ಬೆಂಗಳೂರು(ಫೆ.21): ರಾಜ್ಯ ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಸಂಬಂಧ ಸಾಧಕ-ಬಾಧಕಗಳ ಅಧ್ಯಯನ ವರದಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಭರವಸೆ ನೀಡಿದ್ದಾರೆ.

ಸರ್ಕಾರಿ ನೌಕರರಾಗಿ ಪರಿಗಣಿಸುವಂತೆ ಆಗ್ರಹಿಸಿ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಸಾವಿರಾರು ನೌಕರರು, ಕುಟುಂಬ ಸದಸ್ಯರು ಗುರುವಾರ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಉದ್ಯಾನಕ್ಕೆ ಧಾವಿಸಿ ಮನವಿ ಸ್ವೀಕರಿಸಿ ಈ ಭರವಸೆ ನೀಡಿದರು. ಸಚಿವರ ಭರವಸೆ ಮೇರೆಗೆ ನೌಕರರು ಮಧ್ಯಾಹ್ನ ಮೂರು ಗಂಟೆಗೆ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು. ರಜೆ ಹಾಗೂ ಪಾಳಿ ಕರ್ತವ್ಯ ಮುಗಿಸಿದ್ದ ನೌಕರರು ಮಾತ್ರ ಈ ಹೋರಾಟದಲ್ಲಿ ಪಾಲ್ಗೊಂಡಿದ್ದರಿಂದ ಬಸ್‌ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ.

BMTC, KSRTC ನೌಕರರ ಉಪವಾಸ ಸತ್ಯಾಗ್ರಹ: ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ!

ನೌಕರರ ಮನವಿ ಸ್ವೀಕರಿಸಿ ಮಾತನಾಡಿದ ಲಕ್ಷ್ಮಣ ಸವದಿ, ನೌಕರರ ಬೇಡಿಕೆ ಸಂಬಂಧ ಸಾಧಕ-ಬಾಧಕ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡಲು ಈಗಾಗಲೇ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಉನ್ನತ ಸಮಿತಿ ರಚಿಸಲಾಗಿದೆ. ನೆರೆಯ ಆಂಧ್ರಪ್ರದೇಶಕ್ಕೂ ತೆರಳಿ ಅಧ್ಯಯನ ಮಾಡುವಂತೆ ಸಲಹೆ ನೀಡಿದ್ದೇನೆ. ನಾನು ಸಹ ಆಂಧ್ರಪ್ರದೇಶಕ್ಕೆ ತೆರಳಿ ಮಾಹಿತಿ ಪಡೆಯಲು ಚಿಂತಿಸಿದ್ದೇನೆ. ಅಧ್ಯಯನ ವರದಿ ಬಂದ ಬಳಿಕ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಆಂಧ್ರದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಮಾಡಿದ ಬಳಿಕ ತೆಲಂಗಾಣದಲ್ಲೂ ಸಾರಿಗೆ ನೌಕರರ ಕೂಗು ಎದ್ದಿತ್ತು. ಬಳಿಕ ಅಲ್ಲಿ ಏನೇನು ಆಯಿತು ಎಂಬುದು ನಿಮಗೂ ಗೊತ್ತಿದೆ. ಹೀಗಾಗಿ ಏಕಾಏಕಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ರಾಜ್ಯ ಸರ್ಕಾರಕ್ಕಾಗುವ ಆರ್ಥಿಕ ಹೊರೆಯ ಬಗ್ಗೆಯೂ ಯೋಚಿಸಬೇಕಿದೆ ಎಂದರು.

ನಷ್ಟದಲ್ಲಿ ನಿಗಮಗಳು:

ದುರ್ದೈವದಿಂದ ನಾಲ್ಕು ರಸ್ತೆ ಸಾರಿಗೆ ನಿಗಮಗಳು ಆರ್ಥಿಕವಾಗಿ ನಷ್ಟದಲ್ಲಿವೆ. ಕಳೆದ ಆರು ವರ್ಷದಿಂದ ಟಿಕೆಟ್‌ ದರ ಹೆಚ್ಚಳ ಮಾಡಿಲ್ಲ. ಇದರ ಜತೆಗೆ ಡೀಸೆಲ್‌ ದರ ಏರಿಕೆಯೂ ನಿಗಮದ ನಷ್ಟಕ್ಕೆ ಕಾರಣವಾಗಿದೆ. ಹೀಗಾಗಿ ನಿಮ್ಮ ಜೀವನ ಭದ್ರತೆಗೆ ಏನೇನು ಬೇಕೋ ಎಲ್ಲದರ ಬಗ್ಗೆ ಮುಖ್ಯಮಂತ್ರಿಗೆ ಮನವರಿಕೆ ಮಾಡಲಿದ್ದೇನೆ. ಈಗ ಸದನ ನಡೆಯುತ್ತಿರುವುದರಿಂದ ಮುಖ್ಯಮಂತ್ರಿ ಅಥವಾ ನಾನು ಯಾವುದೇ ಆಶ್ವಾಸನೆ ನೀಡುವಂತಿಲ್ಲ ಎಂದು ಹೇಳಿದರು. ಕಳೆದ ಮೂರು ವರ್ಷಗಳಿಂದ ಸಮವಸ್ತ್ರ ಕೊಟ್ಟಿಲ್ಲ. ಹೀಗಾಗಿ ಒಂದು ವರ್ಷದ ಸಮವಸ್ತ್ರ ವಿತರಿಸಿ ಉಳಿದ ಎರಡು ವರ್ಷದ ಸಮವಸ್ತ್ರದ ಹಣವನ್ನು ನೌಕರರ ಖಾತೆಗೆ ಪಾವತಿಸಲು ಸೂಚಿಸಿದ್ದೇನೆ ಎಂದರು.

ಸಾರಿಗೆ ನೌಕರರಿಗೆ ಅಭದ್ರತೆ ಕಾಡುತ್ತಿದೆ. ಶೇ.50ರಷ್ಟುವೇತನ ತಾರತಮ್ಯವಿದೆ. ಎಸ್‌.ಬಂಗಾರಪ್ಪ ಅವಧಿಯಲ್ಲೇ ಸಾರಿಗೆ ನೌಕರರು ಸರ್ಕಾರಿ ನೌಕರರಾಗಬೇಕಿತ್ತು. ಕಾರಣಾಂತರಗಳಿಂದ ಅಂದು ಸಾಧ್ಯವಾಗಲಿಲ್ಲ. ಇದೀಗ ಆಂಧ್ರ ಮಾದರಿಯಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಮಾಡಬೇಕು ಎಂದು ಲಿಂಗಾಯತ ಪಂಚಮಸಾಲಿ ಪೀಠದ  ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. 

ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಮಾಡುವ ಬೇಡಿಕೆ ನ್ಯಾಯಸಮ್ಮತವಾಗಿದೆ. ಸಾರಿಗೆ ನೌಕರರು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದ್ದಾರೆ. 

ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಮುಂದಿನ ಬಜೆಟ್‌ನಲ್ಲಿ ಘೋಷಿಸುವ ನಿರೀಕ್ಷೆಯಿದೆ. ಬಜೆಟ್‌ ನೋಡಿಕೊಂಡು ನೌಕರರ ಜಂಟಿ ಸಮಿತಿ ಸಭೆ ಕರೆದು ಮುಂದಿನ ಹೋರಾಟ ರೂಪುರೇಷೆಗಳ ಬಗ್ಗೆ ತೀರ್ಮಾನಿಸಲಿದ್ದೇವೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಕಾರ್ಯದರ್ಶಿ ಆನಂದ್‌ ಹೇಳಿದ್ದಾರೆ.