ನಿಲ್ದಾಣಕ್ಕೆ ಬಾರದ ಸರ್ಕಾರಿ ಬಸ್‌ಗಳು?! ಎಲ್ಲಿ ನಿಲ್ಲಿಸ್ತಾರೆನ್ನೋದು ಗೊತ್ತಾಗಲ್ಲ

ಇಲ್ಲಿ ಕೆಎಸ್‌ ಆರ್‌ಟಿಸಿ ಬಸ್ ಚಾಲಕರ ನಿರ್ಲಕ್ಷ್ಯದಿಂದ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ನಿಲ್ದಾಣಕ್ಕೆ ಬಾರದ ಬಸ್ಸುಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರವೇ ಸಂಚಾರ ಮಾಡುತ್ತವೆ.

KSRTC Bus Driver Negligence  Biruru People Faces Traffic Problem  snr

ವರದಿ : ಎನ್‌.ಗಿರೀಶ್‌, ಬೀರೂರು

 ಬೀರೂರು (ಮಾ.02):  ಬೀರೂರಿನ ಹೃದಯ ಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವನ್ನು ರಾಜ್ಯ ಸರ್ಕಾರ ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಿಸಿದೆ. ಆದರೆ, ಸಂಜೆಯಾದರೆ ನಿಲ್ದಾಣದೊಳಗೆ ಯಾವುದೇ ಸರ್ಕಾರಿ ಬಸ್‌ಗಳು ಪ್ರವೇಶಿಸದೇ ನಿರ್ಲಕ್ಷಿಸುತ್ತಿದ್ದಾರೆ. ಕೇವಲ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಬಸ್‌ಗಳ ನಿಲ್ಲಿಸಿ, ಪ್ರಯಾಣಿಕರನ್ನು ಇಳಿಸಿ ಅಥವಾ ಹತ್ತಿಸಿಕೊಂಡು ಸಂಚರಿಸುತ್ತಿವೆ. ಈ ಕ್ರಮದಿಂದಾಗಿ ಪಟ್ಟಣದ ಪ್ರಯಾಣಿಕರು ಹಾಗೂ ಇತರ ವಾಹನಗಳ ಸವಾರರು ಟ್ರಾಫಿಕ್‌ ಸಮಸ್ಯೆ ಎದುರಿಸುವಂತಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 1986ರಲ್ಲಿ ಪಟ್ಟಣದ ಹೃದಯಭಾಗದಲ್ಲಿ ಅಂದಿನ ಸಣ್ಣ ಉಳಿತಾಯ ಬಂದಿಖಾನೆ ಮತ್ತು ಸಾರಿಗೆ ಸಚಿವ ವೀರಣ್ಣ ಇಲ್ಲಿ ಕೋಟ್ಯಂತರ ರು. ವೆಚ್ಚದಲ್ಲಿ 1.5 ಎಕರೆ ಜಾಗದಲ್ಲಿ ವಿಶಾಲವಾದ ಬಸ್‌ ನಿಲ್ದಾಣವನ್ನು ನಿರ್ಮಿಸಿ, ಲೋಕಾರ್ಪಣೆ ಮಾಡಿದ್ದಾರೆ. ಈ ಬಸ್‌ ನಿಲ್ದಾಣ ಸೇವೆ ಆರಂಭವಾದ ದಿನದಿಂದಲೂ ಬೆಳಗಿನ ಸಮಯದಲ್ಲಿ ಮಾತ್ರವೇ ಬಸ್‌ಗಳ ಚಾಲಕರು ನಿಲ್ದಾಣ ಆವರಣಕ್ಕೆ ಬಸ್‌ಗಳ ತಂದು ನಿಲ್ಲಿಸುವುದು ರೂಢಿಸಿಕೊಂಡಿದ್ದಾರೆ.

ಕೆಎಸ್ಸಾರ್ಟಿಸಿ ಚಾಲಕರಿಗೆ ಇಲ್ಲಿಗೆ ಭರ್ಜರಿ ಗುಡ್ ನ್ಯೂಸ್ ...

