ಬೆಂಗಳೂರು(ಫೆ.10):  ಸಾರಿಗೆ ನೌಕರರಿಗೆ ಪೂರ್ಣ ವೇತನ, ನಾಲ್ಕು ಪಾಳಿಯಲ್ಲಿ ಬಸ್‌ ಕಾರ್ಯಾಚರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ಬುಧವಾರ ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ಆಯೋಜಿಸಿದೆ.

ಬುಧವಾರ ಮಧ್ಯಾಹ್ನ 1 ಗಂಟೆಯಿಂದ 2 ಗಂಟೆ ವರೆಗೆ ಪ್ರತಿಭಟನೆ ನಡೆಯಲಿದ್ದು, ಅನಂತರ ಪ್ರತಿಭಟನಾಕಾರರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಬೇಡಿಕೆ ಪತ್ರ ಸಲ್ಲಿಸಲಿದ್ದಾರೆ. ಬಸ್‌ ಸೇವೆಯಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ.
ಈ ಬಗ್ಗೆ ವಿವರ ನೀಡಿದ ವೇದಿಕೆಯ ಪ್ರತಿನಿಧಿ ಎಚ್‌.ಡಿ. ರೇವಪ್ಪ ಅವರು, ಇತ್ತೀಚೆಗೆ ನಡೆಸಲಾದ ಸಾರಿಗೆ ಮುಷ್ಕರ ಬಳಿಕ ಬಿಎಂಟಿಸಿಯಲ್ಲಿ ನೌಕರರ ಸಮಸ್ಯೆಗಳು ಹೆಚ್ಚಾಗಿವೆ. ನಿಗದಿತ ಸಮಯಕ್ಕೆ ವೇತನ ಸಿಗುತ್ತಿಲ್ಲ. ಕಾರ್ಮಿಕರ ಗಳಿಕೆ ರಜೆ ಕಡಿತ, ಬಲವಂತದ ರಜೆ ನೀಡುವುದು, ಕರ್ತವ್ಯ ನೀಡಲು ತಾಸುಗಟ್ಟಲೇ ಕಾಯಿಸುವುದು ಮೊದಲಾದ ಶೋಷಣೆ ನಡೆಯುತ್ತಿದೆ. ಡಿಪೋಗಳಲ್ಲಿ ಶಿಸ್ತು ಕ್ರಮದ ಹೆಸರಿನಲ್ಲಿ ನೌಕರರ ಮೇಲೆ ಸೇಡಿನ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರಿಗೆ ನಿಗಮಗಳನ್ನು ಖಾಸಗೀಕರಣ ಮಾಡುವ ಹುನ್ನಾರವಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡುವುದಾಗಿ ಹೇಳಿದರು.

'ನಾಳೆ ಬಸ್ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ, ನೌಕರರ ಪ್ರತಿಭಟನೆ ಬಗ್ಗೆ ಯಾವುದೇ ಗೊಂದಲ ಬೇಡ'

ನೋ ವರ್ಕ್ ನೋ ಪೇ

ಈ ನಡುವೆ ಬಿಎಂಟಿಸಿ ಭದ್ರತೆ ಮತ್ತು ಜಾಗೃತ ವಿಭಾಗದ ನಿರ್ದೇಶಕರು ಬುಧವಾರದ ನೌಕರರ ಪ್ರತಿಭಟನೆ ವೇಳೆ ಬಸ್‌ ಸೇವೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ತುರ್ತು ಸಂದರ್ಭ ಹೊರತುಪಡಿಸಿ ನೌಕರರಿಗೆ ರಜೆ ನೀಡಬಾರದು. ಕರ್ತವ್ಯಕ್ಕೆ ಗೈರಾಗುವ ನೌಕರರಿಗೆ ನೋ ವರ್ಕ್ ನೋ ಪೇ ನಿಯಮದಡಿ ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಬಿಎಂಟಿಸಿ ಮಹಿಳಾ ಕಂಡಕ್ಟರ್‌ಗಳಿಗೆ ಬಿಗ್ ರಿಲೀಫ್

ಪ್ರಮುಖ ಬೇಡಿಕೆಗಳು

- ನಿಗದಿತ ಸಮಯಕ್ಕೆ ಮಾಸಿಕ ವೇತನ ಪಾವತಿಸಬೇಕು ಮತ್ತು ಬಾಕಿ ವೇತನ ತಕ್ಷಣ ಬಿಡುಗಡೆಗೊಳಿಸಬೇಕು
- ಷರತ್ತುಗಳಿಲ್ಲದೆ ಕಡ್ಡಾಯವಾಗಿ ವಾರದ ರಜೆ ನೀಡಬೇಕು ಮತ್ತು ಕಡಿತ ಮಾಡಿದ ರಜೆಗಳನ್ನು ಹಿಂದಿರುಗಿಸಬೇಕು
- ಪೂರ್ಣ ಪ್ರಮಾಣದಲ್ಲಿ ನಾಲ್ಕು ಪಾಳಿಯಲ್ಲಿ ಬಸ್‌ ಕಾರ್ಯಾಚರಿಸಬೇಕು
- ಮಹಿಳಾ ಕಾರ್ಮಿಕರಿಗೆ ಮೊದಲ ಮತ್ತು ಸಾಮಾನ್ಯ ಪಾಳಿಯ ಕೆಲಸಕ್ಕೆ ಆದ್ಯತೆ ನೀಡಬೇಕು
- ಗುತ್ತಿಗೆ ಆಧಾರದಡಿ ಎಲೆಕ್ಟ್ರಿಕ್‌ ಬಸ್‌ ಪಡೆಯುವ ಯೋಜನೆ ಕೈಬಿಡಬೇಕು