ಬೆಂಗಳೂರು(ಏ.17): ಲಾಕ್‌ಡೌನ್‌ನಿಂದಾಗಿ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದೆ. ಸಂಕಷ್ಟದಲ್ಲಿರುವ ನಾಲ್ಕು ನಿಗಮಗಳು ಇದೀಗ ನೌಕರರಿಗೆ ಏಪ್ರಿಲ್‌ ತಿಂಗಳ ವೇತನ ನೀಡಲು ಹಣಕಾಸು ನೆರವು ಕೋರಿ ರಾಜ್ಯ ಸರ್ಕಾರದ ಕದ ತಟ್ಟಿವೆ.

ಒಂದು ತಿಂಗಳಿಂದ ಬಸ್‌ ಸಂಚಾರ ಸ್ಥಗಿತಗೊಳಿಸಿರುವ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಇಕೆಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ನಿಗಮಗಳು ಆದಾಯ ಇಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಈ ನಾಲ್ಕು ನಿಗಮಗಳಲ್ಲಿ ಸುಮಾರು 1.27 ಲಕ್ಷ ನೌಕರರು ಇದ್ದು, ಪ್ರತಿ ತಿಂಗಳು 364 ಕೋಟಿ ರು. ವೇತನ ನೀಡಲಾಗುತ್ತಿದೆ. ತೀವ್ರ ಆರ್ಥಿಕ ಸಂಕಷ್ಟಎದುರಿಸುತ್ತಿರುವ ನಿಗಮಗಳು ಇದೀಗ ಅನ್ಯ ಮಾರ್ಗ ಇಲ್ಲದೆ ಆರ್ಥಿಕ ನೆರವಿಗಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿವೆ.

ಚೀನಾದಿಂದ ಬಂದ ವಸ್ತುವಿನಲ್ಲಿರಲಿಲ್ಲ ವೈರಸ್, ಜ್ಯುಬಿಲಿಯಂಟ್‌ ಕೊರೋನಾ ಹರಡಿದ್ದು ಹೇಗೆ..?

ಕಳೆದ ನಾಲ್ಕೈದು ವರ್ಷಗಳಿಂದ ನಷ್ಟದ ಹಳಿಯಲ್ಲಿ ತೆವಳುತ್ತಿರುವ ಈ ಸಾರಿಗೆ ನಿಗಮಗಳ ಆರ್ಥಿಕತೆಗೆ ಲಾಕ್‌ ಡೌನ್‌ ದೊಡ್ಡ ಹೊಡೆತ ನೀಡಿದೆ. ಲಾಕ್‌ಡೌನ್‌ ಜಾರಿಯಾದಾಗಿನಿಂದ ನಾಲ್ಕು ನಿಗಮಗಳಿಗೆ ಸುಮಾರು ಎರಡೂ ಸಾವಿರ ಕೋಟಿ ರು. ಆದಾಯ ನಷ್ಟವಾಗಿದೆ.

ದೆಹಲಿ ನಿಜಾಮುದ್ದೀನ್ ಆಯ್ತು, ಈಗ ಸರ್ಕಾರಕ್ಕೆ ನಿದ್ದೆಗೆಡಿಸಿದ ಮೈಸೂರಿನ ಜ್ಯುಬಿಲಿಯಂಟ್‌ ಕಾರ್ಖಾನೆ

ಸ್ವಾಯತ್ತ ಸ್ಥಾನಮಾನ ಹೊಂದಿರುವ ನಾಲ್ಕು ನಿಗಮಗಳು ತಮ್ಮ ವ್ಯಾಪ್ತಿಯಲ್ಲಿ ಸಂಪನ್ಮೂಲ ಕ್ರೋಢೀಕರಣ ಮಾಡಿಕೊಂಡು ನಿಗಮಗಳನ್ನು ಮುನ್ನಡೆಸುತ್ತಿವೆ. ಸರ್ಕಾರ ಆಗಾಗ ಕೊಂಚ ನೆರವಿಗೆ ಬರುತ್ತಿದೆ. ಸಾರಿಗೆ ಆದಾಯವೇ ಬಹುಮುಖ್ಯ ಆದಾಯದ ಮೂಲವಾಗಿದ್ದು, ಲಾಕ್‌ಡೌನ್‌ನಿಂದ ಆದಾಯವೇ ಇಲ್ಲವಾಗಿದೆ. ಹೀಗಾಗಿ ನಿಗಮಗಳು ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ.