ಮಂಗಳೂರು(ಜು.16): ಮಂಗಳೂರಿನಿಂದ ಕೇರಳದ ಕಾಸರಗೋಡಿಗೆ ಕೆಎಸ್‌ಆರ್‌ಟಿಸಿ ಹವಾನಿಯಂತ್ರಿತ ವೋಲ್ವೊ ಬಸ್ ಸಂಚಾರ ಇದೇ ಮೊದಲ ಬಾರಿಗೆ ಆರಂಭವಾಗಲಿದೆ. ಕೆಎಸ್ಸಾರ್ಟಿಸಿಯ ಮಂಗಳೂರು ವಿಭಾಗ ವತಿಯಿಂದ ಈ ಸಂಚಾರ ವ್ಯವಸ್ಥೆ ಆರಂಭಿಸಲು ಉದ್ದೇಶಿಸಲಾಗಿದೆ.

ಆರಂಭದಲ್ಲಿ 2 ಬಸ್, ದಿನಕ್ಕೆ 14 ಟ್ರಿಪ್:

ಈ ಎರಡು ಅಂತಾರಾಜ್ಯ ನಗರಗಳ ನಡುವಿನ ಸಂಚಾರಕ್ಕೆ ಆರಂಭದಲ್ಲಿ ಎರಡು ಆಕ್ಸೆಲ್‌ನ 2 ವೋಲ್ವೊ ಬಸ್‌ಗಳನ್ನು ಹಾಕಲಾಗುತ್ತಿದ್ದು, ದಿನವೊಂದಕ್ಕೆ ಒಟ್ಟು 14 ಟ್ರಿಪ್‌ಗಳಲ್ಲಿ ಪ್ರಯಾಣಿಕರಿಗೆ ಸೇವೆ ನೀಡಲಿವೆ. ನಿಗಮವು ಈಗಾಗಲೇ 2017ರ ಮಾರ್ಚ್‌ನಿಂದ ಮಂಗಳೂರಿನ ಸ್ಟೇಟ್‌ಬ್ಯಾಂಕ್ ಮತ್ತು ಭಟ್ಕಳದ ನಡುವೆ (150 ಕಿ.ಮೀ.) ವೋಲ್ವೋ ಬಸ್ ಸಂಚಾರ ಆರಂಭಿಸಿದ್ದು, ಇದಕ್ಕೆ ಪ್ರಯಾಣಿಕರಿಂದ ಉತ್ತಮ ಬೇಡಿಕೆ ಕಂಡುಬಂದ ಹಿನ್ನೆಲೆಯಲ್ಲಿ ಇದೀಗ ಕಾಸರಗೋಡಿಗೂ ವೋಲ್ವೊ ಸಂಚಾರಕ್ಕೆ ಮುಂದಡಿ ಇಟ್ಟಿದೆ.

ಪ್ರಯಾಣಿಕರು ಹೆಚ್ಚು:

50 ಕಿ.ಮೀ. ಅಂತರದ ಮಂಗಳೂರು- ಕಾಸರಗೋಡು ನಡುವೆ ಓಡಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ವೋಲ್ವೊ ಬಸ್ ಸಂಚಾರ ನಿರ್ವಹಿಸಲು ನಿಗಮ ನಿರ್ಧರಿಸಿದೆ ಎಂದು ಕೆಎಸ್‌ಆರ್‌ಟಿಸಿಯ ಮಂಗಳೂರು ವಿಭಾಗೀಯ ನಿಯಂತ್ರಕ ಕೆ.ಎಂ. ಅಶ್ರಫ್ ತಿಳಿಸಿದ್ದಾರೆ. ಆರಂಭದಲ್ಲಿ 2 ಬಸ್‌ಗಳನ್ನು ನಿಯೋಜಿಸಲಾಗುತ್ತದೆ. ಪ್ರತಿ ಬಸ್ಸೂ ದಿನಂಪ್ರತಿ 7 ಏಕಮುಖ ಸಂಚಾರ ನಡೆಸಲಿದೆ ಎಂದರು.

