Asianet Suvarna News Asianet Suvarna News

ಒಂದೇ ದಿನ 591 ಕೆಎಸ್ಸಾರ್ಟಿಸಿ ಬಸ್‌ ಸೇವೆ ಸ್ಥಗಿತ

ಕೊರೋನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಜನರು ಮನೆಯಿಂದ ಹೊರ ಬಾರದೆ ಬಸ್ ಸಂಚಾರವು ಸ್ಥಗಿತವಾಯಿತು. 

591 KSRTC Bus Stopped Due To Coronavirus
Author
Bengaluru, First Published Mar 16, 2020, 9:43 AM IST

ಬೆಂಗಳೂರು [ಮಾ.16]:  ನಗರಕ್ಕೂ ಕೊರೋನಾ ವೈರಸ್‌ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಣಾಮ ಭಾನುವಾರವೂ ಬಸ್‌, ರೈಲು, ಟ್ಯಾಕ್ಸಿ, ಆಟೋಗಳಲ್ಲಿ ಪ್ರಯಾಣಿಕರ ಸಂಖ್ಯೆ ಸಾಕಷ್ಟುಕಡಿಮೆಯಾಗಿತ್ತು.

ಬಹುತೇಕ ಕೆಎಸ್‌ಆರ್‌ಟಿಸಿ ಬಸ್‌ಗಳು, ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಪ್ರಯಾಣಿಕರಿಗಾಗಿ ಕಾಯುವ ಸ್ಥಿತಿ ಕಂಡು ಬಂದಿತು. ಶನಿವಾರ ಬೆಂಗಳೂರಿನಿಂದ ಸುಮಾರು 2.04 ಲಕ್ಷ ಮಂದಿ ಕೆಎಸ್‌ಆರ್‌ಟಿಸಿಯ ಬಸ್‌ಗಳಲ್ಲಿ ಪ್ರಯಾಣಿಸಿದ್ದರು. ಕೆಲ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾದ್ದರಿಂದ 40 ಹೆಚ್ಚುವರಿ ಬಸ್‌ ಕಾರ್ಯಾಚರಣೆ ಮಾಡಲಾಗಿತ್ತು. ಆದರೆ, ಭಾನುವಾರ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿತವಾದ ಪರಿಣಾಮ ಬೆಂಗಳೂರಿನಿಂದ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ತೆರಳಬೇಕಿದ್ದ 591 ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.

ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿಯ ಕೆಂಪೇಗೌಡ ಬಸ್‌ ನಿಲ್ದಾಣದ ನಾಲ್ಕು ಟರ್ಮಿನ್‌ಗಳು, ಮೈಸೂರು ರಸ್ತೆಯ ಸ್ಯಾಟಲೆಟ್‌, ಪೀಣ್ಯದ ಬಸವೇಶ್ವರ ಬಸ್‌ ನಿಲ್ದಾಣ, ಶಾಂತಿನಗರದ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಿತ್ತು. ಸದಾ ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ಮೆಜೆಸ್ಟಿಕ್‌ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಬಹಳ ಕಡಿಮೆಯಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಇಲ್ಲದ ಪರಿಣಾಮ ಬಸ್‌ಗಳ ಸಂಚಾರ ದಟ್ಟಣೆಯೂ ಕಡಿಮೆ ಇತ್ತು.

ರೈಲುಗಳಿಗೂ ಪ್ರಯಾಣಿಕರ ಕೊರತೆ

ಇನ್ನು ಬೆಂಗಳೂರಿನಿಂದ ಹೊರಡುವ ವಿವಿಧ ರೈಲುಗಳಲ್ಲಿ ಸಹ ಪ್ರಯಾಣಿಕರ ಸಂಖ್ಯೆ ಅತ್ಯಂತ ಕಡಿಮೆಯಾಗಿತ್ತು. ಕೆಲವು ರೈಲುಗಳ ಬೋಗಿಗಳಲ್ಲಿ 40ರಿಂದ 50 ಜನರು ಮಾತ್ರ ಪ್ರಯಾಣ ಮಾಡಿರುವುದು ಕಂಡು ಬಂದಿತು. ಸದಾ ದಟ್ಟಣೆಯಿಂದ ಕೂಡಿರುತ್ತಿದ್ದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣ (ಮೆಜೆಸ್ಟಿಕ್‌)ದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಯಶವಂತಪುರ, ಕಂಟೋನ್ಮೆಂಟ್‌ ರೈಲು ನಿಲ್ದಾಣಗಳಲ್ಲಿ ಸಹ ಪ್ರಯಾಣಿಕರು ಸಂಖ್ಯೆ ವಿರಳವಾಗಿತ್ತು.

