Asianet Suvarna News Asianet Suvarna News

ಮೆಣಸಿನ ಬೆಳೆಗೆ ಕೊಳ್ಳಿ ಇಟ್ಟ ಕಂಪನಿಯೊಂದರ ಔಷಧ

ರೈತರು ಬೆಳೆದಿರುವ ಮೆಣಸಿನ ಬೆಳೆಗೆ ಹೊರ ಮುಟಗಿ ಮತ್ತು ಒಳಮುಟಗಿ ರೋಗ ತಗುಲಿದೆ. ಇದನ್ನು ಹೋಗಲಾಡಿಸಲು ಉತ್ತಮ ಔಷಧಿ ಎಂದು ನಂಬಿಸಿದ, ಗ್ರಾಮದ ಕೃಷಿ ಆಗ್ರೋ ಕೇಂದ್ರವೊಂದು ಯುವಾನ ಖಾಸಗಿ ಕಂಪನಿ ತಯಾರಿಸಿದ ಔಷಧಿ ನೀಡಿದೆ. ಅದನ್ನು ನಂಬಿದ ರೈತರು ಔಷಧಿ ಖರೀದಿಸಿ ಹೊಲಕ್ಕೆ ಸಿಂಪಡಿಸಿದ ಪರಿಣಾಮ ಸುಮಾರು 200 ಎಕರೆ ಬೆಳೆ ಸಂಪೂರ್ಣ ಸುಟ್ಟು ಹಾಳಾಗಿದೆ.

Kundagola Farmers trained on using herbicide Blamed for crop damage
Author
Bengaluru, First Published Oct 14, 2018, 9:42 PM IST
  • Facebook
  • Twitter
  • Whatsapp

- ಗಂಗಾಧರ ಡಾಂಗೆ
ಕುಂದಗೋಳ(ಅ.14):
ಕಳೆದ ನಾಲ್ಕು ವರ್ಷಗಳ ಕಾಲ ಬರಗಾಲದಿಂದ ಬೆಂದಿದ್ದ ಕುಂದಗೋಳ ತಾಲೂಕಿನ ರೈತರು ಈ ಬಾರಿ ಮಳೆರಾಯನ ಕೃಪೆಯಿಂದ ಸಂತಸಗೊಂಡಿದ್ದರು. ಆದರೆ, ಅದು ಹೆಚ್ಚು ದಿನ ಉಳಿಯಲಿಲ್ಲ. ಕಾರಣ ಕಳಪೆ ಔಷಧಿ ವಿತರಣೆ ಮಾಡಿರುವ ಖಾಸಗಿ ಕಂಪನಿ ನೂರಾರು ಎಕರೆ ಮೆಣಸಿನ ಬೆಳೆಗೆ ಬೆಂಕಿ ಬೀಳಲು ಕಾರಣವಾಗಿದೆ. ಹೀಗಾಗಿ, ನಮ್ಮ ಪಾಲಿಗೆ ಮತ್ತೊಂದು ವರ್ಷ ಬರಗಾಲವೇ ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ ಇಲ್ಲಿನ ರೈತರು. ಹಾಗೆ ನೋಡಿದರೆ, ಜಿಲ್ಲೆಯಲ್ಲೇ ಅತಿ ಹೆಚ್ಚು ಮೆಣಸಿನ ಬೆಳೆಯನ್ನು ಬೆಳೆಯುವ ತಾಲೂಕಿನ ಗುಡಗೇರಿ ರೈತರ ಪಾಲಿಗೆ ಈ ವರ್ಷ ಮೆಣಸು ಅಕ್ಷರಶಃ ಖಾರವಾಗಿ ಪರಿಣಮಿಸಿದೆ. 

