ಕೂಡಲಸಂಗಮದಲ್ಲಿ ಮೂರನೇ ಪೀಠ ರಚನೆಯಾಗುತ್ತಾ..?
- ಮೂರನೇ ಪೀಠ ಎಂಬುದೇನಿಲ್ಲ, ಅವೆಲ್ಲ ಊಹಾಪೋಹಗಳು ಎಂದಿರುವ ಕೂಡಲಸಂಗಮದ ಜಯಮೃತ್ಯುಂಜಯ ಶ್ರೀ
- ಯಾರಲ್ಲೂ ಕೆಟ್ಟಆಲೋಚನೆಗಳು ಇಲ್ಲ. ಎಲ್ಲೊ ಒಂದು ಕಡೆ ಯಾರದ್ದೊ ಮಾತು ಕೇಳಿ ಆತುರದಿಂದ ಸಭೆ ನಡೆಸಿರಬಹುದು
ಹುಬ್ಬಳ್ಳಿ (ಸೆ.06): ಮೂರನೇ ಪೀಠ ಎಂಬುದೇನಿಲ್ಲ, ಅವೆಲ್ಲ ಊಹಾಪೋಹಗಳು ಎಂದಿರುವ ಕೂಡಲಸಂಗಮದ ಜಯಮೃತ್ಯುಂಜಯ ಶ್ರೀಗಳು, ಯಾರಲ್ಲೂ ಕೆಟ್ಟಆಲೋಚನೆಗಳು ಇಲ್ಲ. ಎಲ್ಲೊ ಒಂದು ಕಡೆ ಯಾರದ್ದೊ ಮಾತು ಕೇಳಿ ಆತುರದಿಂದ ಸಭೆ ನಡೆಸಿರಬಹುದು. ಅವರ ಮನಸ್ಸು ಪರಿವರ್ತನೆ ಆಗಲಿ, ತಮ್ಮ ತಪ್ಪು ತಿದ್ದಿಕೊಂಡು ನಮ್ಮ ಹೋರಾಟಕ್ಕೆ ಕೈ ಜೋಡಿಸಲಿ ಎಂದು ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರು ಮೂರನೇ ಪೀಠ ರಚನೆ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಚಳವಳಿಯನ್ನು ಮುರಿಯಲು ಅನೇಕ ರೀತಿಯ ಷಡ್ಯಂತ್ರಗಳು ನಡೆದಿವೆ. ನೋವು, ಅಪಮಾನ ನೀಡಿರುವ ಸಾಕಷ್ಟುಉದಾಹರಣೆ ನಮ್ಮೆದುರಿದ್ದು, ನಾವು ಇದಕ್ಕೆಲ್ಲ ವಿಚಲಿತರಾಗಿಲ್ಲ. ನೂರು ಸಭೆಗಳು ನಡೆದರೂ ನಾವು ಅವರನ್ನೇ ಮನವೊಲಿಸುವ ಕೆಲಸ ಮಾಡುತ್ತೇವೆ. ಅವರ ಮನಸ್ಸನ್ನು ಪರಿವರ್ತನೆ ಮಾಡಿ ನಮ್ಮ ಸಮಾಜಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ.
ಲಿಂಗಾಯತರಿಗೆ 2ಎ ಮೀಸಲು ಬೆಂಬಲಿಸುವ ಪಕ್ಷಕ್ಕೆ ಬೆಂಬಲ: ಕೂಡಲ ಶ್ರೀ
ಮೂರನೆಯ ಪೀಠ ರಚನೆ ಸಂಬಂಧ ಸಭೆ ನಡೆಸುತ್ತಿರುವವರು ಹೊರಗಿನವರಲ್ಲ, ನಮ್ಮವರೇ ಆಗಿದ್ದಾರೆ. ಸಾವಿರ ಶಕ್ತಿಗಳು, ಸಾವಿರ ವ್ಯಕ್ತಿಗಳು ನನ್ನನ್ನು ಅಲುಗಾಡಿಸಲು ಪ್ರಯತ್ನಿಸಿದರೆ ಅದನ್ನು ಭಗವಂತ ನೋಡುತ್ತಾನೆ. ಸಮಾಜ ನನ್ನ ಬೆನ್ನಿಗಿದೆ. ಇನ್ನೊಂದು ಪೀಠ ರಚನೆ ಬಗ್ಗೆ ತಿರಸ್ಕಾರವನ್ನೂ ಮಾಡಲ್ಲ, ಉದಾಸೀನವನ್ನೂ ಮಾಡಲ್ಲ. ಮೂರನೇ ಪೀಠದ ಸಂಬಂಧ ಗೊಂದಲ ಎದುರಾದರೆ ಅದನ್ನು ನಿವಾರಿಸಲು ಸಮಾಜದ ನಾಯಕರಿಗೆ ಜವಾಬ್ದಾರಿ ನೀಡುತ್ತೇವೆ ಎಂದರು.