ಬಿಎಂಟಿಸಿ ಬಸ್‌ಗಳು ಖಾಲಿ ಖಾಲಿ

ಪ್ರಯಾಣಿಕರ ಸಂಖ್ಯೆ ಕುಸಿತದಿಂದ ಶನಿವಾರದಿಂದಲೇ ಶೇ.10ರಷ್ಟುಬಸ್‌ಗಳನ್ನು ಕಡಿತ ಮಾಡಿರುವ ಬಿಎಂಟಿಸಿಗೆ ಭಾನುವಾರವೂ ಪ್ರಯಾಣಿಕರ ಕೊರತೆ ಎದುರಾಯಿತು. ಪ್ರಯಾಣಿಕರಿಂದ ಭರ್ತಿಯಾಗಿರುತ್ತಿದ್ದ ಬಿಎಂಟಿಸಿಯ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ಭಣಗುಡುತ್ತಿತ್ತು. ಕೊರೋನಾ ಭೀತಿ ಒಂದೆಡೆಯಾದರೆ ಭಾನುವಾರ ರಜೆಯ ಕಾರಣದಿಂದ ಸಾರ್ವಜನಿಕರು ಮನೆಗಳಿಂದ ಹೊರಬಾರಲಿಲ್ಲ. ಹೀಗಾಗಿ ಬಸ್‌ಗಳಿಗೆ ಪ್ರಯಾಣಿಕರ ಕೊರತೆಯಾಯಿತು. ಸಾಕಷ್ಟುಮಾರ್ಗಗಳಲ್ಲಿ ಬೆರಳೆಣಿಕೆಯಷ್ಟುಮಂದಿ ಮಾತ್ರ ಪ್ರಯಾಣಿಸಿದರು.

ಮೆಟ್ರೋ ರೈಲಿಗೆ ತಪ್ಪದ ಬಿಸಿ

ಕೊರೋನಾ ವೈರಸ್‌ ಭೀತಿ ಮೆಟ್ರೋ ರೈಲಿಗೆ ತಟ್ಟಿದ್ದು, ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿತ್ತು. ರಜೆ ದಿನಗಳಲ್ಲಿ ಹೆಚ್ಚಿನ ಮಂದಿ ಮೆಟ್ರೋ ರೈಲು ಬಳಸುತ್ತಾರಾದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಇರಲಿಲ್ಲ. ರಾಜ್ಯ ಸರ್ಕಾರದ ಸೂಚನೆ ಮೇರೆಗೆ ನಗರದ ಮಾಲ್‌, ಚಿತ್ರಮಂದಿರಗಳು, ಪ್ರಮುಖ ವಾಣಿಜ್ಯ ಸಂಕೀರ್ಣಗಳು ಬಂದ್‌ ಆಗಿರುವುದೂ ಸಹ ಮೆಟ್ರೊ ರೈಲಿಗೆ ಪ್ರಯಾಣಿಕರ ಸಂಖ್ಯೆ ಕುಸಿಯಲು ಒಂದು ಕಾರಣ ಎನ್ನಲಾಗಿದೆ.

ಬೆಂಗಳೂರು ತೊರೆಯುತ್ತಿದ್ದಾರಾ ಜನ..?...

