ಬೆಂಗಳೂರು (ಅ.06): ತಮ್ಮ ‘ದುರದೃಷ್ಟದ’ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ ಪೋಸ್ಟ್‌ ಮಾಡಿದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ವಿರುದ್ಧ ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಕುಸುಮಾ ಹನುಮಂತರಾಯಪ್ಪ (ಕು​ಸುಮಾ ಡಿ.ಕೆ. ರವಿ​) ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಿವಂಗತ ಡಿ.ಕೆ. ರವಿ ಪತ್ನಿ ಕುಸುಮಾ ಅವರು ಕಾಂಗ್ರೆಸ್‌ ಸದಸ್ಯತ್ವ ಪಡೆದು ಡಿ.ಕೆ. ಶಿವಕುಮಾರ್‌ ಅವರಿಂದ ಆಶೀರ್ವಾದ ಪಡೆಯುತ್ತಿರುವ ಚಿತ್ರ ಪೋಸ್ಟ್‌ ಮಾಡಿದ್ದ ಪ್ರಶಾಂತ್‌ ಸಂಬರಗಿ, ‘ಕಸುಮಾ ಅವರ ದುರದೃಷ್ಟ ಡಿ.ಕೆ.ರವಿಯಿಂದ ಡಿ.ಕೆ.ಶಿವಕುಮಾರ್‌ ಅವರಿಗೆ ವರ್ಗಾವಣೆಯಾಗಿದೆ’ ಎಂದು ಬರೆದಿದ್ದರು.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ಕುಸುಮಾ, ‘ಯಾರನ್ನೋ ಮೆಚ್ಚಿಸುವ ಭರದಲ್ಲಿ ನನ್ನ ಅದೃಷ್ಟವಿಷಯವನ್ನು ಪ್ರಸ್ತಾಪಿಸಿದ್ದೀರಿ. ಎಲ್ಲರ ಬದುಕಿನಲ್ಲಿ ಇಣುಕುವ ನೀವು ಹಿಂದೆ-ಮುಂದೆ ತಿಳಿಯದೇ ಇನ್ನೊಬ್ಬರ ಚಾರಿತ್ರ್ಯವಧೆಗೆ ಇಳಿಯುವುದು ನಿಮ್ಮ ಘನತೆಗೆ ಶೋಭೆ ತರುವುದಿಲ್ಲ. ಇದೇ ರೀತಿ ನಿಮ್ಮ ಮನೆಯಲ್ಲೇ ಅಕ್ಕ-ತಂಗಿ ನನ್ನ ಸ್ಥಾನದಲ್ಲಿದ್ದರೆ ಹೀಗೆಯೇ ವಿಡಂಬನೆ ಮಾಡುತ್ತಿದ್ದಿರಾ?’ ಎಂದು ಪ್ರಶ್ನಿಸಿದ್ದಾರೆ.

‘ಬೇರೆಯವರ ಮನೆಯ ಹೆಣ್ಣುಮಗಳ ಅದೃಷ್ಟಹುಡುಕುವ ನಿಮಗೆ ಹಥ್ರಾಸ್‌ನ ಮನೀಷಾ ಅತ್ಯಾಚಾರ, ಕೊಲೆ ಪ್ರಕರಣ ಕಣ್ಣಿಗೆ ಕಾಣುತ್ತಿಲ್ಲವೇ? ಇದರಿಂದ ಹೆಣ್ಣು ಮಕ್ಕಳ ಕುರಿತ ನಿಮ್ಮ ಬುದ್ಧಿಮಟ್ಟತಿಳಿಯುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.