ಮೀಸಲಾತಿ ಚಳವಳಿ ಆರಂಭವಾದಾಗ ಎಷ್ಟುಸಮಸ್ಯೆ ಎದುರಾದಾಗಲೂ ಅದನ್ನು ಎದುರಿಸಿ ಪ್ರೀತಿಯಿಂದ ಗೆದ್ದು ಮುನ್ನಡೆಯುತ್ತೇವೆ. ಪ್ರಾಣ, ಮಾನ ಸೇರಿ ಬೇಕಾದ ಸಮಸ್ಯೆ ಎದುರಾದರೂ ಗಟ್ಟಿಯಾಗಿ ಹೋರಾಟ ನಡೆಸಲಾಗುವುದು. ಹೋರಾಟಕ್ಕೆ ಇಳಿದ ಮೇಲೆ ಹೆದರಲ್ಲ, ಪಾದಯಾತ್ರೆ ಮಾಡಿದ್ದಾಗಲೂ ಕೆಲ ಸ್ವಾಮೀಜಿಗಳೆ ತಪ್ಪು ಭಾವನೆಯಿಂದ ಮಾತನಾಡಿದ್ದರು. ಆದರೆ, ಬಳಿಕ ನಮ್ಮ ಜತೆ ಹೋರಾಟಕ್ಕೆ ಬಂದಿದ್ದರು ಎಂದರು.
ಪಂಚಮಸಾಲಿ ಸಮುದಾಯವರು ಬಸವರಾಜ ಬೊಮ್ಮಾಯಿ ಅವರ ಜತೆಗೆ ಚರ್ಚೆ ನಡೆಸಿದ್ದು, ಅವರ ಅವಧಿಯಲ್ಲಿ 2ಎ ಮೀಸಲಾತಿ ಪಡೆಯುವ ವಿಶ್ವಾಸ ನಮಗಿದೆ ಎಂದು ಶ್ರೀಗಳು ಹೇಳಿದರು. ರಾಜ್ಯದಲ್ಲಿ ಬಹುತೇಕ ಚಳವಳಿಗಳು ಕೆಲವು ಸಾರಿ ಕೆಲ ಸಿಎಂಗಳು ಬಂದು ಕೇಳಿಕೊಂಡಾಗ ನಿಂತ ಉದಾಹರಣೆ ಇದೆ. ಆದರೆ, ಪಂಚಮಸಾಲಿ 2ಎ ಮೀಸಲಾತಿ ಹೋರಾಟ ನಿಲ್ಲುವುದಿಲ್ಲ. ನಮ್ಮ ಮೂಲ ಉದ್ದೇಶ ಮೀಸಲಾತಿ ಪಡೆಯುವುದಾಗಿದ್ದು, ಪಾದಯಾತ್ರೆ ಮಾಡಿ ದಾಖಲೆ ಮಾಡಿರುವ ನಾವು ಪ್ರತಿಜ್ಞಾ ಪಂಚಾಯತ್ ಎಂಬ ಘೋಷಣೆಯೊಂದಿಗೆ ಅಭಿಯಾನ ಆರಂಭಿಸಲಾಗಿದ್ದು, 11 ದಿನಗಳು ಕಳೆದಿವೆ ಎಂದರು.
ಜನಾಂಗಕ್ಕೆ ನ್ಯಾಯ ಕೊಡಿಸುವುದೆ ನನಗೆ ಶಿವಪೂಜೆ ಇದ್ದಂತೆ. ಹಳೆಯ ಮೈಸೂರು ಭಾಗದಲ್ಲಿ ಹೋರಾಟ ಆರಂಭಿಸಿದಾಗ ಕೆಲವರು ನಮಗೆ ನೋವುಂಟು ಮಾಡಿದ್ದರು. ಆದರೆ, ಕಿತ್ತೂರು ಚೆನ್ನಮ್ಮಗೆ ನೋವುಂಟು ಮಾಡಿದ ಉದಾಹರಣೆ ಇದೆ. ನಾಳೆ (ಸೋಮವಾರ) ಬನವಾಸಿ, ಶಿರಸಿ, ಮುಂಡಗೋಡ ಸೇರಿ ಉತ್ತರ ಕನ್ನಡದಲ್ಲಿ ಅಭಿಯಾನ ನಡೆಯಲಿದೆ. ಸಿಂಧಗಿ ಮತ್ತು ಹಾನಗಲ್ ಉಪಚುನಾವಣೆ ಹತ್ತಿರವಿರುವ ಕಾರಣ ಅಷ್ಟರೊಳಗೆ ಮೀಸಲಾತಿ ನೀಡಬೇಕು. ವಿಳಂಬವಾದರೆ ಅಕ್ಟೋಬರ್ 1ರಂದು ಸಮುದಾಯದ ಮುಖಂಡ ಜೆ.ಎಚ್. ಪಟೇಲರ ಜಯಂತಿ ಆಚರಿಸಿ ಧರಣಿ ಸತ್ಯಾಗ್ರಹ ಪುನರ್ ಆರಂಭಿಸುತ್ತೇವೆ ಎಂದರು.