ಆಟೋ-ಟ್ಯಾಕ್ಸಿಗಳ ಕೇಳೋರಿಲ್ಲ

ಕೊರೋನಾ ವೈರಸ್‌ ಭಯದಿಂದ ನಗರದಲ್ಲಿ ಜನ ಸಂಚಾರ ಕಡಿಮೆಯಾಗಿದೆ. ಹೀಗಾಗಿ ಆಟೋ ರಿಕ್ಷಾ, ಆ್ಯಪ್‌ ಆಧಾರಿತ ಟ್ಯಾಕ್ಸಿಗಳು, ಟ್ಯಾಕ್ಸಿಗಳಿಗೆ ಪ್ರಯಾಣಿಕರ ಕೊರತೆ ಉಂಟಾಗಿ ಚಾಲಕರು ಸಂಪಾದನೆ ಇಲ್ಲದೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಸಾಕಷ್ಟುಮಂದಿ ಆಟೋ ಚಾಲಕರು ತಾತ್ಕಾಲಿಕವಾಗಿ ಆಟೋ ಚಾಲನೆ ಸ್ಥಗಿತಗೊಳಿಸಿದ್ದಾರೆ. ಇನ್ನು ಐಟಿ-ಬಿಟಿ ಕಂಪನಿಗಳು, ಚಿತ್ರಮಂದಿರ, ಮಾಲ್‌ಗಳು ಮುಚ್ಚಿರುವ ಪರಿಣಾಮ ಆ್ಯಪ್‌ ಆಧಾರಿತ ಟ್ಯಾಕ್ಸಿಗಳಿಗೆ ಗ್ರಾಹಕರ ಸಮಸ್ಯೆ ಎದುರಾಗಿದೆ. ಇಡೀ ದಿನ ಕಾಯ್ದರೂ ಐದು ಮಂದಿ ಗ್ರಾಹಕರು ಸಿಗುತ್ತಿಲ್ಲ ಎಂದು ಕ್ಯಾಬ್‌ ಚಾಲಕ ಸತೀಶ್‌ ಹೇಳಿದರು.

ಸಾರಿಗೆ ಉದ್ಯಮದ ನೆರವಿಗೆ ಮನವಿ

ಕೊರೋನಾ ಭೀತಿಯಿಂದ ಇಡೀ ಪ್ರವಾಸೋದ್ಯಮ ಸೇರಿದಂತೆ ಎಲ್ಲ ಮಾದರಿಯ ಸಾರಿಗೆ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ವಾಹನ ಚಾಲಕ ಮತ್ತು ಮಾಲೀಕರು ಆದಾಯ ನಷ್ಟವಾಗಿ ಸಂಕಷ್ಟಕ್ಕೆ ಎದುರಾಗಿದೆ. ಹೀಗಾಗಿ ವಾಹನ ಸಾಲ, ರಸ್ತೆ ತೆರಿಗೆ, ಟೋಲ್‌ ಶುಲ್ಕ, ಜಿಎಸ್‌ಟಿ, ಆದಾಯ ತೆರಿಗೆ ಭರಿಸುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾರಿಗೆ ಉದ್ಯಮದ ನೆರವಿಗೆ ಧಾವಿಸಬೇಕು. ನೇರ ಹಾಗೂ ಪರೋಕ್ಷ ತೆರಿಗೆಗಳು, ತೆರಿಗೆ ಮೇಲಿನ ದಂಡ, ಟ್ಯಾಕ್ಸ್‌ ಅರಿಯ​ರ್‍ಸ್, ವಿಮೆ ಸೇರಿದಂತೆ ಸಾರಿಗೆ ಉದ್ಯಮಕ್ಕೆ ಸಂಬಂಧಿಸಿದ ತೆರಿಗೆಗಳ ಪಾವತಿಯನ್ನು ಕೊಂಚ ಸಡಿಲಗೊಳಿಸಬೇಕು. ವಾಹನಗಳ ಸಾಲದ ಮೇಲಿನ ಎರಡು ಇಎಂಐ ಕಡಿತ ಮಾಡುವಂತೆ ರಾಜ್ಯ ಟ್ರಾವೆಲ್‌ ಆಪರೇಟ​ರ್‍ಸ್ ಅಸೋಸಿಯೇಷನ್‌ ಅಧ್ಯಕ್ಷ ರಾಧಕೃಷ್ಣ ಹೊಳ್ಳ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

Follow Us:
Download App:
  • android
  • ios