ಇಲ್ಲಿನ ರೈತರು ಬೆಳೆದಿರುವ ಮೆಣಸಿನ ಬೆಳೆಗೆ ಹೊರ ಮುಟಗಿ ಮತ್ತು ಒಳಮುಟಗಿ ರೋಗ ತಗುಲಿದೆ. ಇದನ್ನು ಹೋಗಲಾಡಿಸಲು ಉತ್ತಮ ಔಷಧಿ ಎಂದು ನಂಬಿಸಿದ, ಗ್ರಾಮದ ಕೃಷಿ ಆಗ್ರೋ ಕೇಂದ್ರವೊಂದು ಯುವಾನ ಖಾಸಗಿ ಕಂಪನಿ ತಯಾರಿಸಿದ ಔಷಧಿ ನೀಡಿದೆ. ಅದನ್ನು ನಂಬಿದ ರೈತರು ಔಷಧಿ ಖರೀದಿಸಿ ಹೊಲಕ್ಕೆ ಸಿಂಪಡಿಸಿದ ಪರಿಣಾಮ ಸುಮಾರು 200 ಎಕರೆ ಬೆಳೆ ಸಂಪೂರ್ಣ ಸುಟ್ಟು ಹಾಳಾಗಿದೆ.

ರೈತರ ಆಕ್ರೋಶ: ಸದ್ಯದ ಪರಿಸ್ಥಿತಿಯಲ್ಲಿ ಎದೆವರೆಗೂ ಬೆಳೆದು ಹರ್ಷದಿಂದ ನೋಡಬೇಕಿದ್ದ ಮೆಣಸಿನ ಗಿಡಗಳು ಒಣಗಿ ನೆಲ ಕಚ್ಚುವ ಮೂಲಕ ಹೊಲ ಬೋಳು ಬೋಳಾಗಿ ಬರೀ ಮಣ್ಣು ಮಾತ್ರ ಕಾಣುತ್ತಿದೆ. ಇದನ್ನು ನೋಡಿ ದುಃಖಿಸುತ್ತಿರುವ ರೈತರು ಕಂಪನಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳೆ ಹಾಳಾಗಿದ್ದರಿಂದ ಕಂಗಾಲಾಗಿ ಗ್ರಾಮದ ಆಗ್ರೋ ಕೇಂದ್ರದ ಎದುರಿಗೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಟುರು ರೋಗಕ್ಕೆ ನೀವು
ನೀಡಿದ ಔಷಧಿ ಸಿಂಪಡಿಸಿದ ನಂತರ ನಮ್ಮ ಮೆಣಸಿನ ಬೆಳೆ ಚೇತರಿಸಿಕೊಳ್ಳುವ ಬದಲು ದಿನದಿಂದ ದಿನಕ್ಕೆ ಎಲೆಗಳು,ಕಾಯಿ, ಹೂ ಉದುರುತ್ತಿರುವುದನ್ನು ನೋಡಿ ಕರುಳು ಚುರುಕ್ ಎನ್ನುತ್ತಿದೆ ಎಂದು ಹೇಳುತ್ತಿದ್ದಾರೆ. 

ಆಗ್ರೋ ಕೇಂದ್ರಕ್ಕೆ ತೆರಳಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿ ನಂತರ ಯುವಾನ ಔಷಧಿ ಕಂಪನಿಯ ವ್ಯವಸ್ಥಾಪಕರನ್ನು ಗ್ರಾಮಕ್ಕೆ ಕರೆಸಬೇಕು. ನಮ್ಮ ಮೆಣಸಿನಕಾಯಿ ಬೆಳೆ ನೋಡಿ ಅದಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. 4-5 ದಿನಗಳ ಹಿಂದೆ ಗ್ರಾಮಕ್ಕೆ ಆಗಮಿಸಿದ್ದ ಯುವಾನ ಔಷದಿ ಕಂಪನಿ ವ್ಯವಸ್ಥಾಪಕ ರೈತರ ಮೆಣಸಿಕಾಯಿ ಬೆಳೆ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ನಂತರ ರೈತರಿಗೆ ಈ ಔಷಧ ನೀಡುವ ಮುನ್ನ ಕೂಲಂಕಷವಾಗಿ ತಜ್ಞರಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿ ಜಾರಿಕೊಂಡು ಹೋಗಿದ್ದಾರೆ ಎನ್ನುತ್ತಿದ್ದಾರೆ ರೈತರು.

