೌರವ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿರುವ ಹಿರಿಯ ಪತ್ರಕರ್ತರಿಗೆ ಗೌರವ ಸಮರ್ಪಣೆ ಮಾಡುವ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮ

KUWJ Honor to Veteran Journalist TJS George in Bengaluru grg
Author
Bengaluru, First Published Aug 24, 2022, 2:30 AM IST

ಬೆಂಗಳೂರು(ಆ.24):  ಅಮೃತ ಸ್ವಾತಂತ್ರ್ಯದ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಹಮ್ಮಿಕೊಂಡಿರುವ ಹಿರಿಯ ಪತ್ರಕರ್ತರಿಗೆ ಗೌರವ ಸಮರ್ಪಣೆ ಮಾಡುವ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮದಲ್ಲಿ 94 ವಸಂತಗಳು ಕಂಡಿರುವ ಹಿರಿಯ ಪತ್ರಕರ್ತರಾದ ಟಿಜೆಎಸ್ ಜಾರ್ಜ್‌ ಅವರನ್ನು ಬೆಂಗಳೂರು ಕಂಟೋನ್ಮೆಂಟ್ ಬಳಿ ಇರುವ ಅವರ ಮನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಗೌರವಿಸಿದರು.

1950ರಲ್ಲಿ ಮುಂಬಯಿನ ಫ್ರೀ ಪ್ರೆಸ್ ಜರ್ನಲ್ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿದ ಅವರು, ಹಾಂಗ್‌ಕಾಂಗ್‌ನಲ್ಲಿ ಏಷ್ಯಾ ವೀಕ್ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ, ಕನ್ನಡ ಪ್ರಭ ಪತ್ರಿಕೆಯಲ್ಲಿ 25 ವರ್ಷ ಸುದೀರ್ಘವಾಗಿ ಪಾಯಿಂಟ್ ಆಫ್ ವೀವ್ ಅಂಕಣ ಬರೆದಿರುವುದು ಭಾರತೀಯ ಪತ್ರಿಕೋದ್ಯಮದಲ್ಲಿ ದಾಖಲೆ. ಸತತವಾಗಿ 7 ದಶಕಗಳಿಗೂ ಹೆಚ್ಚು ಸುದೀರ್ಘ ಅವಧಿಗೆ ನಾನಾ ಹಂತದಲ್ಲಿ ಸುದ್ದಿಮನೆಯಲ್ಲಿ ಘನತೆಯಿಂದ ದುಡಿದು ಪತ್ರಿಕೋದ್ಯಮ ಕಟ್ಟಿ ಬೆಳೆಸಿದ ಪ್ರಮುಖರು. ತಮ್ಮ ಬದುಕನ್ನು ಸುದ್ದಿ ಮನೆಗೆ ಸಮರ್ಪಣೆ ಮಾಡಿದ ಹಿರಿಯ ಚೇತನ. ಇಳಿವಯಸ್ಸಿನಲ್ಲೂ ಅಂಕಣ ಬರೆಯುತ್ತಾ ತಮ್ಮೊಳಗಿನ ಪತ್ರಕರ್ತನನ್ನು ಜಾಗೃತವಾಗಿ ಕಾಪಿಟ್ಟುಕೊಂಡವರು. ಜಾರ್ಜ್‌ ಅವರು ಪತ್ರಕರ್ತರು ಅಷ್ಟೇ ಅಲ್ಲ, 20ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದ ಸಾಹಿತಿಯೂ ಹೌದು. ಇಂತಹ ಹಿರಿಯ ಪತ್ರಕರ್ತರನ್ನು ಅವರ ಮನೆಯ ಅಂಗಳಕ್ಕೆ ತೆರಳಿ ಗೌರವಿಸುತ್ತಿರುವುದು ಕೆಯುಡಬ್ಲ್ಯೂಜೆ ಗೂ ಅಭಿಮಾನದ ಸಂಗತಿಯಾಗಿದೆ.

ಆ.06ರಂದು ಜಿ.ಎನ್ ರಂಗನಾಥ ರಾವ್ ಅವರ 'ಆ ಪತ್ರಿಕೋದ್ಯಮ' ಪುಸ್ತಕ ಬಿಡುಗಡೆ

ಗೌರವ ಸ್ವೀಕರಿಸಿ ಮಾತನಾಡಿದ ಜಾರ್ಜ್ ಅವರು, ನನ್ನ ಮನೆಗೆ ಕೆಯುಡಬ್ಲ್ಯೂಜೆ ಬಂದು ಗೌರವ ಮಾಡಿರುವುದು ಅಭಿಮಾನದ ಸಂಗತಿ ಎಂದು ಸ್ಮರಿಸಿದರು. ಪತ್ರಕರ್ತ ಆಗಬೇಕು ಎನ್ನುವ ತುಡಿತ ಅವರ ಮನಸಿನಲ್ಲಿ ಮೊಳೆಯಬೇಕೆ ಹೊರತು, ಅದು ಎಂದೂ ಬಲವಂತದ ಕ್ರಿಯೆ ಆಗಬಾರದು ಎಂದರು.

