ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮವನ್ನು (ಕೆಎಸ್‌ಐಸಿ) ಹಂತ ಹಂತವಾಗಿ ಮುಚ್ಚಲು ರಾಜ್ಯ ಸರ್ಕಾರ ಚಕ್ರವ್ಯೂಹ ರಚಿಸಿದಂತೆ ಕಾಣುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ.

ಬೆಂಗಳೂರು (ಏ.02): ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮವನ್ನು (ಕೆಎಸ್‌ಐಸಿ) ಹಂತ ಹಂತವಾಗಿ ಮುಚ್ಚಲು ರಾಜ್ಯ ಸರ್ಕಾರ ಚಕ್ರವ್ಯೂಹ ರಚಿಸಿದಂತೆ ಕಾಣುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ. ಟಿ.ನರಸೀಪುರದ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮಕ್ಕೆ(ಕೆಎಸ್‌ಐಸಿ) ಸೇರಿದ ಭೂಮಿಯಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಯನ್ನು ಕೈ ಬಿಡಲಾಗಿದೆ ಎಂದು ರೇಷ್ಮೆ ಸಚಿವ ಕೆ.ವೆಂಕಟೇಶ್‌ ಅವರು ಮಾ.9ರಂದು ವಿಧಾನಸಭೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದರು. ಈ ಘೋಷಣೆ ಬೆನ್ನಲ್ಲೇ ಸರ್ಕಾರದ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಚಿವರ ಘೋಷಣೆ ಕೇವಲ ಕಣ್ಣೊರೆಸುವ ತಂತ್ರವೇ ಎಂದು ಪ್ರಶ್ನಿಸಿದ್ದಾರೆ.

Add Asianetnews Kannada as a Preferred SourcegooglePreferred

ಪ್ರಭಾವಿ ನಾಯಕರಿಂದ ಕೆಎಸ್‌ಪಿಸಿಬಿಗೆ ದೂರು: ಸಚಿವರು ಸದನದಲ್ಲಿ ಭರವಸೆ ನೀಡಿದ ಮರುದಿನವೇ ಮುಖ್ಯಮಂತ್ರಿಗಳ ಕ್ಷೇತ್ರವಾದ ವರುಣಾದ ಪ್ರಭಾವಿ ನಾಯಕರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದಾರೆ. ಕೆಎಸ್‌ಐಸಿ ಘಟಕವು ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದಾರೆ. ರಾಜ್ಯ ಸರ್ಕಾರವು ಕೆಎಸ್ಐಸಿ ಸಂಸ್ಥೆಯನ್ನು ಹಂತ ಹಂತವಾಗಿ ಮುಚ್ಚಲು ಚಕ್ರವ್ಯೂಹ ರಚಿಸಿದಂತೆ ಕಾಣುತ್ತಿದೆ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಅನುಮಾನ ವ್ಯಕ್ತಪಡಿಸಿದ್ದಾರೆ.

ಇಟಿಪಿಗೆ ಮೀಸಲಾದ ಜಾಗದಲ್ಲಿ ಕ್ರೀಡಾಂಗಣ: ಈ ಕಾರ್ಖಾನೆಯ ತ್ಯಾಜ್ಯ ಸಂಸ್ಕರಣಾ ಘಟಕ(ಎಸ್‌ಟಿಪಿ) ಸ್ಥಾಪಿಸಲು 5 ಎಕರೆ ಭೂಮಿ ಅಗತ್ಯವಿದೆ ಎಂದು ತಾಂತ್ರಿಕ ವರದಿ ಹೇಳಿತ್ತು. ಆದರೂ ಸರ್ಕಾರವು ಹಠಕ್ಕೆ ಬಿದ್ದು ಅದೇ ಜಾಗವನ್ನು ಕ್ರೀಡಾಂಗಣಕ್ಕೆ ನೀಡಲು ಮುಂದಾಗಿತ್ತು. ಸಚಿವರು ಈ ಕ್ರೀಡಾಂಗಣದ ಪ್ರಸ್ತಾವ ಕೈಬಿಡುವುದಾಗಿ ಸದನದಲ್ಲಿ ಹೇಳಿದರೂ ಆ ಭೂಮಿಯನ್ನು ಕ್ರೀಡಾ ಇಲಾಖೆಯಿಂದ ಮತ್ತೆ ಕೆಎಸ್‌ಐಸಿಗೆ ವಾಪಾಸ್ ನೀಡುವಂತೆ ಅಧಿಕೃತ ಆದೇಶ ಹೊರಡಿಸಲು ಸರ್ಕಾರ ವಿಳಂಬ ಮಾಡುತ್ತಿದೆ. ಮತ್ತೊಂದು ಕಡೆಗೆ ಇಟಿಪಿ ಘಟಕ ಇಲ್ಲ ಎಂಬ ಕಾರಣ ನೀಡಿ ಕಾರ್ಖಾನೆಯನ್ನು ಮುಚ್ಚುವಂತೆ ನೋಟಿಸ್ ಕೊಡಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐತಿಹಾಸಿಕ ಸಂಸ್ಥೆ ಬಲಿ ಅಕ್ಷ್ಯಮ ಅಪರಾಧ