ಇ ಪೇಪರ್ ಸುದ್ದಿಗಾಗಿ : ಮೆಣಸಿನ ಬೆಳೆಗೆ ಕೊಳ್ಳಿ

(ಸಾಂದರ್ಭಿಕ ಚಿತ್ರ)

8 ಎಕರೆ ಮೆಣಸಿನಕಾಯಿ ಬೆಳೆದಿದ್ದೆ. ಆದರೆ ಬೆಳೆಗೆ ರೋಗ ತಗಲಿದ್ದು ಔಷಧ ಸಿಂಪರಿಸಿದ ಮೇಲೆ ಅದು ಸಂಪೂರ್ಣ ಒಣಗಿದೆ. ಈಗ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ಬಾಕಿ ಉಳಿದಿದೆ. ಈ ಬಾರಿ ಮೆಣಸಿನ ಬೆಳೆಗೆ 70 ಸಾವಿರ ಸಾಲ ಮಾಡಿದ್ದೇನೆ. ಖಾಸಗಿ ಕಂಪನಿಗಳು ರೈತರ ಬಾಳಿನಲ್ಲಿ ಹೀಗೆ ಆಟವಾಡಿದರೆ ಹೇಗೆ?

 -ತಿಪ್ಪಣ್ಣ ಹಿರೇಗೌಡ್ರ ಗುಡಗೇರಿ ರೈತ

ಈ ಬಾರಿ ನಾವು 15 ಎಕರೆ ಮೆಣಸಿನ ಗಿಡ ನಾಟಿ ಮಾಡಿದ್ದೇವೆ. ರೋಗ ತಡೆಯಲು ನಮ್ಮ ಗ್ರಾಮದ ಕಲ್ಮೇಶ್ವರ ಆಗ್ರೋ ಕೇಂದ್ರ ನೀಡಿದ ಔಷಧಿಯೇ ಬೆಳೆ ನಾಶಕ್ಕೆ ಕಾರಣವಾಗಿದೆ. ರೈತರನ್ನು ಇಂತಹ ಚಿಂತಾಜನಕ ಸ್ಥಿತಿಗೆ ತಲುಪಿಸಿದ ಔಷಧಿ ಕಂಪನಿ ನಮಗೆ ಯೋಗ್ಯ ಪರಿಹಾರ ನೀಡಬೇಕು. ಖಾಸಗಿ ಕಂಪನಿಗಳು ರೈತರ ಮೇಲೆ ನಡೆಸುತ್ತಿರುವ ಪ್ರಯೋಗಗಳನ್ನು ನಿಲ್ಲಿಸಬೇಕು.

- ಸತೀಶ್ ತಿಮ್ಮನಗೌಡರ ಗುಡಗೇರಿ ರೈತ

ನಮ್ಮ ಕೇಂದ್ರದಲ್ಲಿ 15-20 ರೈತರು ಯುವಾನ ಔಷಧಿ ಪಡೆದಿದ್ದಾರೆ. ಇದನ್ನು ಸಿಂಪರಣೆ ಮಾಡಿದ ಬೆಳೆಗೆ ಹಾನಿಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ನಾವು ಈ ಔಷಧಿ ತಯಾರಿಸಿದ ಯುವಾನ್ ಕಂಪನಿಗೆ ಎಲ್ಲ ರೀತಿಯ ಮಾಹಿತಿ ನೀಡಿದ್ದೇವೆ. ರೈತರ ಕಣ್ಣಿಗೆ ಮಣ್ಣೆರಚಿರುವ ಕಂಪನಿ ಈಗ ಪರಿಹಾರ ಒದಗಿಸಬೇಕಿದೆ.

- ದ್ಯಾವನಗೌಡ ಕರೆಹೊಳ್ಳಪ್ಪನವರ ಕಲ್ಮೇಶ್ವರ, ಕೃಷಿ ಆಗ್ರೋ ಕೇಂದ್ರದ ಮಾಲೀಕ.
 

Follow Us:
Download App:
  • android
  • ios