ಸುಸಜ್ಜಿತ ವ್ಯವಸ್ಥೆ ಇರುವ ಬಸ್‌ ನಿಲ್ದಾಣದಲ್ಲಿ ಒಬ್ಬರ ನಿಯಂತ್ರಕರನ್ನು ಇಲಾಖೆ ನೇಮಿಸಿದೆ. ಅವರು ಪ್ರತಿನಿತ್ಯ ಸಂಚರಿಸುವ ಬಸ್‌ಗಳನ್ನು ಎಂಟ್ರಿ ಹಾಕಬೇಕು. ದಿನನಿತ್ಯ ಶಾಲಾ ಕಾಲೇಜಿಗೆ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಅವರೇ ಪಾಸ್‌ ವಿತರಣೆ ಮಾಡಬೇಕು. ಜೊತೆಗೆ ಹೆದ್ದಾರಿಯಲ್ಲಿ ಸಂಚರಿಸುವ ನೂರಾರು ಬಸ್‌ ಗಳು ಏನಾದರೂ ಅಪಘಾತವಾದರೇ ಅವರೇ ಪೊಲೀಸ್‌ ಠಾಣೆಗೆ ತೆರಳಿ ಮಾಹಿತಿ ಮತ್ತು ತೀರ್ಮಾನ ಮಾಡುವ ಪರಿಸ್ಥಿತಿ ಇದೆ. ಈ ಸಂದರ್ಭಗಳಲ್ಲಿ ಬಸ್‌ ನಿಲ್ದಾಣ ಯಾವ ಅಧಿಕಾರಿಗಳಿಲ್ಲದೇ ಅನಾಥವಾಗಿ, ಹೇಳೋರು ಕೇಳೋರು ಇಲ್ಲ ಎಂಬಂತೆ ಭಾಸವಾಗುತ್ತದೆ.

ಈ ಕುರಿತು ವಿದ್ಯಾರ್ಥಿ ಮಂಜುಳಾ ಹೇಳುವುದೇನೆಂದರೆ, ಪಾಸ್‌ ಇದ್ದ ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ತೆರಳಲು ಬಸ್‌ ಹತ್ತಿದರೆ ಕಂಡಕ್ಟರ್‌ಗಳು ಸರಿಯಾಗಿ ವರ್ತನೆ ಮಾಡುವುದಿಲ್ಲ. ಸರ್ಕಾರವೇ ವಿದ್ಯಾರ್ಥಿಗಳ ಅನುಕೂಲಕ್ಕೆ ಎಲ್ಲ ರಿಯಾಯಿತಿ ನೀಡಿದೆ. ನಾವು ಮುಂಗಡ ಹಣವನ್ನು ಪಾವತಿಸಿ ಪಾಸ್‌ ಪಡೆದುಕೊಂಡಿದ್ದರೂ, ಕಂಡಕ್ಟರ್‌ಗಳು ಬಸ್‌ ಹತ್ತಿಸುವುದಿಲ್ಲ. ಇದರಿಂದ ನಿತ್ಯ ರೋದನೆ ಎನ್ನುತ್ತಾರೆ.

ಇನ್ನು ಕಡೂರು ತಾಲೂಕು ಘಟಕ ವ್ಯವಸ್ಥಾಪಕ ಚನ್ನಬಸವೇಗೌಡರ ಮನವಿ ಹೀಗೆ- ಸಮಸ್ಯೆ ಬಗ್ಗೆ ಈಗಾಗಲೇ ಹಲವು ಪ್ರಯಾಣಿಕರು ದೂರು ನೀಡಿದ್ದಾರೆ. ಸದ್ಯದಲ್ಲಿಯೇ ಬೀರೂರು ಬಸ್‌ ನಿಲ್ದಾಣಕ್ಕೆ ಇನ್ನೊಬ್ಬ ನಿಯಂತ್ರಕರನ್ನು ನೇಮಿಸಿ ಸಂಜೆ ಹೊತ್ತು ಬೀರೂರು ಭಾಗದಲ್ಲಿ ಸಂಚರಿಸುವ ಎಲ್ಲ ಬಸ್‌ಗಳನ್ನು ನಿಲ್ದಾಣದ ಒಳಗೆ ಹೋಗುವಂತೆ ಮತ್ತು ಅಲ್ಲಿಯೇ ಎಂಟ್ರಿ ಹಾಕಿಸುವ ವ್ಯವಸ್ಥೆ ಮಾಡುತ್ತೇನೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡುತ್ತಾರೆ.

