ಕುಮಟಾ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದ 3 ವರ್ಷದ ಬಾಲಕ
ಅಸಾಧಾರಣ ನೆನಪಿನಶಕ್ತಿ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಾಲಕ| ತನ್ನ ಅಸಾಧಾರಣ ನೆನಪಿನ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದ ಸಂಪ್ರೀತ್ ಸಂತೋಷ ನಾಯ್ಕ| ಚಿಕ್ಕ ವಯಸ್ಸಿನಲ್ಲಿಯೇ ಹೆಚ್ಚಿನ ಜ್ಞಾಪಕ ಶಕ್ತಿ ಬೆಳೆಸಿಕೊಂಡ ಮೂರು ವರ್ಷದ ಬಾಲಕ|
ಕುಮಟಾ(ಅ.17): ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಗ್ಗೋಣ ಕ್ರಾಸ್‌ನ ಮೂರು ವರ್ಷದ ಬಾಲಕ ಸಂಪ್ರೀತ್ ಸಂತೋಷ ನಾಯ್ಕ ತನ್ನ ಅಸಾಧಾರಣ ನೆನಪಿನ ಶಕ್ತಿಯಿಂದ ಸ್ಥಾನ ಪಡೆದುಕೊಂಡಿದ್ದಾನೆ.
30 ದೇಶಗಳ, 29 ರಾಜ್ಯಗಳ ರಾಜಧಾನಿಗಳ ಹೆಸರು ಹೇಳುತ್ತಾನೆ. ನಮ್ಮ ರಾಷ್ಟ್ರಗೀತೆಯನ್ನು ಹಾಡುತ್ತಾನೆ. ಕನ್ನಡ ಮತ್ತು ಇಂಗ್ಲಿಷ್ ಅಕ್ಷರಮಾಲೆಗಳನ್ನು ಓದಲು, ಬರೆಯುವುದು ಕಲಿತಿದ್ದಾನೆ. ಹಿಂದಿ ಅಕ್ಷರಗಳನ್ನು ಓದಲು ಕಲಿತಿದ್ದಾನೆ. ಬಣ್ಣಗಳ ಹೆಸರು, ಪ್ರಾಣಿ, ಪಕ್ಷಿ, ಹೂಗಳು, ವಾಹನಗಳ ಬಗ್ಗೆ ಕನಿಷ್ಠವೆಂದರೂ ತಲಾ 25 ಹೆಸರುಗಳನ್ನು ಹೇಳುತ್ತಾನೆ.
ಅಕ್ರಮ ಗೋ ಮಾಂಸ ಸಾಗಾಟ: ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು
ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಒಂದರಿಂದ 100ರ ವರೆಗೆ ಸರಾಗವಾಗಿ ಹೇಳುತ್ತಾನೆ. ಜ್ಞಾನಪೀಠ ಪುರಸ್ಕೃತರ ಹೆಸರು, ಕವಿಗಳ ಬಿರುದು, ಕರೆನ್ಸಿ, ಕನ್ನಡದ 100ಕ್ಕೂ ಅಧಿಕ ಶಬ್ಧಗಳನ್ನು ಇಂಗ್ಲಿಷ್‌ನಲ್ಲಿ ಉಚ್ಚರಿಸಲು ಕಲಿತಿದ್ದಾನೆ. ಮಾನವ ಶರೀರದ ಭಾಗಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಹೇಳುತ್ತಾನೆ. 118 ಪರಮಾಣು ಲೆಕ್ಕಗಳ ಪೈಕಿ 30ನ್ನು ತಿಳಿದಿದ್ದಾನೆ.
ಈ ಅಪ್ರತಿಮ ಪ್ರತಿಭೆಯ ಪುಟ್ಟ ಬಾಲಕ ಅನಿತಾ ಸಂತೋಷ ನಾಯ್ಕ ಹಾಗೂ ಸಂತೋಷ ಕೇಶವ ನಾಯ್ಕ ಅವರ ಪುತ್ರನಾಗಿದ್ದು, ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಹೆಚ್ಚಿನ ಜ್ಞಾಪಕ ಶಕ್ತಿಯನ್ನು ಬೆಳೆಸಿಕೊಂಡಿದ್ದಾನೆ. ಮಕ್ಕಳ ಸ್ಮರಣಶಕ್ತಿ, ಪ್ರತಿಭೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನವರು ಗುರುತಿಸಿ ಯುಟ್ಯೂಬ್‌ನಲ್ಲಿ ನೋಡಿ, ಈ ಬಗ್ಗೆ ಇಂಟರ್‌ನೆಟ್‌ನಲ್ಲಿ ಹುಡುಕಿ, ಅವರ ವೆಬ್‌ಸೈಟ್‌ಗೆ ಅರ್ಜಿ ಸಲ್ಲಿಸಿದರು ಎನ್ನಲಾಗಿದೆ. ಈ ಬಾಲಕ ಯಾವುದೇ ಶಾಲೆ, ಟ್ಯೂಶನ್‌ಗೆ ಹೋಗದೆ ಮನೆಯಲ್ಲಿಯೇ ತಂದೆ -ತಾಯಿಗಳಿಂದ ಕಲಿತು ತನ್ನ ಜ್ಞಾಪಕ ಶಕ್ತಿ ಹಾಗೂ ಬುದ್ದಿವಂತಿಕೆಯನ್ನು ಹೆಚ್ಚಿಸಿಕೊಂಡಿದ್ದಾನೆ. ಈ ಪ್ರತಿಭಾವಂತ ಪುಟ್ಟ ಬಾಲಕನಿಗೆ ಕೃಷ್ಣಾನಂದ ಭಟ್, ಸಾಮಾಜಿಕ ಕಾರ್ಯಕರ್ತ ಗಿರೀಶ್ ಆರ್. ಭಟ್, ಚಿದಾನಂದ ಡಿ. ನಾಯ್ಕ, ವಿನಾಯಕ ನಾಯ್ಕ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.