ಕೊರೋನಾ ವಿರುದ್ಧ ಸಮರ ಸಾರಿರೋ ಭಾರತಕ್ಕೆ ದೆಹಲಿಯ ನಿಜಾಮುದ್ದೀನ್ ಕೇಸ್ ಕಂಟಕವಾಗಿದೆ. ಲಾಕ್‍ಡೌನ್ ಮಧ್ಯೆಯೂ ಸೋಂಕಿತರ ಸಂಖ್ಯೆ ಏರಿಕೆಯಾಗಿರುತ್ತಿರುವುದು ಇದೇ ತಬ್ಲಿಘಿಗಳಿಂದಲೇ. ಇದೀಗ ಮೈಸೂರಿನಲ್ಲಿ ಜಿಲ್ಲೆಯಲ್ಲಿ ಜ್ಯುಬಿಲಿಯಂಟ್‌ ಕಾರ್ಖಾನೆ ರಾಜ್ಯ ಸರ್ಕಾರಕ್ಕೆ ನಿದ್ದೆಗೆಡಿಸಿದೆ.

ಮೈಸೂರು, (ಏ.15) : ರಾಜ್ಯದಲ್ಲಿ ದಿನೇದಿನೇ ಮಾರಕ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಆತಂಕ ಶುರುವಾಗಿದೆ. 

ಇಂದು (ಬುಧವಾರ) ಮಧ್ಯಾಹ್ನದವರೆಗೆ ಹೊಸದಾಗಿ 17 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ 9 ಮಂದಿ ಮೈಸೂರಿನವರೇ ಆಗಿದ್ದು, ಸಾಂಸ್ಕೃತಿಕ ನಗರಿಯಲ್ಲಿ ಇನ್ನಷ್ಟು ಭೀತಿ ಸೃಷ್ಟಿಸಿದೆ. ಅದರಲ್ಲೂ ಜಿಲ್ಲೆಯ ಜನತೆ ನಿದ್ದೆಗೆಡಿಸಿರುವುದು ನಂಜನಗೂಡಿನ ಜ್ಯುಬಿಲಿಯಂಟ್‌ ಔಷಧ ಉತ್ಪಾದನಾ ಕಾರ್ಖಾನೆ. 

ಜ್ಯುಬಿಲಿಯಂಟ್‌ ತನಿಖೆಗೆ ಹರ್ಷ ಗುಪ್ತ ನೇಮಕ..?

ಹೌದು..ನಂಜನಗೂಡು ಜ್ಯುಬಿಲಿಯಂಟ್‌ ಔಷಧ ಉತ್ಪಾದನಾ ಕಾರ್ಖಾನೆ ನೌಕರರಲ್ಲಿ ಇಂದು (ಬುಧವಾರ)9 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.ಆದ್ರೆ, ಕಾರ್ಖಾನೆಯಲ್ಲಿ ಪ್ರಕರಣ ಬೆಳಕಿಗೆ ಬಂದು 20 ದಿನಗಳಾದರೂ ಈವರೆಗೂ ಸೋಂಕಿನ ಮೂಲ ಪತ್ತೆಯಾಗಿಲ್ಲ

ನಂಜನಗೂಡಿನ ಜ್ಯುಬಿಲಿಯಂಟ್‌ ಫಾರ್ಮಾ ಕಂಪೆನಿಯ ನೌಕರರು ಹಾಗೂ ಅವರ ಒಡನಾಟದಲ್ಲಿದ್ದವರು ಸೇರಿದಂತೆ ಬರೋಬ್ಬರಿ 37 ಮಂದಿಯಲ್ಲಿ ಸೋಂಕು ದೃಢವಾಗಿ, ಇಡೀ ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಆದರೆ, ಈ ಸೋಂಕು ಮೈಸೂರು ಜಿಲ್ಲೆ ಪ್ರವೇಶಿಸಿ ಕಾರ್ಖಾನೆಗೆ ಹೇಗೆ ಹರಡಿದೆ ಎಂಬುದು ಇಂದಿಗೂ ರಹಸ್ಯವಾಗಿ ಉಳಿದಿದೆ.

ಜ್ಯುಬಿಲಿಯಂಟ್‌ನ ನೌಕರ (ರೋಗಿಯ ಸಂಖ್ಯೆ 52)ನಿಗೆ ಮೊದಲು ಸೋಂಕು ಇರುವುದು ದೃಢಪಟ್ಟಿತು. ಇದು ಜಿಲ್ಲೆಯ ಮೂರನೇ ಪ್ರಕರಣವಾಗಿದೆ. ಈತ ವಿದೇಶಕ್ಕೆ ತೆರಳದಿದ್ದರೂ, ವಿದೇಶದಿಂದ ಬಂದವರ ಸಂಪರ್ಕದಲ್ಲಿ ಇರದಿದ್ದರೂ ಕೊರೊನಾ ಹೇಗೆ ಹರಡಿತು ಎಂಬುದು ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ
ನಿದ್ದೆಗೆಡಿಸಿದೆ. 

ಮೂಲವನ್ನು ಮರೆಮಾಚುವ ಉದ್ದೇಶ ಪೂರ್ವಕ ಪ್ರಯತ್ನ ನಡೆಯುತ್ತಿದೆಯೇ ಅಥವಾ ಪೊಲಿಸರಿಗೆ ಪತ್ತೆ ಹಚ್ಚಲಾಗದಷ್ಟು ನಿಗೂಢವಾಗಿರುವುದೇ ಎಂಬ ಅನುಮಾನ ಮೂಡಿದೆ.

ಸಮಗ್ರ ತನಿಖೆಗೆ ಹರ್ಷ ಗುಪ್ತ ನೇಮಕ 
ಜ್ಯುಬಿಲಿಯಂಟ್‌ ಕಾರ್ಖಾನೆಗೆ ಸೋಂಕು ಹೇಗೆ ತಗುಲಿತು? ಎನ್ನುವುದು ಇನ್ನೂ ನಿಗೂಢವಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆಗೆ ರಾಜ್ಯ ಸರ್ಕಾರ ಹರ್ಷಗುಪ್ತ ಅವರನ್ನು ನೇಮಿಸಿದೆ. 

ಔಷಧಿ ಕಾರ್ಖಾನೆ ಆಗಿದ್ರೂ ಲಾಕ್‌ಡೌನ್
ಮತ್ತೊಂದೆಡೆ ಸೋಂಕು ಸಂಪೂರ್ಣವಾಗಿ ಹತೋಟಿಗೆ ಬರುವತನಕ ಜ್ಯುಬಿಲಿಯಂಟ್ ಕಂಪನಿ ತೆರಯುವ ಪ್ರಶ್ನೆಯೇ ಇಲ್ಲ, ಮೊದಲು ಎಲ್ಲವೂ ತಿಳಿಯಾಗಬೇಕು, ನೆಮ್ಮದಿಯಾಗಿ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಬೇಕು, ಆಗ ಮಾತ್ರ ಕಂಪನಿ ತೆರೆಯಲು ಅನುಮತಿ ನೀಡಲಾಗುವುದು ಎಂದು ನೂತನ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.