ತುರುವೇಕೆರೆ [ಮಾ.17]:  ಚನ್ನರಾಯಪಟ್ಟಣ ಡಿಪೋದಿಂದ ನೂತನವಾಗಿ ಧರ್ಮಸ್ಥಳಕ್ಕೆ ತೆರಳುವ ಬಸ್‌ ಅನ್ನು ತಾಲೂಕಿನ ಚಂದ್ರಾಪುರ ಗ್ರಾಮದಿಂದ ಪ್ರಾರಂಭಿಸಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ ನೂತನ ಮಾರ್ಗಕ್ಕೆ ಜನರು ಗ್ರಾಮದ ಬಸ್‌ ನಿಲ್ದಾಣವನ್ನು ತಳಿರು ತೋರಣಗಳಿಂದ ಸಿಂಗರಿಸಿ ಸಂಭ್ರಮಿಸಿದರು. ಬಸ್‌ಗೆ ಸಹ ಶೃಂಗಾರ ಮಾಡಿದರು. ಚಂದ್ರಾಪುರದಿಂದ ಬೆಳಗ್ಗೆ 5.15ಕ್ಕೆ ಹೊರಡುವ ಬಸ್‌ಗೆ ಮಹಿಳೆಯರು ಪೂಜೆ ನೆರವೇರಿಸಿದರು. ಈ ಮೂಲಕ ಗ್ರಾಮಸ್ಥರು ತಮ್ಮ ಬಹುದಿನ ಬೇಡಿಕೆ ಈಡೇರಿದನ್ನು ಸಂಭ್ರಮಿಸಿದರು.

ಗ್ರಾಮಸ್ಥರು ಕೆಎಸ್‌ಆರ್‌ಟಿಸಿಯ ಹಾಸನದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೀವ್‌ ಶೆಟ್ಟಿ, ಅಧಿಕಾರಿಗಳಾದ ನಂದಕುಮಾರ್‌, ಮಂಜುನಾಥ್‌ ಅವರಿಗೆ ಜೈಕಾರ ಹಾಕಿದರು.

ಒಂದೇ ದಿನ 591 ಕೆಎಸ್ಸಾರ್ಟಿಸಿ ಬಸ್‌ ಸೇವೆ ಸ್ಥಗಿತ...

ಸಂಚಾರ: ಬೆಳಗ್ಗೆ 5.15ಕ್ಕೆ ಚಂದ್ರಾಪುರ ಬಿಡುವ ಬಸ್‌, ಆಲ್ಬೂರು, ನೊಣವಿನಕೆರೆ, ತಿಪಟೂರು, ಗಂಡಸಿ, ಹಾಸನ ಮಾರ್ಗವಾಗಿ ಧರ್ಮಸ್ಥಳವನ್ನು ಬೆಳಗ್ಗೆ 10.45ಕ್ಕೆ ತಲುಪಲಿದೆ. ಧರ್ಮಸ್ಥಳದಿಂದ ಸಂಜೆ 4.15 ನಿಮಿಷಕ್ಕೆ ಹೊರಡುವ ಮತ್ತೊಂದು ಬಸ್‌ ಇದೇ ಮಾರ್ಗವಾಗಿ ರಾತ್ರಿ 9.4ಕ್ಕೆ ತಲುಪಲಿದೆ.

ಎಪಿಎಂಸಿ ನಿರ್ದೇಶಕಿ ಬಿ.ಆರ್‌.ಇಂದಿರಮ್ಮ, ಗ್ರಾಮದ ಮುಖಂಡ ಸಿ.ಜೆ.ಆನಂದ್‌ ಕುಮಾರ್‌, ಬಿ.ಗಂಗಪ್ಪ, ಬಿ.ರಾಮಚಂದ್ರಯ್ಯ, ಗ್ರಾಮ ಪಂಚಾಯ್ತಿ ಸದಸ್ಯ ಸಿ.ಎ.ಅರುಣ್‌ ಕುಮಾರ್‌, ಶಿವಸೇನೆ ರಾಮಚಂದ್ರು, ರಾಮೇಗೌಡ, ಕೃಷ್ಣಮೂರ್ತಿ, ನಾಗರಾಜು ಇದ್ದರು