ಪತ್ರಿಕೋದ್ಯಮ ಒಳ್ಳೆಯದಕ್ಕೂ ಇದೆ. ಕೆಟ್ಟದ್ದಕ್ಕೂ ಬಳಸಬಹುದು. ಆದರೆ ಪತ್ರಕರ್ತರ ಮನಸ್ಸು ಒಳ್ಳೆಯದರ ಕಡೆಗೆ ಸಾಗಿದರೆ, ಸಮಾಜದಲ್ಲಿ ಸುಧಾರಣೆಗೆ ಬೆಳಕಾಗಬಹುದು. ಇದರಿಂದ ಪತ್ರಕರ್ತರ ಘನತೆಯೂ ಹೆಚ್ಚುತ್ತದೆ. ಅಲ್ಪಾವಧಿ ಯೋಚನೆಗಳಿಂದ ಬೇರೆ ದಾರಿ ಹಿಡಿದರೆ ವೃತ್ತಿ ಜೀವನದಲ್ಲಿ ನಿಮಗೆ ದೀರ್ಘಾವಧಿ ನೆಮ್ಮದಿ ಸಿಗಲು ಖಂಡಿತವಾಗಿ ಸಾಧ್ಯವಿಲ್ಲ ಎಂದರು.

ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ  ಶಿವಾನಂದ ತಗಡೂರು ಮಾತನಾಡಿ, ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಸುದ್ದಿ ಮನೆಯ ಹಿರಿಯರನ್ನು  ಗೌರವಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಇಂದು ಪತ್ರಿಕೋದ್ಯಮದ ಇತಿಹಾಸದಲ್ಲಿ ಮೇರು ಶಿಖರವಾಗಿರುವ ಜಾರ್ಜ್ ಅವರು, ವಿದೇಶದಲ್ಲಿ ಪತ್ರಿಕೆ ನಡೆಸಿ, ಭಾರತಕ್ಕೆ ಬಂದು ಮತ್ತೆ ರಾಜ್ಯ ರಾಜಧಾನಿಯಲ್ಲಿ  ನೆಲೆಸಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ, ಕನ್ನಡ ಪ್ರಭ ಪತ್ರಿಕೆ ಮೂಲಕ ತಮ್ಮ ಬರಹ ಅಂಕಣಗಳಲ್ಲಿ ಛಾಪು ಮೂಡಿಸಿದ್ದಾರೆ. ತಮ್ಮದೇ ಗರಡಿಯಲ್ಲಿ ಮಾಗಿಸಿದ ಅನೇಕ  ಶಿಷ್ಯರನ್ನು  ಸುದ್ದಿ ಮನೆಗೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಕನ್ನಡ ಪ್ರಭ, ಸುವರ್ಣ ಟಿವಿ ಚಾನಲ್ ಪ್ರಧಾನ ಸಂಪಾದಕ ರವಿಹೆಗಡೆ ಮಾತನಾಡಿ, ಹಿರಿಯರಾದ ಜಾರ್ಜ್ ಅವರು ನಮಗೆ ಗುರುಗಳು ಇವರ ಮಾರ್ಗದರ್ಶನದಿಂದ ನಾವು ಈ ಹಂತಕ್ಕೆ ತಲುಪಲು ಸಾಧ್ಯವಾಯಿತು. ಇವರಿಂದ ಪಳಗಿದವರು, ಪತ್ರಿಕೋದ್ಯಮದಲ್ಲಿ ಸರಿಯಾದ ಮೂರ್ತಿಗಳಾಗಿ  ರೂಪಗೊಳ್ಳಲು ಸಾಧ್ಯವಾಗಿದೆ ಎಂದರು.

ಐಎಫ್ ಡಬ್ಲ್ಯೂಜೆ ಅಧ್ಯಕ್ಷರಾದ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಇಂತಹ ಹಿರಿಯರಿಂದಾಗಿ ನಮ್ಮ ಪತ್ರಿಕೋದ್ಯಮಕ್ಕೆ ದೊಡ್ಡ ಕೊಡುಗೆ ಸಾಧ್ಯವಾಯಿತು. ಪತ್ರಕರ್ತ ಹೇಗಿರಬೇಕು ಎನ್ನುವುದಕ್ಕೆ ಜಾರ್ಜ್ ಅವರು ಮಾದರಿ. ಇವರ ಆದರ್ಶಗಳನ್ನು ಇಂದಿನ ಯುವ ಪತ್ರಕರ್ತರು ರೂಡಿಸಿಕೊಂಡರೇ ವೃತ್ತಿ ಘನತೆ ಹೆಚ್ಚಿಸಲು ಸಾಧ್ಯ ಎಂದರು.

ಮಾಧ್ಯಮಗಳನ್ನು ಜನರೂ ವಿಶ್ಲೇಷಿಸ್ತಾರೆ: ಸಿಎಂ ಬೊಮ್ಮಾಯಿ

ಕನ್ನಡ ಪ್ರಭದ ಜೋಗಿ, ಎಕನಾಮಿಕ್ಸ್ ಟೈಮ್ಸ್ ನ ಬಾಲಸುಬ್ರಹ್ಮಣ್ಯಂ (ಬಾಲು) ಅವರು ಮಾತನಾಡಿ, ಜಾರ್ಜ್ ಅವರನ್ನು ಗೌರವಿಸುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ಈ ಸುಂದರ ಕ್ಷಣಗಳು ಅವಿಸ್ಮರಣೀಯವಾಗಿವೆ ಎಂದರು.

ಕಾರ್ಯಕ್ರಮದ ಆರಂಭಕ್ಕೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಸ್ವಾಗತಿಸಿದರು, ಉಪಾಧ್ಯಕ್ಷರಾದ  ಭವಾನಿಸಿಂಗ್ ಠಾಕೂರ್ ವಂದಿಸಿದರು. ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಧಾರವಾಡ ಜಿಲ್ಲಾಧ್ಯಕ್ಷ ಲೋಚನೇಶ ಹೂಗಾರ, ಬೆಂಗಳೂರು ಘಟಕದ ಸೋಮಶೇಖರ ಗಾಂಧಿ ಹಾಜರಿದ್ದರು.
 

Follow Us:
Download App:
  • android
  • ios