ಬಸ್‌ ಎಲ್ಲಿ ನಿಲ್ಲಿಸ್ತಾರೆ ಅನ್ನೋದೇ ತಿಳಿಯಲ್ಲ: ಸ್ಥಳೀಯ

ಸಂಜೆಯಾದರೆ ಸಾಕು ಕೆಎಸ್‌ಆರ್‌ಟಿಸಿ ಬಸ್‌ ಹತ್ತಿ ಶಿವಮೊಗ್ಗ ಅಥವಾ ಬೆಂಗಳೂರು ಕಡೆ ಪ್ರಯಾಣ ಮಾಡೋಣವೆಂದರೆ ಬಸ್‌ ಅನ್ನು ಚಾಲಕರು ಎಲ್ಲಿ ನಿಲ್ಲಿಸುತ್ತಾರೆ ಎನ್ನುವುದೇ ಪ್ರಶ್ನಾರ್ಥಕವಾಗಿದೆ ಎನ್ನುತ್ತಾರೆ ಸ್ಥಳೀಯ ನಾಗರಿಕ ಶ್ರೀಧರ್‌.

ಒಮ್ಮೆ ನಿಲ್ದಾಣದ ಮುಂಭಾಗದಲ್ಲಿ ಅಥವಾ ಮಹಾತ್ಮ ಗಾಂಧಿ ವೃತ್ತದಲ್ಲಿ ಮಗದೊಮ್ಮೆ ಪೊಲೀಸ್‌ ಠಾಣೆ ಮುಂಭಾಗದಲ್ಲಿ ಚಾಲಕರು ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದಾರೆ. ಇದರಿಂದ ನಮಗೆ ಪ್ರಯಾಣಿಸಲು ಗಲಿಬಿಲಿ ಆಗುತ್ತದೆ. ಇನ್ನೊಂದೆಡೆ ಬೀರೂರು ಪಟ್ಟಣದಲ್ಲಿ ತರಳಬಾಳು ಕಲ್ಯಾಣ ಮಂದಿರದಿಂದ, ಕೆ.ಇ.ಬಿ.ವರೆಗೂ ರಸ್ತೆ ಚಿಕ್ಕದಿರುವ ಕಾರಣ, ಕೆಎಸ್‌ಆರ್‌ಟಿಸಿ ಬಸ್‌ ಏನಾದರೂ ನಿಲುಗಡೆಗೊಳಿಸಿದರೆ ಬಹಳ ಟ್ರಾಫಿಕ್‌ ಜೊತೆ ಅನೇಕ ಅಪಘಾತ ಪ್ರಕರಣಗಳು ಆಗಿವೆ. ಈ ಬಗ್ಗೆ ನಿಯಂತ್ರಾಣಾಧಿಕಾರಿಗೆ ಅನೇಕ ಬಾರಿ ಅರ್ಜಿ ನೀಡಿದರೂ, ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ.

ಬಸ್‌ ನಿಲ್ದಾಣದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಬೇಕಾದಷ್ಟುಜಾಗವಿದ್ದರೂ ಸಹ ಇಲಾಖೆ ಅದನ್ನು ಸದುಪಯೋಗಪಡಿಸಿಕೊಂಡಿಲ್ಲ. ಜೊತೆಗೆ ದ್ವಿಚಕ್ರ ಮತ್ತಿತರ ವಾಹನಗಳ ಪಾರ್ಕಿಂಗ್‌ ಇಲ್ಲದೇ ಇರುವುದು ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಆದಾಯ ಬರುವ ಯಾವುಧೇ ಯೋಜನೆಯನ್ನು ಇಲಾಖೆ ಬಳಸಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಬಸ್‌ಗಳು ಒಳ ಸಂಚರಿಸದೆ ಹೊರಗಡೆ ನಿಂತರೆ ಪಟ್ಟಣದ ವಿವಿಧ ಸಂಘಟನೆಗಳ ಜೊತೆಗೂಡಿ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದರು.

ಏನಾದರೂ ಆಗಲಿ ಕೋಟ್ಯಂತರ ರು.ಗಳ ವ್ಯಹಿಸಿ ನಿರ್ಮಿಸಿರುವ ನಿಲ್ದಾಣಕ್ಕೆ ಬೆಲೆ ಬರಬೇಕಾದರೆ ಮತ್ತು ಪ್ರಯಾಣಿಕರಿಗೆ ಅನುಕೂಲ ಆಗಬೇಕಾದರೆ ಎಲ್ಲ ಬಸ್‌ಗಳು ಒಳಸಂಚರಿಸಬೇಕು. ಆಗ ಮಾತ್ರ ಸರ್ಕಾರದ ಉದ್ದೇಶ ಸಾರ್ಥಕ ಮತ್ತು ಜನರಿಗೆ ನೆಮ್ಮದಿ ಎನ್ನುವುದು ಸಾರ್ವಜನಿಕರ ಆಶಯ. ಈ ಬಗ್ಗೆ ಕ್ರಮ ಜರುಗೀತೇ?

Latest Videos
Follow Us:
Download App:
  • android
  • ios