ಸ್ಪರ್ಧಾತ್ಮಕ ಶುಲ್ಕ:

ಮಂಗಳೂರು- ಕಾಸರಗೋಡು ನಡುವೆ ಸಂಚರಿಸುತ್ತಿರುವ ಇತರ ಬಸ್ಸುಗಳ ಪ್ರಯಾಣ ದರವನ್ನು ಪರಿಶೀಲಿಸಿ, ವೋಲ್ವೊ ಬಸ್ ಪ್ರಯಾಣ ದರವನ್ನು ಸ್ಪರ್ಧಾತ್ಮಕವಾಗಿ ನಿಗದಿಗೊಳಿಸಲಾಗಿದೆ. ಏಕಮುಖ ಪ್ರಯಾಣ ದರ  75 ರು., ದ್ವಿಮುಖ ಪ್ರಯಾಣದ ಡೇ-ಪಾಸ್‌ನ್ನು 130 ರು.ಗೆ ಪಡೆಯಬಹುದು ಎಂದು ಅಶ್ರಫ್ ತಿಳಿಸಿದರು. ಪ್ರಸ್ತುತ, ಕೆಎಸ್‌ಆರ್‌ಟಿಸಿಯ ಸಾಮಾನ್ಯ ಎಕ್ಸ್‌ಪ್ರೆಸ್ ಬಸ್ ಪ್ರಯಾಣದರ 56 ರು.ಗಳಾಗಿದ್ದು, ಕೆಎಸ್ ಆರ್‌ಟಿಸಿಯ ಬಿಜೈ ಬಸ್ ನಿಲ್ದಾಣ- ಕಾಸರಗೋಡು ನಡುವೆ ಪ್ರತಿದಿನ 39 ಸಾಮಾನ್ಯ ಬಸ್‌ಗಳೊಂದಿಗೆ ನಿಗಮವು 166 ರೌಂಡ್ ಟ್ರಿಪ್‌ಗಳನ್ನು ನಡೆಸುತ್ತಿದೆ.

ಅಂಬಾರಿ ಡ್ರೀಮ್ ಕ್ಲಾಸ್: ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು ಶೀಘ್ರದಲ್ಲೇ ಅಂಬಾರಿ ಡ್ರೀಮ್ ಕ್ಲಾಸ್‌ನ ಆರು ಬಸ್‌ಗಳನ್ನು ಪಡೆಯಲಿದೆ. ಈ ಬಸ್‌ಗಳನ್ನು ದೂರದೂರುಗಳಾದ ಮುಂಬೈ, ಪುಣೆ, ಹೈದರಾಬಾದ್ ಮತ್ತು ತಿರುಪತಿ ಸೇರಿದಂತೆ ದೀರ್ಘ ಮಾರ್ಗಗಳಲ್ಲಿ ನಿಯೋಜಿಸಲು ಉದ್ದೇಶಿಸಲಾಗಿದೆ ಎಂದು ಅಶ್ರಫ್ ಹೇಳಿದ್ದಾರೆ. 

ವೋಲ್ವೋ ವೇಳಾಪಟ್ಟಿ ಹೀಗಿದೆ:
ವೋಲ್ವೊ ವೇಳಾಪಟ್ಟಿ ತಾತ್ಕಾಲಿಕ ಯೋಜನೆಯ ಪ್ರಕಾರ, ಮಂಗಳೂರಿನಿಂದ ಕಾಸರಗೋಡಿಗೆ ವೋಲ್ವೊ ಬಸ್ ಸಂಚಾರ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ.

ನಂತರ ಬೆಳಗ್ಗೆ 7.40, 10 ಗಂಟೆ, 10.45 ಗಂಟೆ, ಮಧ್ಯಾಹ್ನ 2 ಗಂಟೆ, 2.45 ಮತ್ತು ಕೊನೆಯದಾಗಿ ಸಂಜೆ 6 ಗಂಟೆಗೆ ಬಸ್ ಹೊರಡುತ್ತದೆ. ಕಾಸರಗೋಡಿನಿಂದ ಮೊದಲ ಟ್ರಿಪ್ ಬೆಳಗ್ಗೆ 5.55ಕ್ಕೆ ಪ್ರಾರಂಭವಾಗುತ್ತದೆ. ನಂತರ ಬೆಳಗ್ಗೆ 8.30,  9.15, ಮಧ್ಯಾಹ್ನ 12.30, ಸಂಜೆ 4 ಮತ್ತು 4.30ಕ್ಕೆ ಹೊರಡಲಿದೆ.

ಇನ್ನಷ್ಟು ನಗರಗಳಿಗೆ ಅಂಬಾರಿ ಡ್ರೀಮ್ ಕ್ಲಾಸ್ ಬಸ್