ಮೊದಲು ಜಾಗ ಕಿತ್ತುಕೊಳ್ಳುವುದು, ನಂತರ ಅದೇ ಜಾಗ ಇಲ್ಲದ ಕಾರಣಕ್ಕೆ ನಿಯಮ ಉಲ್ಲಂಘನೆಯ ನೆಪ ಹೂಡಿ ಕಾರ್ಖಾನೆಗೆ ಬೀಗ ಜಡಿಯುವುದು. ಇದು ಆಡಳಿತವೋ ಅಥವಾ ಭೂ ಮಾಫಿಯಾದ ಪರವಾದ ಸಂಚೋ? ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯಬೇಡಿ. ಸಾವಿರಾರು ಕುಟುಂಬಗಳು ಕೆಎಸ್‌ಐಸಿ ನಂಬಿ ಬದುಕುತ್ತಿವೆ. ವಿಶ್ವವಿಖ್ಯಾತ ‘ಮೈಸೂರು ಸಿಲ್ಕ್’ ಬ್ರ್ಯಾಂಡ್ ಕರ್ನಾಟಕದ ಹೆಮ್ಮೆ. ರಾಜಕೀಯ ಲಾಭಕ್ಕಾಗಿ ಮತ್ತು ಭೂ ಕಬಳಿಕೆಗಾಗಿ ಇಂತಹ ಐತಿಹಾಸಿಕ ಸಂಸ್ಥೆಯನ್ನು ಬಲಿ ಕೊಡುವುದು ಅಕ್ಷಮ್ಯ ಅಪರಾಧ ಎಂದು ಅಶೋಕ್‌ ಹೇಳಿದ್ದಾರೆ.

ರಾಹುಲ್‌ ಗಾಂಧಿ ಅವರೇ ಇದೇನಾ ನೀವು ಹೇಳುವ ನ್ಯಾಯ? ಕರ್ನಾಟಕದಲ್ಲಿ ನಿಮ್ಮ ಸರ್ಕಾರ ‘ಲ್ಯಾಂಡ್ ಗ್ರ್ಯಾಬ್ ಸರ್ಕಾರ’ವಾಗಿ ಬದಲಾಗಿದೆಯೇ? ಮೈಸೂರು ರೇಷ್ಮೆಯ ಘನತೆಯನ್ನು ಮಣ್ಣುಪಾಲು ಮಾಡಬೇಡಿ. ಕೂಡಲೇ ಕೆಎಸ್‌ಐಸಿ ಭೂಮಿಯನ್ನು ಮರು ಹಸ್ತಾರಿಸಿ ಆದೇಶಿಸಬೇಕು. ಎಸ್‌ಟಿಪಿ ಘಟಕ ಸ್ಥಾಪನೆಗೆ ಅಗತ್ಯ ಅನುದಾನ ಮತ್ತು ಸಹಕಾರ ನೀಡಬೇಕು. ಮೈಸೂರು ಸಿಲ್ಕ್‌ ಪರಂಪರೆ ರಕ್ಷಿಸುವಂತೆ ಆಗ್ರಹಿಸಿದ್ದಾರೆ.